ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 9ನೇ ಭಾಗ ಇಲ್ಲಿದೆ…
68
ಚಂದ್ರನಿಲ್ಲದ ರಾತ್ರಿಯಲ್ಲಿ
ನಿನ್ನ ಅವಸರ ನೋಡಿದರೆ
ಮಳೆಗೆ ಮುನ್ನ ಅಬ್ಬರಿಸುವ ಸಿಡಿಲಿನಂತಿದೆ
ನಿನ್ನ ನಡಿಗೆಯ ರೀತಿ,
ಯಾಕೆ ಈ ಧಾವಂತ ಗೆಳತಿ?
ಕಾಯುತ್ತಿದ್ದಾನೆ ಗೆಳೆಯ ನನಗಾಗಿ.
ಭಯವಾಗುವುದಿಲ್ಲವೆ
ಇಂಥ ಕತ್ತಲೆಯಲ್ಲಿ, ಒಂಟಿಯಾಗಿ.
ಒಂಟಿಯಲ್ಲ ನಾನು,
ಕಾಣಿಸುತ್ತಿಲ್ಲವೆ ನಿನಗೆ ನನ್ನ ಜೊತೆ
ಸಕಲ ಆಯುಧಗಳೊಂದಿಗೆ ಸಜ್ಜಾಗಿ
ಹೆಜ್ಜೆ ಹಾಕುತ್ತಿದ್ದಾನೆ ಕಾಮದೇವ
ಬೆಂಗಾವಲಾಗಿ.
69
ಅವಳ ಸುತ್ತ ನೀನು ಸುತ್ತುತ್ತಿರುವುದು
ನನಗೆ ಗೊತ್ತು ಎನ್ನುವಂತೆ ಆಕೆ
ಹುಬ್ಬುಗಂಟಿಕ್ಕಿದಾಗ,
ನಿನ್ನ ಸಂಶಯಕ್ಕೊಂದು ದೊಡ್ಡ ನಮಸ್ಕಾರ
ಎನ್ನುವಂತೆ ಆತ ಕೈಜೋಡಿಸಿದ.
ಅವಳ ಗಲ್ಲ ಸಿಟ್ಟಿನಿಂದ ಕೆಂಪಾಗಿರುವುದನ್ನ ಗಮನಿಸಿ
ಕ್ಷಮೆಯಾಚಿಸುವಂತೆ ಅವನು
ಅವಳ ಪಾದಗಳನ್ನು ನೋಡುತ್ತ ತಲೆಬಾಗಿಸಿದ.
ಈ ಎಲ್ಲವೂ ನಡೆದಿದ್ದು
ಅವರ ತಂದೆ ತಾಯಂದಿರು ಇರುವಾಗ ಸುತ್ತ.
ದಾಂಪತ್ಯದ ರಹಸ್ಯಗಳು ಹೀಗೆ
ಕಾಣಿಸಿದರೂ ಕಾಣಿಸಿದ ಹಾಗೆ ಸುತ್ತಮುತ್ತ.
70
ಎಷ್ಟೋ ಹೊತ್ತು ದಿಟ್ಟಿಸಿದವು
ಅವಳ ಶೋಕತಪ್ತ ಕಣ್ಣುಗಳು ಅವನನ್ನು,
ನಂತರ ಬೇಡಿಕೊಂಡಳು ಕೈ ಜೋಡಿಸಿ,
ಆಮೇಲೆ ಅವನ ಶ್ವೇತ ವಸ್ತ್ರದ ಚುಂಗು
ಎಳೆದು ಹಿಡಿದುಕೊಂಡಳು ಬಿಡಲಾರೆನೆಂಬಂತೆ,
ಆದರೂ ಅವನು ನಿರ್ದಯವಾಗಿ
ಅವಳಿಂದ ಬಿಡಿಸಿಕೊಂಡು ಹೊರಟು ನಿಂತಾಗ,
ಆಕೆ ಮೊದಲು ತನ್ನ ಪ್ರಾಣದ ಮೇಲಿನ
ಆಸೆಯನ್ನು ತ್ಯಜಿಸಿದಳು,
ನಂತರ ಅವನ ಮೇಲಿನ ಬಯಕೆಯನ್ನು.
71
ಅವನ ಹಣೆಗೆ ಅಂಟಿಕೊಂಡಿತ್ತು
ತಾಜಾ ಮೆಹಂದಿಯ ರಂಗು,
ಕುತ್ತಿಗೆಯ ಮೇಲಿತ್ತು ಕೊರಳಿನ ಹಾರದ ಒತ್ತು,
ಗಲ್ಲದ ಮೇಲೆ ಅಲ್ಲಲ್ಲಿ ಕಾಡಿಗೆಯ ಕಪ್ಪು,
ಕಣ್ಣ ರೆಪ್ಪೆಯ ಮೇಲೆ ಮತ್ತು ಕಿವಿಯ ಸುತ್ತ ಮುತ್ತ
ತಂಬುಲ ನಾಲಿಗೆಯ ಕೆಂಪು.
ಬೆಳಕು ಹರಿಯುವ ಹೊತ್ತಿಗೆ ಹೀಗೆ
ಅಲಂಕೃತನಾಗಿ ಬಂದು ಬಾಗಿಲು ತಟ್ಟಿದ
ನಲ್ಲನನ್ನು ನೋಡಿ ಆಕೆ ನಿಟ್ಟುಸಿರು ಬಿಟ್ಟಳು
ಕೈಯಲ್ಲಿದ್ದ ಕಮಲದ ಹೂವಿನಲ್ಲಿ
ಮುಖ ಮುಚ್ಚಿಕೊಂಡು.
^**
72 *
ಇನ್ನು ಮುಂದೆ ಯಾವತ್ತೂ ನಾನು
ಶರಣಾಗಲಾರೆ ಕೋಪಕ್ಕೆ,
ಬಾಯಲ್ಲಿ ಹೇಳಲಾರೆ ಕೋಪದ ಹೆಸರನ್ನೂ,
ಹಾಗೇನಾದರೂ ಒಮ್ಮೆ
ನನ್ನಿಂದ ಘಟಿಸಿತಾದರೆ ಈ ಅಪರಾಧ,
ರಾತ್ರಿ ರಾಣಿಯು ಕೃಪೆ ಮಾಡುವ
ಹಲವಾರು ಬೆಳದಿಂಗಳ ರಾತ್ರಿಗಳು ಅಥವಾ
ಮೋಡ ರಾಡಿ ಮಾಡಿದ ಆಕಾಶವನ್ನು ಹೊತ್ತ
ಮಳೆಗಾಲದ ಒಂದು ರಾತ್ರಿ
ನನ್ನ ಅದೃಷ್ಟದಲ್ಲಿ ಇರದೇ ಹೋಗಲಿ
ನನ್ನ ಪ್ರಿಯಕರನೊಂದಿಗೆ.
73
ಆ ಇನ್ನೊಬ್ಬಳ
ಒಡ್ಯಾಣದ ರಿಂಗಣ ಕೇಳಿಸುತ್ತಿದ್ದಂತೆಯೇ
ಸಡಿಲಗೊಳ್ಳುತ್ತವೆ ನನ್ನ ಅಪ್ಪಿದ ನಿನ್ನ ತೋಳುಗಳು.
ಜೇನು – ತುಪ್ಪ ಹಚ್ಚಿದ ನಿನ್ನ ವಿಷದ ಮಾತುಗಳು
ಮರುಳು ಮಾಡಿಬಿಟ್ಟಿವೆ ನನ್ನ ಸಖಿಯನ್ನೂ.
ಒಪ್ಪಿಕೊಳ್ಳುವುದಿಲ್ಲ ಅವಳು ನಿನ್ನ ವಿರುದ್ಧ
ನಾನು ಏನು ಹೇಳಿದರೂ,
ಯಾರ ಮುಂದೆ ಹೇಳಿಕೊಳ್ಳಲಿ ನನ್ನ ನೋವನ್ನ?
74
ಮಲಗುವ ಕೋಣೆಯಲ್ಲಿ
ಯಾರೂ ಇಲ್ಲದಿರುವುದನ್ನ ಖಾತ್ರಿ ಮಾಡಿಕೊಂಡವಳು
ಹೆಜ್ಜೆ ಹಾಕಿದಳು ಸದ್ದು ಮಾಡದಂತೆ
ಪ್ರೇಮಿಯ ಹಾಸಿಗೆಯತ್ತ.
ನಿರಾಳವಾಗಿ ಮಲಗಿದವನ ಕಂಡು ಪ್ರೇಮ ಉಕ್ಕಿಬಂದು
ಚುಂಬಿಸಿದಳು ಹಗುರಾಗಿ ಅವನ ತುಟಿಗಳನ್ನು.
ನಲ್ಲನ ಗಲ್ಲದ ಮೇಲೆ
ಅರಳಿಕೊಂಡ ರೋಮಾಂಚನ ನೋಡಿ
ಗೊತ್ತಾಯಿತು ಅವಳಿಗೆ
ಅವನು ನಿದ್ದೆಯಲ್ಲಿಲ್ಲವೆಂದು.
ನಾಚಿಕೆಯಲ್ಲಿ ಅಲ್ಲಿಂದ ಓಡಿ ಹೋಗಲು
ಆಕೆ ಸಿದ್ಧಳಾಗುತ್ತಿದ್ದಂತೆಯೇ ಅವನು
ಗಟ್ಟಿಯಾಗಿ ಚುಂಬಿಸತೊಡಗಿದ ಅವಳನ್ನು
ಬರಸೆಳೆದುಕೊಂಡು.
*^^*
75
ಅವನು
ಪಾದ ಮುಟ್ಟಿ ಕ್ಷಮೆ ಕೇಳುತ್ತಿರುವಾಗಲೂ
ಯಾಕೆ ನಿನಗೆ ಅವನ ಮೇಲೆ ಅಷ್ಟು ಕೋಪ?
ಪ್ರೇಮದಲ್ಲಿ ಅವನು ನಿಧಾನ ಎನ್ನುವ ಆರೋಪವೇ?
ಸಖಿಯ ವಾದ ತೇಳುತ್ತಿದ್ದಂತೆಯೇ
ಅವಳ ಕೋಪ ಕಡಿಮೆಯಾಯಿತೇನೋ ನಿಜ
ಆದರೆ ಥಟ್ಟನೇ ತುಂಬಿಕೊಂಡ ಕಣ್ಣೀರನ್ನು
ಅವಳಿಗೆ ತಡೆಹಿಡಿಯಲೂ ಆಗಲಿಲ್ಲ ಮತ್ತು
ಹರಿಬಿಡಲು ಕೂಡ.

