ಮನುಷ್ಯ ತನ್ನ ಭದ್ರತೆಯ ಬಗ್ಗೆ ಆತಂಕಿತನಾಗಿ ತನ್ನ ಸುತ್ತಲೂ ಎಂಥ ಭದ್ರವಾದ ಕೋಟೆಯನ್ನು ಕಟ್ಟಿಕೊಂಡಿರುತ್ತಾನೆಂದರೆ, ಅಧ್ಯಾತ್ಮದ ಗಾಳಿ ಒಳಗೆ ಪ್ರವೇಶ ಮಾಡುವುದು ಸಾಧ್ಯವಾಗುವುದೇ ಇಲ್ಲ. ತನ್ನ ಸುತ್ತ ತಾನೇ ಕಟ್ಟಿಕೊಂಡ ಭದ್ರವಾದ ಕೋಟೆಯಲ್ಲಿ ಬೇರೆ ಯಾವುದಕ್ಕೂ ಪ್ರವೇಶ ಇಲ್ಲವಾಗಿ ಮನುಷ್ಯ ಕೊನೆಗೆ ಅತ್ಯಂತ ದುಃಖದಾಯವಾದ ಕೊನೆಯನ್ನು ಎದುರು ನೋಡಬೇಕಾಗುತ್ತದೆ… । ಚಿದಂಬರ ನರೇಂದ್ರ
ಕೋಶಕಾರಾ ಪಕ್ಷಿ ಮರದ ಕಾಂಡದಲ್ಲಿ ವಾಸ ಮಾಡುತ್ತದೆ. ಅದು ಮರದ ಟೊಂಗೆಯನ್ನು ಕೊರೆದು ತನ್ನ ಗೂಡು ಕಟ್ಟಿಕೊಳ್ಳುತ್ತದೆ.
ತನ್ನ ಗೂಡಿನೊಳಗೆ ಬೇರೆ ಯಾವುದೂ ಪ್ರವೇಶ ಮಾಡಬಾರದು ಎಂದು ಪಕ್ಷಿ ತನ್ನ ಗೂಡನ್ನು ಎಲ್ಲ ಕಡೆಯಿಂದಲೂ ಗಟ್ಟಿಗೊಳಿಸುತ್ತ ಹೋಗಿ ಕೊನೆಗೆ ಒಂದು ಚೂರು ಗಾಳಿಯೂ ಒಳಗೆ ಪ್ರವೇಶಿಸದಂತೆ ಗೂಡನ್ನು ಭದ್ರಗೊಳಿಸಿಕೊಳ್ಳುತ್ತದೆ.
ಆ ಪಕ್ಷಿ ಗಾಳಿ ಬೆಳಕಿಗೆ ಒಂದು ಚೂರಾದರೂ ಜಾಗ ಮಾಡಿಕೊಂಡಿದ್ದರೆ, ಅದಕ್ಕೆ ಉಸಿರಾಡಲು ಅವಕಾಶವಾಗುತ್ತಿತ್ತು. ಆದರೆ ಅದು ತನ್ನ ರಕ್ಷಣೆಯ ಬಗ್ಗೆ ಎಷ್ಟು ತಲೆಕೆಡಸಿಕೊಂಡಿತ್ತೆಂದರೆ ತನ್ನ ಸುತ್ತಲೂ ಯಾವುದಕ್ಕೂ ಪ್ರವೇಶವಿಲ್ಲದಂಥ ಭದ್ರವಾದ ಗೂಡು ಕಟ್ಟಿಕೊಂಡು ಬಿಟ್ಟಿತ್ತು.
ಕೊನೆಗೆ ಗಾಳಿ ಬೆಳಕು ಇಲ್ಲದೇ ಪಕ್ಷಿ ತಾನು ಕಟ್ಟಿಕೊಂಡ ಗೂಡಿನಲ್ಲಿಯೇ ಪಕ್ಷಿ ನಾಶವಾಗಿ ಹೋಗಿಬಿಟ್ಟಿತು.
ಲೌಕಿಕ ಮನುಷ್ಯ ಕೂಡ ಪಕ್ಷಿಯ ಹಾಗೆ ತನ್ನ ಭದ್ರತೆಯ ಬಗ್ಗೆ ಆತಂಕಿತನಾಗಿ ತನ್ನ ಸುತ್ತಲೂ ಎಂಥ ಭದ್ರವಾದ ಕೋಟೆಯನ್ನು ಕಟ್ಟಿಕೊಂಡಿರುತ್ತಾನೆಂದರೆ, ಅಧ್ಯಾತ್ಮದ ಗಾಳಿ ಒಳಗೆ ಪ್ರವೇಶ ಮಾಡುವುದು ಸಾಧ್ಯವಾಗುವುದೇ ಇಲ್ಲ. ತನ್ನ ಸುತ್ತ ತಾನೇ ಕಟ್ಟಿಕೊಂಡ ಭದ್ರವಾದ ಕೋಟೆಯಲ್ಲಿ ಬೇರೆ ಯಾವುದಕ್ಕೂ ಪ್ರವೇಶ ಇಲ್ಲವಾಗಿ ಮನುಷ್ಯ ಕೊನೆಗೆ ಅತ್ಯಂತ ದುಃಖದಾಯವಾದ ಕೊನೆಯನ್ನು ಎದುರು ನೋಡಬೇಕಾಗುತ್ತದೆ.
ಫ್ರಾನ್ಸ್ ನ ಸಂತ ಗುರ್ಜೇಫ್ ಕುರಿಗಳ ಕುರಿತಾದ ಒಂದು ದೃಷ್ಟಾಂತ ಕಥೆ ಹೇಳುತ್ತಿದ.
ಒಂದು ಊರಿನಲ್ಲಿ ಒಬ್ಬ ಮಾಂತ್ರಿಕನಿದ್ದ. ವೃತ್ತಿಯಿಂದ ಅವನೊಬ್ಬ ಕುರಿ ಕಾಯುವವ. ಅವನ ಹಟ್ಟಿಯಲ್ಲಿ ನೂರಾರು ಕುರಿಗಳಿದ್ದವು. ಆ ಮಾಂತ್ರಿಕ ದೊಡ್ಡ ಜುಗ್ಗ. ಅವನಿಗೆ ಕೆಲಸದವರಿಗೆ ಸಂಬಳ ಕೊಡಲು ಇಷ್ಟವಿರಲಿಲ್ಲ. ಅದಕ್ಕೇ ಅವನು ಯಾವ ಕಾವಲುಗಾರರನ್ನೂ ಕೆಲಸಕ್ಕೆ ಇಟ್ಟು ಕೊಂಡಿರಲಿಲ್ಲ. ಆದರೆ ಅವನಿಗೆ ಕುರಿಗಳನ್ನು ತೋಳಗಳು ತಿಂದು ಬಿಟ್ಟರೆ ಏನು ಮಾಡೋದು ಎನ್ನುವ ಚಿಂತೆ ಶುರುವಾಯಿತು.
ಮಾಂತ್ರಿಕ ಒಂದು ಉಪಾಯ ಮಾಡಿದ. ಒಂದೊಂದೇ ಕುರಿಯನ್ನು ಕರೆಸಿ ಅವುಗಳ ಮೇಲೆ ಸಮ್ನೋಹಿನಿ ವಿದ್ಯೆ ಪ್ರಯೋಗ ಮಾಡಿದ. ಪ್ರತಿಯೊಂದು ಕುರಿಗೂ ನೀನು ಹುಲಿ, ನೀನು ಸಿಂಹ, ನೀನು ತೋಳ, ನೀನು ಚಿರತೆ ಎಂದು ಹಿಪ್ನಾಟೈಸ್ ಮಾಡಿದ. ನಿಮ್ಮನ್ನು ಯಾರೂ ಕೊಲ್ಲಲಾರರು, ನೀವು ಯಾರಿಗೂ ಹೆದರಬಾರದು, ಮಂದೆಯಿಂದ ತಪ್ಪಿಸಿಕೊಂಡು ಹೋಗಬಾರದು ಎಂದು ನಂಬಿಸಿದ.
ಮಾಂತ್ರಿಕ ಸಮ್ಮೋಹಿನಿ ವಿದ್ಯೆ ಪ್ರಯೋಗ ಮಾಡಿದ್ದರಿಂದ ಆ ಕುರಿಗಳೆಲ್ಲ ತಮ್ಮನ್ನು ಅವ ಹೇಳಿದಂತೇ ನಂಬಿಕೊಂಡು ವ್ಯವಹರಿಸತೊಡಗಿದವು.
ಪ್ರತಿದಿನ ಮಾಂತ್ರಿಕ ಕೆಲವು ಕುರಿಗಳನ್ನು ಕತ್ತರಿಸುತ್ತಿದ್ದ. ಆದರೆ ಉಳಿದ ಕುರಿಗಳು ತಾವು ಹುಲಿ, ಸಿಂಹ, ತೋಳ, ಚಿರತೆಯೆಂದೂ, ತಾವು ಕುರಿಯಲ್ಲವಾದ್ದರಿಂದ ಮಾಂತ್ರಿಕ ತಮ್ಮನ್ನು ಕೊಲ್ಲಲಾರ ಎಂದು ನಂಬಿಕೊಂಡಿದ್ದವು.
ಪ್ರತೀಬಾರಿ ಮಾಂತ್ರಿಕ ಕುರಿಗಳನ್ನು ಕೊಂದಾಗ ಉಳಿದ ಕುರಿಗಳು ತಮಗೆ ಆ ಪರಿಸ್ಥಿತಿ ಬರುವುದೇ ಇಲ್ಲ ಎಂದು ಯಾವುದೇ ಹೆದರಿಕೆ ಇಲ್ಲದೇ ನಿರಾಳವಾಗಿದ್ದವು.
ಒಂದೊಂದಾಗಿ ಆ ಕುರಿಗಳನ್ನೆಲ್ಲ ಮಾಂತ್ರಿಕ ಕೊನೆಗೊಂದು ದಿನ ಕೊಂದು ಹಾಕಿಬಿಟ್ಟ.

