ಬೇರೆ ಯಾವ ತಿಳುವಳಿಕೆಯೂ ಇಲ್ಲ, ಪ್ರೇಮದ ಹೊರತಾಗಿ…

ನಿಮ್ಮ ಹೃದಯದಲ್ಲಿರುವ ಎಲ್ಲ ಬಗೆಯ ದ್ವೇಷವನ್ನೂ ಕಿತ್ತು ಆಚೆ ಎಸೆದುಬಿಡಿ. ಬೇರೆಯವರ ಪಾಪವನ್ನ ನೀವು ಯಾಕೆ ಹೊತ್ತು ತಿರುಗುತ್ತೀರಿ? ನಿಮಗೆ ಮೋಸ ಮಾಡಿದವರನ್ನ, ತೊಂದರೆ ಮಾಡಿದವರನ್ನ ಕ್ಷಮಿಸಿ ಅವರ ನೆನಪುಗಳನ್ನ ನಿಮ್ಮೊಳಗಿಂದ ಕಿತ್ತು ಹೊರಗೆ ಹಾಕುವುದು ನಿಮಗಷ್ಟೇ ಅಲ್ಲ ನಿಮ್ಮ ಸುತ್ತಲಿನವರಿಗೂ ಕ್ಷೇಮ… । ಚಿದಂಬರ ನರೇಂದ್ರ

ಭಗವಂತನಲ್ಲಿ
ಕಳಂಕವಿಲ್ಲ, ದೋಷವಿಲ್ಲ,
ಆತ ಪರಿಪೂರ್ಣ.
ಹೀಗಾಗಿ ಯಾವ ಸವಾಲುಗಳೂ ಇಲ್ಲ
ಇಂಥವನನ್ನು ಪ್ರೀತಿಸುವುದಕ್ಕೆ.

ಸಮಸ್ಯೆ ಎದುರಾಗೋದೇ
ನಮ್ಮ ಜೊತೆ ಇರುವ ಸಂಗಾತಿಗಳನ್ನು
ಅವರ ಎಲ್ಲ ಶಕ್ತಿ, ದೌರ್ಬಲ್ಯ,
ಅಪೂರ್ಣತೆಗಳೊಂದಿಗೆ
ಅವರು ಇದ್ದ ಹಾಗೇ
ಪ್ರೀತಿಸಲು ಮುಂದಾದಾಗ.

ನೆನಪಿರಲಿ,
ನಮಗೆ ಯಾವುದನ್ನು ಪ್ರೀತಿಸುವ ಸಾಮರ್ಥ್ಯವಿರುತ್ತದೆಯೋ
ನಾವು ಅದನ್ನು ಮಾತ್ರ
ತಿಳಿದುಕೊಳ್ಳಬಲ್ಲೆವು ಪೂರ್ತಿಯಾಗಿ.

ಬೇರೆ ಯಾವ ತಿಳುವಳಿಕೆಯೂ ಇಲ್ಲ
ಪ್ರೇಮದ ಹೊರತಾಗಿ.

ಭಗವಂತನ ಸೃಷ್ಟಿಯನ್ನು
ಪ್ರೀತಿಸುವುದ ಕಲಿಸುವತನಕ
ನಾವು ಭಗವಂತನನ್ನು
ಪ್ರೇಮಿಸುವುದೂ ಸಾಧ್ಯವಿಲ್ಲ
ತಿಳಿದುಕೊಳ್ಳುವುದಂತೂ ಇನ್ನೂ
ದೂರದ ಮಾತು.

~ ಶಮ್ಸ್ ತಬ್ರೀಝಿ


ಒಂದು ಶಿಶುವಿಹಾರದ ಟೀಚರ್ ಮಕ್ಕಳಿಗೆ ಒಂದು ಆಟವನ್ನು ಆಯೋಜಿಸಿದರು.

ಟೀಚರ್, ಮಕ್ಕಳಿಗೆ ಒಂದು ಪ್ಲಾಸ್ಟಿಕ್ ಬ್ಯಾಗಲ್ಲಿ ಒಂದಿಷ್ಟು ಆಲೂಗಡ್ಡೆ ತರಲು ಹೇಳಿದರು.

ಪ್ರತಿಯೊಂದು ಆಲೂಗಡ್ಡೆಗೂ ತಾವು ದ್ವೇಷಿಸುವ ವ್ಯಕ್ತಿಯ ಹೆಸರು ಇಡಲು ಟೀಚರ್ ಮಕ್ಕಳನ್ನು ಕೇಳಿಕೊಂಡರು.

ಅವರು ಎಷ್ಟು ವ್ಯಕ್ತಿಗಳನ್ನು ದ್ವೇಷಿಸುತ್ತಾರೋ ಅಷ್ಟು ಸಂಖ್ಯೆಯ ಆಲೂಗಡ್ಡೆಗಳನ್ನ ಪ್ಲಾಸ್ಟಿಕ್ ಬ್ಯಾಗಲ್ಲಿ ತೆಗೆದುಕೊಂಡು ಬರಲು ಮಕ್ಕಳಿಗೆ ಹೇಳಲಾಗಿತ್ತು.

ಆಟ ಶುರುವಾಗುವ ದಿನ, ಕೆಲ ಮಕ್ಕಳು ಎರಡು ಆಲೂಗಡ್ಡೆ ತಂದಿದ್ದರೆ, ಕೆಲವರು ಮೂರು, ನಾಲ್ಕು, ಐದು ಆಲೂಗಡ್ಡೆಯನ್ನು ತಮ್ಮ ತಮ್ಮ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ತಂದಿದ್ದರು. ಒಂದು ವಾರದಷ್ಟು ಕಾಲ ತಾವು ಎಲ್ಲಿ ಹೋದರೂ ಆ ಬ್ಯಾಗ್ ತೆಗೆದುಕೊಂಡು ಓಡಾಡುವಂತೆ ಟೀಚರ್, ಮಕ್ಕಳಿಗೆ ಕರಾರು ವಿಧಿಸಿದರು.

ದಿನಗಳು ಉರುಳಿದಂತೆ ತಮ್ಮ ಬ್ಯಾಗ್ ನಲ್ಲಿಯ ಆಲೂಗಡ್ಡೆ ಕೊಳೆತು ವಾಸನೆ ಬರುತ್ತಿದೆಯೆಂದು ಮಕ್ಕಳು ಟೀಚರ್ ಗೆ ದೂರು ಸಲ್ಲಿಸತೊಡಗಿದರು. ಹೆಚ್ಚು ಆಲೂಗಡ್ಡೆ ಇದ್ದವರು ಹೆಚ್ಚು ಭಾರ ಹೊರುವುದಷ್ಟೇ ಅಲ್ಲ ಹೆಚ್ಚು ದುರ್ವಾಸನೆ ಸಹಿಸಬೇಕಾಗಿತ್ತು. ಟೀಚರ್ ಹೇಳಿದ ಒಂದು ವಾರದ ಅವಧಿ ಮುಗಿಯುತ್ತಿದ್ದಂತೆಯೇ ಮಕ್ಕಳು ರಿಲೀವ್ ಆದರು. ಒಂದು ವಾರ ಕೊಳೆತ ಆಲೂಗಡ್ಡೆ ಹೊತ್ತು ಓಡಾಡಿದ್ದು ಅವರನ್ನು ಹೈರಾಣಾಗಿಸಿತ್ತು.

ಒಂದು ವಾರದ ತಮ್ಮ ಅನುಭವ ಹೇಳುವಂತೆ ಟೀಚರ್, ಮಕ್ಕಳನ್ನು ಕೇಳಿಕೊಂಡಾಗ ಮಕ್ಕಳು ತಮ್ಮೊಳಗೆ ಅದುಮಿಟ್ಟುಕೊಂಡಿದ್ದ ಅಸಂತೋಷವನ್ನೆಲ್ಲ ಹೊರಹಾಕಿದವು. ಪ್ರತಿ ಮಗುವೂ ತಾನು ಅನುಭವಿಸಿದ ಕಷ್ಟವನ್ನು ವಿವರಿಸಿತು. ನಾಲ್ಕು ಐದು ಆಲೂಗಡ್ಡೆ ಹೊತ್ತು ಓಡಾಡಿದ ಮಕ್ಕಳು ಹೇಗೆ ತಮ್ಮಿಂದ ಜನ ದೂರ ಓಡಿ ಹೋಗುತ್ತಿದ್ದರು ಎನ್ನುವುದನ್ನ ವಿವರವಾಗಿ ಹೇಳಿದವು.

ಆಗ ಟೀಚರ್ ಈ ಆಟದ ಹಿಂದಿನ ಅರ್ಥವನ್ನು ಮಕ್ಕಳಿಗೆ ತಿಳಿಸಿ ಹೇಳಿದರು. “ ಮಕ್ಕಳಾ, ಯಾವಾಗ ನೀವು ಇನ್ನೊಬ್ಬರನ್ನು ಕುರಿತಾದ ದ್ವೇಷವನ್ನು ನಿಮ್ಮ ಹೃದಯದಲ್ಲಿ ಹೊತ್ತು ಓಡಾಡುತ್ತಿರುತ್ತೀರೋ ಆಗ ನಿಮ್ಮದು ಥೇಟ್ ಇಂಥದೇ ಸ್ಥಿತಿ. ದ್ವೇಷದ ದುರ್ವಾಸನೆ ನಿಮ್ಮನ್ನಷ್ಟೇ ಅಲ್ಲ ನಿಮ್ಮ ಜೊತೆ ಇರುವವರನ್ನೂ ಕಾಡುತ್ತದೆ. ಜನ ನಿಮ್ಮಿಂದ ದೂರ ಇರಲು ಪ್ರಯತ್ನ ಮಾಡುತ್ತಾರೆ. ನಿಮಗೆ ಎಂದು ವಾರ ಕೊಳೆತ ಆಲೂಗಡ್ಡೆಯ ವಾಸನೆ ಸಹಿಸಲು ಆಗಲಿಲ್ಲ, ದ್ವೇಷದ ವಾಸನೆ ಇನ್ನೂ ಕೆಟ್ಟದಾಗಿರುತ್ತದೆ, ನೀವು ಹೆಚ್ಚು ಜನರ ಬಗ್ಗೆ ದ್ವೇಷ ಭಾವನೆ ಬೆಳಸಿಕೊಂಡಷ್ಟು ನೀವು ಸ್ವತಃ ತೊಂದರೆಗೆ ಈಡಾಗುತ್ತೀರಿ. ನಿಮ್ಮ ಇಡೀ ಬದುಕು ಇಂಥ ಕೆಟ್ಟ ವಾಸನೆಯನ್ನು ಸಹಿಸಿಕೊಳ್ಳುವುದು ಎಷ್ಟು ಅಪಾಯಕಾರಿ ಎನ್ನುವುದನ್ನ ಯೋಚಿಸಿ”.

ನಿಮ್ಮ ಹೃದಯದಲ್ಲಿರುವ ಎಲ್ಲ ಬಗೆಯ ದ್ವೇಷವನ್ನೂ ಕಿತ್ತು ಆಚೆ ಎಸೆದುಬಿಡಿ. ಬೇರೆಯವರ ಪಾಪವನ್ನ ನೀವು ಯಾಕೆ ಹೊತ್ತು ತಿರುಗುತ್ತೀರಿ? ನಿಮಗೆ ಮೋಸ ಮಾಡಿದವರನ್ನ, ತೊಂದರೆ ಮಾಡಿದವರನ್ನ ಕ್ಷಮಿಸಿ ಅವರ ನೆನಪುಗಳನ್ನ ನಿಮ್ಮೊಳಗಿಂದ ಕಿತ್ತು ಹೊರಗೆ ಹಾಕುವುದು ನಿಮಗಷ್ಟೇ ಅಲ್ಲ ನಿಮ್ಮ ಸುತ್ತಲಿನವರಿಗೂ ಕ್ಷೇಮ.

ಸಾಧ್ಯ ಆದಷ್ಟು ಜನರನ್ನ ಪ್ರೀತಿಸಿ, ಪ್ರೀತಿ ನಿಮ್ಮ ಹೃದಯವನ್ನು ಸುಗಂಧಿತವಾಗಿಸುತ್ತದೆ. ನೀವು ಹೆಚ್ಚು ಜನರನ್ನು ಪ್ರೀತಿಸುದಷ್ಟು ಹೆಚ್ಚು ಹೆಚ್ಚು ಜನ ನಿಮ್ಮಿಂದ ಆಕರ್ಷಿಸಲ್ಪಡುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.