ಕೆಲವೊಮ್ಮೆ ನೀವು ವಿಶಿಷ್ಟವಾಗಿ ಯೋಚಿಸಬೇಕಾಗುತ್ತದೆ. ಯಾವಾಗಲೂ ನಿಮ್ಮ ಮುಂದಿರುವ ಆಯ್ಕೆಗಳಿಗೆ ನೀವು ಸೋತು ಶರಣಾಗಬೇಕಿಲ್ಲ. ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಶತಮಾನಗಳ ಹಿಂದೆ ಇಟಲಿಯ ಒಂದು ಸಣ್ಣ ಊರಿನಲ್ಲಿ ಒಬ್ಬ ವ್ಯಾಪಾರಿಯಿದ್ದ. ಆತ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಸಾಲ ಕೊಟ್ಟ ವ್ಯಕ್ತಿ ಸಾಲ ವಾಪಸ್ ಮಾಡುವಂತೆ ಪೀಡಿಸತೊಡಗಿದ. ಆದರೆ ವ್ಯಾಪಾರಿ ಏನೂ ಉಪಾಯಗಾಣದೇ ಸೋತುಬಿಟ್ಟಿದ್ದ.
ವ್ಯಾಪಾರಿಗೆ ಸುಂದರಿಯಾದ ಮಗಳಿದ್ದಳು. ಕೊನೆಗೆ ಸಾಲ ಕೊಟ್ಟ ವ್ಯಕ್ತಿ ಒಂದು ಉಪಾಯ ಸೂಚಿಸಿದ. ವ್ಯಾಪಾರಿ ಮಗಳನ್ನು ತನಗೆ ಮದುವೆ ಮಾಡಿಕೊಟ್ಟರೆ ತಾನು ಅವನ ಎಲ್ಲ ಸಾಲ ಮನ್ನಾ ಮಾಡುತ್ತೇನೆ ಎಂದು ಪ್ರಪೋಸಲ್ ಮಂಡಿಸಿದ. ಆದರೆ ಸಾಲ ಕೊಟ್ಟ ವ್ಯಕ್ತಿಗೆ ಆಗಲೇ ವಯಸ್ಸಾಗಿತ್ತು ಮತ್ತು ನೋಡಲು ಆತ ಅನ್ ಅಟ್ರ್ಯಾಕ್ಟಿವ್ ಆಗಿದ್ದ. ವ್ಯಾಪಾರಿಗೆ ತನ್ನ ಮಗಳನ್ನು ಅವನಿಗೆ ಮದುವೆ ಮಾಡಿಕೊಡಲು ಇಷ್ಟವಿರಲಿಲ್ಲ.
ಕೊನೆಗೆ ಸಾಲ ಕೊಟ್ಟ ವ್ಯಕ್ತಿ ನಾಲ್ಕು ಜನರನ್ನ ಪಂಚಾಯಿತಿಗೆ ಕೂಡಿಸಿಕೊಂಡು ವ್ಯಾಪಾರಿಗೆ ಇನ್ನೊಂದು ಪ್ರಪೋಸಲ್ ಕೊಟ್ಟ. ನಾನು ಬ್ಯಾಗ್ ನಲ್ಲಿ ಎರಡು ಕಲ್ಲುಗಳನ್ನ ಇಡುತ್ತೇನೆ. ಒಂದು ಬಿಳಿ ಕಲ್ಲು ಮತ್ತು ಇನ್ನೊಂದು ಕಪ್ಪು ಕಲ್ಲು. ನಿನ್ನ ಮಗಳು ಕಣ್ಣು ಮುಚ್ಚಿಕೊಂಡು ಬ್ಯಾಗ್ ನಲ್ಲಿಯ ಒಂದು ಕಲ್ಲು ತೆಗೆಯಲಿ, ಕಪ್ಪು ಕಲ್ಲು ಬಂದರೆ ಆ ಹುಡುಗಿ ಮದುವೆಗೆ ಒಪ್ಪಿಕೊಳ್ಳಬೇಕು ಮತ್ತು ವ್ಯಾಪಾರಿಯ ಎಲ್ಲ ಸಾಲ ಮನ್ನಾ ಮಾಡಲಾಗುತ್ತದೆ. ಬಿಳಿ ಕಲ್ಲು ಬಂದರೆ ವ್ಯಾಪಾರಿಯ ಎಲ್ಲ ಸಾಲ ಮಾಡಲಾಗುತ್ತದೆ ಮತ್ತು ಹುಡುಗಿ ಮದುವೆ ಒಪ್ಪಿಕೊಳ್ಳಬೇಕಿಲ್ಲ. ವ್ಯಾಪಾರಿ ಮತ್ತು ಅವನ ಮಗಳಿಗೆ ಬೇರೆ ದಾರಿ ತೋಚದೆ ಅವರು ಸಾಲ ಕೊಟ್ಟವನ ಷರತ್ತಿಗೆ ಒಪ್ಪಿದರು.
ಸಾಲ ಕೊಟ್ಟ ವ್ಯಕ್ತಿ ಕಲ್ಲಿನ ರಾಶಿಯ ಬಳಿ ಹೊಗಿ ಎರಡು ಕಲ್ಲು ತೆಗೆದುಕೊಂಡು ಬ್ಯಾಗ್ ನಲ್ಲಿ ಹಾಕಿದ. ಆ ಎರಡೂ ಕಲ್ಲುಗಳು ಕಪ್ಪು ಕಲ್ಲು ಆಗಿದ್ದನ್ನು ವ್ಯಾಪಾರಿಯ ಮಗಳು ಗಮನಿಸಿದಳು. ಆ ಹುಡುಗಿ ತನ್ನನ್ನು ಗಮನಿಸಿದ್ದು ಸಾಲ ಕೊಟ್ಟ ವ್ಯಕ್ತಿಗೆ ಗೊತ್ತಾಗಲಿಲ್ಲ.
ಈಗ ಆ ಹುಡುಗಿಯ ಎದುರು ಮೂರು ಆಯ್ಕೆಗಳಿದ್ದಳು.
- ಆ ಬ್ಯಾಗ್ ನಲ್ಲಿಯ ಕಲ್ಲುಗಳನ್ನು ಎಲ್ಲರಿಗೂ ತೋರಿಸಿ ಸಾಲ ಕೊಟ್ಟವನ ಮೋಸವನ್ನು ಬಹಿರಂಗ ಮಾಡುವುದು.
- ಸೋಲು ಗೊತ್ತಿರುವುದರಿಂದ ಈ ಶರತ್ತನ್ನು ಒಪ್ಪಿಕೊಳ್ಳಲು ನಿರಾಕರಿಸುವುದು.
- ಮತ್ತು ಸೋಲುವುದು ಗೊತ್ತಿದ್ದೂ ಬ್ಯಾಗ್ ನಿಂದ ಒಂದು ಕಲ್ಲು ಹೊರತೆಗೆದು ಅಪ್ಪನ ಸಾಲಕ್ಕಾಗಿ ತನ್ನನ್ನು ತಾನು ತ್ಯಾಗ ಮಾಡುವುದು.
ಎಲ್ಲರೂ ಕಲ್ಲಿನ ರಾಶಿಯ ಬಳಿ ಬಂದು ನಿಂತರು. ಹುಡುಗಿ ಬ್ಯಾಗ್ ನಿಂದ ಒಂದು ಕಲ್ಲು ತೆಗೆದವಳೇ ಅದನ್ನು ಕಲ್ಲಿನ ರಾಶಿಯಲ್ಲಿ ಬೀಳಿಸಿಬಿಟ್ಟಳು. ಓಹ್ ತನ್ನಿಂದ ಅಚಾತುರ್ಯವಾಯಿತು ಎಂದು ನಾಟಕ ಮಾಡಿದಳು. ಇನ್ನೂ ಆ ಕಲ್ಲಿನ ರಾಶಿಯಲ್ಲಿ ಬ್ಯಾಗ್ ನಲ್ಲಿದ್ದ ಕಲ್ಲು ಹೇಗೆ ಹುಡುಕುವುದು? ಕೊನೆಗೆ ಹುಡುಗಿಯೇ ಒಂದು ಉಪಾಯ ಹೇಳಿದಳು. ಬ್ಯಾಗ್ ನಲ್ಲಿದ್ದ ಇನ್ನೊಂದು ಕಲ್ಲು ನೋಡೋಣ ಆಗ ನಾನು ಆಯ್ಕೆ ಮಾಡಿದ್ದ ಕಲ್ಲು ಯಾವುದು ಎಂದು ಗೊತ್ತಾಗುತ್ತದೆ. ಪಂಚಾಯಿತಿ ಮಾಡಲು ಸೇರಿದ್ದ ಜನ ಇದಕ್ಕೆ ಒಪ್ಪಿಕೊಂಡರು .
ಬ್ಯಾಗ್ ನಲ್ಲಿದ್ದ ಕಲ್ಲು ತೆಗೆದು ನೋಡಿದಾಗ ಅದು ಕಪ್ಪು ಕಲ್ಲಾಗಿತ್ತು. ಹಾಗಾಗಿ ಹುಡುಗಿ ಬ್ಯಾಗ್ ನಿಂದ ತೆಗೆದ ಕಲ್ಲು ಬಿಳಿ ಕಲ್ಲು ಎಂದು ಪಂಚಾಯತಿಯ ಜನ ಘೋಷಿಸಿದರು. ವ್ಯಾಪಾರಿಯ ಸಾಲವೂ ಮನ್ನಾ ಆಯಿತು ಮತ್ತು ವ್ಯಾಪಾರಿಯ ಮಗಳು ಒಲ್ಲದ ಮದುವೆಯಿಂದ ತಪ್ಪಿಸಿಕೊಂಡಳು.
ಪರಿಸ್ಥಿತಿ ಒಮ್ಮೊಮ್ಮೆ ಹೇಗೆ ಇರುತ್ತದೆ ಎಂದರೆ ವಿಶಿಷ್ಟವಾಗಿ ಯೋಚಿಸಬೇಕಾಗುತ್ತದೆ. ಇದನ್ನೇ ಇಂಗ್ಲೀಷಿನಲ್ಲಿ out of box thinking ಎಂದು ಹೇಳುತ್ತಾರೆ. ಯಾವಾಗಲೂ ನಿಮ್ಮ ಮುಂದಿರುವ ಆಯ್ಕೆಗಳಿಗೆ ನೀವು ಸೋತು ಶರಣಾಗಬೇಕಿಲ್ಲ. ನೀವು status quo ನ ಚಾಲೇಂಜ್ ಮಾಡಬೇಕು. ಸೃಜನಶೀಲವಾಗಿ ಆಲೋಚನೆ ಮಾಡಬೇಕು.

