ಓಶೋ ಹೇಳಿದ ಝೆನ್ ಕತೆ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಂದಾನೊಂದು ಕಾಲದಲ್ಲಿ ಒಬ್ಬ ರೈತನಿದ್ದ, ಆತ ವರ್ಷಗಟ್ಟಲೇ ತನ್ನ ಹೊಲ ಮನೆ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನು ಸುಖವಾಗಿದ್ದ. ಒಂದು ದಿನ ಅವನ ಕುದರೆ ಮನೆ ಬಿಟ್ಟು ಓಡಿ ಹೋಯಿತು. ವಿಷಯ ತಿಳಿದ ನೆರೆಹೊರೆಯವರು, ಸಂಬಂಧಿಕರು, “ಎಂಥ ದುರಾದೃಷ್ಟ ನಿನ್ನದು” ಎನ್ನುವ ಅನುಕಂಪದ ಮಾತನಾಡಿದರು.

“ಇರಬಹುದು” ರೈತ ಉತ್ತರಿಸಿದ.

ಮರುದಿನ ಬೆಳಿಗ್ಗೆ ಕುದರೆ ಮನೆಗೆ ವಾಪಸ್ ಬಂದಿತು. ಅಷ್ಟೇ ಅಲ್ಲ ಅದು ತನ್ನ ಜೊತೆ ಅದ್ಭುತವಾದ ಮೂರು ಕಾಡು ಕುದುರೆಗಳನ್ನು ಕರೆದುಕೊಂಡು ಬಂದಿತ್ತು. ನೆರೆಹೊರೆಯವರು, “ನೀನು ಬಹಳ ಅದೃಷ್ಟಶಾಲಿ” ಎಂದು ರೈತನ ಬಗ್ಗೆ ಕೌತುಕ ವ್ಯಕ್ತಪಡಿಸಿದರು.

“ಇರಬಹುದು” ರೈತ ಉತ್ತರಿಸಿದ.

ಮರುದಿನ ರೈತನ ಮಗ ಕಾಡು ಕುದುರೆಯ ಸವಾರಿ ಮಾಡಲು ಪ್ರಯತ್ನಿಸಿ ತನ್ನ ಕಾಲು ಮುರಿದುಕೊಂಡ. ಮತ್ತೆ ರೈತನ ಮನೆಗೆ ಬಂದ ನೆರೆಹೊರೆಯ ಮಂದಿ “ಎಂಥ ದುರಾದೃಷ್ಟ ಇದು” ಎಂದು ಹಳಹಳಿಸಿದರು.

“ಇರಬಹುದು” ರೈತ ಉತ್ತರಿಸಿದ.

ಆಗ ರಾಜ್ಯದಲ್ಲಿ ಯುದ್ಧ ಶುರುವಾಗಿತ್ತು. ರಾಜ, ರಾಜ್ಯದ ಎಲ್ಲ ಯುವಕರೂ ಸೇನೆ ಸೇರಬೇಕೆಂಬ ಆದೇಶ ಹೊರಡಿಸಿದ್ದ. ರಾಜನ ಭಟರು ಪ್ರತಿ ಊರಿಗೆ ಹೋಗಿ ಅಲ್ಲಿನ ಎಲ್ಲ ಯುವಕರನ್ನು ಒತ್ತಾಯ ಪೂರ್ವಕವಾಗಿ ಸೇನೆಗೆ ಸೇರಿಸಿಕೊಳ್ಳುತ್ತಿದ್ದರು. ರಾಜನ ಭಟರು ರೈತನ ಊರಿಗೆ ಬಂದಾಗ, ರೈತನ ಮಗ ಕಾಲು ಮುರಿದುಕೊಂಡಿರುವುದನ್ನು ನೋಡಿ, ಅವನನ್ನು ಬಿಟ್ಟು ಬಾಕಿ ಎಲ್ಲ ಯುವಕರನ್ನೂ ಯುದ್ಧಕ್ಕೆ ಕರೆದುಕೊಂಡು ಹೋದರು. ರೈತನ ಮನೆಗೆ ಬಂದ ಸುತ್ತ ಮುತ್ತಲಿನ ಜನ “ ನಿನ್ನ ಮಗನ ಕಾಲು ಮುರಿದದ್ದು ಎಷ್ಟು ಒಳ್ಳೆಯದಾಯಿತು” ಎಂದು ರೈತನನ್ನು ಅಭಿನಂದಿಸಿದರು.

“ಇರಬಹುದು” ರೈತ ಉತ್ತರಿಸಿದ.

Leave a Reply