ರಾಬಿಯಾ ಹೇಳಿದ ಸರಳ ಪಾಠ

ರಾಬಿಯಾ ಒಳಗೇನು ಮಾಡುತ್ತಿದ್ದೀಯ? ಹೊರಗೆ ಬಾ, ಎಷ್ಟು ಸುಂದರವಾಗಿದೆ ಮುಂಜಾವು ನೋಡು ಬಾ. ದೇವರ ಎಂಥ ಅದ್ಭುತವಾದ ಬೆಳಗನ್ನು ಸೃಷ್ಟಿ ಮಾಡಿದ್ದಾನೆ, ಬಾ ಹೊರಗೆ ಅಂದ ಹಸನ್ ಗೆ ರಾಬಿಯಾ ಹೇಳಿದ್ದೇನು ಗೊತ್ತೇ? । ಚಿದಂಬರ ನರೇಂದ್ರ

ನಿಮಗೆ ಊಟದಲ್ಲಿನ ರುಚಿ ಬೇಕೊ?
ಅಥವಾ ನೀವು, ಊಟದಲ್ಲಿ ರುಚಿ ಬೆರೆಸುವವನ ರುಚಿ ನೋಡ ಬೇಕೊ?

ಸಾಗರದಲ್ಲಿ ಅದ್ಬುತ ಸಂಗತಿಗಳಿವೆ, ಒಪ್ಪುವ ಮಾತು,
ಮತ್ತು ಸ್ವತಃ ಇಡೀ ಸಾಗರವೇ ಇದೆಯಲ್ಲ?

ಮನೆ ಕಟ್ಟುವವನ ತಿಳುವಳಿಕೆಯ ಬಗ್ಗೆ ಗೌರವ ಸರಿ,
ಈಗ ಆ ತಿಳುವಳಿಕೆಯನ್ನೇ ಕಟ್ಟಿದವನ ಬಗ್ಗೆ ಒಮ್ಮೆ ಯೋಚಿಸಿ.

ಬೀಜದಿಂದ ಎಣ್ಣೆ ತೆಗೆಯುವುದು ಕಲೆ ಹೌದು,
ಕಣ್ಣೊಳಗೆ ದೃಷ್ಟಿ ಮನೆಮಾಡಿರುವ ಅದ್ಭುತದ ಮೇಲೊಮ್ಮೆ ಕಣ್ಣು ಹಾಯಿಸಿ.

ಇಡೀ ರಾತ್ರಿ, ಬೇಕುಗಳ ಹುಚ್ಚಾಟ.

ಬೆಳಕು ಹರಿಯುತ್ತಿದ್ದಂತೆಯೇ
ನಿನ್ನ ಅಂಗೈಯಲ್ಲಿ ನನ್ನ ಅಂಗೈ ಹಿಡಿದುಕೊ.
ಇದು ಸಾಧ್ಯವೇ ಎಂದು ಸಂದೇಹ ಪಡುವವರು ಇನ್ನೂ ಇದ್ದಾರೆ.

ಅವರು ಬಂಗಾರದ ಹುಡಿಯನ್ನು ಖಾಲಿ ತೊಟ್ಟಿಯಲ್ಲಿ ಬಿಸಾಕುತ್ತಾರೆ
ಕತ್ತೆಗಳನ್ನು ಹುಡುಕಿಕೊಂಡು ಕೊಟ್ಟಿಗೆಗೆ ಹೋಗುತ್ತಾರೆ.

ಈಗ ಮಾತು ಸಾಕು
ಗೆಳೆಯ, ಕಿವಿಗೆ ಕಣ್ಣು ಹಚ್ಚುವ ಸಾಧ್ಯತೆ ನಿನ್ನಲ್ಲಿದೆ
ಕವಿತೆಯ ಉಳಿದ ಭಾಗವನ್ನು ಆ ಭಾಷೆಯಲ್ಲಿ ಹಾಡು.

  • ರೂಮಿ.

ಒಂದು ದಿನ ರಾಬಿಯಾ ತನ್ನ ಗುಡಿಸಲೊಳಗೆ ಕುಳಿತಿದ್ದಳು. ಆಗಿನ್ನೂ ಬೆಳಗಿನ ಹೊತ್ತು, ಪೂರ್ವದಲ್ಲಿ ಸೂರ್ಯನ ಕಿರಣಗಳು ಆಕಾಶವನ್ನು ಆವರಿಸಿಕೊಳ್ಳುತ್ತಿದ್ದವು. ಹಸನ್ ಅದೇ ಸಮಯಕ್ಕೆ ರಾಹಿಯಾಳನ್ನು ನೋಡಲು ಬರುತ್ತಾನೆ.

ಅದು ಬಹಳ ಸುಂದರವಾದ ಬೆಳಗು ಆಗಿತ್ತು. ಹಕ್ಕಿಗಳು ತಮ್ಮ ಚಿಲಿಪಿಲಿಯನ್ನ ಶುರುಮಾಡಿದ್ದವು. ಗಿಡ ಮರಗಳು ಸೂರ್ಯನನ್ನು ಸ್ವಾಗತಿಸುತ್ತ ಮುಂಜಾನೆಯ ಗಾಳಿಗೆ ತೂಗಾಡುತ್ತಿದ್ದವು. ಹಸನ್ ಗುಡಿಸಲಿನ ಹೊರಗೆ ನಿಂತು ರಾಬಿಯಾಳನ್ನು ಕೂಗಿದ,

“ರಾಬಿಯಾ ಒಳಗೇನು ಮಾಡುತ್ತಿದ್ದೀಯ? ಹೊರಗೆ ಬಾ, ಎಷ್ಟು ಸುಂದರವಾಗಿದೆ ಮುಂಜಾವು ನೋಡು ಬಾ. ದೇವರ ಎಂಥ ಅದ್ಭುತವಾದ ಬೆಳಗನ್ನು ಸೃಷ್ಟಿ ಮಾಡಿದ್ದಾನೆ, ಬಾ ಹೊರಗೆ”.

ಹಸನ್ ನ ಮಾತಿಗೆ ರಾಬಿಯಾ ನಕ್ಕಳು,

“ಹಸನ್, ಹೊರಗಿನದು ದೇವರ ಸೃಷ್ಟಿ ಇರಬಹುದು ಆದರೆ ಒಳಗೆ ಸ್ವತಃ ದೇವರು ಇದ್ದಾನೆ. ನೀನೇ ಯಾಕೆ ಒಳಗೆ ಬರಬಾರದು? ಹೌದು ಮುಂಜಾನೆ ಸುಂದರವಾಗಿದೆ ಆದರೆ ಮುಂಜಾನೆಗಳನ್ನು ಸೃಷ್ಟಿಸುವ ದೇವರ ಸೌಂದರ್ಯಕ್ಕೆ ಹೋಲಿಸಿದರೆ ಅದು ಏನೂ ಅಲ್ಲ. ಹೌದು ಹಕ್ಕಿಗಳ ಹಾಡು ಅದ್ಭುತವಾಗಿದೆ ಆದರೆ, ದೇವಗಾನಕ್ಕೆ ಅದನ್ನು ಹೋಲಿಸಬಹುದೆ? ನೀನೇ ಯಾಕೆ ಒಳಗೆ ಬರಬಾರದು. ಇನ್ನೂ ನಿನ್ನ ಹೊರಗಿನ ವ್ಯವಹಾರ ಮುಗಿದಿಲ್ಲವೇ. ಮೊದಲು ಒಳಗೆ ಪ್ರವೇಶ ಮಾಡು, ಆಗ ನಿನಗೆ ಕಾಣುವ ಚೆಲುವನ್ನ್ನು ನಿನಗೆ ಹೊರಗೆ ಎಲ್ಲೂ ನೋಡುವುದು ಸಾಧ್ಯವಾಗುವುದಿಲ್ಲ”.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.