ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 2ನೇ ಅಧ್ಯಾಯ ಇಲ್ಲಿದೆ…
ಮೊಟ್ಟ ಮೊದಲ ಬಾರಿಗೆ ಗುರುಗಳನ್ನು ಭೇಟಿಯಾದ ಅನುಭವವನ್ನು ಭಾರತೀಯ ಆಡಳಿತ ಸೇವೆಯ ಕಿರಿಯ ಅಧಿಕಾರಿಯೊಬ್ಬರು ವಿವರಿಸಿರುವುದು ಹೀಗೆ:
ನನ್ನ ರಜಾ ದಿನಗಳು ಮುಗಿಯುತ್ತಾ ಬಂದಿದ್ದವು. ನಾನು ಮೇಲ್ ಗಾಡಿಯಲ್ಲಿ ಸೇಲಂಗೆ ಹೋಗುತ್ತಿದ್ದೆ. ನಾನಿದ್ದದ್ದು ದ್ವೀತಿಯ ದರ್ಜೆಯ ಕಂಪಾರ್ಟ್ಮೆಂಟ್ನಲ್ಲಿ. ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ ರೈಲು ಕಿಕ್ಕಿರಿದ ಜನಸಂದಣಿಯಿದ್ದ ಕೋಝಿಕ್ಕೋಡ್ ನಿಲ್ದಾಣದೊಳಕ್ಕೆ ಪ್ರವೇಶಿಸಿತು. ಶುಭ್ರ ಬಿಳಿಯ ಬಟ್ಟೆಗಳನ್ನು ಧರಿಸಿದ್ದ ಒಂದಷ್ಟು ಮಂದಿ ಪ್ಲಾಟ್ಫಾರ್ಮ್ನಲ್ಲಿ ಕಾಣಿಸಿದರು. ಆ ಗುಂಪಿನ ನಡುವೆ ಹಿರಿಯರೊಬ್ಬರು ಬಿಳಿಯುಡುಗೆಯುಟ್ಟು ಕುರ್ಚಿಯಲ್ಲಿ ಕುಳಿತಿದ್ದರು, ಅವರಿಗೆ ಸುಮಾರು ಅರವತ್ತು ವರ್ಷಗಳಾಗಿರಬಹುದು. ತೆಳ್ಳಗಿನ ಆದರೆ ನೇರ ಮತ್ತು ಎತ್ತರವಾದ ನಿಲುವಿನ ದೇಹ. ರೈಲು ಬಂದು ನಿಂತದ್ದು ಮತ್ತು ಅದರ ಹಿಂದೆಯೇ ಪ್ಲಾಟ್ಫಾರ್ಮ್ನಲ್ಲಿ ಕಾಣಿಸಿಕೊಂಡ ಗದ್ದಲಗಳಾವೂ ಅವರನ್ನು ವಿಚಲಿತಗೊಳಿಸಿದಂತೆ ಕಾಣಿಸಲಿಲ್ಲ.
ಆರಂಭದ ಗದ್ದಲ ಅಡಗಿದ ಮೇಲೆ ನಿಧಾನವಾಗಿ ಕುರ್ಚಿಯಿಂದ ಎದ್ದ ಆ ಹಿರಿಯರು ನಾನು ಕುಳಿತಿದ್ದ ಕಂಪಾರ್ಟ್ಮೆಂಟ್ನೊಳಕ್ಕೆ ಬಂದರು. ಈ ಗೌರವಾನ್ವಿತ ಹಿರಿಯರು ಯಾರೆಂದು ಅರಿಯಬೇಕೆಂಬ ನನ್ನೊಳಗಿನ ಕುತೂಹಲವೂ ಹೆಚ್ಚುತ್ತಾ ಹೋಯಿತು. ನಾನವರನ್ನು ಸೂಕ್ಷ್ಮವಾಗಿ ಗಮನಿಸಲಾರಂಭಿಸಿದೆ. ಅವರನ್ನು ಧನಿಕ ವರ್ಗಕ್ಕೆ ಸೇರಿಸಲಾಗದು ಎಂಬುದು ಬಹುಬೇಗ ಅರಿವಾಯಿತು, ಏಕೆಂದರೆ ಅವರ ಮೈಮೇಲೆ ಚಿನ್ನ ಅಥವಾ ಬೆಳ್ಳಿಯ ಯಾವ ಆಭರಣವೂ ಇರಲಿಲ್ಲ. ಅವರ ಉಡುಗೆಯಂತೂ ಬಹಳ ಸರಳವಾಗಿತ್ತು. ಬರೇ ಎರಡು ತುಂಡು ಶುಭ್ರ ಬಿಳಿಯ ವಸ್ತ್ರಗಳಷ್ಟೇ. ತಲೆಯ ಮೇಲೆ ಪೇಟ ಅಥವಾ ಮುಂಡಾಸಿನಂಥ ಯಾವುದೂ ಇರಲಿಲ್ಲ. ಸನ್ಯಾಸಿಗಳಂತೆ ಮುಂಡನ ಮಾಡಿಸಿದ್ದ ತಲೆಯಲ್ಲಿ ಸಣ್ಣದಾಗಿ ಮೊಳೆಯುತ್ತಿರುವ ಬಿಳಿ ಕೂದಲಗಳು. ಅವರ ಮುಖದಲ್ಲಿದ್ದ ಭವ್ಯ ಶಾಂತತೆ ಖಂಡಿತಾಗಿಯೂ ತಣ್ಣಗಿನ ನಿರ್ಲಿಪ್ತತೆಯಾಗಿರಲಿಲ್ಲ. ಹಾಗೆಂದು ಅದನ್ನು ಶ್ರೀಮಂತ ವ್ಯಕ್ತಿಗಳ ಲೆಕ್ಕಾಚಾರದಿಂದ ಕೂಡಿದ ಗಂಭೀರ ವದನವೆಂದು ಹೇಳಲೂ ಸಾಧ್ಯವಿರಲಿಲ್ಲ. ಅಥವಾ ಆ ಮುಖದಲ್ಲಿದ್ದದ್ದು ಯೋಧನ ನಿಷ್ಠುರ ಭಾವವೂ ಅಲ್ಲ. ಅದು ನಿರಾಳವಾಗಿರುವ ಭವ್ಯ ಶಾಂತ ಮುದ್ರೆ. ಹೊರಕ್ಕೆ ಮುಗ್ಧ ಮಗುವಿನ ಮುಖದಂತೆ ಕಾಣುತ್ತಿದ್ದರೂ ಅದರ ಮರೆಯಲ್ಲಿ ತಣ್ಣಗೆ ಪ್ರವಹಿಸುವ ಗಂಭೀರತೆಯಿತ್ತು. ಅರಿಯುವ ಸೂಕ್ಷ್ಮತೆಯಿರುವವರನ್ನು ಅಳೆಯಲಾಗದ ಆಳಗಳಿಗೆ ಕರೆದೊಯ್ಯುವ ವಿವರಿಸಲಾಗದ ಅದ್ಯಾವುದೋ ಶಕ್ತಿ ಅವರಲ್ಲಿರುವಂತೆ ಭಾಸವಾಯಿತು.
ಸುತ್ತಲೂ ನಡೆಯುತ್ತಿದ್ದ ಗದ್ದಲ ಮತ್ತು ಗಡಿಬಿಡಿಗಳು ಅವರ ಶಾಂತ ಮತ್ತು ನಿರಾಳ ಭಾವದ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ. ಅವರ ಉಡುಗೆಯ ಬೆಳ್ಳನೆಯ ಬಿಳಿ. ಅವರ ಒಂದೊಂದು ಚಲನೆಯಲ್ಲೂ ಇದ್ದ ಸೂಕ್ಷ್ಮ ಕಲಾತ್ಮಕ ಪರಿಪೂರ್ಣತೆ. ಅವರ ಮೈಯನ್ನು ಮುಚ್ಚಿರುವ ಬಿಳಿಯ ಉಡುಗೆಯು ನಿರ್ಲಕ್ಷ್ಯದಿಂದ ಹೊದ್ದುಕೊಂಡಂತೆ ಕಾಣಿಸಿದರೂ ಅದರ ಸುಕ್ಕು ಮತ್ತು ನಿರಿಗೆಗಳೆಲ್ಲವನ್ನೂ ಕಲಾವಿದನೊಬ್ಬ ಸೂಕ್ಷ್ಮವಾಗಿ ರಚಿಸಿದಂತಿತ್ತು. ಬಹಳ ಸಹಜವಾಗಿ ಒಪ್ಪುತ್ತಿದ್ದ ಸೌಮ್ಯ ಮತ್ತು ಶಾಂತ ನಡವಳಿಕೆ ರೈಲು ನಿಲ್ದಾಣದ ಆ ಗಡಿಬಿಡಿಯ ವಾತಾವರಣದಲ್ಲೂ ಅವರಿಗೊಂದು ಗೌರವದ ಪ್ರಭಾವಳಿಯನ್ನು ನೀಡಿತ್ತು. ಅವರು ಮಾತೆಂಬುದು ಆಗೀಗ ಅವರ ಬಾಯಿಂದ ಹೊರಬರುತ್ತಿದ್ದ ಮೆಲುದನಿಯ ಪದಗಳಿಗೆ ಸೀಮಿತವಾಗಿದ್ದರೂ ಆ ಧ್ವನಿಯ ಮಾಧುರ್ಯವನ್ನು ಅರಿಯಬಹುದಿತ್ತು. ಅದು ದೂರದ ದೇಗುಲದಿಂದ ಕೇಳಿಸುವ ಘಂಟಾನಾದ ಅಥವಾ ಮಧ್ಯಾಹ್ನಗಳಲ್ಲಿ ಕೇಳಿಸುವ ದುಂಬಿಗಳ ಝೇಂಕಾರದಂಥ ಅನುಭವವನ್ನು ನೀಡುತ್ತಿತ್ತು. ಭಕ್ತರು ಒಬ್ಬೊಬ್ಬರಾಗಿ ಕಾಲಿಗೆರಗುತ್ತಿರುವಾಗ ಆ ಮಹಾನುಭಾವನ ಕಣ್ಣಲ್ಲಿ ಹೊರಗುಕ್ಕುವಷ್ಟು ಪ್ರಮಾಣದಲ್ಲಿ ನೀರು ತುಂಬಿಕೊಂಡದ್ದು ನನಗೆ ಕಾಣಿಸುತ್ತಿತ್ತು. ಕಾಲಿಗೆರಗಿದವರೆಲ್ಲಾ ಈ ನಾಯಕನೆದುರು ಹಣ್ಣು ಹೂವಿನ ಕಾಣಿಕೆಯಿಟ್ಟು ಹಿಂದಕ್ಕೆ ಸರಿಯುತ್ತಿದ್ದರು. ವಯಸ್ಸಿನ ಬಾಧೆಗೆ ಒಳಗಾಗದ ಮೃದು ಮಧುರವಾದ ಆ ದೇಹಪ್ರಕೃತಿ ಮತ್ತು ಶಾಂತಭಾವ ಭಾರತೀಯ ಯೋಗಿಗಳ ಲಕ್ಷಣಗಳು ತಾನೇ! ದಿಗಂತದಲ್ಲೆಲ್ಲೋ ಇರುವ ಯಾವುದೋ ಒಂದನ್ನು ದಿಟ್ಟಿಸುತ್ತಿದ್ದ ಅಷ್ಟೇನೂ ದೊಡ್ಡದಲ್ಲದ ಕಣ್ಣುಗಳೆರಡು, ಸ್ವಲ್ಪವೇ ಕೆಳಗಿಳಿದ್ದ ತುಟಿಗಳು ನನಗೆ ಅವರು ಕಣ್ತೆರೆದೇ ಧ್ಯಾನಿಸುತ್ತಿರುವುದನ್ನು ಸೂಚಿಸುತ್ತಿತ್ತು. ಈ ಎಲ್ಲಾ ಲಕ್ಷಣಗಳೂ ಅವರೊಬ್ಬರು ಮಹಾತ್ಮನೆಂಬುದನ್ನು ನನಗೆ ಸ್ಪಷ್ಟಪಡಿಸಿದವು.
ರೈಲು ಹೊರಟು ಮುಂದಿನ ನಿಲ್ದಾಣದಲ್ಲಿ ನಿಲ್ಲುವ ಹೊತ್ತಿಗೆ ಆ ವ್ಯಕ್ತಿ ನಾನು ಬಹಳವಾಗಿ ಕೇಳಿ ಅರಿತಿದ್ದ ನಾರಾಯಣ ಗುರುಗಳೆಂದು ಅರಿವಾಯಿತು. ಗುರುಗಳಂತೂ ತಮಗೆ ದೊರೆತಿದ್ದ ಹಣ್ಣುಗಳನ್ನೆಲ್ಲಾ ಬೋಗಿಯ ಸಮೀಪ ನಿಂತಿದ್ದ ಮಕ್ಕಳಿಗೆ ಹಂಚುವುದರಲ್ಲಿ ನಿರತರಾಗಿದ್ದರು. ಹಿಂದಿನ ನಿಲ್ದಾಣದಲ್ಲಿ ತಮಗೆ ದೊರೆತಿದ್ದ ಹಣ್ಣುಗಳಲ್ಲಿ ಒಂದೂ ಉಳಿಯದಂತೆ ಹಂಚಿ ಮುಗಿಸಿದರು. ಒಬ್ಬ ಗೃಹಸ್ಥನಾಗಿದ್ದರೆ ಅವುಗಳಲ್ಲಿ ಕೆಲವನ್ನಾದರೂ ಮನೆಗೊಯ್ಯುವುದಕ್ಕೆ ಉಳಿಸಿಕೊಳ್ಳುತ್ತಿದ್ದರು. ಅಲ್ಲಿಯ ತನಕ ಮೌನದಿಂದ ಅವರನ್ನು ಗಮನಿಸುತ್ತಿದ್ದ ನನಗೆ ಅವರ ಜೊತೆ ಮಾತನಾಡಬೇಕೆಂಬ ಆಸೆಯಾಯಿತು. ಆದರೆ ಬಹುವಾದ ಪಾಶ್ಚಾತ್ಯ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ ನನಗೆ ಅವರೆದುರು ಹೋಗಿ ಪರಿಚಯಿಸಿಕೊಳ್ಳುವುದು ಕಷ್ಟ ಎನಿಸಿತು. ಅದಕ್ಕೊಂದು ಉಪಾಯ ಮಾಡಿದೆ. ನನ್ನಲ್ಲಿ ವಯನಾಡಿನ ಕಿತ್ತಳೆ ತೋಟಗಳಿಂದ ತಂದಿದ್ದ ಅತ್ಯುತ್ತಮವಾದ ಕಿತ್ತಳೆ ಹಣ್ಣುಗಳಿದ್ದವು. ಅವುಗಳಲ್ಲೊಂದನ್ನು ಎತ್ತಿಕೊಂಡು ಅವರ ಬಳಿ ಸಾರಿ ಮೌನ ಮುರಿಯುವ ನಿರ್ಧಾರ ಮಾಡಿ ಹೇಳಿದೆ
‘ಸ್ವಾಮಿ’, ಅಂತೂ ಮಾತು ಬಾಯಿಂದ ಹೊರಬಂತು: ‘ನಾನೊಂದು ಕಿತ್ತಳೆಯನ್ನು ತಮಗೊಪ್ಪಿಸಬಹುದೇ?’ ಇವು ಮೌನ ಮುರಿಯಲು ನಾನು ಬಳಸಿದ ಪದಗಳಾಗಿದ್ದವು.
ಸ್ವಾಮಿಗಳ ಪ್ರಶಾಂತ ಧ್ವನಿಯಲ್ಲಿ ಉತ್ತರ ಬಂತು ‘ಇಷ್ಟೂ ಹೊತ್ತು ನನ್ನನ್ನು ಗಮನಿಸಿದ ನಂತರವೂ ಇದು ನಿಮಗೆ ಅರ್ಥವಾಗಲಿಲ್ಲವೇ?’. ಇದು ನನ್ನ ದಡ್ಡ ಪ್ರಶ್ನೆಗೆ ತಕ್ಕುದಾದ ಉತ್ತರವೇ ಆಗಿತ್ತೆಂದು ಮತ್ತೆ ಅರಿವಾಯಿತು. ಅಷ್ಟೂ ಹೊತ್ತು ಗುರುಗಳು ತಣ್ಣಗೆ ನೂರಾರು ಕಿತ್ತಳೆ ಹಣ್ಣುಗಳನ್ನು ಸ್ವೀಕರಿಸುತ್ತಿದ್ದುದನ್ನು ನಾನು ನೋಡಿದ್ದೆ. ಆದರೂ ಮೂರ್ಖ ಪ್ರಶ್ನೆಯೊಂದನ್ನು ಕೇಳಿ ಆ ಮಹಾವ್ಯಕ್ತಿತ್ವದ ಎದುರು ನನ್ನ ಸಣ್ಣತನದ ಪ್ರದರ್ಶನ ಮಾಡಿಬಿಟ್ಟೆನಾ ಎನಿಸಿಬಿಟ್ಟಿತು. ಇದು ಮೊಟ್ಟ ಮೊದಲ ಬಾರಿಗೆ ನಾನು ಗುರುಗಳನ್ನು ಭೇಟಿಯಾದ ಬಗೆ.
ಗುರುಗಳನ್ನು ಯಾವತ್ತೂ ಭೇಟಿಯಾಗದ ಅಪರಿಚಿತರೊಬ್ಬರು ನೀಡುವ ಗುರುಗಳ ಚಿತ್ರಣ ಹೇಗಿರಬಹುದು ಎಂಬುದನ್ನು ಈ ಅಧಿಕಾರಿಯ ಮಾತುಗಳು ಹೇಳುತ್ತಿವೆ ಎಂಬುದಂತೂ ಖಚಿತ.
ಈ ಲೇಖಕನಿಗೆ ಗುರುಗಳ ಕುರಿತ ಮತ್ತೊಂದು ಚಿತ್ರಣವನ್ನು ಅರಿಯುವ ಅವಕಾಶ ದೊರೆತಿತ್ತು. ಈ ಚಿತ್ರಣವನ್ನು ನೀಡಿದ್ದು ಬಡವರ ಪ್ರತಿನಿಧಿ. ಅದು ತಡ ರಾತ್ರಿಯ ಯಾಮ. ಮಲಬಾರಿನ ಹಿನ್ನೀರಿನಲ್ಲಿ ಉಗಿಯಿಂದ ಚಲಿಸುವ ಲಾಂಚ್ನ ಡೆಕ್ನಲ್ಲಿದ್ದೆವು. ದಿನದ ಮೊದಲ ಕಿರಣಗಳು ದಿಗಂತದ ಅಂಚಿನಲ್ಲಿ ಕಾಣಿಸಿಕೊಂಡ ಹೊತ್ತು. ದೋಣಿ ಆಗ ತಾಳೆ ಮತ್ತು ತೆಂಗಿನ ಮರಗಳಿಂದ ಸುತ್ತುವರಿದಿದ್ದ ದೊಡ್ಡದೊಂದು ಚರ್ಚನ್ನು ದಾಟಿ ಸಾಗುತ್ತಿತ್ತು. ಇನ್ನೂ ಹಾಸಿಗೆಯ ಮೇಲೆ ಕುಳಿತಿದ್ದ ನಮಗೆ ಎದುರಿನ ದೃಶ್ಯ ಪ್ರಕಾಶಮಾನವಾದ ಆಗಸದ ಹಿನ್ನೆಲೆಯ ನೆರಳಾಕಾರದಂತೆ ಹಾದು ಹೋಯಿತು. ಸಹ ಪಯಣಿಗನ ಒರಟಾದ ಬಲಿಷ್ಠ ಕೈಗಳು ಮತ್ತು ಧರಿಸಿದ್ದ ಉಡುಪು ನನಗೆ ಕಾಣಿಸಿದ್ದೂ ಆಗಲೇ. ಆತನೊಬ್ಬ ಕಾರ್ಮಿಕನೆಂಬದನ್ನು ಅವು ಹೇಳುತ್ತಿದ್ದವು. ನಾನು ಹೋಗುತ್ತಿರುವುದೆಲ್ಲಿಗೆ ಮತ್ತು ಯಾರೆಂಬುದನ್ನು ಕುಶಲೋಪರಿಗಳ ಮೂಲಕ ಅರಿತು ಪರಿಚಯಿಸಿಕೊಂಡ ಈ ಹೊಸ ಗೆಳೆಯ ತನ್ನ ಅನುಭವವೊಂದನ್ನು ಹಂಚಿಕೊಂಡ. ಚರ್ಚನ್ನು ದಾಟುವಾಗ ಆತ ಭಕ್ತಿಯಿಂದ ಶಿಲುಬೆಯಾಕಾರ ಮಾಡಿ ವಂದಿಸಿದ ಆತ ಹೇಳಿದ:
“ಸರ್, ನಾನು ಗುರುಗಳನ್ನು ಕಂಡಿದ್ದೇನೆ. ಮೊನ್ನೆ ಮುಗಿಯತಲ್ಲಾ ಅದಕ್ಕೂ ಹಿಂದಿನ ವರ್ಷ. ನನ್ನ ಮನೆಯಿರುವ ಹಳ್ಳಿಯಲ್ಲೇ ಇರುವ ನಮ್ಮ ದನಿಗಳ ಮನೆಗೆ ಗುರುಗಳು ಬಂದಿದ್ದಾರೆಂದು ನನಗೆ ತಿಳಿಯಿತು. ಅವರ ಬಗ್ಗೆ ಬಹಳ ಕಾಲದಿಂದ ಕೇಳಿದ್ದೆ, ಅವರನ್ನು ಕಾಣಬೇಕೆಂಬ ಆಸೆಯೂ ಇತ್ತು. ಆದರೆ ಅವರಿರುವಲ್ಲಿಗೆ ಹೋಗುವಷ್ಟು ಸಮಯವಿರಲಿಲ್ಲ. ಆದರೆ ಅವರನ್ನು ಕಂಡಾಗ ನನಗವರು ನಮ್ಮ ವಿಮೋಚಕ ಯೇಸು ಕ್ರಿಸ್ತನಂತೆಯೇ ಇದ್ದಾರಲ್ಲಾ ಎಂದು ಅನ್ನಿಸಿತು. ಅವರ ಸುತ್ತ ನೆರೆದಿದ್ದ ಜನರಲ್ಲಿ ಕೆಲವರಿಗೆ ಅವರನ್ನು ಬಾಧಿಸುತ್ತಿದ್ದ ಯಾವುದೋ ಕಾಯಿಲೆ ಗುಣವಾಗಬೇಕಿತ್ತು. ಇನ್ನು ಕೆಲವರಿಗೆ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆಯಬೇಕಿತ್ತು. ಮತ್ತಷ್ಟು ಮಂದಿಗೆ ಅವರ ಪಾದಧೂಳಿಯನ್ನು ತೆಗೆದುಕೊಳ್ಳುವ ಆತುರ. ಇನ್ನೊಂದಷ್ಟು ಮಂದಿ ಸ್ವಾಮಿಗಳ ಪಾದೋದಕವನ್ನು ಪ್ರೋಕ್ಷಿಸಿಕೊಂಡು ತಮ್ಮನ್ನು ಶುದ್ಧೀಕರಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದರು. ಇವೆಲ್ಲವೂ ನಾವು ಬೈಬಲ್ನಲ್ಲಿ ಓದಿದ ಯೇಸು ಸ್ವಾಮಿಯನ್ನೇ ನೆನಪಿಸುತ್ತಿದ್ದವು.
“ಈ ಮಹಾನುಭಾವವನನ್ನು ನನ್ನ ಪುಟ್ಟ ಗುಡಿಸಲಿಗೆ ಕರೆದೊಯ್ಯಬೇಕು ಎಂಬುದು ನನ್ನ ಗುಟ್ಟಾದ ಆಸೆ. ನಾನು ಬಡವ, ಅಷ್ಟೇ ಅಲ್ಲ ವಿದ್ಯೆಯೂ ಇಲ್ಲದವನು. ಕೊನೆಗೂ ಧೈರ್ಯ ಮಾಡಿ ನನ್ನ ಆಸೆಯನ್ನು ಗುರುಗಳೆದುರು ಹೇಳಿಯೇ ಬಿಟ್ಟೆ. ಆಶ್ಚರ್ಯಕರವಾಗಿ ಅವರು ಮರುಮಾತನಾಡದೆ ನನ್ನ ಮನೆಗೆ ಬರಲು ಒಪ್ಪಿ ಹೊರಟೇ ಬಿಟ್ಟರು. ನನ್ನ ಜೊತೆ ನಡೆಯುತ್ತಾ ಅವರ ತಮ್ಮ ಮೃದುವಾದ ಧ್ವನಿಯಲ್ಲಿ ಗೆನನ್ನ ಕೆಲಸದ ಬಗ್ಗೆ ಮತ್ತು ಮಕ್ಕಳ ಬಗ್ಗೆ ಹೀಗೆ ನನ್ನ ಕುರಿತ ಸಕಲ ವಿಚಾರಗಳನ್ನೂ ಕೇಳಿ ಅರಿತರು. ನಮ್ಮ ಮನೆ ಹತ್ತಿರವಾಗುತ್ತಿದ್ದಂತೆ ಗುರುಗಳ ಅನುಮತಿ ಪಡೆದು ನಾನು ಒಳದಾರಿಯಲ್ಲಿ ಮನೆ ತಲುಪಿದೆ. ಮಕ್ಕಳಿಗೆ ಒಳ್ಳೆಯ ಬಟ್ಟೆಯುಡಿಸಿ ಮನೆಯನ್ನು ಓರಣವಾಗಿಸಿದೆ. ನಮ್ಮಲ್ಲಿದ್ದ ಆರಾಮ ಕುರ್ಚಿಗೆ ಬಿಳಿಯ ಬಟ್ಟೆಯೊಂದನ್ನು ಹೊದಿಸಿಟ್ಟೆ. ಹಿತ್ತಾಳೆಯ ಪಾತ್ರೆಯಲ್ಲಿ ಶುದ್ಧ ನೀರು ತುಂಬಿಸಿಟ್ಟು, ಊದಿನಕಡ್ಡಿ ಹಚ್ಚಿ ಗುರುಗಳನ್ನು ಬರಮಾಡಿಕೊಳ್ಳಲು ಹೊರ ಬಾಗಿಲಲ್ಲೇ ನಿಂತೆ.
“ಬೆಳಗಿನ ಬೆಳಕು ಶಾಂತಿಯ ಸಂದೇಶ ಹೊತ್ತು ಬಂದಂತೆ ಗುರುಗಳು ಬಂದರು. ನಾನವರ ಪಾದಗಳನ್ನು ತೊಳೆಯಲು ಹೊರಟದ್ದನ್ನು ತಡೆಯಲು ಅವರು ಪ್ರಯತ್ನಿಸಿದರಾದರೂ ಅದರಲ್ಲಿ ಗೆದ್ದದ್ದು ನಾನೇ. ಬಾಗಿ ಪಾದಗಳನ್ನು ತೊಳೆಯುತ್ತಿದ್ದ ನನ್ನ ತಲೆಯ ಮೇಲೆ ಅವರು ಕೈಯಿಟ್ಟರು. ಅವರ ಸಾಂತ್ವನದ ಸ್ಪರ್ಶ ಅದರ ಆಶೀರ್ವಚನದ ಸಂದೇಶದೊಂದಿಗೆ ನನ್ನ ಅಂತರಾಳಕ್ಕೆ ಪ್ರವೇಶಿಸಿಬಿಟ್ಟಿತು.”
ಕತೆ ಈ ಹಂತಕ್ಕೆ ಬರುವ ಹೊತ್ತಿಗೆ ನಸುಕಿನ ಮಬ್ಬು ಹರಿದು ಬೆಳಕು ಎಲ್ಲೆಡೆ ಹರಡಿತ್ತು. ಸೂರ್ಯಕಿರಣಗಳು ಹಿನ್ನೀರಿನ ತುಂಬಾ ಚಿನ್ನದ ಬಣ್ಣದ ಅಲೆಗಳನ್ನು ಸೃಷ್ಟಿಸಿದ್ದವು. ಕತೆ ಹೇಳುತ್ತಿದ್ದ ಹೊಸ ಗೆಳೆಯ ಭಾವುಕನಾಗಿದ್ದ. ಅವನ ಕಣ್ಣುಗಳು ತುಂಬಿಕೊಂಡಿದ್ದವು. ಧ್ವನಿ ಗದ್ಗದಿತವಾಯಿತು. ಕೆಲ ನಿಮಿಷಗಳ ಮೌನದ ನಂತರ ಆತ ಮುಂದುವರಿಸಿದ.
“ಗುರುಗಳು ಕುಳಿತುಕೊಂಡರು. ನಾನು ನನ್ನ ಮಗನನ್ನು ಕರೆದು ಗುರುಗಳ ಪಾದಧೂಳಿಯನ್ನು ತೆಗೆದುಕೊಳ್ಳಲು ಹೇಳಿದೆ. ಅವನದನ್ನು ಮಾಡಿದ. ಗುರುಗಳು ಅವನಲ್ಲಿ ಎಷ್ಟನೇ ತರಗತಿಯಲ್ಲಿ ಓದುತ್ತಿರುವೆ ಎಂದು ವಿಚಾರಿಸಿ ಒಳ್ಳೆಯನೂ ಮತ್ತು ಕಲಿಕೆಯಲ್ಲಿ ಶ್ರದ್ಧೆಯಿರುವವನೂ ಆಗಬೇಕೆಂದು ಹೇಳಿದರು. ತಮ್ಮ ಜೊತೆಗಾರರಲ್ಲೊಬ್ಬರನ್ನು ಉದ್ದೇಶಿಸಿ ‘ಈ ಬಾಲಕನಿಗೆ ಒಂದು ರೂಪಾಯಿ ಕೊಡು’ ಎಂದರು. ಅದನ್ನು ಪಡೆದುಕೊಂಡ ನನ್ನ ಮಗನನ್ನು ಉದ್ದೇಶಿಸಿ ‘ನೀವು ದೊಡ್ಡವನಾದ ಮೇಲೆ ಇದನ್ನು ಸಾರ್ವಜನಿಕ ನಿಧಿಗೆ ಹಿಂದಿರುಗಿಸಬೇಕು’ ಎಂದರು.
“ಮತ್ತೆ ನನ್ನತ್ತ ತಿರುಗಿದ ಗುರುಗಳು ನಾನು ಬೇರೆ ಜಾತಿಗೋ ಧರ್ಮಕ್ಕೋ ಸೇರಿದವನೆಂದು ಭಾವಿಸಬಾರದೆಂದು ಬಹಳಷ್ಟು ಪದಗಳಲ್ಲಿ ವಿವರಿಸಿ ಹೇಳಿದರು. ಕೊನೆಗೆ ಅವರು ಹೊರಡುವ ಮೊದಲ ಆಡಿದ ಮಾತು ‘ನಾವೆಲ್ಲಾ ಒಂದೇ’. ಆ ಪದಗಳು ಈಗಲೂ ನನ್ನೊಳಗೆ ಪ್ರತಿಧ್ವನಿಸುತ್ತಲೇ ಇವೆ.”
(ಮುಂದುವರಿಯುವುದು…)
ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/06/guru-48/


[…] ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/08/07/guru-49/ […]
LikeLike