ನಾರಾಯಣ ‘ಗುರು ಮಾರ್ಗ’: ಗುರು ವೃತ್ತಿಯ ಆರಂಭ

ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್ಈ ಸರಣಿಯ 6ನೇ ಅಧ್ಯಾಯ ಇಲ್ಲಿದೆ…

ಅಧ್ಯಾಯ 6

ಅರುವಿಪ್ಪುರದ ಹಸಿರು ಗುಡ್ಡಗಳ ಮಡಿಲಲ್ಲಿ ಪುಟ್ಟ ಬಿಳಿಯ ಕಟ್ಟಡ ಒಂದು ಸಂಸ್ಥೆಯಾಗಿ ತನ್ನ ಶೈಶವದ ಸವಾಲುಗಳನ್ನು ದಾಟಿ ಮುಂದಡಿಯಿಟ್ಟಿತ್ತು. ಗುರುಗಳು ಆರಂಭಿಸಿದ್ದ ಹೊಸ ಸಂಪ್ರದಾಯವನ್ನು ಮುಂದುವರಿಸಲು ಸ್ಥಳೀಯರು ಸ್ವಯಂ ಪ್ರೇರಿತರಾಗಿ ಒಂದು ಸಂಘವನ್ನು ಸ್ಥಾಪಿಸಿದರು. ಗುರುಗಳು ನೆಟ್ಟ ಗಿಡವು ಒಂದು ಮಹಾವೃಕ್ಷವಾಗುವ ಲಕ್ಷಣಗಳನ್ನು ತೋರಿಸಲಾರಂಭಿಸಿತ್ತು. ಗುರುಗಳು ತಮ್ಮ ತೋಟಗಾರಿಕೆಯನ್ನು ಆರಂಭಿಸಿದ್ದರು; ಇದು ಭೂಮಿಯನ್ನು ಹಸನುಗೊಳಿಸಿ ಗಿಡ ನೆಟ್ಟು ಬೆಳೆಸುವ ತೋಟಗಾರಿಕೆಯಲ್ಲ. ಜನ ಸಮೂಹದ ಮನಸ್ಸನ್ನು ಹಸನು ಮಾಡಿ ಸಂಘಟನೆಯ ಗಿಡ ನೆಟ್ಟು ಸಂಸ್ಥೆಗಳೆಂಬ ಮಹಾವೃಕ್ಷಗಳನ್ನು ಬೆಳೆಸುವ ತೋಟಗಾರಿಕೆ. ಇಂದು ಇಡೀ ಪಶ್ಚಿಮ ಕರಾವಳಿಯಾದ್ಯಂತ ಗುರುಗಳು ನೆಟ್ಟ ಗಿಡಗಳು ವೃಕ್ಷಗಳಾಗುತ್ತಿವೆ. ಕೆಲವೊಮ್ಮೆ ಇರುವ ಗಿಡಗಳಿಗೇ ಹೊಸ ಗೊಬ್ಬರ ಮತ್ತು ಆರೈಕೆಯೊಂದಿಗೆ ಬೆಳೆಯಲು ಅನುವು ಮಾಡಿಕೊಟ್ಟರು. ಇನ್ನು ಕೆಲವು ಸಂದರ್ಭಗಳಲ್ಲಿ ಹಳೆಯದನ್ನು ಬೇರು ಸಮೇತ ಕಿತ್ತೊಗೆದು ಹೊಸತನ್ನೇ ನೆಟ್ಟು ಬೆಳೆಸಿದರು, ಕೆಲವನ್ನು ಕತ್ತರಿಸಿ ಎಸೆದರು. ಹಾಗೆಯೇ ಪ್ರಾಚೀನ ಪರಂಪರೆಯೆಂಬ ಹಳೆಯ ಬೇರಿನ ಮೇಲೆ ನಿಂತಿದ್ದ ಗಿಡಕ್ಕೆ ಹೊಸ ರೆಂಬೆಗಳ ಕಸಿ ಮಾಡಿಯೂ ಅವರು ಯಶಸ್ವಿಯಾದರು. ಮುಂದಿನ ಮೂವತ್ತು ವರ್ಷಗಳ ಕಾಲ ಅವರು ಪಶ್ಚಿಮ ಕರಾವಳಿಯನ್ನೂ ಮೀರಿ ವಿಸ್ತಾರಗೊಂಡಿದ್ದ ತಮ್ಮ ಜಮೀನಿನಾದ್ಯಂತ ಗಿಡ ನೆಡುವ ಮತ್ತು ನೆಟ್ಟ ಗಿಡಗಳಿಗೆ ನೀರುಣಿಸಿ, ಕಳೆಕಿತ್ತು ಅವು ವೃಕ್ಷವಾಗಿ ಬೆಳೆಯಲು ಬೇಕಾದ ಆರೈಕೆಗಳಲ್ಲಿ ತೊಡಗಿಕೊಂಡರು. ಋತುಮಾನದ ಬದಲಾವಣೆಗೆ ಸಸ್ಯಜಾಲವು ಸ್ಪಂದಿಸುವಂತೆ ಸುಧಾರಣೆಗಳೂ ಬೇರೂರಿ ಅವುಗಳ ಪ್ರಭಾವಕ್ಕೆ ಬಂದವರ ಬದುಕಿನಲ್ಲಿ ಹೊಸ ಯುಗದ ಆರಂಭಕ್ಕೆ ಕಾರಣವಾದವು. ಇದುವೇ ನಾರಾಯಣ ಗುರುಗಳ ‘ಗುರುವೃತ್ತಿ’ಗೆ ನಾಂದಿಯಾಯಿತು.

ನಾರಾಯಣ ಗುರುಗಳ ಮಾರ್ಗವೇನೂ ಸುಗಮವಾಗಿರಲಿಲ್ಲ. ಮೂರು ಸಾವಿರ ವರ್ಷಗಳಷ್ಟು ದೀರ್ಘವಾದ ಸಾಂಪ್ರದಾಯಿಕತೆ ಒಡೆಯಲಾಗದಂಥ ಗಟ್ಟಿ ಕವಚವಾಗಿ ಜನರನ್ನು ಆವರಿಸಿಕೊಂಡಿತ್ತು. ಜನಗಳಾದರೋ ಈ ಸಂಪ್ರದಾಯಗಳನ್ನು ಮುಳುಗುವವನಿಗೆ ದೊರೆತ ಹುಲ್ಲುಕಡ್ಡಿಯಂತೆ ಅಪ್ಪಿಕೊಂಡಿದ್ದರು. ಅವರ ಬದುಕನ್ನೇ ಕಿತ್ತುಕೊಂಡಿದ್ದರೂ ಅದು ತಮ್ಮ ಪ್ರಾರಬ್ಧವೆಂದೋ ವಿಧಿಯೆಂದೋ ಅನುಭವಿಸುತ್ತಿದ್ದರು. ಇದಕ್ಕೆ ಕಾರಣವಾದ  ತಾತ ಮುತ್ತಾತಂದಿರ ಕಾಲದಿಂದ ಬಂದ ಸಂಪ್ರದಾಯಗಳ ಮೂಲವನ್ನು ಯಾರಾದರೂ ಕೆದಕಿದರೆ ಅವುಗಳ  ರಕ್ಷಣಯನ್ನು ತಮ್ಮ ಜೀವಕ್ಕಿಂತ ಹೆಚ್ಚು ಎಂದು ಭಾವಿಸಿ ಹೋರಾಟಕ್ಕೆ ಇಳಿಯುತ್ತಿದ್ದರು. ಹಾಗಾಗಿಯೇ ಸಕಲಾಧಿಕಾರಗಳುಳ್ಳ ರಾಜರೂ ಈ ಸಂಪ್ರದಾಯಗಳ ಬದಲಾವಣೆಗೆ ಧೈರ್ಯ ತೋರಲಿಲ್ಲ. ಅಸ್ತಿತ್ವದಲ್ಲಿರುವ ಮತಗಳಿಗೆ ಹಿಂದಿನಿಂದಲೂ ಪಾಲಿಸಕೊಂಡು ಬಂದ ಸಂಪ್ರದಾಯಗಳನ್ನು ಚಾಚೂ ತಪ್ಪದೆ ಮುಂದುವರಿಸುವುದಷ್ಟೇ ಸಾಧ್ಯವಿತ್ತು. ಬಿಂದು ವಿಸರ್ಗ ವ್ಯತ್ಯಾಸವಿಲ್ಲದೆ ಹಳೆಯ ಸಂಪ್ರದಾಯಗಳನ್ನು ಪಾಲಿಸುವ ತಮ್ಮ ಜಗದ್ಗುರುಗಳನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಹೊರಲು ಜನರು ಸಿದ್ಧರಿದ್ದರು. ಅದೇ ಗುರು ಸಣ್ಣದೊಂದು ಬದಲಾವಣೆಗೆ ಮುಂದಾದರೆ ಅವರನ್ನು ಗುರುಸ್ಥಾನದಿಂದಲೇ ಉಚ್ಛಾಟಿಸುವಷ್ಟು ಈ ಸಂಪ್ರದಾಯವಾದಿಗಳು ಪ್ರಬಲರಾಗಿದ್ದರು.

ಸಂಪ್ರದಾಯದ ಕ್ರೌರ್ಯದೊಳಗೂ ಕೆಲವು ಸುರಕ್ಷೆಯ ನಲ್ದಾಣಗಳೂ ಇದ್ದವು. ಅವುಗಳಲ್ಲೊಂದು ಸರ್ವಸಂಗ ಪರಿತ್ಯಾಗಿಗಳವನ್ನು ಗೌರವಿಸಬೇಕೆಂಬ ಮೌಲ್ಯ. ಬಹಳ ಪ್ರಾಚೀನ ಕಾಲದಿಂದಲೂ ಆಡಳಿತಾರೂಢ ಚಕ್ರವರ್ತಿಗಳೂ ಸಾಮ್ರಾಟರೂ ಬೀದಿಯಿಂದ ನೇರವಾಗಿ ಆಸ್ಥಾನಕ್ಕೆ ಪ್ರವೇಶಿಸುವ ಸಂನ್ಯಾಸಿಯನ್ನು ಸಿಂಹಾಸನವಿಳಿದು ಬಂದು ಗೌರವಿಸುವ ಪರಂಪರೆಯಿದೆ. ಇಂಥ ಸನ್ಯಾಸಿಯ ದೈವತ್ವ ಜನಗಳಿಗೆ ಯಾರೂ ಹೇಳದೆಯೇ ತಿಳಿದುಬಿಡುತ್ತದೆ. ಹೀಗೆ ಗೌರವಾರ್ಹರಾದವರ ಲಕ್ಷಣಗಳನ್ನು ಪ್ರಾಚೀನ ಶಾಸ್ತ್ರ ಗ್ರಂಥಗಳೂ ದಾಖಲಿಸಿವೆ. ಸರ್ವಸಂಗ ಪರಿತ್ಯಾಗಿಯಾದವನನ್ನು ದೇವರ ಪ್ರತಿನಿಧಿಯೆಂದು ಭಾವಿಸುವುದೂ ಪರಂಪರೆಯ ಭಾಗವೇ ಆಗಿದೆ. ಈ ಬೃಹತ್ ಭೂಖಂಡದಲ್ಲಿ ಸರ್ವಸಂಗ ಪರಿತ್ಯಾಗಿಗಳಾದ ಅವಧೂತರೂ ಅನುಭಾವಿಗಳೂ ಜನತೆಯನ್ನು ಸಂಪ್ರದಾಯದ ಬಂಧಗಳಿಂದ ಸುರಕ್ಷತೆಯೆಡೆಗೆ ಸಾಗುವಂಥ ನೇತೃತ್ವ ನೀಡಿದ್ದಿದೆ. ಈ ಪರಂಪರೆ ಈಗಲೂ ಜೀವಂತವಾಗಿದೆ. ಮತ್ತು ಅದು ಅದುವೇ ಈ ಅಂಧಕಾರ ತುಂಬಿದ ಹಾದಿಯಲ್ಲೂ ಕಾಣಿಸುವ ಭವಿಷ್ಯದ ಬೆಳಕಿನ ರೇಖೆ.

ತಪೋನಿಷ್ಠೆಯಿಂದ ಒಳಹೊರಗನ್ನು ಗಟ್ಟಿಯಾಗಿಸಿಕೊಂಡಿದ್ದ ಗುರುಗಳಲ್ಲಿ ನಾಯಕತ್ವದ ಗುಣ ಸಹಜವಾಗಿಯೇ ಮನೆಮಾಡಿತ್ತು. ಅವರ ಸಾಮರ್ಥ್ಯವು ಸ್ಫುಟಗೊಳ್ಳಲೆಂಬಂತೆ ಹಲವು ಅಗ್ನಿಪರೀಕ್ಷೆಗಳಿಗೆ ಒಡ್ಡಿಕೊಂಡಿತು. ಶಿವರಾತ್ರಿ ಬಂದದ್ದೂ ಈ ದಿನಗಳಲ್ಲೇ. ಹಿಮಾಲಯದ ಆ ಮಹಾನಾಯಕನಾದ ಮಹಾದೇವನನ್ನು ನೆನಪಿಸಿಕೊಳ್ಳುವ ಆ ರಾತ್ರಿಯಲ್ಲಿ ಆಲುವದಲ್ಲೂ ದೊಡ್ಡ ಜನ ಸಮೂಹ ಜಾಗರಣೆಗಾಗಿ ಸೇರುತ್ತಿತ್ತು.  ಕೈಲಾಸಪತಿಯ ಗುಣಗಾನ ಮಾಡುವ ಭಜನೆ, ಹಾಡು ಮತ್ತು ಭಾಷಣಗಳನ್ನು ಕೇಳುತ್ತಾ ಮಧ್ಯರಾತ್ರಿಯ ಆನೆಯ ಮೆರವಣಿಗೆಗಾಗಿ ಜನರು ನಿದ್ದೆಗೆಟ್ಟು ಕಾಯುತ್ತಿದ್ದರು. ನಸಕು ಹರಿಯುವ ಮುಂಚಿನ ಬಾಣ-ಭಿರುಸುಗಳ ಪ್ರದರ್ಶನ ಅವರಿಗಿದ್ದ ಮತ್ತೊಂದು ಆಕರ್ಷಣೆ. ಈ ರಾತ್ರಿಯಂದು ಎಲ್ಲಾ ಗದ್ದಲಗಳಿಂದ ದೂರವಾಗಿದ್ದ ಆಲುವ ನದಿ ತೀರದ ಇದ್ದ ಗುರುಪೀಠದಲ್ಲಿಯೂ ಯುವಕರಿಂದ ತೊಡಗಿ ವೃದ್ಧರ ತನಕದ ಜನರು ಗುಂಪುಗೂಡಿದ್ದರು. ಈ ಗುಂಪಿನಿಂದ ದೂರವಿದ್ದ ಗುರುಗಳು ಏನೇನು ನಡೆಯುತ್ತಿದೆ ಎಂಬುದನ್ನು ತಮ್ಮ ಹತ್ತಿರವಿರುವವರಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು. ಬಳಿಕ ಆನೆಗಳ ಮೆರವಣಿಗೆಯೆಷ್ಟು ಆಭಾಸಕರವೆಂದೂ ಪಟಾಕಿ, ಬಾಣ-ಬಿರುಸುಗಳ ಪ್ರದರ್ಶನವೇಕೆ ವ್ಯರ್ಥವೆಂದೂ ತಮ್ಮ ಅವರ ಬಳಿ ಹೇಳಿದರು. ಗುರುಗಳು ಯಾವ ಭಾಷಣವನ್ನೂ ಮಾಡಲಿಲ್ಲ. ಆದರೆ ಹತ್ತಿರವಿದ್ದ ಜನರು ಅದನ್ನು ತಮ್ಮ ಅಂತರಂಗ ಮಾತುಗಳೆಂಬಂತೆ ಆಲಿಸಿದರು. ಗುರುಗಳು ಯಾವ ತೀರ್ಪನ್ನೂ ನೀಡದೇ ಇದ್ದರೂ ಜನರದನ್ನು ತಮ್ಮ ಅಂತರಾಳದ ಅಭೀಪ್ಸೆಯೆಂದು ಬಗೆದು ಕಾರ್ಯರೂಪಕ್ಕೆ ತರಲು ಮುಂದಾದರು. ಮಧ್ಯರಾತ್ರಿಯ ಹೊತ್ತಿಗೆ ಗುರುಪೀಠದಲ್ಲಿ ಸೇರಿದ್ದ ಜನಸಂದಣಿಯೊಳಕ್ಕೆ ಗುರುಗಳು ಬಂದು ನಿಂತರು. ಅವರೇ ಅಧ್ಯಕ್ಷತೆ ವಹಿಸಬೇಕಿದ್ದ ಸಮಾರಂಭವೊಂದೂ ಅಲ್ಲಿ ಏರ್ಪಾಡಾಗಿತ್ತು. ಈ ಎಲ್ಲವೂ ಅಮುಖ್ಯ ಮತ್ತು ತನಗೆ ಸಂಬಂಧಿಸಿದ್ದಲ್ಲ ಎಂಬ ಭಾವದೊಂದಿಗೆ ಅವರು ಅಧ್ಯಕ್ಷಪೀಠವೇರಿ ಕುಳಿತರು. ಭಾಷಣಕಾರರು ಒಬ್ಬರಾದ ಮೇಲೇ ಒಬ್ಬರಂತೆ ತಾವು ಅರ್ಥೈಸಿಕೊಂಡ ಬಗೆಯಲ್ಲಿ ಗುರುಗಳ ಆದರ್ಶವನ್ನು ಜನರಿಗೆ ವಿವರಿಸುತ್ತಿದ್ದರು. ಗುರುಗಳು ಆಗಲೂ ಮೌನವಾಗಿದ್ದರು. ಆ ಜಾಗರಣೆಯ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಮಾತುಗಳನ್ನು ಹೆಣೆಯುತ್ತಾ ಜನರನ್ನು ಭಾವುಕತೆಯ ಅಂಚಿಗೆ ತಂದು ನಿಲ್ಲಿಸುವಲ್ಲಿ ಈ ಭಾಷಣಗಳು ಯಶಸ್ವಿಯಾಗಿದ್ದವು.

ಇವೆಲ್ಲವನ್ನೂ ಆಲಿಸುತ್ತಾ ಸ್ವಲ್ಪ ದೂರದಲ್ಲಿ ಮಹಿಳೆಯರು, ಮಕ್ಕಳು ಮತ್ತು ಗಂಡಸರ ಗುಂಪೊಂದು ಕುಳಿತಿತ್ತು. ಸಭೆಯಲ್ಲಿ ನೆರೆದಿದ್ದ ಇತರರಿಂದ ದೂರವಾಗಿ ಆ ಗುಂಪು ಕುಳಿತಿತ್ತು. ಸೂರ್ಯನ ತೀಕ್ಷ್ಣ ಕಿರಣಗಳು ಇವರ ಚರ್ಮವನ್ನು ಸ್ವಲ್ಪ ಹೆಚ್ಚಾಗಿಯೇ ಸುಟ್ಟಿತ್ತು. ಅವರ ದೇಹದ ಬಣ್ಣವೂ ಅದರಿಂದಾಗಿಯೇ ಭಿನ್ನವಾಗಿತ್ತೇನೋ. ದಿನವಿಡೀ ಹೊಲಗದ್ದೆಗಳಲ್ಲಿ ದುಡಿದು ಈ ಹಬ್ಬದಲ್ಲಿ ದೊರೆಯುವ ಸಾಂತ್ವನಕ್ಕಾಗಿ ಆ ರಾತ್ರಿ ಅವರಲ್ಲಿಗೆ ಬಂದಂತಿತ್ತು. ಈ ಜನರು ಮತ್ತು ಅವರ ಪೂರ್ವಿಕರು ಅನಾದಿಕಾಲದಿಂದಲೂ ಅವರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಜಮೀನ್ದಾರರಿಗಾಗಿ ಹೊಲ-ಗದ್ದೆಗಳಲ್ಲಿ ದುಡಿಯುತ್ತಿದ್ದರು. ಹೀಗೆ ಫಲರಹಿತವಾಗಿ ದುಡಿಸಿಕೊಂಡದ್ದು ಸಾಲದು ಎಂಬಂತೆ ಜಾತಿಯ ಹೆಸರಲ್ಲಿ ಕಡೆಗಣಿಸಿ ಈ ಶ್ರಮಜೀವಿಗಳನ್ನು ಉಳಿದವರಿಂದ ದೂರವಿಟ್ಟಿದ್ದರು. ಗುರುಗಳ ಸೂಕ್ಷ್ಮ ಕಣ್ಣುಗಳು ಆ ಗುಂಪನ್ನು ಕಂಡಿತು. ಭಾಷಣವನ್ನು ನಿಲ್ಲಿಸಲು ಸೂಚಿಸಿ ಅಲ್ಲಿ ನೆರೆದಿದ್ದ ಎಲ್ಲರನ್ನೂ ಉದ್ದೇಶಿಸಿ ‘ಅಲ್ಲಿ ಕುಳಿತಿರುವವರು ಹಾಗೆ ದೂರವಿರಬೇಕೇ?’ ಎಂದು ಕೇಳಿದರು. ಗುರುಗಳ ಮಾತು ಮುಂದುವರೆಯಿತು ‘ಅವರು ಇಲ್ಲೇ ಬಂದು ಕುಳಿತು ನಮ್ಮ ಸಮಾನರೆಂದು ಭಾವಿಸಬಾರದೇಕೆ?’ ಎಂಬುದು ಅವರ ಪ್ರಶ್ನೆಯಾಗಿತ್ತು. ಅಷ್ಟಕ್ಕೇ ನಿಲ್ಲಿಸದೆ ಆ ಗುಂಪಿನಿಂದ ಇಬ್ಬರು ಮಕ್ಕಳನ್ನು ವೇದಿಕೆಗೇ ಕರೆಯಿಸಿಕೊಂಡು ಕುಶಲ ವಿಚಾರಿಸಿ ತಮ್ಮ ಎರಡೂ ಬದಿಯಲ್ಲಿ ಕುಳ್ಳಿರಿಸಿಕೊಂಡ ಜನರನ್ನುದ್ದೇಶಿಸಿ ಹೇಳಿದರು. ‘ಇವರು ನಮ್ಮ ನಿಮ್ಮಷ್ಟೇ ದೇವರ ಮಕ್ಕಳು’. ಗುರುಗಳ ಕಣ್ಣುಗಳಿಂದ ಹರಿದ ಕರುಣೆಯ ಅಶ್ರುಧಾರೆ ಎಲ್ಲಾ ವಾಗ್ವೈಖರಿಗಳಾಚೆಗೆ ಮೌನದಲ್ಲೇ ಅಗತ್ಯ ಸಂದೇಶವನ್ನು ನೆರೆದಿದ್ದ ಜನರಿಗೆ ತಲುಪಿಸಿತ್ತು. ಸಂಪ್ರದಾಯ ಮತ್ತು ಪರಂಪರೆಯ ಉಲ್ಲಂಘನೆಯ ವಿರುದ್ಧ ಗುಡುಗುವವರೂ ಗುರುಗಳ ಕಾರುಣ್ಯಪೂರ್ಣ ಅಶ್ರುಧಾರೆಯೆದುರು ಧರಾಶಾಯಿಯೇ ಆದರು. ಸಂಪ್ರದಾಯದ ಸತ್ತ ಬೇರುಗಳನ್ನು ಕತ್ತರಿಸುವ ಗುರಿಯೊಂದಿಗೆ ಬಂದ ಗುರುಗಳ ಕೊಡಲಿಯೆದುರು ಅವರು ತಲೆಬಾಗಿದರು. ಇದಕ್ಕವರು ಯಾವ ಮುತ್ಸದ್ದಿತನವನ್ನಾಗಲೀ ರಾಜತಂತ್ರವನ್ನಾಗಲೀ ಬಳಸಲಿಲ್ಲ. ಅಂದು ಅಲ್ಲಿ ಬಳಕೆಯಾದದ್ದು ಗುರುಗಳ ಹೃದಯಲ್ಲಿ ಅಕ್ಷಯವಾಗಿ ಚಿಮ್ಮುತ್ತಿದ್ದ ಮಾನವೀಯತೆಯ ಸಾರ್ವಜನಿಕ ಅಭಿವ್ಯಕ್ತಿ ಮಾತ್ರ. ಅದರ ಮೂಲಕವೇ ಗುರುಗಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ ವಿಜಯಶಾಲಿಯಾದರು. ಬಹುಶಃ ಈ ಹಾದಿಯಲ್ಲಿ ಅದುವೇ ಗುರುಗಳ ಮೊದಲ ವಿಜಯ.

ಅಂದು ವೇದಿಕೆಗೇರಿದ ಬಾಲಕರು ಆಶ್ರಮದ ವಿದ್ಯಾರ್ಥಿಗಳಾದರು. ಅವರೂ ಸೇರಿದಂತೆ ಅನೇಕರು ಸದಾ ಗುರುಗಳ ಜೊತೆಗೇ ಇರುತ್ತಿದ್ದರು. ಗುರುಗಳ ಯಾತ್ರೆಗಳಲ್ಲಿಯೂ ಇವರೇ ಜೊತೆಗಾರರು. ಇದು ಗುರುಗಳ ಮಹಾಸಮಾಧಿಯ ತನಕವೂ ಮುಂದುವರೆಯಿತು. ಉಳಿದವರೆಲ್ಲಾ ಜನರನ್ನು ಜನ ಮಾನಸವನ್ನು ಗೆಲ್ಲಲು ಭೂತ ಮತ್ತು ಭವಿಷ್ಯದ ವಿಚಾರಗಳನ್ನು ತಮ್ಮ ವಾಗ್ವಿಲಾಸದಲ್ಲಿ ಮಂಡಿಸುತ್ತಿದ್ದರೆ ಗುರುಗಳು ಮಾತ್ರ ಮೌನವಾಗಿಯೇ ತಮ್ಮ ಚಿಂತನೆಗಳನ್ನು ಕೃತಿಗಿಳಿಸುತ್ತಿದ್ದರು. ತುಲನೆ ಮಾಡಿದರೆ ಗುರುಗಳ ಮೌನ ಕರ್ಮಗಳು ಸುಧಾರಣಾವಾದಿ ಭಾಷಣಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿತ್ತು.

ಈ ಪುಣ್ಮರಾತ್ರಿಯ ಕಾರ್ಯಕ್ರಮಗಳು ಮುಗಿಯುವ ಹೊತ್ತಿಗೆ ಅಧ್ಯಕ್ಷ ಪೀಠದಲ್ಲಿದ್ದ ಗುರುಗಳಿಗೆ ಹೇಳುವುದಕ್ಕಿದ್ದದ್ದು ಕೆಲವೇ ಪದಗಳು. ಅದನ್ನವರು ಒಂದು ಧ್ಯೇಯವಾಕ್ಯದಂತೆ ನಿರೂಪಿಸಿ ಕೊಟ್ಟರು. ವೇದಿಕೆಯಲ್ಲಿದ್ದವರೊಬ್ಬರು ಅದನ್ನು ಜನರೆದುರು ಘೋಷಿಸಿದರು. ಅದು ಹೀಗಿತ್ತು:

ಜಾತಿ ಭೇದ, ಮತದ್ವೇಷಗಳ್ಯಾವುದೂ ಇಲ್ಲದೆ
ಸರ್ವರೂ ಸೋದರರಂತೆ ಬಾಳುವ ಮಾದರಿ ಸ್ಥಳವಿದು!

ಗುರುಗಳು ತಮ್ಮ ಕ್ರಿಯೆಗೆ ನೀಡಿದ ಸ್ವರೂಪ ಇದಾಗಿತ್ತು. ಇದು ಬಹುಬೇಗ ಆ ಪ್ರಾಂತ್ಯವನ್ನು ದಾಟಿ ವಿಸ್ತರಿಸಿತು.
ನಾವು ಅವರ ಮಾತಿಲ್ಲದ ಕೃತಿಯ ಜಾಡನ್ನು ಹಿಡಿದು ಸಾಗೋಣ.

(ಮುಂದುವರಿಯುವುದು….)


ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/08/11/guru-53/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ