ನಮ್ಮ ಅಭ್ಯಾಸಗಳು ನಮ್ಮನ್ನ ಅಸಹನೀಯರನ್ನಾಗಿ ಪೋಷಿಸುತ್ತಿವೆ. ಅನಗತ್ಯ ಅವಸರ, ಅಸಹನೆ ನಮ್ಮ ಬದುಕಿನ ಅವಶ್ಯಕ ಭಾಗ ಎನಿಸಿಕೊಳ್ಳುತ್ತಿದೆ. ನಾವೇ ನಮ್ಮ ವೈರಿಗಳಾಗುತ್ತಿರುವಾಗ ಇನ್ನೊಬ್ಬರೊಡನೆ ಗೆಳೆಯರಾಗುವುದು ಹೇಗೆ ಸಾಧ್ಯ? ~ Thich Nhat Hanh
ನಾವು ಅವಸರದಲ್ಲಿರುವಂತೆ
ನಡೆಯುವಾಗ
ನೆಲದ ಮೇಲೆ ಮೂಡಿಸುತ್ತೇವೆ
ದುಗುಡ ಮತ್ತು ಆತಂಕದ ಹೆಜ್ಜೆಗಳನ್ನ.
ನಾವು ನಡೆಯುವುದು ಹೇಗಿರಬೇಕೆಂದರೆ
ಮೂಡಬೇಕು ನೆಲದ ಮೇಲೆ
ಕೇವಲ ಶಾಂತಿ
ಮತ್ತು ಸಮಾಧಾನದ ಹೆಜ್ಜೆಗಳು.
ಜಾಗರೂಕರಾಗಿರಿ
ನಿಮ್ಮ ಪಾದ ಮತ್ತು ನೆಲದ ನಡುವಿನ
ಸಂಪರ್ಕದ ಬಗ್ಗೆ .
ನಿಮ್ಮ ಪಾದ
ನೆಲವನ್ನು ಹೇಗೆ ಮುಟ್ಟಬೇಕೆಂದರೆ
ಮೊದಲಬಾರಿ ನಿಮ್ಮ ತುಟಿಗಳು
ನಿಮ್ಮ ಪ್ರೇಮಿಯ ತುಟಿಗಳನ್ನು
ಸ್ಪರ್ಶಿಸಿದಂತೆ
ಹಗುರಾಗಿ, ತನ್ಮಯತೆಯಲ್ಲಿ.
ನಮ್ಮ ಕೆಲವೊಂದು ಅಭ್ಯಾಸಗಳ ಒತ್ತಡ (habit energy) ಎಷ್ಟು ಧೃಡ, ಎಷ್ಟು ಶಕ್ತಿಶಾಲಿಯಾಗಿರುತ್ತದೆಯೆಂದರೆ, ಅವುಗಳ ಎದುರು ನಾವು ನಿರ್ವಿರ್ಯರಾಗಿಬಿಡುತ್ತೇವೆ. ಅವು ಎಷ್ಟು ಚಿಕ್ಕದಾಗಿದ್ದರೂ ಅದನ್ನು ಬದಲಾಯಿಸುವುದು ನಮಗೆ ಸಾಧ್ಯವಾಗುವುದಿಲ್ಲ.
ಗಮನಿಸಿದ್ದೀರಾ ಹೊಟೆಲ್ ನಲ್ಲಿ ವೇಟರ್ ಊಟ ತರಲು ಕೇವಲ ಐದು ನಿಮಿಷ ತಡ ಮಾಡಿದರೆ ನಾವು ಎಷ್ಟು ಚಡಪಡಿಸುತ್ತೇವೆ ಎನ್ನುವುದನ್ನ?
ಯಾರೋ ಒಬ್ಬ ಗೆಳೆಯ ಅಥವಾ ಗೆಳತಿ ಹತ್ತು ನಿಮಿಷ ಲೇಟ್ ಆಗಿ ನಮ್ಮ ಭೇಟಿಗೆ ಬಂದಾಗ ನಮಗೆ ಕೆಂಡದಂಥ ಕೋಪ. ಏನಾಯಿತು ಆ ಹತ್ತು ನಿಮಿಷದಲ್ಲಿ? ಯಾಕೆ ನಾವು ಆ ಹತ್ತು ನಿಮಿಷಗಳನ್ನ ನಮ್ಮ ವಿಶ್ರಾಂತಿಗಾಗಿ ಅಥವಾ ಇನ್ನೂ ಏನೋ ಒಂದು ಕೆಲಸಕ್ಕಾಗಿ ಉಪಯೋಗಿಸುವುದಿಲ್ಲ? ಯಾಕೆ ನಮ್ಮ ಎನರ್ಜಿ ಸಿಟ್ಟು ಮಾಡಿಕೊಳ್ಳುವುದರಲ್ಲಿ ವ್ಯರ್ಥವಾಗುತ್ತದೆ?
ಟ್ರಾಫಿಕ್ ಸಿಗ್ನಲ್ ನಲ್ಲಿ ಟ್ರಾಫಿಕ ಲೈಟ್ ಗ್ರೀನ್ ಆಗುತ್ತಿದ್ದಂತೆ ನಿಮ್ಮ ಮುಂದಿನ ವೆಹಿಕಲ್ ಗಾಡಿ ಸ್ಟಾರ್ಟ್ ಮಾಡಲು ಮೂರು ಸೆಕೆಂಡ್ ತಡ ಮಾಡಿದರೂ ನಿಮಗೆ ಅಸಾಧ್ಯ ಕೋಪ. ಆ ಮೂರು ಸೆಕೆಂಡ್ ಕಾಯುವಿಕೆ ಕೂಡ ನಿಮ್ಮಿಂದ ಯಾಕೆ ಸಾಧ್ಯ ಆಗುತ್ತಿಲ್ಲ? ನಿಮಗೆ ಅಂಥ ಮಹತ್ವದ ಕೆಲಸ ಏನೂ ಇಲ್ಲ, ಆದರೂ ಯಾಕೆ ಈ ಅವಸರ? ಯಾಕೆ ಈ ಅಸಹನೆ?
ಅಥವಾ ಯಾರೋ ಏನೋ ಅಂದರು ಎಂದು ಒಂದು ದೊಡ್ಡ ಚಾಕಲೇಟ್ ತಿನ್ನುತ್ತ ಕುಳಿತಿದ್ದೀರಲ್ಲ ಏನು ನಿಮ್ಮ ಕತೆ? ಯಾಕೆ ಇಷ್ಟು ಸಹನೆ ಕಳೆದುಕೊಂಡಿದ್ದೀರಿ?
ಈ ಅಸಹನೆಯ ಕ್ಷಣಗಳು ನಮ್ಮ ಮನೋಮಗ್ನತೆಗೆ (mindfulness) ಸವಾಲಾಗುತ್ತಿರುವ ಎಚ್ಚರಿಕೆಯ ಗಂಟೆಗಳು.
ಇಂಥ ಸವಾಲಿನ ಕ್ಷಣಗಳನ್ನ ಯಾಕೆ ಬದುಕನ್ನ ನೋಡಲು, ಮೆಚ್ಚಲು , ಹಾರ್ದಿಕವಾಗಿ ಅನುಭವಿಸಲು ನಾವು ಬಳಸುವುದಿಲ್ಲ? ಯಾಕೆ ಬದುಕಿನ ಕುರಿತಾದ ಹಾರೈಕೆಗಳನ್ನ ನಾವು ನಮ್ಮ ಪ್ರಜ್ಞೆಯ ಭಾಗವಾಗಿಸುವುದಿಲ್ಲ?
ನಮ್ಮ ಅಭ್ಯಾಸಗಳು ನಮ್ಮನ್ನ ಅಸಹನೀಯರನ್ನಾಗಿ ಪೋಷಿಸುತ್ತಿವೆ. ಅನಗತ್ಯ ಅವಸರ, ಅಸಹನೆ ನಮ್ಮ ಬದುಕಿನ ಅವಶ್ಯಕ ಭಾಗ ಎನಿಸಿಕೊಳ್ಳುತ್ತಿದೆ. ನಾವೇ ನಮ್ಮ ವೈರಿಗಳಾಗುತ್ತಿರುವಾಗ ಇನ್ನೊಬ್ಬರೊಡನೆ ಗೆಳೆಯರಾಗುವುದು ಹೇಗೆ ಸಾಧ್ಯ?
ಯಾಕೆ ಇಷ್ಟು ಅವಸರ? Rest in peace ಎನ್ನುವುದು ನಮ್ಮ ಮೃತ ದೇಹಗಳಿಗೆ ಮಾತ್ರ ಎಂದುಕೊಂಡಿರುವಿರಾ? ಯಾಕೆ ನಿಮ್ಮ ದೇಹಕ್ಕೆ, ಮನಸ್ಸಿಗೆ ವಿಶ್ರಾಂತಿಯನ್ನ ಸಾಧ್ಯ ಮಾಡುತ್ತಿಲ್ಲ ನೀವು?
ಟ್ರಾಫಿಕ್ ಸಿಗ್ನಲ್ ರೆಡ್ ಆಗುತ್ತಿದ್ದಂತೆಯೇ, ಅಂಥ ಅರ್ಜೆನ್ಸಿ ಏನೂ ಇಲ್ಲದಿದ್ದರೂ ನಿಮ್ಮ ಫೋನ್ ಓಪನ್ ಮಾಡಿ ಚೆಕ್ ಮಾಡುತ್ತಿದ್ದೀರಲ್ಲ, ಆ ಕೆಲವು ಕ್ಷಣಗಳನ್ನ ನಿಮ್ಮ ಜೊತೆ ಟ್ರಾಫಿಕ್ ಲ್ಲಿ ಸಿಕ್ಕಿಹಾಕಿಕೊಂಡವರ ಖುಶಿ, ಆತಂಕ, ತಲ್ಲಣಗಳನ್ನು ಗಮನಿಸಲು ಯಾಕೆ ನೀವು ಉಪಯೋಗಿಸುತ್ತಿಲ್ಲ, ಯಾಕೆ ನೀವು ನಿಮ್ಮ ಅಭ್ಯಾಸಗಳ ಕೈಗೊಂಬೆ ಆಗಿದ್ದೀರಿ? ಈ ಕಾರಣವಾಗಿಯೇ ಎಷ್ಟೊಂದು ಬದುಕನ್ನ ಮಿಸ್ ಮಾಡಿಕೊಳ್ಳುತ್ತಿದ್ದೀರಿ, ಸ್ವಲ್ಪ ಸಾವಧಾನವಾಗಿ ಯೋಚನೆ ಮಾಡಿ.

