ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಗಂಡು ಹೆಣ್ಣು ವಸಂತಕಾಲದಲ್ಲಿ ಕಿಟಕಿಯ ಹತ್ತಿರ ಪಕ್ಕ ಪಕ್ಕದಲ್ಲಿ ಕೂತು, ಕಿಟಕಿಯಾಚೆ ಕಾಣುವ ನೀರಿನ ಚಿಲುಮೆ ನೋಡುತ್ತಾ ಮಾತಾಡುತಿದ್ದರು. ಹೆಣ್ಣು ಹೇಳಿದಳು-ಐ ಲವ್ ಯೂ. ನೀನು ನೋಡಲು ಚಂದ ಇದ್ದೀಯ, ದುಡ್ಡಿದೆ, ಯಾವಾಗಲೂ ಚೆನ್ನಾಗಿ ಬಟ್ಟೆ ತೊಡುತೀಯ, ನನಗಿಷ್ಟ.
ಗಂಡು ಹೇಳಿದ-ಐ ಲವ್ ಯೂ. ಸುಂದರವಾದ ಚಿಂತನೆಯಂಥವಳು ನೀನು. ಸೋಂಕಿದರೆ ಎಲ್ಲಿ ಚೆಲುವು ಕದಡುವುದೋ ಅನಿಸುವಂಥ ನಿಷ್ಕಲಂಕ ಸುಂದರಿ ನೀನು. ನನ್ನ ಸ್ವಪ್ನ ಗೀತೆ ನೀನು.
ಹೆಣ್ಣು ಸಿಟ್ಟುಗೊಂಡಳು-ಸ್ವಾಮೀ, ದಯವಿಟ್ಟು ಹೊರಡಿ ಇಲ್ಲಿಂದ. ನಾನು ಆಲೋಚನೆಯಲ್ಲ, ಕನಸಿನಲ್ಲಿ ಬಂದು ಹೋಗುವ ಹಾಡೂ ಅಲ್ಲ, ಹೆಣ್ಣು ನಾನು. ನನ್ನ ಇಷ್ಟಪಡುತೀರಿ, ಹೆಂಡತಿಯಾಗಿ, ನಮಗಾಗುವ ಮಕ್ಕಳ ತಾಯಿಯಾಗಿ ನನ್ನ ನೋಡುತೀರಿ ಅಂದುಕೊಂಡಿದ್ದೆ. ಹೋಗಿ ಬನ್ನಿ, ನಮಸ್ಕಾರ.
ಇಬ್ಬರೂ ಹೊರಟು ಬೇರೆ ಬೇರೆ ದಾರಿ ಹಿಡಿದರು.
ನನ್ನ ಇನ್ನೊಂದು ಕನಸು ಇಬ್ಬನಿಯ ಹಾಗೆ ಕರಗಿತು-ಅಂದುಕೊಂಡ ಗಂಡು.
ನನ್ನನ್ನ ಕನಸಾಗಿ, ಇಬ್ಬನಿ ಹನಿಯಾಗಿ ನೋಡುವಂಥ ಗಂಡನ್ನು ಕಟ್ಟಿಕೊಂಡು ನಾನೇನು ಮಾಡಲಿ- ಅಂದುಕೊಂಡಳು ಹೆಣ್ಣು.

