“ಮಾತನಾಡದಿರುವುದೇ ಮೌನ ಎಂದು ಜನರು ಸಾಮಾನ್ಯವಾಗಿ ತಿಳಿದುಕೊಂಡರೂ; ಮೌನದ ನೆಲೆಯು ಇನ್ನೂ ಎತ್ತರದಲ್ಲಿದೆ ಎಂಬುದು ಅದರ ಅಭ್ಯಾಸದಿಂದ ತಿಳಿಯುವುದು. ಮೊದಲು ಮಾತಿಗೂ ಮೌನಕ್ಕೂ ವೈರವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮಾತಿನ ನೆಲೆಯಾಚೆಗೆ ಮೌನದ ಮನೆಯಿದೆ – ಹೌದು. ಆದರೂ ಮೌನದ ಗರ್ಭದ ಸಾಹಿತ್ಯವನ್ನು ಮಾತು ಹೊತ್ತು ಹೊರಗೆ ತರುವದು. ಮಾತಿನ ಸಂತೆಯಲ್ಲಿ ಮೌನದ ಸರಕಿನ ವ್ಯಾಪಾರ ನಡೆಯುವದು. ಹೀಗಿದ್ದೂ ಮಾತೇನು, ಮೌನವೇನು, ಎರಡೂ ಹೊದಿಕೆಗಳೇ. ಒಳಗಿನ ತಿರುಳು ಬೆರೆಯೇ ಇದೆ. ಆ ಒಳಗಿನ ತಿರುಳು ಜೀವಭಾವ. ಮೌನ ಭಿತ್ತಿ , ಮಾತು ಚಿತ್ರ “ ಎನ್ನುತ್ತಾರೆ ಬೇಂದ್ರೆ… । ಚಿದಂಬರ ನರೇಂದ್ರ
ಯಾವಾಗ ಮಾತನಾಡುವ ಪ್ರಲೋಭನೆಯಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಕುರಿತು ಒಂದು ಸಣ್ಣ ಪಟ್ಟಿ.
- ಮೌನವಾಗಿರಿ – ನಿಮ್ಮೊಳಗೆ ಸಿಟ್ಟು ತುಂಬಿಕೊಂಡಿರುವಾಗ.
- ಮೌನವಾಗಿರಿ – ಎಲ್ಲ ವಾಸ್ತವಾಂಶಗಳು ನಿಮ್ಮ ಬಳಿ ಇಲ್ಲದಿರುವಾಗ.
- ಮೌನವಾಗಿರಿ – ಸಂಗತಿಯನ್ನು ನೀವು ಸ್ವತಃ ಪರಿಶೀಲಿಸದಿರುವಾಗ.
- ಮೌನವಾಗಿರಿ – ನಿಮ್ಮ ಮಾತುಗಳು ದುರ್ಬಲ ವ್ಯಕ್ತಿಗೆ ನೋವು ಮಾಡಬಹುದಾಗಿರುವಾಗ.
- ಮೌನವಾಗಿರಿ – ಅದು ನಿಮ್ಮ ಕೇಳುವ ಸಮಯ ಆಗಿರುವಾಗ.
- ಮೌನವಾಗಿರಿ – ಪವಿತ್ರ ವಿಷಯಗಳ ಬಗ್ಗೆ ಹಗುರಾಗಿ ಮಾತನಾಡುವ ಪ್ರಲೋಭನೆ ನಿಮ್ಮೊಳಗೆ ಹುಟ್ಟಿರುವಾಗ.
- ಮೌನವಾಗಿರಿ – ನಂತರ ನಿಮ್ಮ ಮಾತಿಗೆ ನೀವೇ ನಾಚಿಕೆಪಡುವ ಪರಿಸ್ಥಿತಿ ಎದುರಾಗಬಹುದಾದಾಗ.
- ಮೌನವಾಗಿರಿ – ನಿಮ್ಮ ಮಾತುಗಳು ತಪ್ಪು ಅನಿಸಿಕೆಯನ್ನು ಹುಟ್ಟು ಹಾಕುವ ಸಾಧ್ಯತೆ ಇರುವಾಗ.
- ಮೌನವಾಗಿರಿ – ವಿಷಯ ನಿಮಗೆ ಸಂಬಂಧಿಸಿದ್ದಲ್ಲದಿರುವಾಗ.
- ಮೌನವಾಗಿರಿ – ನಿಮ್ಮೊಳಗೆ ಸುಳ್ಳು ಹೇಳುವ ಉತ್ಸುಕತೆ ಪ್ರಬಲವಾಗಿರುವಾಗ.
- ಮೌನವಾಗಿರಿ – ನಿಮ್ಮ ಮಾತುಗಳು ಇನ್ನೊಬ್ಬರ ಹೆಸರಿಗೆ ಕಳಂಕ ತರುವ ಸಾಧ್ಯತೆ ಇರುವಾಗ.
- ಮೌನವಾಗಿರಿ – ನಿಮ್ಮ ಮಾತು ಗೆಳೆತನಕ್ಕೆ ಹಾನಿ ಉಂಟು ಮಾಡಬಹುದಾಗಿರುವಾಗ.
- ಮೌನವಾಗಿರಿ – ನೀವು ಇನ್ನೊಬ್ಬರನ್ನು ಜಡ್ಜ್ ಮಾಡಬಹುದಾಗಿರುವಾಗ.
- ಮೌನವಾಗಿರಿ – ಕೂಗದೇ ಮಾತನಾಡುವುದು ನಿಮಗೆ ಸಾಧ್ಯವಾಗದಿರುವಾಗ.
- ಮೌನವಾಗಿರಿ – ನಿಮ್ಮ ಮಾತುಗಳು ನಿಮ್ಮ ಗೆಳೆಯರನ್ನು , ಕುಟುಂಬವನ್ನು ತಪ್ಪಾಗಿ ಅಭಿವ್ಯಕ್ತಿಸುವ ಸಾಧ್ಯತೆ ಇರುವಾಗ.
- ಮೌನವಾಗಿರಿ – ಆ ಮಾತನ್ನು ನೀವು ಈಗಾಗಲೇ ಒಮ್ಮೆ ಹೇಳಿರುವಾಗ.

