ನೆರೂಡನ Book of Questions, ಕನ್ನಡದಲ್ಲಿ… ಕೊನೆಯ ಕಂತು

ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ ಕೊನೆಯ ಕಂತು ಇಲ್ಲಿದೆ…

ಹಿಂದಿನ ಕಂತು ಇಲ್ಲಿ ನೋಡಿ: https://aralimara.com/2024/07/07/neruda-12/

ಎಲ್ಲ ನದಿಗಳ ನೀರೂ ಸಿಹಿಯಾಗಿದ್ದರೆ
ಸಮುದ್ರದ ಉಪ್ಪು ಬಂದದ್ದು ಎಲ್ಲಿಂದ?

ತಾವು ಡ್ರೆಸ್ಸು ಬದಲಾಯಿಸಬೇಕೆಂದು
ಋತುಗಳಿಗೆ ಹೇಗೆ ತಿಳಿಯುತ್ತದೆ?

ಚಳಿಗಾಲದಲ್ಲಷ್ಟು ನಿಧಾನವಾಗಿ
ಆಮೇಲೆ ನಡುಕ ಹುಟ್ಟುವಷ್ಟು ವೇಗವಾಗಿ ಬದಲಾಗುತವೆ, ಯಾಕೆ?

ಬೆಳಕಿನತ್ತ ಮೇಲೇರಬೇಕು
ಆಮೇಲೆ ಬಣ್ಣ ಬಣ್ಣದ ಹೂ, ಎಲೆಗಳಿಂದ

ಗಾಳಿಯನ್ನು ಗ್ರೀಟ್‌ ಮಾಡಬೇಕು
ಎಂದು ಮರದ ಬೇರುಗಳಿಗೆ ತಿಳಿಯುತ್ತದೆ ಹೇಗೆ?

ವಸಂತ ಒಂದೇ ಇದ್ದು
ಪ್ರತಿ ವರ್ಷವೂ ಅದೇ ಪಾತ್ರ ಹೊಸದಾಗಿ ಮಾಡುತ್ತದೋ?


ಭೂಮಿಯ ಮೇಲೆ ಅತೀ ಹೆಚ್ಚು ಕಠಿಣ ದುಡಿಮೆ ಯಾರದು,
ಮನುಷ್ಯರದೋ ಧಾನ್ಯದೊಳಗೆ ಅಡಗಿರುವ ಬಿಸಿಲಿನದೋ?ಪ್ರೀತಿಯ ನೆನಹೆಲ್ಲವೂ
ಸತ್ತ ಅಗ್ನಿಪರ್ವತದೊಳಕ್ಕೆ ಬೀಳುತ್ತವಾ?
ಜ್ವಾಲಾಮುಖಿಯ ಬಾಯಿ ಸೇಡಿನ ಬಾಯಿ?
ಅಥವಾ ಭೂಮಿ ನೀಡುವ ಶಿಕ್ಷೆಯನ್ನು ನುಡಿಯುವ ಬಾಯಿ?

*

ಕಡಲನ್ನು ತಲುಪಲಾರದ ಹೊಳೆಯ ನೀರು
ಯಾವ ನಕ್ಷತ್ರಗಳ ಜೊತೆ ಮಾತಾಡುತ್ತ ಉಳಿಯುತ್ತದೆ?

*

ದೇವದಾರು-ಗಸಗಸೆ
ಯಾವುದರ ಬಗ್ಗೆ ಭೂಮಿಗೆ ಹೆಚ್ಚು ಪ್ರೀತಿ?

ಬಂದಳಿಕೆ, ಗೋಧಿ
ಯಾವುದರ ಬಗ್ಗೆ ಭೂಮಿಗೆ ಪಕ್ಷಪಾತ?

ಹೂವಿಗೆ ಅಂಥ ವೈಭವ
ಗೋಧಿಗೆ ಕೊಳಕು ಹೊನ್ನಿನ ಬಣ್ಣ, ಯಾಕೆ?

ಎಲೆಯುದುರುವ ಋತು ಕಾನೂನುಬದ್ಧವಾಗಿ ಬರುತ್ತದೋ
ಅಥವಾ ಭೂಗತವಾಗಿರುವ ಋತು ತಟ್ಟನೆ ತಲೆ ಎತ್ತುವುದೋ?

*
ಎಲೆಗಳುದುರುವವರೆಗೆ ಋತು ಶರತ್
ಯಾಕೆ ಕೊಂಬೆಗಳಲ್ಲೇ ಸುಳಿದಾಡತ್ತೆ?

ಅದರ ಹಳದೀ ಪ್ಯಾಂಟು
ಎಲ್ಲಿ ನೇತು ಹಾಕಿ ಬರತ್ತೆ?

ಏನೋ ಅಗಲೆಂದು
ಶರದ್‌ ಕಾಯುತ್ತದಂತೆ, ನಿಜವೇ?

ಎಲೆಯೊಂದು ಕಂಪಿಸಲಿ
ವಿಶ್ವದಲ್ಲೊಂದು ಚಲನೆಯಾಗಲಿ ಅಂತಲಾ?

ಶರದದ ಸಹೋದರ ಅಯಸ್ಕಾಂತವೊಂದು
ಭೂಮಿಯ ಅಡಿಯಲ್ಲಿ ಅಡಗಿದೆಯೇ?
ನೆಲದ ಮೇಲೆ ಗುಲಾಬಿಯ ನೇಮಕಾತಿ
ಆಗಬೇಕೆಂಬ ಆಜ್ಞೆ ಭೂಮಿಯ ಅಡಿಯಲ್ಲಿ ಯಾವಾಗ ಹೊರಡುತ್ತದೆ?


ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್‌ ಆಫ್‌ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸುತ್ತಿದೆ.

(Illustrations: Chetana Thirthahalli)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.