ನಾರಾಯಣ ‘ಗುರು ಮಾರ್ಗ’ : ಅನುಭಾವದ ಅನುಭವ (ಭಾಗ 2)

ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್ಈ ಸರಣಿಯ 5ನೇ ಅಧ್ಯಾಯದ ಎರಡನೇ ಭಾಗ ಇಲ್ಲಿದೆ…

ಅಧ್ಯಾಯ 5.2

ಒಳಗು ವಿಸ್ತಾರಗೊಂಡು ತನ್ನನ್ನೇ ತಾನು ಹೀರಿಕೊಳ್ಳುವ ಪ್ರಕ್ರಿಯೆಗೆ ಒಳಪಡಿಸಿಕೊಂಡ ಮೇಲೆ ಯೋಗಿಗೆ ಮನುಷ್ಯರ ಸಹವಾಸವೇ ಅಸಹನೀಯವಾಗುತ್ತದೆ. ಆ ದಿನಗಳಲ್ಲಿ ಕೆಲ ದಾರಿಹೋಕರು ಪ್ರಾಣಿ ಸಂಗ್ರಹಾಲಯದಲ್ಲಿಟ್ಟಿರುವ ಪ್ರಾಣಿಯನ್ನು ನೋಡುವಂತೆ ತನ್ನನ್ನು ಕುತೂಹಲದಿಂದ ದಿಟ್ಟಿಸುತ್ತಿದ್ದರೆಂದು ಗುರುಗಳೇ ಒಮ್ಮೆ ವಿವರಿಸಿದ್ದಾರೆ. ಕೆಲವೊಮ್ಮೆ ಅವರು ಸಮೀಪದ ಬೆಟ್ಟವನ್ನು ಹತ್ತಿ ಅದರ ಶಿಖರದಲ್ಲಿದ್ದ  ಕಲ್ಲುಗಳ ರಾಶಿಯ ಮೇಲೆ ಪದ್ಮಾಸನಸ್ಥರಾಗಿ ಸುತ್ತಲಿನ ಪರ್ವತಶ್ರೇಣಿಗಳನ್ನು ದಿಟ್ಟಿಸುತ್ತಾ ಮೌನವಾಗಿ ಕುಳಿತು ಬಿಡುತ್ತಿದ್ದರು. ಪ್ರಾಪಂಚಿಕವಾದ ಎಲ್ಲವುಗಳಿಂದ ದೂರವಾಗಿ ಅಂತರಂಗದ ಆಳಕ್ಕೆ ಇಳಿಯುತ್ತಾ ಹೋದಂತೆ ಮನಸ್ಸು ಅದರಷ್ಟಕ್ಕೆ ಅದೇ ಸ್ವತಂತ್ರವಾಗಿ ವಿಶಿಷ್ಟವಾದ ಆನಂದಾನುಭೂತಿಯನ್ನು ಅನುಭವಿಸತೊಡಗುತ್ತದೆ.

ಈ ಸತತ ಶೋಧನಾ ಪ್ರಕ್ರಿಯೆಯ ಭಾವನಾತ್ಮಕ ಪರಿಣಾಮ ಬಹಳ ತೀಕ್ಷ್ಣವಾಗಿರುತ್ತದೆ. ಬಲಶಾಲಿಯಾದ ಯೋಗಿ ಕೂಡಾ ಇದರ ತೀವ್ರತೆಯನ್ನು ತಡೆದುಕೊಳ್ಳಲಾಗದೆ ನರಳಿಬಿಡುತ್ತಾನೆ. ಗುರುಗಳು ತಪಸ್ಸಿಗೆ ಕುಳಿತಿದ್ದ ಸ್ಥಳದಲ್ಲಿ ದುಮ್ಮಿಕ್ಕಿ ರಭಸದಿಂದ ಹರಿಯುತ್ತಿದ್ದ ನದಿಯೊಳಗಿನ ಅಲ್ಲೋಲ ಕಲ್ಲೋಗಳೇ ಅಂದಿನ ಅವರ ಮಾನಸಿಕ ಸ್ಥಿತಿಗೊಂದು ರೂಪಕವಾಗಬಹುದು. ಅವರು ಅನುಭವಿಸಿದ್ದನ್ನು ಪದಗಳಲ್ಲಿ ವಿವರಿಸುವುದು ಅಸಾಧ್ಯ. ಒಂದು ವೇಳೆ ವಿವರಿಸಲು ಹೊರಟರೂ ಅದೊಂದು ವ್ಯರ್ಥ ಪ್ರಯತ್ನವಾಗಿ ಉಳಿಯುತ್ತದೆ.

ಅವರು ಮತ್ತರಂತೆ ತೋರುತ್ತಿದ್ದರು. ಜ್ಞಾನದ ಜ್ವಾಲೆಗಳು ಅವರೊಳಗೆ ಕೆಂಪಾಗಿ ಪ್ರಜ್ವಲಿಸತೊಡಗಿದವು. ಅದರ ಕಾವಿಗೆ ಭಾವನೆಗಳೆಲ್ಲವೂ ಕರಗಿ ಅವರ ಅಸ್ತಿತ್ವದ ಅಮೃತತ್ವವು ಮನೋದಿಗಂತವನ್ನು ವ್ಯಾಪಿಸಲಾರಂಭಿಸಿತು. ಅವರಿಗೆ ತನಗಿನ್ನು ಪರಮಾತ್ಮನೇ ಗತಿ ಎನಿಸಿತು. ಕರುಣೆಯ ಮಧುವಿನಲ್ಲಿ ಊರಿರುವ ಭಗವಂತನ ಕೋಮಲ ಪಾದಗಳೇ ತನಗಾಸರೆ ಎಂದು ಬಗೆದರು. ಅವರಿಗೆ ಭಗವಂತನೆಂದರೆ ಪರಿಪೂರ್ಣತೆಯ ಮುತ್ತು, ಜೀವ ನಾಟ್ಯದ ಕೇಂದ್ರ, ಹೃದಯಾಂತರಾಳದ ಮೌನದಲ್ಲಿ ಅರಳಿರುವ ಪದ್ಮ. ಅದರ ಕೇಂದ್ರದ ಕೇಸರಗಳಲ್ಲಿ ತುಂಬಿರುವ ಮಧುವನ್ನು ಹೀರುವ ದುಂಬಿಯಂತೆ ಅವರ ಆತ್ಮವು ಸೀಮಾತೀತ ಧನ್ಯತೆಯನ್ನು ಅನುಭವಿಸಿತು. ಆತ್ಮ ಕಾಂತಿಯೇ ಮಗುವಾಗಿ ಕಾಂತಿಯ ಪ್ರಜ್ವಲನಾ ಕೇಂದ್ರಕ್ಕೆ ಪಾದವೂರಿ ಅವರೊಳಗಿನ ಸೂರ್ಯ-ಚಂದ್ರರ ಪ್ರಕಾಶವನ್ನು ಸೇವಿಸತೊಡಗಿತು. ಅಸ್ತಿತ್ವದ ಕೇಂದ್ರದಲ್ಲಿ ಹಸಿರು ಮತ್ತು ಬಂಗಾರ ವರ್ಣದ ಗರಿಗಳನ್ನು ಹರಡಿ ನರ್ತಿಸುತ್ತಿದ್ದ ನವಿಲಿನ ಮೇಲೆ ಈ ಕಾಂತಿ ಸ್ವರೂಪವು ಕುಳಿತು ಓಲಾಡುತ್ತಿದ್ದಂತೆ ಅವರಿಗೆ ಭಾಸವಾಯಿತು. ಮನಸಿನ ಮೌನ ಗೃಹದೊಳಗೆ ದೀಪದ ಬೆಳಕು ಹರಡಿದಂತಾಯಿತು. ಇದು ವರ್ಣನಾತೀತವಾದ ಅನುಭವ. ಮೇಲೆ ವಿವರಿಸಿದಂಥ ಅನೇಕಾನೇಕ ದೃಶ್ಯಗಳು ನುಗ್ಗಿಬಂದ ವೇಗ ಮತ್ತು ಪ್ರಮಾಣಗಳೆಷ್ಟಿದ್ದವೆಂದರೆ ಮನದ ತುಂಬ ಇವುಗಳನ್ನು ಬಿಟ್ಟರೆ ಬೇರಾವುದಕ್ಕೂ ಸ್ಥಳವಿರಲಿಲ್ಲ. ಅವರು ರಚಿಸುತ್ತಿದ್ದ ಪ್ರಾರ್ಥನಾ ಶ್ಲೋಕಗಳು ಛಂದಸ್ಸಿನ ಮಿತಿಗಳನ್ನು ಮೀರಿ ನಾದವಾಗಿ ವಿಸ್ತರಿಸಿದ್ದೂ ಇದೇ ಕಾಲಘಟ್ಟದಲ್ಲಿ.

ಗುರುಗಳಿಗುಂಟಾದ ಈ ಅನುಭವ ಕೇವಲ ಒಂದು ಘಟನೆಯಲ್ಲ. ಇದವರಿಗೆ ಹೊಸತೊಂದು ದೃಷ್ಟಿಯನ್ನೇ ನೀಡಿತು. ಮುಂದೆ ಅವರು ಆನಂದದ ಆಗಮನವನ್ನಾಗಲೀ ನೋವಿನ ನಿವಾರಣೆಯನ್ನಾಗಲೀ ನಿರೀಕ್ಷಿಸಲಿಲ್ಲ. ಅವರನ್ನು ಸುತ್ತುಗಟ್ಟಿದ್ದ ಇತರರು ಬಹುಮುಖ್ಯವೆಂದು ಭಾವಿಸುವ ಸಂಗತಿಗಳಿಗೆಲ್ಲಾ ಗುರುಗಳ ಪ್ರತಿಕ್ರಿಯೆ ಒಳಗಿನ ಮುಗುಳ್ನಗುವಷ್ಟೇ ಆಗಿತ್ತು. ಉಳಿದವರಿಗೆ ಅಸ್ವಸ್ಥ, ಭೀಕರ ಎನಿಸುವ ಸಂಗತಿಗಳು ಅಥವಾ ಪರಸ್ಪರರು ಗುಟ್ಟಾಗಿ ದ್ವೇಷಿಸುತ್ತಾ ಸಂಚು ಹೂಡುವುದು ಮುಂತಾದವುಗಳು ಗುರುಗಳ ಮಟ್ಟಿಗೆ ಬಾಲಿಶವಾಗಿ ಕಾಣಿಸುತ್ತಿದ್ದವು. ಅವರಿಗೀಗ ಸಾವು ಅದರ ಕಹಿಯಿಂದ ಮುಕ್ತವಾಗಿತ್ತು. ಅರಿವಿಗೆ ಬಾರದ ಸಂಗತಿ ಅದರ ನಿಗೂಢತೆಯನ್ನು ಕಳೆದುಕೊಂಡಿತ್ತು.

ಗುರುಗಳು ಹೊಸತೊಂದು ಶ್ರೀಮಂತ ಪರಂಪರೆಯನ್ನು ಆಸ್ತಿಯಾಗಿ ಪಡೆದಂತಿದ್ದರು. ಆ ಜ್ಞಾನ ಕಾಂತಿಯ ಗೋಳದ ಬೆಳಕು ಪ್ರತಿ ಉಸಿರಿನಲ್ಲೂ ಮೇಲೇರುತ್ತಾ ಮೂರು ಲೋಕಗಳ ಗಡಿಯನ್ನು ಮೀರಿ ಸಾಗುತ್ತಿತ್ತು. ಕಣ್ಣಿನಲ್ಲಿ ಸೌಂದರ್ಯ ತುಂಬಿತು. ಅವರ ಕಾವ್ಯಾಭಿವ್ಯಕ್ತಿಗೆ ಸಂಗೀತ ಮತ್ತು ಲಯಗಳು ಸ್ವಾಭಾವಿಕವಾಗಿ ಮೇಳೈಸಿದವು. ಅವರ ಕರುಣಾಧಾರೆಯು ಪ್ರವಹಿಸುವ ಸಂದರ್ಭವನ್ನು ಎದುರುನೋಡುತ್ತಿತ್ತು. ಗುರುಗಳ ವ್ಯಕ್ತಿತ್ವ ಅತಿವಿಶಿಷ್ಟವಾದ ಪರಿವರ್ತನೆಯೊಂದಕ್ಕೆ ಗುರಿಯಾಯಿತು. ಪ್ರಾಪಂಚಿಕ ಕ್ಷುಲ್ಲಕತೆಯನ್ನು ಕಡೆಗಣಿಸಿ ಆತ್ಯಂತಿಕವಾದುದಕ್ಕೆ ತುಡಿಯುವ ಕರುಣೆಯೇ ಮೂರ್ತಿವೆತ್ತಂತಾಯಿತು. ಅಳೆದು ಅರಿಯಬಹುದಾದ ಕಾಲದ ಆಯಾಮವು ಪ್ರಾಧಾನ್ಯ ಕಳೆದುಕೊಂಡಿತು. ಗುರುಗಳ ಮಟ್ಟಿಗೆ ಕಾಲವೆಂಬುದು ಆಂತರಿಕ ಅರ್ಥಪೂರ್ಣತೆಯಲ್ಲಿ ಶ್ರೀಮಂತವಾಗೊಂಡಿತು. ಭೂತ, ವರ್ತಮಾನ ಮತ್ತು ಭವಿಷ್ಯಗಳು ನಿರಂತರತೆಯಲ್ಲಿ ಒಂದಾಗಿಬಿಟ್ಟವು. ಅವರು ದಿನ, ವಾರ, ತಿಂಗಳುಗಳ ಅರಿವೇ ಇಲ್ಲದೆ ಕಾಲಾತೀತವಾಗಿ ವಿಹರಿಸಿದರು. ಆನಂದಸ್ಥಲವು ಅವರನ್ನು ಪ್ರಜ್ಞೆಯ ಆಳಕ್ಕೆ ಆಕರ್ಷಿಸುತ್ತಲೇ ಇತ್ತು.

ಒಂದು ಬಗೆಯ ಭಾವನೆಗಳ ಮೇಲೆ ಮತ್ತೊಂದು ಬಗೆಯ ಭಾವನೆಗಳು ಪಾರಮ್ಯ ಸಾಧಿಸುವುದನ್ನು ದೃಢಚಿತ್ತನಾಗಿ ನಿಯಂತ್ರಿಸಿದ ಗುರುಗಳು ಪ್ರಾಪಂಚಿಕ ಸರಳತೆ ತರ್ಕದೊಳಗೆ ಮನೆ ಮಾಡಿರುವ ವಿಚಾರಗಳಿಗೆ ತೆರೆದುಕೊಂಡರು. ಇದು ಅವರ ಬದುಕಿನ ಬಹುಮುಖ್ಯ ಪರಿವರ್ತನೆಯ ಹಂತವಾಗಿತ್ತು. ಧರ್ಮಸೂಕ್ಷ್ಮವೊಂದರ ಜಿಜ್ಞಾಸೆ  ಅಥವಾ ಹೊಸ ಮತ ಸ್ಥಾಪನೆಗಿಂತ ತಮ್ಮನ್ನು ಕಾಣಲು ಬಂದ ಹಳ್ಳಿಗನ ಹಸಿವು ಅವರಿಗೆ ಮುಖ್ಯವೆನಿಸಿತು. ಅವರು ವರ್ತಮಾನದಲ್ಲಿ ಬದುಕಲು ತೀರ್ಮಾನಿಸಿದರು. ಭೂತದ ಮೂಸೆಯಲ್ಲಿ ರೂಪತಳೆದಿದ್ದ ಈ ವರ್ತಮಾನವನ್ನು ಅವರು ಭವಿಷ್ಯದ ಅನಂತ ಭರವಸೆಗಳ ನಿರೀಕ್ಷೆಯ ಮೂಲಕ ಬದುಕಲು ಹೊರಟರು. ಇದರಿಂದಾಗಿ ಅವರಿಗೆ ತಮ್ಮ ಕರ್ತವ್ಯವೇನೆಂಬುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಾಯಿತು. ಪರೋಪಕಾರವೆಂಬುದು ಸಹಜ ಸ್ವಭಾವವಾಯಿತು. ತಾತ್ವಿಕತೆಯು ಎಲ್ಲದರಿಂದ ಮುಕ್ತವಾದ ಉದ್ದೇಶವನ್ನು ಅವರಿಗೆ ತೋರಿಸಿಕೊಟ್ಟರೆ ಕಾವ್ಯವು ಅವರ ಸಹಜಾಭಿವ್ಯಕ್ತಿಯ ಮಾರ್ಗವಾಯಿತು. ಬದುಕಿನ ಗುರಿ ಮತ್ತು ಆಕಾಂಕ್ಷೆಗಳು ಸರಳವಾದವು. ಔದಾರ್ಯ ಮತ್ತು ಸಮೃದ್ಧಿಯ ಗುರುತನಕ್ಕೆ ಅಗತ್ಯವಿರುವ ಬುನಾದಿಯೊಂದು ಆಗಲೇ ಅವರ ವ್ಯಕ್ತಿತ್ವಕ್ಕೆ ಸೇರಿಕೊಂಡಿತು.

(ಮುಂದುವರಿಯುವುದು…)


ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/09/guru-51/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ