ನಮ್ಮ ಘನತೆಯನ್ನ ರೂಪಿಸಿಕೊಳ್ಳಲು ಮತ್ತು ನಮ್ಮ ಮೂಡ್ ನ ಚೆನ್ನಾಗಿಟ್ಟುಕೊಳ್ಳಲು ಧನಾತ್ಮಕ ಧೃಡೀಕರಣಗಳ (positive affirmation) ಅವಶ್ಯಕತೆಯಿದೆ. ಇದನ್ನು ಪ್ರತಿ ಮುಂಜಾನೆ ನಾವು ಮಾಡಬೇಕು. ನಾವು ಎಷ್ಟು ಮುಖ್ಯರು ಎನ್ನುವುದನ್ನ ನಮಗೆ ನಾವೇ ಮನದಟ್ಟುಮಾಡಿಕೊಳ್ಳಬೇಕು… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಪ್ರತಿದಿನ ಬೆಳಿಗ್ಗೆ ಎದ್ದೊಡನೆ ಒಂದು ಹೊಸ ಶುರುವಾತಿಗೆ ಮುಂದಾಗಲು ನಮಗೆ ಅವಕಾಶವಿದೆ. ಆದರೆ ಒಂದು ಬಹಳ ಮುಖ್ಯ ಸಂಗತಿ ಏನೆಂದರೆ “how much we matter“ ಎನ್ನುವುದನ್ನ ನಮಗೆ ನಾವು ನೆನಪು ಮಾಡಿ ಕೊಡುವುದು.
ನಾವು ಮೇಲಿಂದ ಮೇಲೆ ಇನ್ನೊಬ್ಬರು ಎಷ್ಟು ಮುಖ್ಯ ನಮಗೆ ಎನ್ನುವುದನ್ನ ಅವರಿಗೆ ಹೇಳುತ್ತಿರುತ್ತೇವೆ, ಅವರ ಅವಶ್ಯಕತೆಗಳ ಬಗ್ಗೆ ಯೋಚನೆ ಮಾಡುತ್ತೇವೆ ಆದರೆ ಯಾವಾಗಲೂ ನಾವು ಕೂಡ ಮುಖ್ಯರು, ನಮಗೂ ಅವಶ್ಯಕತೆಗಳಿವೆ ಎನ್ನುವುದನ್ನ ಮರೆತುಬಿಡುತ್ತೇವೆ. ಎರಡು ಕೂಡ ನಮಗೆ ಮುಖ್ಯವಾಗಬೇಕು. ನಮ್ಮ ಧನಾತ್ಮಕ ಬೇಕುಗಳಿಗೆ ಸ್ಪಂದಿಸದೇ ನಾವು ಹೇಗೆ ತಾನೆ ಇನ್ನೊಬ್ಬರ ಅವಶ್ಯಕತೆಗಳ ಬಗ್ಗೆ ನಿಜವಾಗಿ ಯೋಚಿಸಬಹುದು?
ಆದ್ದರಿಂದ ನಮ್ಮ ಘನತೆಯನ್ನ ರೂಪಿಸಿಕೊಳ್ಳಲು ಮತ್ತು ನಮ್ಮ ಮೂಡ್ ನ ಚೆನ್ನಾಗಿಟ್ಟುಕೊಳ್ಳಲು ಧನಾತ್ಮಕ ಧೃಡೀಕರಣಗಳ (positive affirmation) ಅವಶ್ಯಕತೆಯಿದೆ. ಕೆಲವೊಂದು ಸರಿಯಾದ ಪದಗಳಲ್ಲಿ ವಿಶ್ವಾಸವಿಟ್ಟು, ಅವನ್ನು ಮೇಲಿಂದ ಮೇಲೆ ಹೇಳಿಕೊಳ್ಳುತ್ತ ಇದ್ದರೆ, ಆ ಪದಗಳು ಪವಾಡದ ರೀತಿಯಲ್ಲಿ ನಮ್ಮ ಮೈಂಡ್ ಸೆಟ್ ನ ಮೇಲೆ ಕೆಲಸ ಮಾಡುತ್ತವೆ. ಆದ್ದರಿಂದ ನಮ್ಮ ಧನಾತ್ಮಕ ಆಲೋಚನೆಗಳನ್ನ ಒಟ್ಟುಗೂಡಿಸಿ ಮೇಲಿಂದ ಮೇಲೆ ಹೇಳಿಕೊಳ್ಳುತ್ತ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ಬಹಳ ಮುಖ್ಯ.
ಪ್ರತಿದಿನದ ಮುಂಜಾನೆಯನ್ನು ನಾವು ಪ್ರಾರ್ಥನೆಯೊಂದಿಗೆ ಅಥವಾ ನಮಗೆ ನಾವು ಧನಾತ್ಮಕ ಸೂಚನೆಗಳನ್ನು ಕೊಡುವ ಮೂಲಕ ಶುರುಮಾಡಬೇಕು. ಇದು ನಮ್ಮ ಮನಸ್ಥಿತಿಯನ್ನ ಉತ್ತಮಗೊಳಿಸುತ್ತ ಜಗತ್ತಿನ ಮುಂದೆ ನಮ್ಮ ಅತ್ಯಂತ ಉತ್ತಮ ಆವೃತ್ತಿಯನ್ನ ಪ್ರಸ್ತುತಗೊಳಿಸುತ್ತದೆ. ಈ ಪಾಸಿಟಿವ್ ಅಫರ್ಮೇಷನ್ ಗಳು ನಾವು ನಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿರಬೇಕು ಎನ್ನುವುದನ್ನ ನಮಗೆ ನೆನಪು ಮಾಡುತ್ತಿರುತ್ತವೆ. ಇದು ನಾವು ಕೂಡ ಮುಖ್ಯರು, ನಮ್ಮ ಅವಶ್ಯಕತೆಯೂ ಈ ಜಗತ್ತಿಗೆ ಇದೆ ಎನ್ನುವುದನ್ನ ನಮ್ಮೊಳಗೆ ಗಟ್ಟಿಯಾಗಿ ಸ್ಥಾಪಿಸುತ್ತ ಹೋಗುತ್ತದೆ.
ಈ ಕೆಳಗಿನ ಧನಾತ್ಮಕ ಸೂಚನೆಗಳಲ್ಲಿ ಯಾವದನ್ನಾದರೂ ಆಯ್ಕೆ ಮಾಡಿಕೊಳ್ಳಿ ಅಥವಾ ಬೇರೆ ನಿಮ್ಮದೇ ಆದ ಸೂಚನೆಗಳನ್ನು ತೆಗೆದುಕೊಳ್ಳಿ. ಮುಖ್ಯ ಏನೆಂದರೆ ಈ ಮಾತುಗಳನ್ನ ಪ್ರತಿದಿನ ನಿಮಗೆ ನೀವು ಹೇಳಿಕೊಳ್ಳಬೇಕು, ನೀವು ಎಷ್ಟು ಮುಖ್ಯರು ಎನ್ನುವುದನ್ನ ನಿಮಗೆ ನೀವು ಮನದಟ್ಟು ಮಾಡಿಕೊಡಬೇಕು.
I matter
ನಾನು ಎಲ್ಲರಿಂದಲೂ ಪ್ರೀತಿಸಲ್ಪಡುವ, ಗೌರವಿಸಲ್ಪಡುವ, ಎಲ್ಲರಿಗೂ ಬೇಕಾಗುವ ವ್ಯಕ್ತಿ.
I am good enough
ಯಾರೂ ಪರಿಪೂರ್ಣರಲ್ಲ, ಎಲ್ಲರೂ ಒಮ್ಮಿಲ್ಲ ಒಮ್ಮೆ ತಪ್ಪು ಮಾಡುತ್ತಲೇ ಇರುತ್ತಾರೆ. ನನಗೆ ಗೊತ್ತಿದೆ ನಾನು ಸಾಕಷ್ಟು ಒಳ್ಳೆಯ ಮತ್ತು ಅರ್ಹ ವ್ಯಕ್ತಿ.
I will keep trying
ನಾನು ಯಾವಾಗಲೂ ಸರಿ ಇರದೇ ಇರಬಹುದು ಆದರೆ ನಾನು ನನಗೆ ಸಾಧ್ಯವಾದಷ್ಟು ಉತ್ತಮ ಪ್ರಯತ್ನಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತೇನೆ.
I will stay positive
ನನ್ನ ಬದುಕಿನ ಪಾಸಿಟಿವ್ ಗಳ ಮೇಲೆ ನಾನು ನನ್ನ ಗಮನವನ್ನ ಫೋಕಸ್ ಮಾಡುತ್ತೇನೆ ಮತ್ತು ನನಗೆ ಲಭ್ಯವಿರುವ ಪಾಲಿಟಿವ್ ಸಂಗತಿಗಳ ಬಗ್ಗೆ ನಾನು ಕೃತಜ್ಞನಾಗಿರುತ್ತೇನೆ.
I will become better
ಬೇರೆ ಎಲ್ಲರಿಗಿಂತ ಉತ್ತಮ ಅಲ್ಲದಿದ್ದರೂ, ನಿನ್ನೆಯ ನನಗಿಂತ ಉತ್ತಮನಾಗಲು ಪ್ರಯತ್ನ ಮಾಡುತ್ತೇನೆ.
I choose happiness
ಪ್ರತಿದಿನವೂ ನಾನು ಪ್ರಜ್ಞಾಪೂರ್ವಕವಾಗಿ ಖುಶಿಯಾಗಿರಲು, ತೃಪ್ತನಾಗಿರಲು ಪ್ರಯತ್ನ ಮಾಡುತ್ತೇನೆ. ನಾನು ನನಗಾಗಿ ಕಲ್ಪಿಸಿಕೊಂಡಿರುವ ಬದುಕನ್ನ ಬದುಕಲು ಪ್ರಯತ್ನಿಸುತ್ತೇನೆ.
I choose peace & kindness
ನನಗೆ ಪ್ರೀತಿ ಮುಖ್ಯ, ಜನ ಮುಖ್ಯ. ನಾನು ಒಳ್ಳೆಯವನಾಗಿರಲು, ಕರುಣೆಯನ್ನ ಹೊಂದಿರುವವನಾಗಿರಲು, ಸಮಾಧಾನ ನನ್ನನ್ನು ಆವರಿಸಿಕೊಳ್ಳುವಂತಾಗಲು ಪ್ರಯತ್ನ ಮಾಡುತ್ತೇನೆ.
ಈ ಮಾತುಗಳನ್ನ ಹೇಳುತ್ತಾ, ನಾವು ಕೂಡ ಮುಖ್ಯರು, ನಮ್ಮ ಅವಶ್ಯಕತೆಯೂ ಈ ಜಗತ್ತಿಗೆ ಇದೆ ಎನ್ನುವುದನ್ನ ಮೇಲಿಂದ ಮೇಲೆ ನಮಗೆ ನೆನಪು ಮಾಡಿಕೊಡುತ್ತ, reaffirm ಮಾಡಿಕೊಳ್ಳುತ್ತ ಇರಬೇಕು.

