ಅಮರು ಶತಕ: 5ನೇ ಕಂತಿನ ಪದ್ಯಗಳು

ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 5ನೇ ಭಾಗ ಇಲ್ಲಿದೆ…

34

ಪ್ರೀತಿಯ ಹುಡುಗಿ ಮಾತನಾಡು,
ನಿನ್ನ ಪಾದಗಳ ಬಳಿ ಕುಸಿದಿರುವ ನನ್ನನ್ನು
ದಯವಿಟ್ಟು ನೋಡು
ಯಾಕಿಷ್ಟು ಸಿಟ್ಟು
ಯಾವತ್ತೂ ಕಟುವಾಗಿರಲಿಲ್ಲ ನೀನು ಇಷ್ಟು

ಅವನು ಬೇಡತೊಡಗಿದಾಗ
ಕರಗತೊಡಗಿತು ತುಂಬಿಕೊಂಡಿದ್ದ
ಅವಳ ಕಣ್ಣೀರಿನ ಮೋಡ
ಹರಿಯತೊಡಗಿತು ಧಾರಕಾರವಾಗಿ ಸಾಂತ್ವನ
ತೊಳೆಯುತ್ತ ಮನಸಿನೊಳಗಿನ ಎಲ್ಲ
ದುಗುಡ.


35

ನನ್ನ ಅಪ್ಪಿಕೊಂಡಿದ್ದ ಆವೇಶಕ್ಕೆ
ಅಪ್ಪಚ್ಚಿಯಾಗಿತ್ತು ಅವಳ ತುಂಬಿದೆದೆ,
ಮೈಯೆಲ್ಲ ವಿಸ್ಮಯದ ನವಿರು,
ಪ್ರೇಮದ ನಡುಕಕ್ಕೆ ನಡುಗಿ ಜಾರಿಹೋಗಿತ್ತು
ಅವಳ ನಡುವಿನ ಮೇಲಿನ ಬಟ್ಟೆ,
“ಬೇಡ ಬೇಡ” ಎನ್ನುತ್ತಿದ್ದರೂ ಅವಳ ದನಿ
ಇನ್ನೂ ಬೇಡುವಂತಿತ್ತು ಅವಳ ಹಿಡಿತ.
ನನ್ನ ತೋಳುಗಳಲ್ಲಿ ಸುಮ್ಮನಾಗಿರುವ ಅವಳು
ನಿದ್ದೆ ಹೋಗಿದ್ದಾಳೋ? ಕರಗಿ ಹೋಗಿದ್ದಾಳೋ
ನನ್ನೊಳಗೆ ಒಂದಾಗಿ ಜೀವ ಕಳೆದುಕೊಂಡಿದ್ದಾಳೋ
ಗೊತ್ತಾಗುತ್ತಿಲ್ಲ ಏನೊಂದೂ.


36

ಅವನು ಅವಳ ಸೀರೆಯ ಸೆರಗಿಗೆ
ಕೈ ಹಾಕಿದಾಗ
ಆಕೆ ನಾಚಿಕೆಯಿಂದ ಮುಖ ಮುಚ್ಚಿಕೊಂಡಳು,
ಅವನು ಅಪ್ಪಿಕೊಳ್ಳಲು ಮುಂದಾದಾಗ
ಆಕೆ ಹಿಂದೆ ಸರಿದು ನಿಂತಳು.
ಮುಂದೆ ನಡೆದದ್ದನ್ನು ಹೇಳಲಾಗುತ್ತಿಲ್ಲ ಅವಳಿಗೆ.

ನಗು ತುಂಬಿದ ಕಣ್ಣುಗಳಿಂದ
ಕೇಳಿಸಿಕೊಳ್ಳುತ್ತಿದ್ದ ಗೆಳತಿಯರನ್ನು
ಆಕೆ ನಾಚಿ ನೋಡಿದ ನೋಟದಲ್ಲಿಯೇ ಇತ್ತು
ಅವಳ ಮೊದಲ ರಾತ್ರಿಯ
ಸಾಹಸದ ಕಥನ.


37

ಅವನ ಯಾವ ಸಮಾಧಾನದ ಮಾತಿಗೂ
ಮಣಿಯಲಿಲ್ಲ ಅವಳ ಘಾಸಿಗೊಂಡ ಹೆಮ್ಮೆ.
ಮುಖ ತಿರುಗಿಸಿಕೊಂಡಿದ್ದರು ಇಬ್ಬರೂ
ಇಡೀ ದಿನ.
ಕೊನೆ ಕೊನೆಗೆ ಎಷ್ಟು ದೀನವಾಯಿತೆಂದರೆ ಪ್ರೇಮ
ಈಗ ಯಾರು ಮೊದಲು ಸೋಲಬೇಕು
ಎನ್ನುವುದು ಮಾತ್ರ ಉಳಿದುಕೊಂಡಿರುವ ಪ್ರಶ್ನೆ.

ನಂತರ
ಯಾರೋ ಒಬ್ಬರು ಮೊದಲು ನೋಡಿ ನಕ್ಕರು
ಇನ್ನೊಬ್ಬರು ಗೆದ್ದೂ ಸೋತು ಹೋದರು.
ಸೋಲುವುದಕ್ಕೆ ಆಡುವ ಆಟವೊಂದಿದ್ದರೆ
ಅದು ಪ್ರೇಮದ ಆಟವೇ ಇರಬೇಕು.


38

ನಮ್ಮ ನಡುವೆ ಈಗ
ಯಾವ ಪ್ರೇಮವೂ ಉಳಿದ ಹಾಗಿಲ್ಲ,
ಹಾಗೆಯೇ ಇಲ್ಲವಾಗಿದೆ
ಪರಸ್ಪರರ ನಡುವಿನ ಗೌರವವೂ.
ಮಾಯವಾಗಿವೆ ಮಧುರ ಭಾವನೆಗಳು
ಮತ್ತು ಸಹ ಅನುಭೂತಿ ಕೂಡ.
ಯಾರೋ ಅಪರಿಚಿತನಂತೆ ಓಡಾಡುತ್ತಿದ್ದಾನೆ
ಅವನು ಈಗ ನನ್ನ ಮುಂದೆ.
ಹಳೆಯ ನೆನಪುಗಳು ಕಾಡುತ್ತಿವೆ ನನ್ನ
ಮತ್ತೆ ಮತ್ತೆ ಗೆಳತಿ,
ಗೊತ್ತಿಲ್ಲ ಯಾಕೆ ಒಡೆದು ಚೂರಾಗುತ್ತಿಲ್ಲ
ನನ್ನ ಹೃದಯ.


39

ಬಹಳ ದಿನಗಳ ನಂತರ ಕೂಡುತ್ತಿದ್ದಾರೆ
ಮತ್ತೆ ಹರೆಯದ ಪ್ರೇಮಿಗಳು.
ಸೊರಗಿಸಿಬಿಟ್ಟಿದೆ ವಿರಹ ಅವರ
ಪ್ರೇಮದ ಭಾಷೆಯನ್ನ, ಅಂಗಾಂಗಳನ್ನ.
ಆದರೆ ಇಂದು ಮತ್ತೆ ಎದುರಾದಾಗ
ಪೂರ್ತಿ ಹೊಸದಾಗಿ ಕಾಣುತ್ತಿದೆ
ಅವರಿಗೆ ಜಗತ್ತು.

ಕಳೆದು ಹೋಯಿತು ಹಗಲು ಹೇಗೋ
ಆದರೆ ರಾತ್ರಿಯಾದಾಗ ಮಾತ್ರ
ಮಾತನಾಡುತ್ತ ಕುಳಿತುಬಿಟ್ಟರು ಅವರು ಯಾಕೋ
ಮರೆತು ಬಿಟ್ಟಂತೆ ಪ್ರಣಯದ
ವಿಳಾಸವನ್ನ.


40

ಬಹಳ ದಿನಗಳ ನಂತರ ಬಂದ ಪ್ರಿಯತಮನಿಗೆ
ಆಕೆ ತನ್ನ ಕಣ್ಣಿನ ನೋಟದಿಂದ
ಸ್ವಾಗತ ಬಯಸಿದಳೇ ಹೊರತು
ನೀಲ ಕಮಲದ ಹೂಗಳ ಹಾರದಿಂದಲ್ಲ,
ತನ್ನ ಮುಗುಳ್ನಗೆಯಿಂದಲೇ ಪುಷ್ಪಗುಚ್ಛ ಅರ್ಪಿಸಿದಳು
ಮಲ್ಲಿಗೆ ಹೂವಿನ ತುರಾಯಿಯಿಂದಲ್ಲ.
ಕೈ ತೊಳೆದುಕೊಳ್ಳಲು
ಅವನು ನೀರಿಗಾಗಿ ಹುಡುಕಾಡಿದಾಗ
ಬೆವರಿನಿಂದ ಒದ್ದೆಯಾಗಿದ್ದ ತನ್ನ ಮೊಲೆಗಳನ್ನು
ಒಡ್ಡಿದಳು ಅವನ ಎದುರು ಪವಿತ್ರವಾಗಲು.
ಅವನ ಸ್ವಾಗತಕ್ಕೆ ಆಕೆ
ಅವಕಾಶ ಕೊಡಲಿಲ್ಲ ಬೇರೆ ಯಾವುದಕ್ಕೂ
ತನ್ನ ಹೊರತಾಗಿ.


41

ಏನೋ ಜಗಳ ನಮ್ಮ ನಡುವೆ
“ಎಂದೂ ನಿನ್ನ ಮುಖ ತೋರಿಸಬೇಡ”
ಬಯ್ದು ಆಚೆಗಟ್ಟಿದ್ದೆ ಅವನನ್ನು.
ಸಂಜೆ ನನ್ನ ಬಳಿ ಬಂದ
ಸಖಿಯ ಎದುರು ಅವನನ್ನು ಕೂಡುವ ಬಗ್ಗೆ
ನನ್ನ ಆತುರತೆಯನ್ನ ಹೇಳಿಕೊಂಡಾಗ
“ಇದು ಬಹಳ ಕಷ್ಟ”
ಎನ್ನುತ್ತ ಆಕೆ ನನ್ನ ಅಪ್ಪಿಕೊಂಡಳು ಬರಸೆಳೆದು.
ಆಗಲೇ ನನಗೆ ಗೊತ್ತಾಗಿದ್ದು
ಅದು ಅವಳಲ್ಲ, ಅವನು ಎಂದು.
ಕೆಲವೊಮ್ಮೆ ಇಷ್ಟವಾಗುತ್ತವೆ ಮೋಸಗಳು
ಹೀಗೆ ಆಪ್ತವಾಗಿ ಸಂದು.


(ಮುಂದುವರಿಯುವುದು…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ