ತನ್ಮಯತೆಯೇ ನಿಜವಾದ ಧ್ಯಾನ : ಓಶೋ ವ್ಯಾಖ್ಯಾನ

ನೀವು ಅರ್ಧ ಮನಸ್ಸಿನಿಂದ ಎಷ್ಟೇ ಧ್ಯಾನ ಮಾಡಿದರೂ ಅದು ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ಆದರೆ ನೀವು ಕೇವಲ ಒಂದು ಸರಳ ಹಾಡನ್ನು ಅದರಲ್ಲಿ ನಿಮ್ಮನ್ನು ನೀವು ಒಂದಾಗಿಸಿಕೊಂಡು ಹಾಡುವಿರಾದರೆ, ಅಥವಾ ಉನ್ಮತ್ತರಾಗಿ ಮೈದುಂಬಿ ಕುಣಿಯುವುದು ನಿಮಗೆ ಸಾಧ್ಯವಾಗುವುದಾದರೆ, ಖಂಡಿತವಾಗಿ ನಿಮ್ಮ ಆ ಹಾಡು, ಕುಣಿತಗಳೇ ಭಗವಂತನ ಭೇಟಿಗೆ ಕೈ ಹಿಡಿದುಕೊಂಡು ಕರೆದೊಯ್ಯುತ್ತವೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಕ್ಕಿಗಳ ಅತ್ಯಂತ ಇಷ್ಟದ ಹಾಡುಗಳನ್ನ
ನೀವು ಯಾವತ್ತೂ ಕೇಳಿರಲಾರಿರಿ.

ಹಕ್ಕಿಗಳ ಎದೆಯಾಳದ ಹಾಡು
ಕೇವಲ ಅಕಾಶದಲ್ಲಿ ನಿರಾಳವಾಗಿ ರೆಕ್ಕೆ ಬಿಚ್ಚಿದಾಗ,
ಬಿಡುಗಡೆಯ ಆಫೀಮು
ಒಳಕ್ಕಿಳಿದಾಗ ಮಾತ್ರ.

ಕೈದಿಗಳಿಗಂತೂ ಇರಲೇಬೇಕು
ಈ ಒಂದು ನಂಬಿಕೆ;
ಒಂದಿಲ್ಲೊಂದು ದಿನ ನಾವೂ
ನಮ್ಮ ಇಷ್ಟದ ಜಾಗ ತಲುಪುತ್ತೇವೆ,
ಬದುಕಿನ ನಿಯಮಾತೀತ
ಅದ್ಭುತ ಹತೋಟಿಗೆ ಎದುರಾಗುತ್ತೇವೆ,
ಎಲ್ಲ ಗಾಯ, ಬಾಕಿಗಳಿಂದ
ಮುಕ್ತರಾಗುತ್ತೇವೆ.

ಒಮ್ಮೆ ಹಕ್ಕಿಯನ್ನು ನಿಲ್ಲಿಸಿ ಮಾತನಾಡಿಸಿದೆ.

ಈ ಕತ್ತಲ ಗುರುತ್ವದಿಂದ ಪಾರಾಗಿ
ಹೇಗೆ ಹಾರುತ್ತೀ ನೀನು ?

ಹಕ್ಕಿ ನಕ್ಕು ಹೇಳಿತು ;
ಪ್ರೇಮ, ನನ್ನ ಎತ್ತರಕ್ಕೇರಿಸುತ್ತದೆ .

-ಹಾಫಿಜ್


ಅದು ಚಂದ್ರನಿಲ್ಲದ ದಟ್ಟ ಕತ್ತಲೆಯ ರಾತ್ರಿ, ವರ್ಷಾಋತು ಆದ್ದರಿಂದ ಮೋಡಗಳು ಮಳೆ ತುಂಬಿಕೊಂಡು ಹೆರಿಗೆಗಾಗಿ ಕ್ಷಣಗಣನೆ ಮಾಡುತ್ತಿರುವ ಬಸುರಿಯಂತೆ ಕಾತುರತೆಯಿಂದ ಕಾಯುತ್ತಿದ್ದವು. ಥಟ್ಟನೇ ಗುಡುಗಿನ ಸದ್ದು ಎಲ್ಲೆಲ್ಲೂ ತುಂಬಿಕೊಂಡಿತು, ಮಿಂಚು ಆಕಾಶದುದ್ದಕ್ಕೂ ಕಾಣಿಸಿಕೊಂಡಿತು, ಮಳೆ ಹನಿಗಳು ಪಟಪಟನೇ ಕೆಳಗೆ ಉದುರತೊಡಗಿದವು. ಇಡೀ ಊರು ಗಾಢ ನಿದ್ದೆಯಲ್ಲಿದ್ದರೆ, ಕೇವಲ ನಾನಕ್ ಮಾತ್ರ ಎಚ್ಚರವಾಗಿದ್ದ ಮತ್ತು ಅವನ ಹಾಡಿನ ರಿಂಗಣ ಸುತ್ತಲಿನ ಗಾಳಿಯನ್ನು ಆವರಿಸಿಕೊಂಡಿತ್ತು.

ಅರ್ಧರಾತ್ರಿ ಮೀರಿ ಹೋಗಿದ್ದರೂ ನಾನಕನ ಕೋಣೆಯಲ್ಲಿ ಇನ್ನೂ ದೀಪ ಉರಿಯುತ್ತಿರುವುದನ್ನ ಗಮನಿಸಿ ಚಿಂತೆಗೊಳಗಾಗಿದ್ದಳು ನಾನಕನ ಅವ್ವ. ಅವನ ಕೋಣೆಯಿಂದ ಕೇಳಿಸುತ್ತಿದ್ದ ಹಾಡು ಅವಳ ಕಿವಿಯನ್ನೂ, ಮನಸ್ಸನ್ನೂ ತಾಕುತ್ತಿತ್ತು. ತಾಯಿ ಹೃದಯ ತಡೆದುಕೊಳ್ಳಲಾರದೇ ಆಕೆ, ಎದ್ದು ಹೋಗಿ ಮಗನ ಕೋಣೆಯ ಬಾಗಿಲು ತಟ್ಟಿ ಕೂಗಿ ಹೇಳಿದಳು, “ತುಂಬ ಹೊತ್ತಾಯಿತು ಮಗಾ, ನಿದ್ದೆ ಮಾಡು, ಇನ್ನೇನು ಬೆಳಗಾಗಲಿಕ್ಕಿದೆ”. ನಾನಕ್ ಸುಮ್ಮನಾದ, ಕತ್ತಲೆಯೊಳಗಿಂದ ಕುಹೂ ಕುಹೂ ಎನ್ನುವ ಹಕ್ಕಿಯ ಕೂಗು ಅಸರಂತವಾಗಿ ಕೇಳಿಬರಲಾರಂಭಿಸಿತು.

ನಾನಕ್ ಕೂಗಿ ಹೇಳಿದ, “ ಅವ್ವಾ, ಆ ಹಕ್ಕಿ ಹೇಗೆ ತನ್ನ ಪ್ರೇಮಿಯನ್ನ ಹೇಗೆ ಕೂಗಿ ಕರೆಯುತ್ತಿದೆ ಕೇಳಿದೆಯಾ? ನಾನು ಹೇಗೆ ಸುಮ್ಮನೆ ಕುಳಿತುಕೊಳ್ಳಲಿ? ನನಗೂ ಆ ಹಕ್ಕಿಗೂ ಒಂದು ಸ್ಪರ್ಧೆ ನಡೆದಿದೆ ಗೊತ್ತಾ, ಅದು ತನ್ನ ಪ್ರೇಮಿಗಾಗಿ ಕೂಗುವದಕ್ಕಿಂತ ಹೆಚ್ಚು ಜೋರಾಗಿ ನಾನು ನನ್ನ ಭಗವಂತನನ್ನು ಕೂಗಿ ಕರೆಯಬೇಕು. ಅದರ ಪ್ರೇಮಿ ಇಲ್ಲೇ ಎಲ್ಲೋ ಪಕ್ಕದ ಮರದಲ್ಲಿ ಇರಬಹುದು ಆದರೆ ನನ್ನ ಭಗವಂತ ಎಲ್ಲಿದ್ದಾನೋ, ನನ್ನ ದನಿ ಅವನನ್ನು ಮುಟ್ಟಬೇಕು”. ಹೀಗೆನ್ನುತ್ತ ನಾನಕ್ ಮತ್ತೆ ಹಾಡಲು ಶುರು ಮಾಡಿದ.

ನಾನಕ್ ಭಗವಂತನನ್ನು ಸಾಧಿಸಿಕೊಂಡಿದ್ದು ಹೀಗೆ, ತನ್ನ ಹಾಡುಗಳ ಮೂಲಕ. ನಾನಕ್ ನ ಹುಡುಕಾಟ ತುಂಬ ಅಪರೂಪದ್ದು, ಅವನ ಹಾದಿ ಹಾಡುಗಳಿಂದ ತುಂಬಿಕೊಂಡಂಥ ಹಾದಿ. ಮೊದಲು ಗಮನಿಸಬೇಕಾದ ಸಂಗತಿಯೆಂದರೆ ನಾನಕ್ ಯಾವುದೇ ಉಪವಾಸ ವೃತಗಳನ್ನು ಆಚರಿಸಲಿಲ್ಲ, ಯಾವ ಧ್ಯಾನ, ಯೋಗಗಳ ಮೊರೆ ಹೋಗಲಿಲ್ಲ, ಆತ ಎದೆ ತುಂಬಿಕೊಂಡು ಹಾಡುತ್ತ ಹೋದ, ಹಾಡಿ ಹಾಡಿ ತನ್ನ ಹಾಡುಗಳ ಮೂಲಕವೇ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ. ಅವನು ಎಷ್ಟು ಎದೆ ತುಂಬಿಕೊಂಡು, ತನ್ನ ಆತ್ಮವನ್ನು ಹಾಡಿನಲ್ಲಿ ಒಂದಾಗಿಸಿಕೊಂಡು ಹಾಡುತ್ತಿದ್ದನೆಂದರೆ, ಅವನ ಹಾಡೇ ಅವನ ಧ್ಯಾನವಾಗಿ ಪರಿವರ್ತಿತವಾಯಿತು. ಅವನ ಹಾಡುಗಳೇ ಅವನ ಶುದ್ದೀಕರಣದ ಕಾರಣವಾದವು, ಆ ಹಾಡುಗಳೇ ಅವನ ಯೋಗವಾಗಿ ಅವನನ್ನು ಮುನ್ನಡೆಸಿದವು.

ಮನುಷ್ಯ ಯಾವುದೇ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿ, ಅದನ್ನು ಅವ ತನ್ನ ಮನದುಂಬಿ ಮಾಡುತ್ತಿದ್ದರೆ ಅದೇ ಅವನ ಸಾಕ್ಷಾತ್ಕಾರದ ದಾರಿಯಾಗುತ್ತದೆ. ನೀವು ಅರ್ಧ ಮನಸ್ಸಿನಿಂದ ಎಷ್ಟೇ ಧ್ಯಾನ ಮಾಡಿದರೂ ಅದು ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ಆದರೆ ನೀವು ಕೇವಲ ಒಂದು ಸರಳ ಹಾಡನ್ನು ಅದರಲ್ಲಿ ನಿಮ್ಮನ್ನು ನೀವು ಒಂದಾಗಿಸಿಕೊಂಡು ಹಾಡುವಿರಾದರೆ, ಅಥವಾ ಉನ್ಮತ್ತರಾಗಿ ಮೈದುಂಬಿ ಕುಣಿಯುವುದು ನಿಮಗೆ ಸಾಧ್ಯವಾಗುವುದಾದರೆ, ಖಂಡಿತವಾಗಿ ನಿಮ್ಮ ಆ ಹಾಡು, ಕುಣಿತಗಳೇ ಭಗವಂತನ ಭೇಟಿಗೆ ಕೈ ಹಿಡಿದುಕೊಂಡು ಕರೆದೊಯ್ಯುತ್ತವೆ. ಪ್ರಶ್ನೆ ಭಗವಂತನನ್ನು ಮುಟ್ಟಲು ನೀವು ಏನು ಮಾಡುತ್ತೀರಿ ಎನ್ನುವುದಲ್ಲ, ಪ್ರಶ್ನೆ ಇರುವುದು ನೀವು ಆ ಕ್ರಿಯೆಗಳಲ್ಲಿ ನಿಮ್ಮನ್ನು ಎಷ್ಟು ಒಂದಾಗಿಸಿಕೊಳ್ಳುತ್ತೀರಿ ಎನ್ನುವುದು.

ಆತ್ಯಂತಿಕ ಸಾಕ್ಷಾತ್ಕಾರದ ನಾನಕ್ ನ ದಾರಿ ಹಾಡು ಮತ್ತು ಹೂವುಗಳಿಂದ ತುಂಬಿಕೊಂಡಿರುವಂಥದು. ತಾನು ಹೇಳಬೇಕಾಗಿರುವುದೆಲ್ಲವನ್ನೂ ಆತ ಹಾಡುಗಳಲ್ಲಿಯೇ ಹೇಳಿದ್ದಾನೆ. ಅವನ ದಾರಿ ಮೃದು ಮಾಧುರ್ಯದಿಂದ, ಅಮೃತದ ರುಚಿಯಿಂದ ಕಳೆಗಟ್ಟಿರುವಂಥದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.