ಶಮನ್ ಸಮುದಾಯದ 4 ನಿಯಮಗಳು

ಶಮನ್ ಸಮುದಾಯಕ್ಕೆ ಆ ಹೆಸರು ಬಂದಿದ್ದು ರಷ್ಯನ್ ಭಾಷೆಯಿಂದ ಅನ್ನುವ ವಾದ ಇದೆಯಾದರೂ ಶಮನ್ ಸಮುದಾಯದ ಮೂಲ ಬೇರು ಇರುವುದು ಪೂರ್ವದ ಚೀನಾದಲ್ಲಿ. ಚೀನಾದ ಮಧ್ಯ ಭಾಗದಲ್ಲಿ. ಶಮನ್ ಪದ ಶ್ರಮಣ, ಸಮಣ – (ಅಲೆಮಾರಿ ಅವಧೂತ, ಅಲೆಮಾರಿ ಅಧ್ಯಾತ್ಮ ಸಾಧಕ ಇತ್ಯಾದಿ ಅರ್ಥದಲ್ಲಿ) ಪದದಿಂದ ಹುಟ್ಟಿಕೊಂಡಿದ್ದು ಅನ್ನುವ ವಾದವೂ ಇದೆ. ಅದೇನೇ ಇದ್ದರೂ ಯುರೇಷಿಯಾದ ಉದ್ದಗಲ ಹರಡಿಕೊಂಡ ಶಮನ್ ಸಮುದಾಯ ಆಯಾ ಸ್ಥಳಗಳ ಪ್ರಾದೇಶಿಕತೆ, ಆಯಾ ನೆಲಮೂಲಗಳ ಜನಪದೀಯ ನಂಬಿಕೆ ಮತ್ತು ಅರಿವಿನಿಂದ ವಿಶಿಷ್ಟ ಸ್ವರೂಪಗಳಲ್ಲಿ ಅಸ್ತಿತ್ವದಲ್ಲಿದೆ. ಆದರೂ ಮೂಲದಲ್ಲಿ ಎಲ್ಲ ದೇಶಗಳ, ಸಂಸ್ಕೃತಿಯ ಶಮನರ ಮೂಲ ನಂಬಿಕೆ ಒಂದೇ. ಆ ನಂಬಿಕೆಗಳಲ್ಲಿ, ಶಮನರ ನಿಯಮಗಳು ಎಂದೂ ಗುರುತಾದ 4 ನಂಬಿಕೆಗಳು ಇಲ್ಲಿವೆ… ।  ಅಲಾವಿಕಾ

1

ಯಾರೂ ಯಾರ ಜೀವನದೊಳಗೂ ಅಕಸ್ಮಾತಾಗಿ ಅಥವಾ ಸುಮ್ಮನೆ ಪ್ರವೇಶಿಸುವುದಿಲ್ಲ. ನಮ್ಮ ಸುತ್ತಲಿನ – ನಾವು ಒಡನಾಡುವ ಪ್ರತಿಯೊಬ್ಬರಿಂದಲೂ ನಾವು ಒಂದಲ್ಲ ಒಂದು ಪಾಠ ಕಲಿತಿರುತ್ತೇವೆ. ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುತ್ತೇವೆ, ಇಲ್ಲಿ ಯಾವುದೂ ಅಕಾರಣವಲ್ಲ.

2.

ಆಗಬಾರದ್ದು ಅನ್ನುವ ಯಾವುದೂ… ಯಾವುದೂ ಅಂದರೆ ಯಾವುದೂ ನಮ್ಮ ಜೀವನದಲ್ಲಿ ಘಟಿಸಲು ಸಾಧ್ಯವೇ ಇಲ್ಲ. ಅದೊಂದು ಚಿಕ್ಕ, ಅತಿ ನಗಣ್ಯ ಅನಿಸುವ ಸಂಗತಿಯಾದರೂ ಸರಿ. ಅದು ಆಗಲೇಬೇಕಾದ, ಆಗಿಯೇ ತೀರುವ ಸಂಗತಿಯೆಂದೇ ತಿಳಿಯಬೇಕು.

3.

ಪ್ರತಿಯೊಂದೂ ಸರಿಯಾದ ಸಮಯದಲ್ಲೇ ಆಗುವುದು. ಯಾವುದೂ ಹೊತ್ತಿಗೆ ಮೊದಲು ಅಥವಾ ನಂತರ ನಡೆಯುವಂಥದ್ದಲ್ಲ. ಪ್ರತಿಯೊಂದೂ ಯಾವಾಗ ಶುರುವಾಗಬೇಕೋ ಆಗಲೇ ಶುರುವಾಗುವುದು. ಆದ್ದರಿಂದ ನಾವು ಯಾವ ಹೊತ್ತು ಆರಂಭ ಮಾಡುತ್ತೇವೋ, ಮೊದಲ ಹೆಜ್ಜೆ ಇಡುತ್ತೀವೋ, ಆ ಸಮಯವೇ ಸರಿಯಾದ ಸಮಯ.

4.

ನಮ್ಮ ಬದುಕಿನ ಯಾವುದಾದರೂ ಒಂದು ಅಧ್ಯಾಯ ಕೊನೆಯಾದರೆ, ಅದು ಅಲ್ಲಿಗೇ ಮುಗಿದೂ ಹೋಗುವುದು. ಅದರ ಮುಗಿತಾಯ ನಮ್ಮ ವಿಕಸನಕ್ಕೆ ಸಾರಿ ಎಂದೇ ತಿಳಿಯಬೇಕು. ಕೊನೆಯಾದ, ಮುಗಿದುಹೋದ ಯಾವುದೂ ಮರುಕಳಿಸದು, ಮತ್ತೆ ನಡೆಯುವುದೇನಿದ್ದರೂ ಅದು ಹೊಸತೇ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.