ದೇವರು ಕರುಣಾಮಯಿ ಮತ್ತು ಅವನಿಗೆ ವಿಶೇಷ ಶಕ್ತಿಗಳು ಇರುವುದು ನಿಜ, ಆದರೆ ಆತ ಆ ಶಕ್ತಿಯನ್ನು ಜನರ ಮೂಲಕವೇ ಬಳಸುತ್ತಾನೆ ಹಾಗಾಗಿ ದೇವರನ್ನು ಎಷ್ಟು ನಂಬುತ್ತೇವೆಯೋ ಅಷ್ಟೇ ನಾವು ಜನರನ್ನು ಕೂಡ ನಂಬಬೇಕು… । ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಂದು ಗುರು ಶಿಷ್ಯರ ಜೋಡಿ ತಮ್ಮ ಒಂಟೆಯೊಡನೆ ಮರುಭೂಮಿಯೊಂದರ ಮೂಲಕ ಪ್ರಯಾಣ ಮಾಡುತ್ತಿತ್ತು.
ರಾತ್ರಿಯಾಗುತ್ತಿದ್ದಂತೆಯೇ ಗುರುಗಳು ಊಟ ಮುಗಿಸಿ ನಿದ್ದೆ ಹೋದರು. ಒಂಟೆಯನ್ನು ರಾತ್ರಿಯಿಡಿ ಕಾಯುವ ಜವಾಬ್ದಾರಿ ಶಿಷ್ಯನ ಮೇಲೆ ಇತ್ತು.
ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಒಂಟೆಯನ್ನು ನೋಡಿಕೊಂಡ ಶಿಷ್ಯನಿಗೆ ನಿದ್ದೆ ತಡೆಯಲಾಗಲಿಲ್ಲ. ಅವನು ದೇವರನ್ನು ಕುರಿತು ಪ್ರಾರ್ಥನೆ ಮಾಡಿದ, “ಪ್ರೀತಿಯ ಭಗವಂತ ನಿನ್ನ ಕರುಣೆ ಅಪಾರ, ದಯವಿಟ್ಟು ಈ ರಾತ್ರಿ ಒಂಟೆಯನ್ನು ನೋಡಿಕೋ, ಅದು ದೂರ ಹೋಗದಂತೆ ಕಾವಲು ಮಾಡು”. ಹೀಗೆ ಪ್ರಾರ್ಥನೆ ಮಾಡಿ ಶಿಷ್ಯನೂ ನಿದ್ದೆಗಿಳಿದ.
ಮರುದಿನ ಮುಂಜಾನೆ ನಿದ್ದೆಯಿಂದೆದ್ದ ಗುರು, ಅಲ್ಲಿ ಒಂಟೆ ಕಾಣಿಸದ ಕಾರಣ ಶಿಷ್ಯನನ್ನು ಪ್ರಶ್ನೆ ಮಾಡಿದರು, “ಒಂಟೆ ಎಲ್ಲಿ ಕಾಣಿಸುತ್ತಿಲ್ಲವಲ್ಲ? ರಾತ್ರಿ ನೀನೂ ನಿದ್ದೆ ಹೋಗಿಬಿಟ್ಟೆಯ?”
“ನೀವೇ ಹೇಳಿದ್ದಿರಲ್ಲ ಗುರುಗಳೇ ದೇವರನ್ನು ನಂಬು ಅಂತ. ರಾತ್ರಿ ನಾನು ದೇವರನ್ನು ಪ್ರಾರ್ಥನೆ ಮಾಡಿ, ಒಂಟೆಯನ್ನು ನೋಡಿಕೊಳ್ಳುವಂತೆ ಹೇಳಿದ್ದೆ” ಶಿಷ್ಯ ಉತ್ತರಿಸಿದ.
ಗುರು ಶಿಷ್ಯರು ಸುತ್ತಮುತ್ತ ಹುಡುಕಿದರು ಒಂಟೆ ಸಿಗಲಿಲ್ಲ. ಆಗ ಗುರುಗಳು ಶಿಷ್ಯನಿಗೆ ಹೇಳಿದರು,
“ಖಂಡಿತವಾಗಿ ನೀವು ದೇವರನ್ನು ನಂಬು, ಆದರೆ ಮೊದಲು ನಿನ್ನ ಒಂಟೆಯನ್ನು ಕಟ್ಟಿಹಾಕು. ದೇವರಿಗೆ ವಿಶೇಷ ಶಕ್ತಿ ಇರುವುದು ನಿಜ ಆದರೆ ಆ ಶಕ್ತಿ ಇರುವುದು ನಿನ್ನ ಕೈಗಳ ಮೂಲಕ”.
ಹೌದು ದೇವರು ಕರುಣಾಮಯಿ ಮತ್ತು ಅವನಿಗೆ ವಿಶೇಷ ಶಕ್ತಿಗಳು ಇರುವುದು ನಿಜ, ಆದರೆ ಆತ ಆ ಶಕ್ತಿಯನ್ನು ಜನರ ಮೂಲಕವೇ ಬಳಸುತ್ತಾನೆ ಹಾಗಾಗಿ ದೇವರನ್ನು ಎಷ್ಟು ನಂಬುತ್ತೇವೆಯೋ ಅಷ್ಟೇ ನಾವು ಜನರನ್ನು ಕೂಡ ನಂಬಬೇಕು. ದೇವರ ಯೋಜನೆಗಳು ಅನುಷ್ಠಾನಗೊಳ್ಳುವುದು ಜನರ ಮೂಲಕವೇ. ಅವನು ತಾನೇ ಏನೂ ಮಾಡುವುದಿಲ್ಲ. ಎಲ್ಲವನ್ನು ಅವನು ನಮ್ಮ ಮೂಲಕವೇ ನಡೆಯುವಂತೆ ನೋಡಿಕೊಳ್ಳುತ್ತಾನೆ.

