ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್
ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಮೊದಲನೆಯದ್ದು ಕುಮಾರನ್ ಆಶಾನ್ರದ್ದಾದರೆ ಎರಡನೆಯದ್ದು ನಟರಾಜ ಗುರುಗಳು ಬರೆದ ‘The Way of the Guru’. ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಸ್ಥಾಪನೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ ಡಾ. ಪಲ್ಪು ಅವರ ಪುತ್ರ ಪಿ. ನಟರಾಜನ್. ಇವರೇ ಮುಂದೆ ಸನ್ಯಾಸ ಸ್ವೀಕರಿಸಿ ನಟರಾಜ ಗುರುವಾದರು. ಸನ್ಯಾಸ ಸ್ವೀಕರಿಸುವ ಮುನ್ನವೇ ಅವರು ರಚಿಸಿದ ಕೃತಿಯಿದು.
ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿ ಜಿನೇವಾದ The Sufi Quarterlyಯಲ್ಲಿ 1928ರಲ್ಲಿ ಪ್ರಕಟವಾಯಿತು. ಭಾರತದಲ್ಲಿ ನಡೆಯುತ್ತಿರುವ ಹೊಸ ಆಧ್ಯಾತ್ಮಿಕ ಚಳವಳಿಯೊಂದನ್ನು ವಿವರಿಸುವುದಕ್ಕೆ ಬೇಕಿರುವ ನಿರೂಪವಣಾ ವಿಧಾನ ಇದರಲ್ಲಿ ಬಳಕೆಯಾಗಿದೆ. ಬಹಳ ಸಾಂದ್ರವಾದ ತಾತ್ವಿಕತೆ ಮತ್ತು ಇಂಗ್ಲೀಷ್ಗೇ ವಿಶಿಷ್ಟವಾದ ಕಾವ್ಯಾತ್ಮಕತೆಯನ್ನ ಹೊಂದಿರುವ ಈ ಗದ್ಯದ ಅನುವಾದ ಸ್ವಲ್ಪ ಸವಾಲಿನ ಕೆಲಸವೇ ಸರಿ. ಈ ಹಿಂದೊಮ್ಮ ಇದರ ಅನುವಾದವನ್ನು ಆರಂಭಿಸಿ ಮೊದಲ ಎರಡು ಅಧ್ಯಾಯಗಳ ನಂತರ ಅದನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಗುರು ಪ್ರೇರಣೆಯಿಂದ ಮತ್ತೆ ಪ್ರಯತ್ನ ಆರಂಭಿಸಿರುವೆ. ಈ ಬಾರಿ ಪೂರ್ಣಗೊಳಿಸಲು ಸಾಧ್ಯವಾಗಬಹುದೆಂಬ ನಂಬಿಕೆ ಇದೆ. ಹಿಂದೆ ಅನುವಾದಿಸಿದ ಎರಡು ಅಧ್ಯಾಯಗಳನ್ನು ಪರಿಷ್ಕರಿಸಿದ್ದೇನೆ. ಇಲ್ಲಿ ಉಲ್ಲೇಖಿಸಲಾಗುವ ನಾರಾಯಣ ಗುರುಗಳ ಕೃತಿಗಳ ಸಾಲುಗಳ ಅನುವಾದವನ್ನು ವಿನಯ ಚೈತನ್ಯ ಅವರ ಕನ್ನಡ ಅನುವಾದಿಂದ ಪಡೆದುಕೊಂಡಿದ್ದೇನೆ. ಕೆಲವೆಡೆ ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ಪದಗಳನ್ನಷ್ಟೇ ಬದಲಾಯಿಸಲಾಗಿದೆ । ಎನ್.ಎ.ಎಂ.ಇಸ್ಮಾಯಿಲ್
ಆರಂಭ
ಆನಂದವೆಲ್ಲಿದೆ? ಬದುಕೆಂಬ ಈ ಜ್ವರದಿಂದ ವಿಶ್ರಾಂತಿ ದೊರೆಯುವುದಾದರೂ ಎಲ್ಲಿ? ಪರಿಪೂರ್ಣತೆಯನ್ನು ಕಟ್ಟಿಕೊಡುವ ಆ ಚಿತ್ರವೆಲ್ಲಿದೆ? ಬಾಯಾರಿದ ಯಾತ್ರಿಕನ ದಾಹವನ್ನು ತಣಿಸುವ ಜ್ಞಾನದ ಚಿಲುಮೆ ಯಾವುದು? ಬದುಕಿಗೆ ಅನಿವಾರ್ಯವೆನಿಸುವ ಅಗತ್ಯಗಳಿಂದ ಮತ್ತು ಕಷ್ಟಗಳಿಂದ ದೂರವಾಗಿ ಸ್ವತಂತ್ರವಾಗಿ ಜೀವಿಸಬಹುದಾದ ಆ ತೇಜೋಮಯವಾದ ನೆಲೆಯೆಲ್ಲಿದೆ?
ಇವು ಮನುಕುಲದ ಹೃದಯದೊಳಗೆ ಯುಗಯುಗಾಂತರಗಳಿಂದಲೂ ಅನುರಣಿಸುತ್ತಲೇ ಇವೆ. ಕೆಲವರು ಈ ಪ್ರಶ್ನೆಗಳಿಗೆ ಭೌತಿಕವಾದ ಸುಖ-ಸಮೃದ್ಧಿಗಳಲ್ಲಿ ಉತ್ತರವಿದೆಯೆಂದು ಭಾವಿಸುತ್ತಾರೆ. ಇನ್ನು ಕೆಲವರು ಪುಸ್ತಕಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾರೆ. ಇನ್ನು ಕೆಲವರು ಧ್ಯಾನಸ್ಥರಾಗಿ ಕುಳಿತು ತಮ್ಮ ಉಸಿರನ್ನು ಆ ಮಹಾಜ್ಞಾನದ ಜೊತೆ ಅನುಸಂಧಾನಗೊಳಿಸಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಮತ್ತೊಂದಿಷ್ಟು ಮಂದಿ ಎಲ್ಲಾ ಸುಖ ಭೋಗಗಳನ್ನು ನಿಕೃಷ್ಟವಾಗಿ ಕಂಡು ದೂರವಿಟ್ಟು ಕಠಿಣ ಪರಿಸ್ಥಿತಿಯಲ್ಲಿ ದಿನಗಳೆಯುತ್ತಾರೆ. ಇವೆಲ್ಲವೂ ಒಂದೊಂದು ಮಟ್ಟದ ಯಶಸ್ಸನ್ನೂ ತಂದುಕೊಡುತ್ತವೆ.
ಬದುಕೆಂಬ ಧರ್ಮಶಾಲೆಯೊಳಕ್ಕೆ ನೂರಾರು ವರ್ಷಗಳಿಗೊಮ್ಮೆ, ನೂರು, ಸಾವಿರಗಳಲ್ಲಿರುವವರ ಮಧ್ಯೆಯೂ ಏಕಾಂಗಿಯಂತೆ ಆತ ಪ್ರತ್ಯಕ್ಷನಾಗುತ್ತಾನೆ. ಸಾಧಕರು ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಆತನನ್ನು ಸ್ವಾಗತಿಸುವುದಕ್ಕೆ ಅವನ ಬಾಹ್ಯ ಲಕ್ಷಣಗಳೇ ಪ್ರೇರಕವಾಗಿರುತ್ತವೆ. ಅಷ್ಟೇ ಅಲ್ಲ, ಆತ ಮತ್ತು ಆತನ ಮಾರ್ಗದಲ್ಲೇ ಒಂದು ಸ್ಪಷ್ಟ ವಿವರಣೆ, ಒಂದು ಮೌನ ವ್ಯಾಖ್ಯೆ ಹಾಗೂ ಅಲ್ಲಿಯ ತನಕ ಅವರು ಹುಡುಕುತ್ತಿದ್ದ ಎಲ್ಲದರ ಕೇಂದ್ರ ಪ್ರಭೆಯೊಂದು ಸಾಧಕರಿಗೆ ಕಾಣಸಿಗುತ್ತದೆ. ಕಾಲಾನುಕಾಲದಿಂದ ಸಾಂದ್ರಗೊಂಡ ಅಂಧಕಾರ ಮತ್ತು ಸಂಶಯಗಳನ್ನು ನಿವಾರಿಸುವ ಸಾಮರ್ಥ್ಯ ಅವನ ವಚನಗಳಿಗಿವೆ: ಅದನ್ನು ಕೇಳಿಸಿಕೊಂಡವರು ಮುಗುಳ್ನಗುತ್ತಾರೆ ಮತ್ತು ಆ ಕ್ಷಣ ಅವರಿಗೆ ವಿಶಿಷ್ಟ ಆನಂದದ ಅನುಭವವಾಗುತ್ತದೆ. ಸಾಹಿತ್ಯ, ಕಲೆ ಮತ್ತು ವಿಜ್ಞಾನಗಳು ಅವನ ಸುತ್ತ ಬೆಳೆಯುತ್ತವೆ. ಐತಿಹಾಸಿಕ ಘಟನೆಗಳು ತಮ್ಮ ಭ್ರಮಣಕ್ಕೊಂದು ಕೇಂದ್ರವನ್ನು ಅವನಲ್ಲಿ ಕಂಡುಕೊಳ್ಳುತ್ತವೆ. ನಾರಾಯಣ ಗುರುಗಳು ಇಂತಹ ಮಹಾಪುರುಷ. ಪೌರ್ವಾತ್ಯ ಯತಿವರ್ಯರು ಮತ್ತು ಪ್ರವಾದಿಗಳ ಜ್ಞಾನದ ಪರಂಪರೆಯನ್ನು ತಮ್ಮ ಬದುಕಿನೊಳಗೆ ಆವಾಹಿಸಿಕೊಂಡಿದ್ದ ಧನ್ಯ ವ್ಯಕ್ತಿತ್ವ ಅವರದ್ದು.
ಸತ್ಯದ ಅನ್ವೇಷಣೆಯಲ್ಲಿ ಅವರು ಹುಟ್ಟಿದ ಮನೆಯನ್ನು ತೊರೆದರು. ಏಕಾಂಗಿಯಾಗಿ ಪರ್ವತ ಶ್ರೇಣಿಗಳು, ದುರ್ಗಮ ಕಾಡುಗಳು ಮತ್ತು ಗುಹೆಗಳಲ್ಲಿ ವಾಸಿಸಿ ತಪಸ್ಸು ಮಾಡಿದರು. ಈ ಪ್ರಕ್ರಿಯೆಯ ಅಂತ್ಯದಲ್ಲಿ ಬದುಕಿನ ಅತ್ಯಂತ ಸಂಕೀರ್ಣವಾದ ಒಗಟುಗಳಿಗೆ ಉತ್ತರಗಳನ್ನು ಕಂಡುಕೊಂಡೆನೆಂದು ಅವರಿಗನ್ನಿಸಿತ್ತು. ಈ ಉತ್ತರಗಳನ್ನು ಅವರು ಸಮಾಜಕ್ಕೆ ಹಂಚಲು ತೀರ್ಮಾನಿಸಿದರು. ಅದಕ್ಕಾಗೇ ಅವರು ಗುರುತನದ ಹೊಣೆಗಾರಿಕೆಯನ್ನು ತಮ್ಮ ಮೇಲೆ ಎಳೆದುಕೊಂಡು ಗುರುವಾದರು. ಕೈಯಲ್ಲೊಂದು ಕಾಸೂ ಇಲ್ಲದ ನಾರಾಯಣ ಗುರುಗಳ ಪ್ರಭಾವ ಬಡವ-ಶ್ರೀಮಂತ, ಶಿಕ್ಷಿಕ-ಅಶಿಕ್ಷಿತ ಭೇದವಿಲ್ಲದೆ ವ್ಯಾಪಿಸಿತು. ಅವರ ಪಾದ ಧೂಳಿಗಾಗಿ ಜನರು ಹಿಂಡುಗಟ್ಟಿ ಸೇರುತ್ತಿದ್ದರು.
ಇಂದು ಅವರ ಮಾತುಗಳನ್ನು ಪೂರ್ವದ ಪ್ರಾಚೀನ ಜ್ಞಾನದ ಅತ್ಯಾಧುನಿಕ ನಿರೂಪಣೆಯೆಂದು ಗುರುತಿಸಲಾಗಿದೆ. ಮನುಷ್ಯನ ಆತ್ಮದ ಅಭೀಪ್ಸೆಗಳನ್ನು ಹಾಡುವ ಕವಿ, ಮಾನವನ ಸಂಕಷ್ಟಗಳನ್ನು ಕಡಿಮೆ ಮಾಡುವುದನ್ನೇ ಬದುಕಿನ ಗುರಿಯಾಗಿಸಿಕೊಂಡು ಹಗಲು ರಾತ್ರಿಯೆನ್ನದೆ ದುಡಿವ ಲೋಕೋಪಕಾರಿ ದಾನಿ ಮತ್ತು ಆತ್ಯಂತಿಕ ಸತ್ಯವನ್ನೇ ನಿತ್ಯದ ಅನ್ನ-ಪಾನೀಯವಾಗಿ ಸೇವಿಸುವ ಋಷಿ ಎಂಬ ಮೂರು ವ್ಯಕ್ತಿತ್ವಗಳನ್ನು ಮತ್ತೊಮ್ಮೆ ಮೇಳವಿಸಿದ್ದನ್ನು ನಾವು ಕಾಣಲು ಸಾಧ್ಯವಾದದ್ದು ನಾರಾಯಣ ಗುರುಗಳಲ್ಲಿ.
ವೃತ್ತಪತ್ರಿಕೆಗಳು ಮತ್ತು ಮತ್ತಿತರ ಪ್ರಚಾರೋಪಕರಣಗಳಿಂದ ದೂರವೇ ಉಳಿದರು ಈ ಮೌನಿ ಸಾಧುವನ್ನು ದಕ್ಷಿಣ ಭಾರತದ 20 ಲಕ್ಷಕ್ಕೂ ಹೆಚ್ಚು ಮಂದಿಯ ಆಧ್ಯಾತ್ಮಿಕ ನಾಯಕನೆಂದು ಗುರುತಿಸಲಾಗುತ್ತದೆ. ಈ ಜನರಿಗೆ ಗುರುಗಳ ಮಾತೆಂದರೆ ಕಾನೂನಿಗೂ ಮಿಗಿಲಾದುದು. ಒಂದು ದಶಕದ ಅವಧಿಯಲ್ಲಿ ಭಾರತದ ಪಶ್ಚಿಮ ಕರಾವಳಿಯೊಂದರಲ್ಲೇ ನೂರಕ್ಕೂ ಹೆಚ್ಚು ಆರಾಧನಾಲಯಗಳನ್ನು ಸ್ಥಾಪಿಸಿದ ಹೆಗ್ಗಳಿಗೆ ಅವರದ್ದು. ದಿನವೂ ದಿನವೂ ಹೆಚ್ಚುತ್ತಿರುವ ಈ ಆಲಯಗಳು ಶೈಕ್ಷಣಿಕ ಹಾಗೂ ಆರ್ಥಿಕ ಚಟುವಟಿಕೆಗಳ ಮತ್ತು ಲೋಕೋಪಕಾರದ ಕೇಂದ್ರಗಳಾಗಿ ವಿಕಾಸ ಹೊಂದುತ್ತಿವೆ. ದೊಡ್ಡ ಸಂಖ್ಯೆಯ ಜನರು ಸೇರುವ ಸಭೆಗಳೂ ಇಲ್ಲಿ ನಡೆಯುತ್ತವೆ. ಜನರು ಹೀಗೆ ಒಂದುಗೂಡುವುದರ ಹಿಂದೆ ಇರುವುದೂ ಗುರುವಿನ ಹೆಸರಿನ ಬಲವೇ. ಜನರಿಗೆ ಅವರು ನೀಡುವ ಸಂದೇಶ ಅನೇಕ ವೇದಿಕೆಗಳಲ್ಲಿ ಆಯಾ ವಾರದ ಚರ್ಚೆಯ ವಿಷಯ. ದಕ್ಷಿಣ ಭಾರತದ ಅನೇಕ ಸ್ಥಳಗಳಲ್ಲಿ ಗುರುಗಳ ಆದರ್ಶದ ಹರಡುವಿಕೆಯ ಉದ್ದೇಶಕ್ಕಾಗಿ ಸಂಘಟನೆಗಳು ರೂಪುಗೊಂಡಿವೆ. ಅವರ ಹೆಸರೇ ಯುವಕರು ಮತ್ತು ವೃದ್ಧರು ಒಂದೇ ಆದರ್ಶದ ಸಾಧನೆಗೆ ಕೈಜೋಡಿಸುವಂತೆ ಮಾಡುತ್ತದೆ. ಬಡವರು ಮತ್ತು ಶ್ರೀಮಂತರು ಜೊತೆಗೂಡಿ ಮುನ್ನಡೆಯುತ್ತಾರೆ. ಒಂದರ್ಥದಲ್ಲಿ ಇಡೀ ಭಾರತವನ್ನು ಮತ್ತು ಅದರ ಮೂಲಕ ವಿಶ್ವವನ್ನು ಪುನರ್ ನಿರ್ಮಿಸುವ ಶಕ್ತಿಯೊಂದಕ್ಕೆ ಚಾಲನೆ ನೀಡಿ ಅದರ ವ್ಯಾಪಕತೆಗೆ ನಾರಾಯಣ ಗುರುಗಳು ಕಾರಣರಾಗಿದ್ದಾರೆ.
ಗುರುಮನೆಯಲ್ಲಿ ಗುರು
ಭಾರತದಲ್ಲಿ ಆರಂಭವಾಗಿರುವ ಧಾರ್ಮಿಕ ಆಂದೋಲನದ ನಾಯಕನನ್ನು ನೋಡುವ ಆಸೆಯಿಂದ ಹೊರಟರೆ ಮೊದಲು ಆಲುವಾ ಎಂಬ ಪುಟ್ಟ ಊರನ್ನು ತಲುಪಬೇಕಾಗುತ್ತದೆ. ಹಿಂದೊಮ್ಮೆ ಈ ಲೇಖಕನೂ ಅದೇ ಕೆಲಸ ಮಾಡಿದ್ದ. ಇಲ್ಲಿನ ಪುಟ್ಟ ರೈಲು ನಿಲ್ದಾಣ ಕೊಚ್ಚಿಯಿಂದ ಉತ್ತರದ ಕಡೆಗೆ ಸಾಗುವ ರೈಲುಗಳು ನಿಲ್ಲುವ ಎರಡು ನಿಲ್ದಾಣಗಳನ್ನು ದಾಟಿದ ಮೇಲೆ ಸಿಗುತ್ತದೆ. ಇದು ತಿರುವಿದಾಂಕೂರು (ತಿರುವಿದಾಂಕೂರು ಮತ್ತು ಕೊಚ್ಚಿಗಳೆರಡೂ ಸ್ವಾತಂತ್ರ್ಯಪೂರ್ವದಲ್ಲಿ ಪ್ರತ್ಯೇಕ ರಾಜ್ಯಗಳಾಗಿದ್ದವು. ಈಗ ಇವು ಕೇರಳ ರಾಜ್ಯದ ಭಾಗ) ರಾಜ್ಯಕ್ಕೆ ಸೇರಿದ ಪಟ್ಟಣ. ಈ ಊರು ಮಹಾನ್ ಭಾರತೀಯ ತಾತ್ವಿಕರಲ್ಲಿ ಒಬ್ಬರಾದ ಶಂಕರಾಚಾರ್ಯರ ಹೆಸರಿನೊಂದಿಗೆ ತಳುಕುಹಾಕಿಕೊಂಡಿದೆ. ಈ ಊರಿನ ಪಕ್ಕದಲ್ಲೇ ಸ್ಫಟಿಕ ಶುದ್ಧವಾಗಿ ಹರಿಯುವ ನದಿಯಲ್ಲಿ ಸ್ನಾನ ಮಾಡುವಾಗ ಶಂಕರರಿಗೆ ಸರ್ವಸಂಗ ಪರಿತ್ಯಾಗ ಮಾಡಿ ಜ್ಞಾನಾನ್ವೇಷಣೆಗೆ ಹೊರಡಬೇಕೆಂಬ ಪ್ರೇರಣೆಯಾಯಿತಂತೆ. ಆ ಕ್ಷಣವೇ ಅದನ್ನವರು ಅನುಷ್ಠಾನಕ್ಕೂ ತಂದರಂತೆ.
ಮುಖ್ಯ ರಸ್ತೆಯಿಂದ ನದಿಯತ್ತ ಸಾಗುವ ಓಣಿಯಲ್ಲಿ ನಡೆದರೆ ಅಂಗಳವೊಂದಕ್ಕೆ ಕರೆದೊಯ್ಯುವ ಬೇಲಿದಾಟುವ ಮೆಟ್ಟಿಲುಗಳಿವೆ. ಇವನ್ನು ಹತ್ತಿಳಿದು ಕಿರು ಓಣಿಯಲ್ಲಿ ನಡೆದು ಮರಗಳ ಮರೆಯನ್ನು ಕಳೆದು ನದಿ ದಂಡೆ ತಲುಪಿದರೆ ಬಳಕ್ಕೆ ತಿರುಗಿದರೆ ಅಲ್ಲಿ ಪುಟ್ಟ ಬಿಳಿಯ ಕಟ್ಟಡವೊಂದು ಕಾಣಸಿಗುತ್ತದೆ. ಅಂಗಳವಿಡೀ ಶುದ್ಧವಾದ ಮರಳು ಹರಡಿದೆ. ಈ ಸ್ಥಳದ ನಿಶ್ಶಬ್ದಕ್ಕೆ ಭಂಗ ತರುವುದು ಹಕ್ಕಿಗಳ ಕೂಜನ. ಅದನ್ನು ಹೊರತು ಪಡಿಸಿದರೆ ಆಗೀಗ ನದಿಯಲ್ಲಿ ಜಳಕ ಮಾಡುತ್ತಿರುವವರ ಮಾತುಗಳು ಮಾತ್ರ. ಎರಡೂ ದಡಗಳಲ್ಲಿ ಕಿಕ್ಕಿರಿದಿರುವ ಹಸಿರು ಮತ್ತು ಸಾವಿರ ಸುಳಿಗಳನ್ನು ಒಡಲಲ್ಲಿ ಅಡಗಿಸಿಕೊಂಡಂತೆ ಮೈದುಂಬಿ ಹರಿಯುವ ಪೆರಿಯಾರ್ ನದಿಗಳೆರಡೂ ಪ್ರವಾಸಿಯನ್ನು ಆಕರ್ಷಿಸದೇ ಇರಲು ಸಾಧ್ಯವೇ ಇಲ್ಲ. ಗುರುಗಳು ಆಶ್ರಮದಲ್ಲಿದ್ದರೆ ಅವರು ಸಣ್ಣ ಪೀಠದಲ್ಲಿ ಕುಳಿತು ನದಿಯತ್ತಲೇ ದಿಟ್ಟಿಸುತ್ತಿರುವುದನ್ನು ಕಾಣಬಹುದು. ತಮ್ಮ ಧ್ಯಾನಸ್ಥ ವೀಕ್ಷಣೆಯಿಂದ ಸಂದರ್ಶಕರತ್ತ ತಿರುಗುವ ಅವರ ಕ್ರಿಯೆಯಲ್ಲಿ ಸೂಕ್ಷ್ಮಜ್ಞರಾದ ಸಂದರ್ಶಕರಿಗೆ ವೇದ್ಯವಾಗುವ ಸಂಗತಿಯೊಂದಿದೆ. ನದಿಯ ಹರಿವನ್ನು ದಿಟ್ಟಿಸುತ್ತಾ ಅಭೌತಿಕವಾದ ಇನ್ಯಾವುದರಲ್ಲೋ ಮುಳುಗಿರುವ ಗುರುಗಳ ಏಕಾಂತಕ್ಕೆ ಭಂಗ ತಂದುಬಿಟ್ಟವೇನೋ ಭಾವವದು. ಧ್ಯಾನ ನಿರ್ಭರತೆಯ ಅಲೌಕಿಕ ಶಾಂತಿಲ್ಲಿ ಲೀನವಾಗಿರುವ ಪ್ರಶಾಂತವಾದ ಭಾವವೊಂದು ಅಲ್ಲಿ ಮನೆ ಮಾಡಿರುವುದೂ ಅನುಭವಕ್ಕೆ ಬರುತ್ತದೆ. ಸಂದರ್ಶಕರು ಹೊಸಬರಾದರೆ ಎಲ್ಲಿಂದ ಬಂದಿರಿ ಎಂಬಂಥ ಕುಶಲ ಪ್ರಶ್ನೆಗಳು ಗುರುಮುಖದಿಂದ ಬರಬಹುದು. ಮತ್ತೆ ಹಣ್ಣ-ಹಂಪಲು ಮತ್ತು ಹಾಲಿನ ಉಪಚಾರವಂತೂ ಖಚಿತ. ಅದು ಆಶ್ರಮದ ವಾಡಿಕೆ.
ಇದಾದ ಮೇಲೂ ಗುರುಗಳ ಜೊತೆಗಿನ ಮಾತುಕತೆ ಮುಂದುವರೆದರೆ ಮನುಷ್ಯ ಪ್ರಕೃತಿಯಲ್ಲಿ ಆಗಬೇಕಿರುವ ಸುಧಾರಣೆಗಳತ್ತ ಅವರ ಮಾತುಗಳು ತಿರುಗುತ್ತವೆ. ಜಾತಿ, ಮತ, ರಾಷ್ಟ್ರೀಯತೆ ಅಥವಾ ಜನಾಂಗೀಯತೆಯನ್ನು ಆಧಾರವಾಗಿಟ್ಟುಕೊಂಡು ಮನುಷ್ಯನ ನಡೆಸುವ ಕ್ಷುಲ್ಲಕ ಜಗಳಗಳನ್ನೆಲ್ಲಾ ಹೇಗೆ ನಿವಾರಿಸಬಹುದೆಂದು ಅವರು ತಿಳಿಹೇಳುತ್ತಾರೆ. ಹಸು ಮತ್ತು ನಾಯಿಗಳು ಬೇರೆ ಜಾತಿಗೆ ಸೇರಿವೆಯೆಂದು ಹೇಳಬಹುದಾದರೂ ಉಡುಪು ಮತ್ತು ಭಾಷೆಯಂಥ ಕ್ಷುಲ್ಲಕ ಸಂಗತಿಗಳಲ್ಲಿರುವ ಭಿನ್ನತೆಯನ್ನು ಮತ್ಯಾವ ರೀತಿಯಲ್ಲೂ ಭಿನ್ನರಲ್ಲದ ಮನುಷ್ಯ ಜಾತಿಗೆ ಸೇರಿದವನೊಬ್ಬ ಮತ್ತೊಬ್ಬನನ್ನು ಬೇರೆ ಜಾತಿಗೆ ಸೇರಿದವನೆಂದು ಹೇಳುವುದು ಎಂಥಾ ಅಸಂಗತವೆಂದು ಗುರುಗಳು ವಿವರಿಸದೇ ಇರಲಾರರು. ಮನುಷ್ಯ ಮಾನವೀಯ ಮೌಲ್ಯಗಳೆಂಬ ಒಳತಿನ ಬೆಳಕನ್ನು ತನ್ನ ಬದುಕಿನಲ್ಲಿ ಒಳಗೊಂಡಿರುವಷ್ಟೂ ಕಾಲವೂ ಬಾಹ್ಯ ಆಚರಣೆಗಳು ಮತ್ತು ಅವನೇ ನಂಬಿಕೊಂಡ ತಾತ್ವಿಕತೆಗಳು ಅವನನ್ನು ಸಹಜೀವಿಗಳಿಂದ ಪ್ರತ್ಯೇಕಗೊಳಿಸುತ್ತವೆ ಎಂಬುದಕ್ಕೆ ಅರ್ಥವಿಲ್ಲ.
ಗುರುಗಳನ್ನು ಅವರ ಏಕಾಂತ ಧ್ಯಾನ ಮುಂದುವರಿಸಲು ಅವಕಾಶ ಕಲ್ಪಿಸಿ ಸಾನಿಧ್ಯದಿಂದ ಹೊರಬರುವ ಸಂದರ್ಶಕ ಆ ಪರ್ಣಕುಟಿಯಂಥ ಮನೆಯೊಳಗೊಮ್ಮೆ ಓಡಾಡಿದರೆ ಅಲ್ಲಿನ ಪುಟ್ಟ ಅಡುಗೆ ಮನೆಯಲ್ಲಿ ಬ್ರಹ್ಮಚಾರಿಯೊಬ್ಬ ಗುರುಗಳಿಗಾಗಿ ಆಹಾರ ತಯಾರಿಸುತ್ತಿರುವುದನ್ನು ಕಾಣಬಹುದು. ಆಶ್ರಮದ ಊಟವೆಷ್ಟು ಸರಳವೆಂದು ಆಶ್ಚರ್ಯಚಕಿತರಾಗುವ ಸಂದರ್ಶಕರೇ ಹೆಚ್ಚು. ಆ ಪರ್ಣಕುಟಿಯಿರುವ ಆವರಣದಲ್ಲಿರುವ ಪ್ರತಿಯೊಂದು ಗಿಡ-ಮರಗಳಿಗೂ ದೊರೆಯುವ ಗುರುವಿನ ಆರೈಕೆ ಎಂಥದ್ದೆಂದು ಯಾರೂ ಹೇಳದೆಯೇ ನಮ್ಮ ಅರಿವಿಗೆ ಬರುತ್ತದೆ. ಆ ಕಟ್ಟಡದ ಗೋಡೆಯ ಮೇಲೆ ಕಣ್ಣಾಡಿಸಿದರೆ ಅಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಿರುವ ಗುರುವಚನವೊಂದು ಕಾಣಸಿಗುತ್ತದೆ.
ಒಂದೇ ಜಾತಿ ಒಂದೇ ಮತ ಒಂದೇ ದೈವ ಮಾನವಗೆ
ಒಂದೇ ಯೋನಿ ಒಂದಾಕಾರ ಭೇದವಾವೂ ಇಲ್ಲ ಇದರಲಿ.
(ಮುಂದುವರಿಯುವುದು…)


[…] ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/06/guru-48/ […]
LikeLike