ಜಲಾಲ್ ಅಲ್- ದೀನ್ ಅಲ್-ರೂಮಿಯ ಪ್ರಕಾರ ಒಂದಾಗುವಿಕೆಯನ್ನ (oneness) ಸಾಧಿಸಿಕೊಳ್ಳಲು ಏಳು ಹಂತಗಳಗಳನ್ನ ದಾಟಿ ಹೋಗಬೇಕು… ~ Ola el wassify | ಕನ್ನಡಕ್ಕೆ: ಚಿದಂಬರ ನರೇಂದ್ರ
ಇಸ್ಲಾಂ ನ ಒಳಗಿನ ಅನುಭಾವದ ಆಯಾಮವೇ ಸೂಫಿಸಂ, ಇದು ಅತ್ಯಂತ ಹೆಚ್ಚು ಪಸರಿಸಿರುವ ಇಸ್ಲಾಮಿಕ್ ಅಧ್ಯಾತ್ಮದ ಬಹುಮುಖ್ಯ ಧಾರೆ.
ಜಲಾಲ್ ಅಲ್- ದೀನ್ ಅಲ್-ರೂಮಿಯ ಪ್ರಕಾರ ಒಂದಾಗುವಿಕೆಯನ್ನ (oneness) ಸಾಧಿಸಿಕೊಳ್ಳಲು ಏಳು ಹಂತಗಳಗಳನ್ನ ದಾಟಿ ಹೋಗಬೇಕು.
ಮೊದಲ ಹಂತ ಭೃಷ್ಟ ಆತ್ಮದ ಹಂತ (Depraved nafs) ; ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭೃಷ್ಟಗೊಂಡ ಆಂತರ್ಯದ ಸೆಲ್ಫ್ ತನ್ನ ಎಲ್ಲ ಹತಾಶೆಗಳಿಗೂ ಸುತ್ತಮುತ್ತಲಿನ ಸಂಗತಿಗಳನ್ನು ದೂಷಿಸುತ್ತದೆ. ರೂಮಿಯ ಪ್ರಕಾರ ಬಹುತೇಕ ಜನರು ಸಿಕ್ಕಿ ಹಾಕಿಕೊಂಡಿರುವುದು ಈ ಹಂತದಲ್ಲಿಯೇ, ಇದು ಮನುಷ್ಯರ ಬಹು ಸಹಜ ಪಾತಳಿಯಾಗಿರುವುದರಿಂದ ಇದನ್ನ ದಾಟಿ ಹೋಗುವುದು ಮನುಷ್ಯನಿಗೆ ಸವಾಲಿನ ವಿಷಯ.
ಮನುಷ್ಯ ತನ್ನ ಒಳಗಿನ ಸುಳ್ಳು ಅಹಂ ಬಗ್ಗೆ ಅರಿವು ಹೊಂದಿದಾಗ, ತನ್ನನ್ನು ತಾನು ಹೊಸದಾಗಿಸಿಕೊಳ್ಳಲು ಸಿದ್ಧನಾಗುತ್ತಾನೆ. ಆಗ ಅವನು ತನ್ನ ಹತಾಶೆಗಳಿಗೆ ತನ್ನನ್ನೇ ಹೊಣೆಗಾರನಾಗಿಸಿಕೊಳ್ಳುತ್ತಾನೆ, ಅವನ ಈ ಪ್ರವೃತ್ತಿ ಎಷ್ಟರಮಟ್ಟಿಗೆ ಮುಂದುವರೆಯುತ್ತದೆಯೆಂದರೆ, ಅವನು ತನ್ನನ್ನು ತಾನು ನಾಶಮಾಡಿಕೊಳ್ಳುವ ತನಕ ಮುಂದುವರೆಯುತ್ತಾನೆ. ರೂಮಿ ಈ ಹಂತವನ್ನು ದೂಷಿಸಲ್ಪಡುವ ಆತ್ಮದ ಹಂತ (accused nafs) ಎಂದು ಗುರುತಿಸುತ್ತಾನೆ.
ಆತ್ಮ, ತನ್ನ ಅಂತರಂಗದ ಜಗತ್ತನ್ನು ಇಡಿಯಾಗಿ ಸುತ್ತಾಡಿ , ಪ್ರತಿಯೊಂದು ಸಂಗತಿಯನ್ನೂ ಅರ್ಥಮಾಡಿಕೊಳ್ಳುವ ಅವಶ್ಯಕ ಪ್ರಕ್ರಿಯೆಯೇ ಮೂರನೇ ಹಂತದ ವಿಕಾಸಕ್ಕೆ ಕಾರಣವಾಗುತ್ತದೆ, ಇದನ್ನೇ ರೂಮಿ ಪ್ರೇರಿತ ಆತ್ಮದ ಹಂತ (inspired nafs) ಎಂದು ಗುರುತಿಸುತ್ತಾನೆ. ಈ ಹಂತದಲ್ಲಿ ಮನುಷ್ಯ ಹೆಚ್ಚು ಹೆಚ್ಚು ತಿಳುವಳಿಕೆಯನ್ನ ಹೊಂದಿದರೂ ಹೆಚ್ಚು ಸಮಾಧಾನವನ್ನು, ಹೆಚ್ಚು ವಿನಯವಂತಿಕೆಯನ್ನು ಮೈಗೂಡಿಸಿಕೊಳ್ಳುತ್ತ ಹೋಗುತ್ತಾನೆ. ಈ ಹಂತವನ್ನ ಯಾಕೆ ರೂಮಿ ಪ್ರೇರಿತ ಆತ್ಮದ ಹಂತ ಎನ್ನುತ್ತಾನೆಯೆಂದರೆ, ಜಗತ್ತಿನಲ್ಲಿ ಎಲ್ಲಿ ನೋಡಿದಲ್ಲಿ ಸ್ಪೂರ್ತಿಯ ಸಂಕೇತಗಳು ಮನುಷ್ಯನಿಗೆ ಕಾಣಿಸತೊಡಗುತ್ತವೆ.
ಮುಂದೆ ಬರಲಿರುವುದೇ ಜ್ಞಾನದ ಕಣಿವೆ ಎಂದು ರೂಮಿ ಹೇಳುವ ಹಂತ. ಪ್ರಶಾಂತ ಆತ್ಮದ ಹಂತ (serene nafs) ಎನ್ನುತ್ತಾನೆ ರೂಮಿ ಈ ಹಂತವನ್ನ. ಈ ಹಂತದಲ್ಲಿ ಅತ್ಯುನ್ನತ ಹಂತದ ಪ್ರಜ್ಞೆ ಸಾಧ್ಯವಾಗುತ್ತ, ಪ್ರಶಾಂತತೆ ಎಲ್ಲವನ್ನೂ ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ ಮತ್ತು ಔದಾರ್ಯ ಹಾಗು ಕೃತಜ್ಞತೆಗಳು ಎಲ್ಲ ಕಡೆಗಳಲ್ಲೂ ವಿಜೃಂಭಿಸುತ್ತ ಬದುಕಿನ ಯಾತನೆಯ ಪ್ರಕೃತಿಯನ್ನು ಗೌರವಿಸಲಾಗುತ್ತದೆ.
ಮುಂದುವರೆದು, ಐಕ್ಯತೆಯ ಕಣಿವೆ (valley of unity) ನೆಲೆಗೊಳ್ಳುತ್ತದೆ. ಈಗ ಮನುಷ್ಯ, ಭಗವಂತ ಸಾಧ್ಯಮಾಡಿರುವ ಎಲ್ಲಬಗೆಯ ಸಂದರ್ಭಗಳ ಬಗ್ಗೆ ಸಮಾಧಾನ ಮತ್ತು ತೃಪ್ತಿಯನ್ನು ಹೊಂದಿದ್ದಾನೆ. ಸಂತುಷ್ಟ ಆತ್ಮದ ಹಂತ (pleased nafs) ಎಂದು ರೂಮಿ ಈ ಹಂತವನ್ನು ಗುರುತಿಸುತ್ತಾನೆ.
ಮುಂದಿನ ಹಂತವೇ ತೃಪ್ತಿದಾಯಕ ಆತ್ಮದ ಹಂತ (pleasing nafs). ಈ ಹಂತದಲ್ಲಿ ಮನುಷ್ಯ ತನ್ನ ಜ್ಞಾನ ಮತ್ತು ಬೆಳಕು ಹರಡುವ ದೀಪದಂತೆ ಸುತ್ತಲಿನ ಎಲ್ಲಕ್ಕೂ ಶಕ್ತಿಯ ಮೂಲ ಸ್ರೋತವಾಗುತ್ತಾನೆ. ಇನ್ನೊಬ್ಬರಿಗೆ ಸಹಾಯ ಮಾಡುವುದೇ ದೇವರನ್ನು ಪೂಜಿಸುವ ರೀತಿ ಎನ್ನುವುದು ಮನುಷ್ಯನ ಮುಖ್ಯ ಕಾಳಜಿಯಾಗುತ್ತದೆ.
ಮುಂದಿನ ಮತ್ತು ಕೊನೆಯ ಹಂತವೇ ವೈಯಕ್ತಿಕ ಸಿದ್ಧಿಯ ಶುದ್ಧ ಆತ್ಮದ ಹಂತ (purified nafs). ಈ ಹಂತದಲ್ಲಿ ಮನುಷ್ಯನ ಆತ್ಮ, ಪರಿಪೂರ್ಣ ಸ್ಥಿತಿಯನ್ನು ತಲುಪುತ್ತದೆ. ಮತ್ತು ಈ ಪರಿಪೂರ್ಣತೆ ಕೇವಲ ಭಗವಂತನಿಗೆ ಮೀಸಲಾಗಿರುತ್ತದೆ. ಈ ಹಂತದ ಬಗ್ಗೆ ಬೇರೆ ಯಾರಿಗೂ ಅಷ್ಟು ಹೆಚ್ಚಾಗಿ ಗೊತ್ತಿಲ್ಲ ಏಕೆಂದರೆ ಇದು ಕೇವಲ ಪ್ರವಾದಿಗಳು ಮತ್ತು ಅವರ ಹಿಂಬಾಲಕರು ತಲುಪಿದ ಹಂತ.

