ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 6ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್
ದೇಗುಲ ಪ್ರತಿಷ್ಠಾಪನೆಯ ನಂತರ ಸ್ವಾಮಿಗಳು ಅರುವಿಪ್ಪುರಂನಲ್ಲೇ ಹೆಚ್ಚು ಕಾಲ ಇರತೊಡಗಿದರು. ಕ್ಷೇತ್ರ ಸಾನ್ನಿಧ್ಯವೂ ಕ್ರಮೇಣ ಹೆಚ್ಚುತ್ತಾ ಹೋಯಿತು. ಜನರೆಲ್ಲ ಸೇರಿ ಲಿಂಗ ಪ್ರತಿಷ್ಠಾಪನೆಗೊಂಡ ಸ್ಥಳದಲ್ಲೇ ದೇಗುಲವೊಂದನ್ನು ನಿರ್ಮಿಸಿದರು. ಕೆಲವು ಭಕ್ತರಿಗೆ ತರಬೇತಿ ನೀಡಿ ಅವರನ್ನೇ ದೇಗುಲದಲ್ಲಿ ಅರ್ಚಕರನ್ನಾಗಿಸುವ ಕೆಲಸವೂ ಸ್ವಾಮಿಗಳಿಂದಾಯಿತು. ಶಿಕ್ಷಣ ಪಡೆದಿದ್ದ ಶಿಷ್ಯರನ್ನು ಬಳಸಿಕೊಂಡು ಅಲ್ಲೇ ಒಂದು ಶಾಲೆಯನ್ನು ಕಟ್ಟಿಸಿ ಸ್ಥಳೀಯ ಮಕ್ಕಳಿಗೆ ಮಲಯಾಳಂ ಕಲಿಸುವ ವ್ಯವಸ್ಥೆಯನ್ನೂ ಸ್ವಾಮಿಗಳೇ ಮಾಡಿದರು.
ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/26/guru-37/ ಮುಂದೆ ಓದಿ…
ಅಧ್ಯಾಯ ಆರು
ಅರುವಿಪ್ಪುರಂನ ಶಿವಲಿಂಗ ಪ್ರತಿಷ್ಠಾಪನೆಗೆ ಮುನ್ನವೇ ಸ್ವಾಮಿಗಳಿಗೆ ದೈವಶಾಸ್ತ್ರ ಜಿಜ್ಞಾಸೆಯಲ್ಲಿ ಆಸಕ್ತಿ ಹೆಚ್ಚಿತ್ತು. ಈ ಹೊತ್ತಿಗಾಗಲೇ ಅವರು ಹಲವು ವೇದಾಂತಿಗಳ ಜೊತೆಗೆ ಒಡನಾಡಿದ್ದರು. ಕನ್ಯಾಕುಮಾರಿಯ ಸಮೀಪವಿರುವ ಮರುತ್ವಮಲೈಗೆ[1] ಸ್ವಾಮಿಗಳು ಆಗಾಗ ಹೋಗುತ್ತಿದ್ದರು. ಈ ದಿನಗಳಲ್ಲಿ ಹಲವು ಬಾರಿ ನಾಗರ ಕೋಯಿಲ್‌ನ ಸಮೀಪವಿರುವ ಸ್ಥಳವೊಂದರಲ್ಲಿ ನಿರ್ವಿಕಲ್ಪ ಸಮಾಧಿಸ್ತರಾಗಿದ್ದ ಯೋಗಿನಿಯೊಬ್ಬರ ದರ್ಶನ ಪಡೆದಿದ್ದರು. ಈ ಯೋಗಿನಿ ಸ್ವಾಮಿಗಳನ್ನು ಒಮ್ಮೆ ಆಶೀರ್ವದಿಸಿದ್ದರೆಂದು ಹೇಳಲಾಗುತ್ತದೆ.
ಸ್ವಾಮಿಗಳು ತಮಿಳು ಭಾಷೆಯಲ್ಲಿ ಒಳ್ಳೆಯ ಹಿಡಿತವನ್ನು ಸಾಧಿಸಿದ್ದು ಈ ಕಾಲದಲ್ಲೇ. ವೇದಾಂತ ವಿಚಾರದಲ್ಲಿ ಅನೇಕ ಹಾಡುಗಳನ್ನು ಅವರು ತಮಿಳಿನಲ್ಲೇ ರಚಿಸಿದ್ದಾರೆ. ಹಾಗೆಯೇ ‘ತಿರುಕ್ಕುರುಳ್’ ಮತ್ತು ‘ಒಳಿವಿಲ್ ಒಡುಕ್ಕಮ್’ ಎಂಬ ತಮಿಳಿನ ಪ್ರೌಢಗ್ರಂಥಗಳನ್ನು ಪದ್ಯರೂಪದಲ್ಲೇ ಮಲಯಾಳಂಗೆ ಭಾಷಾಂತರಿಸಿದ್ದಾರೆ.
ಸ್ವಾಮಿಗಳಂತೆ ಅಸಾಮಾನ್ಯ ಬುದ್ಧಿಶಕ್ತಿ, ಶಾಸ್ತ್ರಪಾಂಡಿತ್ಯ, ಅನುಷ್ಠಾನ ಮತ್ತು ಅನುಭವಗಳು ಒಂದುಗೂಡಿದ ವೇದಾಂತಿಗಳು ಬಹಳ ಕಡಿಮೆ. ಈ ಕಾರಣದಿಂದಾಗಿಯೇ ಅವರನ್ನು ಭೇಟಿಯಾಗುವುದಕ್ಕೆ ವಿದ್ವಾಂಸರಿಗೂ ಬಹಳ ಕೌತುಕವಿರುತ್ತಿತ್ತು. ಪ್ರಸಿದ್ಧ ತತ್ವಜ್ಞಾನಿ ದಿವಂಗತ ಪ್ರೊಫೆಸರ್ ಸುಂದರ ಪಿಳ್ಳೈ (ಎಂ.ಎ) ಮೊದಲಾದವರ ಶ್ಲಾಘನೆ ಮತ್ತು ಗೌರವಕ್ಕೆ ಸ್ವಾಮಿಗಳು ಪಾತ್ರರಾಗಿದ್ದರು.
[1] ತಮಿಳಿನಲ್ಲಿ ಮರಂದುವಾಳ್ ಮಲೈ, ಮರಂದು ವಾಳುಂ ಮಲೈ ಎಂದು ಕರೆಯುವ ಈ ಬೆಟ್ಟವಿರುವುದು ಪಶ್ಚಿಮಘಟ್ಟಗಳ ದಕ್ಷಿಣ ತುತ್ತತುದಿಯಲ್ಲಿ. ಇದನ್ನು ಮಲೆಯಾಳಂನಲ್ಲಿ ಮರುತ್ವಮಲೈ ಎಂದು ಕರೆಯುತ್ತಾರೆ. ಕನ್ಯಾಕುಮಾರಿ ಜಿಲ್ಲೆಯ ಅಗಸ್ತೀಶ್ವರಂ ತಾಲೂಕಿನಲ್ಲಿ ಇರುವ ಈ ಬೆಟ್ಟವನ್ನು ಅನಾದಿಕಾಲದಿಂದಲೂ ಗಿಡಮೂಲಿಕೆಗಳು ಬೆಳೆಯುವ ತಾಣವೆಂದು ಗುರುತಿಸಲಾಗುತ್ತದೆ. ಈ ಪರ್ವತಶ್ರೇಣಿಗಳ ಉದ್ದ ಸುಮಾರು ಒಂದು ಕಿಲೋಮೀಟರಿಗೂ ಹೆಚ್ಚು. ಇದರ ಶಿಖರ 800 ಮೀಟರುಗಳಷ್ಟು ಎತ್ತರದಲ್ಲಿದೆ. ಕನ್ಯಾಕುಮಾರಿ ಪಟ್ಟಣದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟವನ್ನು ಹತ್ತಿನಿಂತರೆ ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರಬಿ ಸಮುದ್ರಗಳನ್ನು ಒಟ್ಟಾಗಿ ಕಾಣಬಹುದು. ನಾರಾಯಣ ಗುರುಗಳು ಬಹುಕಾಲ ತಪಸ್ವಿಯಾಗಿದ್ದದ್ದೂ ಇದೇ ಬೆಟ್ಟದಲ್ಲಿ. ಅವರಿಗೆ ಜ್ಞಾನೋದಯವಾದದ್ದೂ ಇಲ್ಲಿಯೇ ಎಂದು ಹೇಳಲಾಗುತ್ತದೆ.


[…] ಅಧ್ಯಾಯ ಇಲ್ಲಿದೆ : https://aralimara.com/2024/07/27/guru-38/ ಮುಂದೆ […]
LikeLike