ನೆರೂಡನ Book of Questions, ಕನ್ನಡದಲ್ಲಿ… #7

ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 7ನೇ ಕಂತು ಇಲ್ಲಿದೆ…

ನಿದ್ದೆ ಮಾಡುತಿದ್ದಾಗ ಕನಸಿನಲ್ಲಿ ಬಂದು
ಪ್ರೀತಿ ಮಾಡಿದವಳು ಯಾರು?

ಕನಸಿನಲ್ಲಿ ಕಂಡದ್ದೆಲ್ಲ ಹೋಗುವುದೆಲ್ಲಿಗೆ?
ಬೇರೆಯವರ ಕನಸಿಗಾ?

ನಿನ್ನ ನಸಿನಲ್ಲಿ ಬದುಕಿ ಬಂದ ಅಪ್ಪ
ನಿನಗೆ ಎಚ್ಚರವಾದ ತಕ್ಷಣ ಸಾಯುತ್ತಾನಾ?

ಕನಸಿನಲ್ಲಿ ಗಿಡ ಬೆಳೆದು ಮರವಾಗಿ
ಮಾಗಿದ ಹಣ್ಣು ಕೊಡುತ್ತಾ?

**
ಬಯಲು/ಆಕಾಶ ಕೊನೆಯಾಗುವ ಜಾಗದ ಹೆಸರು
ಸಾವೋ? ಅನಂತವೋ?

ಯಾವುದು ಹೆಚ್ಚು ಭಾರ—
ದುಃಖವೋ ನೆನಪೋ?

**

ಮಗುವಾಗಿದ್ದ ನಾನು ಎಲ್ಲಿ?
ಇನ್ನೂ ನನ್ನೊಳಗಿದ್ದಾನೋ ಹೊರಟು ಹೋದನೋ

ಅವನ ಬಗ್ಗೆ ನನಗೆ ಪ್ರೀತಿ ಇರಲಿಲ್ಲ
ಅವನಿಗೆ ನನ್ನ ಮೇಲೆ ಪ್ರೀತಿ ಇರಲಿಲ್ಲ ಅಂತ ಅವನಿಗೆ ಗೊತ್ತೋ?

ಅಷ್ಟು ಕಾಲ ಜೊತೆಜೊತೆಯಲ್ಲಿ ಕಳೆದದ್ದು ಯಾಕೆ
ಹೀಗೆ ಅಗಲಿ ಬೇರೆಯಾಗುವುದಕ್ಕಾ?

ಬಾಲ್ಯ ಸತ್ತಾಗ
ನಾವಿಬ್ಬರೂ ಸಾಯಲಿಲ್ಲ ಯಾಕೆ?

ನನ್ನ ಆತ್ಮ ಉದುರಿ ಬಿದ್ದರೂ
ನನ್ನ ಈ ಅಸ್ಥಿಪಂಜರ ಜೊತೆಗೇ ಇದೆಯಲ್ಲ, ಯಾಕೆ?

**

ಹೆಣ ಕರ್ತವ್ಯ ಮುಗಿಸಿದ ರಣ ಹದ್ದು
ಯಾರಿಗೆ ವರದಿ ಒಪ್ಪಿಸುತ್ತೆ?

ಒಬ್ಬಂಟಿ ಕುರಿಯ ದುಃಖ—
ಏನಂತ ಕರೆಯುತಾರೆ ಅದನ್ನು?

ನೊಣ ಜೇನು ತುಪ್ಪ ಮಾಡಿದರೆ
ಜೇನ್ನೊಣಕ್ಕೆ ಸಿಟ್ಟು ಬರುತ್ತಾ?


ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್‌ ಆಫ್‌ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸಲಿದೆ.

(Illustrations: Chetana Thirthahalli)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ