ಅಮ್ಮ ಪಕ್ಕದ ಮನೆಯವರಿಂದ ಉಪ್ಪು ಕೇಳಿ ಪಡೆಯೋದ್ಯಾಕೆ? ~ ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಅಮ್ಮ ಪಕ್ಕದ ಮನೆಯವರ ಹತ್ತಿರ ಉಪ್ಪು ಕೇಳಲು ಹೋಗಿದ್ದಳಂತೆ. “ನಮ್ಮ ಮನೆಯಲ್ಲಿ ಉಪ್ಪು ಇತ್ತಲ್ವಾ, ಪಕ್ಕದ ಮನೆಗೆ ಯಾಕೆ ಹೋಗಿದ್ದೆ ಉಪ್ಪು ಕೇಳಲು?” ನಾನು ಅಮ್ಮನನ್ನು ಪ್ರಶ್ನೆ ಮಾಡಿದೆ.
“ಅವರು ಬಡವರು. ನಮ್ಮ ಮನೆಯಿಂದ ಆಗಾಗ್ಗೆ ಏನಾದರೂ ತೆಗೆದುಕೊಂಡು ಹೋಗಿರುತ್ತಾರೆ. ಅವರಿಗೆ ಆ ಸಂಗತಿಗಳ ಅವಶ್ಯಕತೆ ಬಹಳವಾಗಿರುತ್ತದೆ. ಅವರಿಗೆ ಜಾಸ್ತಿ ಮುಜುಗರ ಆಗಬಾರದೆಂದು ನಾನೂ ಅವರ ಮನೆಯಿಂದ ಆಗಾಗ್ಗೆ ಏನಾದರೂ ಕಡಿಮೆ ಬೆಲೆಯ ವಸ್ತುಗಳನ್ನ ಕೇಳಿ ತೆಗೆದುಕೊಂಡು ಬಂದಿರ್ತೀನಿ. ನಮಗೂ ಅವರ ಅವಶ್ಯಕತೆ ಇದೆ ಎಂದು ಅವರು ಅಂದುಕೊಳ್ಳಬೇಕು, ಆಗಲೇ ಅವರಿಗೆ ನಮ್ಮೊಂದಿಗೆ ಮುಕ್ತವಾಗಿ ಬೆರೆಯಲು ಮನಸ್ಸಾಗುತ್ತದೆ. ಮತ್ತು ಅವರು ಯಾವ ಭಿಡೆ ಇಲ್ಲದೆ ನಮ್ಮಿಂದ ಏನಾದರೂ ಕೇಳಿ ಪಡೆಯುವುದು ಸಾಧ್ಯವಾಗುತ್ತದೆ”.
ಇಂಥ ಅಂತಃಕರಣವನ್ನೇ ನಾನು ನನ್ನ ಅಮ್ಮನಿಂದ ಕಲಿತದ್ದು. ನಮ್ಮ ಮಕ್ಕಳಿಗೂ ಕಾರುಣ್ಯವನ್ನ, ವಿನಯವನ್ನ, ಇನ್ನೊಬ್ಬರಿಗೆ ಸಹಾಯ ಮಾಡುವ ಮೌಲ್ಯಗಳನ್ನ ಕಲಿಸೋಣ. ನಮ್ಮ ಸಣ್ಣ ಸಣ್ಣ ಗೆಶ್ಚರ್ ಗಳು ನಮ್ಮ ಸುತ್ತಲಿನ ಬದುಕನ್ನ ಸುಂದರವಾಗಿಸುತ್ತವೆ.

