ಅಮರು ಶತಕ : ಹೊಸ ಸರಣಿ ಆರಂಭ

ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಸಿಕ್ಕಿರುವ ಹಸ್ತಪ್ರತಿಗಳಲ್ಲಿರುವ ಪದ್ಯಗಳ ಸಂಖ್ಯೆ ತೊಂಬತ್ತರಿಂದ ಒಂದು ನೂರ ಹದಿನೈದರವರೆಗಿದೆ. ಗ್ರಂಥದ ನಾಲ್ಕು ಪಾಠಗಳು ದೊರಕಿದ್ದು, ಪ್ರತಿ ಪಾಠದಲ್ಲೂ ಸುಮಾರು ಒಂದು ನೂರು ಶ್ಲೋಕಗಳಿವೆ. ಅವುಗಳಲ್ಲಿ ಐವತ್ತೊಂದು ಮಾತ್ರ ಎಲ್ಲ ಪಾಠಗಳಲ್ಲೂ ಬರುತ್ತವೆ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೃತಿಯ ಕುರಿತು

ವಾರಣಾಸಿಯಲ್ಲಿ ಶಂಕರಾಚಾರ್ಯರೊಡನೆ ವಾದದಲ್ಲಿ ತೊಡಗಿ ಸೋಲುವ ಗತಿಯಲ್ಲಿದ್ದ ಮಂಡನಮಿಶ್ರರನ್ನು ಕಂಡು, ಇವರ ಪತ್ನಿ ತಾನೂ ವಾದಕ್ಕೆ ನಿಂತು ಕಾಮ ಶಾಸ್ತ್ರವನ್ನು ಕುರಿತು ಪ್ರಶ್ನಿಸುತ್ತಾಳೆ. ಸಂಸ್ಯಾಸಿಯಾಗಿದ್ದ ಶಂಕರಾಚಾರ್ಯರು ಉತ್ತರ ಕೊಡಲು ಒಂದು ತಿಂಗಳ ಅವಧಿಯನ್ನು ಪಡೆದು ಯಾವುದೋ ಒಂದು ನಗರಕ್ಕೆ ಬರುತ್ತಾರೆ. ಅಲ್ಲಿನ ದೊರೆ ಅಮರು ಎಂಬುವನು ಮೃತನಾಗಿರುವ ವಿಚಾರವನ್ನು ತಿಳಿದು, ಅವರು ತಮ್ಮ ದೇಹವನ್ನು ತ್ಯಜಿಸಿ, ಅದರ ರಕ್ಷಣೆಯನ್ನು ಶಿಷ್ಯರಿಗೆ ವಹಿಸಿ, ದೊರೆಯ ಮೃತದೇಹವನ್ನು ಪ್ರವೇಶಿಸುತ್ತಾರೆ. ಹೀಗೆ ಪುನಃ ಜೀವಂತನಾದ ಅಮರು ಅರಮನೆಗೆ ಹಿಂತಿರುಗಿ ಪ್ರಣಯದಲ್ಲಿ ನೈಪುಣ್ಯ ಪಡೆದುಕೊಳ್ಳುತ್ತಾನೆ. ವಾಸ್ತವವಾಗಿ ಈ ಅನುಭವವನ್ನು ಪಡೆದವರು ಶಂಕರಾಚಾರ್ಯರು. ಸ್ವಲ್ಪಕಾಲವಾದ ಮೇಲೆ ಅವರು ಅಮರುವಿನ ದೇಹವನ್ನು ಬಿಟ್ಟು ಪುನಃ ತಮ್ಮ ದೇಹವನ್ನು ಪ್ರವೇಶಿಸಿ, ಅಲ್ಲಿಂದ ಹೊರಟು ಕಾಮಶಾಸ್ತ್ರಕ್ಕೆ ಸಂಬಂಧಪಟ್ಟ ವಾದದಲ್ಲಿ ಮಂಡನಮಿಶ್ರರ ಪತ್ನಿಯನ್ನು ಸೋಲಿಸುತ್ತಾರೆ. ಇಂಥ ಸಂದರ್ಭದಲ್ಲಿ ನೃಪವೇಷಧಾರಿಯಾದ ಶಂಕರಾಚಾರ್ಯರು ಆ ಶಾಸ್ತ್ರದಲ್ಲೂ ಪಾರಂಗತರಾಗಿ ಅಮರುಶತಕವೆಂಬ ಪ್ರಣಯನಿಬಂಧವನ್ನು ರಚಿಸಿದರೆಂದು ಕಥೆಯಲ್ಲಿ ನಿರೂಪಿತವಾಗಿದೆ. ಅಂದರೆ ಗ್ರಂಥ ಶಂಕರಾಚಾರ್ಯಕೃತವೆಂದು ತಾತ್ಪರ್ಯ. ಈ ಅಮರು ಎಂಬ ದೊರೆ ಕಾಶ್ಮೀರದವನೆಂದೂ, ಅಲ್ಲಿ ನಡೆದ ಒಂದು ವಿದ್ವತ್ಸಭೆಯಲ್ಲಿ ಶಂಕರಾಚಾರ್ಯರು ಭಾಗವಹಿಸಿದ್ದರೆಂದು ಕಾಮಶಾಸ್ತ್ರವನ್ನು ಚರ್ಚಿಸುವ ಸಂದರ್ಭ ಒದಗಿ ಅವರು ಮೃತನಾಗಿದ್ದ ಆ ದೊರೆಯ ದೇಹವನ್ನು ಪ್ರವೇಶಿಸಿ ಅವನ ನೂರುಜನ ಪತ್ನಿಯರೊಡನೆ ವಿಹರಿಸುವಾಗ ಶತಕದ ಒಂದು ನೂರು ಶ್ಲೋಕಗಳನ್ನು ರಚಿಸಿದರೆಂದೂ ಕಥೆಗೆ ಪಾಠಾಂತರವಿದೆ.

(ಆಕರ: ವಿಕಿಪೀಡಿಯಾ)

ಮಂಗಳ ಪದ್ಯ

ಚತುರ ಬಿಲ್ಲುಗಾರ್ತಿಯೊಬ್ಬಳು
ತನ್ನ ಕಿವಿಯವರೆಗೆ ಎಳೆದುಕೊಂಡು
ಬಿಲ್ಲಿನ ಹೆದೆಯೇರಿಸಿದಂತಿದೆ
ದೇವಿ ಅಂಬಿಕೆಯ ನೃತ್ಯ ಭಂಗಿ.
ಕಿವಿಯೋಲೆಯಂತೆ ಕಾಣಿಸುತ್ತಿರುವ
ಆಕೆಯ ಕೆಂಪು ಉಗುರುಗಳ ಹೊಳಪು,
ಮತ್ತು ಮಕರಂದ ಹುಡುಕಿಕೊಂಡು ಬಂದ
ದುಂಬಿಯಂತಿರುವ ಅವಳ
ಕಟಾಕ್ಷ ನೋಟ
ನಿಮ್ಮನ್ನು ಕಾಪಾಡಲಿ.


2

ಕೈಗೆ ತಗುಲಿದಾಗ ಝಾಡಿಸಿಕೊಂಡರು,
ಸೀರೆಯ ಸೆರಗನ್ನು ತಲುಪಿದಾಗ ಕೊಡವಿಕೊಂಡರು,
ಹೆರಳನ್ನು ಮುಟ್ಟಿದಾಗ ದೂರ ತಳ್ಳಿದರು,
ಪಾದಗಳ ಬಳಿ ಬಿದ್ದಾಗ ಮುಂದಾಗಲಿಲ್ಲ ನೋಡಲೂ,
ಮೈ ಮುಟ್ಟಿದಾಗಲಂತೂ ಹೌಹಾರಿ ನಿಂತರು
ತ್ರಿಪುರ ದೇಶದ ಹೆಂಗಳೆಯರು.
ಯಾರೋ ತುಂಟ ಕಾಮಿ ಹುಡುಗನಲ್ಲ ಇದು
ತ್ರಿಪುರಾಸುರನನ್ನು ಕೊಲ್ಲಲು ಶಿವನು ಬಿಟ್ಟ ಅಗ್ನಿ ಬಾಣ
ನಿಮ್ಮ ಕೆಟ್ಟತನವನ್ನೂ ಸುಟ್ಟು ರಕ್ಷಿಸಲಿ.


3

ಮೇಲಿನಿಂದ ಆವರಿಸಿಕೊಂಡು
ಅವನನ್ನು ಪ್ರೇಮಿಸುತ್ತಿರುವ ನಾಜೂಕು ಹೆಣ್ಣಿನ ಮುಖ,
ಅವಳ ಕೆದರಿದ ಮುಂಗುರುಳು,
ನಡುಗುವ ದೇಹದಿಂದಾಗಿ ಕಂಪಿಸುತ್ತಿರುವ
ಅವಳ ಕಿವಿಯೋಲೆಗಳು,
ಬೆವರು ಹನಿಗಳಿಗೆ ಕರಗಿ ಮಸುಕಾಗುತ್ತಿರುವ
ಅವಳ ಹಣೆಯ ಕುಂಕುಮ,
ಸುರತದ ಕೊನೆಗೆ ಸೋತು ಸುಸ್ತಾಗಿ
ತೂಕಡಿಸುತ್ತಿರುವ ಅವಳ ಕಣ್ಣುಗಳು,
ಅವಳ ಈ ದಿವ್ಯ ಅವಸ್ಥೆ ನಿಮ್ಮನ್ನ ಸದಾ ಕಾಪಾಡಲಿ.
ಹರಿ ಹರ ಬ್ರಹ್ಮಾದಿಗಳು, ಸಮಸ್ತ ದೇವತೆಗಳು
ಮೂಕರಾಗಿಹರು ಈ ದೃಶ್ಯಕ್ಕೆ ಬೆರಗಿನಲ್ಲಿ.


4

ಅವಳ ಮೃದುವಾದ ತುಟಿಗಳನ್ನು
ಯಾರೋ ಕಚ್ಚಿದಾಗ
ಆಕೆ ಗಾಬರಿಯಲ್ಲಿ ನಡುಗಿದಳು
ಹುಸಿಕೋಪದಲ್ಲಿ ಗುಡುಗಿದಳು
“ಎಷ್ಟು ಧೈರ್ಯ ನಿನಗೆ?”
ಸುರುಳಿಯಾದವು ಹುಬ್ಬುಗಳು ಬಳ್ಳಿಯಂತೆ.
ಎಲ್ಲೋ ನೋಡುತ್ತ, ಏನೋ ಯೋಚಿಸುತ್ತಿರುವ
ಮುಗ್ಧ ಹುಡುಗಿಯ ತುಟಿಗಳಿಂದ
ಮುತ್ತನ್ನು ಕದಿಯುವುದೆಂದರೆ
ಅಮೃತವನ್ನು ಕುಡಿದಂತೆ.
ಸಾಗರವನ್ನು ಮಂಥನ ಮಾಡುವ
ಹುಚ್ಚು ಸಲಹೆಯನ್ನು
ಕೊಟ್ಟವರಾರು ಈ ದೇವರುಗಳಿಗೆ?


6

ಏನು ಕೋಪ ?
ಯಾಕೆ ಕುಳಿತಿರುವೆ ಮಾತಿಲ್ಲದೆ ಅಳುತ್ತ
ತುದಿ ಬೆರಳಿನಿಂದ ಕಣ್ಣೀರ ಒರೆಸಿಕೊಳ್ಳುತ್ತ ?
ಯಾವುದೋ ಹಗುರ ಗಾಳಿಮಾತು
ಈ ಬಿಕ್ಕಟ್ಟನ್ನು ಇನ್ನಷ್ಟು ಜಟಿಲ ಮಾಡಿ
ಪರಿಹಾರ ಕೈ ಮೀರಿ ಹೋಗುವಾಗ
ನಿರ್ದಯಿಯಾಗುತ್ತಾನೆ ನಿನ್ನ ಪ್ರೇಮಿ
ಅನಾಸಕ್ತನಾಗುತ್ತಾನೆ ನಿನ್ನಲ್ಲಿ
ಆಗ ಅಳಬೇಕಾಗುತ್ತದೆ ನೀನು ಇನ್ನೂ
ಖಾರವಾಗಿ, ಘೋರವಾಗಿ.


7

ಅವಳನ್ನು ಪ್ರೀತಿಸಿದಿರಿ,
ಹಂಚಿಕೊಂಡಿರಿ ಅವಳೊಂದಿಗೆ
ಸಾಕಷ್ಟು ಕಾಲ ಆಪ್ತ ಸುಖವನ್ನು,
ಆದರೆ ಇಂದು
ಅನುಭವಿಸುತ್ತಿದ್ದಾಳೆ ಅವಳು
ನಿಮ್ಮಿಂದಾಗಿಯೇ ಅಪಾರ ಯಾತನೆಯನ್ನು.
ಮೆತ್ತನೆಯ ಮಾತುಗಳು
ತಣಿಸಲಾರವು ಅವಳ ಕೋಪದ ಬೆಂಕಿಯನ್ನು,
ಒಡೆದು ಹಾಕಿದೆ ದುಗುಡ
ಅವಳ ಸಹನೆಯ ಕಟ್ಟೆಯನು
ಅಳಬೇಕು ಅವಳು ಇನ್ನು
ಈ ಅಳುವೇ
ಅಳಿಸಿಹಾಕಬೇಕು ಅವಳ
ನೋವಿನ ನೆನಪನ್ನು.


8

ನಿನ್ನ ಪ್ರೀತಿಸಿದವನು
ಕುಳಿತಿದ್ದಾನೆ ಹೊರಗೆ ತಲೆ ಬಾಗಿಸಿಕೊಂಡು
ನೆಲದ ಮೇಲೆ ಗೆರೆಗಳ ಗೀಚುತ್ತ,
ನಿನ್ನ ಹಸಿದ ಗೆಳತಿಯರು
ಊಟ ಬಿಟ್ಟು ಕುಳಿತಿದ್ದಾರೆ ಎರಡು ದಿನಗಳಿಂದ,
ಧಾರಾಕಾರವಾಗಿ ಹರಿಯುತ್ತಿದೆ
ಅವರ ಕಣ್ಣುಗಳಿಂದ ಕಣ್ಣೀರು
ಊದಿಕೊಂಡಿವೆ ಕೆಂಪಾಗಿ ಕಣ್ಣುಗಳು,
ಮನೆಯ ಪಂಜರದ ಗಿಳಿ
ಕುಳಿತಿದೆ ಗಂಭೀರವಾಗಿ ತನ್ನ ತರಲೆಗಳ ಬಿಟ್ಟು.
ಸೊಕ್ಕಿನ ಹುಡುಗಿ ಬಿಡು ಇನ್ನಾದರೂ
ನಿನ್ನ ಮೊಂಡುತನ
ಬದುಕಿಕೊಳ್ಳಲಿ ನಿನ್ನ ನಂಬಿರುವ ಜೀವಗಳು.


9

ಅಂಜಿಕೆಯಿಲ್ಲದ
ಮೋಹಕ ಹೆಂಗಸರ ಮೋಡಿಯಿಂದ
ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಯಾರಿಗೂ.
ಎಚ್ಚರವಿರಲಿ ನಿನ್ನ ಪ್ರೇಮಿಯ ಬಗ್ಗೆ
ಆಮೇಲೆ ಪ್ರಯೋಜನವಿಲ್ಲ ಅತ್ತು ಗೋಳಾಡಿದರೆ.
ಕಠಿಣ ಮಾತಗಳೇಕೆ
ಬಳಸು ಸುಂದರ ಪದ್ಯಗಳನ್ನು,
ನಿನ್ನ ಮಾಂತ್ರಿಕ ದೇಹವನ್ನು ಬಯಸುವವನು
ಬಯಸುವಂತಾಗಲಿ ನಿನ್ನ ಸನಾತನ
ಆತ್ಮವನ್ನೂ.

(ಮುಂದುವರಿಯುವುದು…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ