‘ಸೀಜೋ’ಳ ಆತ್ಮ ಯಾವುದು!? : ಒಂದು ಝೆನ್ ಕೊಆನ್

ಝೆನ್ ಗುರು ಗೋಸೋ ತನ್ನ ಶಿಷ್ಯರಿಗೆ ಒಂದು ಕೊಆನ್ (ಒಗಟಿನಂಥದ್ದು) ಬಿಡಿಸಲು ಹೇಳಿದ. ಸೀಜೋಳ ನಿಜವಾದ ಆತ್ಮ ಯಾವುದು ಅನ್ನೋದೇ ಆ ಕೊಆನ್. ಅದರ ಪೂರ್ಣಪಾಠ ಈ ಕಥೆಯಲ್ಲಿ ಓದಿ…ಚೇತನಾ ತೀರ್ಥಹಳ್ಳಿ

ಚೋಕನ್‌ ಎಂಬುವನಿಗೆ ಸೀಜೋ ಎಂಬ ಸುಂದರ ಮಗಳಿದ್ದಳು. ಚೋಕನ್‌ ತನ್ನ ದೂರದ ಸಂಬಂಧಿಯಾದ ಓಚು ಮತ್ತು ಸಿಜೋ ಒಳ್ಳೆಯ ಜೋಡಿ ಎಂದು ಸಾಮಾನ್ಯವಾಗಿ ತಮಾಷೆ ಮಾಡುತ್ತಿದ್ದ. ಆದರೆ ತನ್ನ ಮಗಳನ್ನು ಓಚುವಿಗೆ ಕೊಟ್ಟು ಮಾಡುವ ಯಾವ ಉದ್ದೇಶವೂ ಅವನಿಗೆ ಇರಲಿಲ್ಲ, ಆದ್ದರಿಂದ ತನ್ನ ಮಗಳನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲು ಯೋಜಿಸಿದ. ಆದರೆ ಚೋಕನ್‌ನ ತಮಾಷೆಯ ಮಾತು ಗಂಭೀರವಾಗಿ ಪರಿಗಣಿಸಿದ್ದ ಸೀಜೋ ಮತ್ತು ಓಚು ಪರಸ್ಪರ ಪ್ರೀತಿ ಬೆಳೆಸಿಕೊಂಡುಬಿಟ್ಟಿದ್ದರು!

ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಚೋಕನ್‌, ಒಂದು ದಿನ ಸೀಜೋಳ ನಿಶ್ಚಿತಾರ್ಥವನ್ನು ಏರ್ಪಾಟು ಮಾಡಿಯೇಬಿಟ್ಟ. ಇದರಿಂದ ಬೇಸರಗೊಂಡು ದುಃಖಿತನಾದ ಓಚುಗೆ ಆ ಊರಿಂದ ದೂರ ಓಡಿಬಿಡಬೇಕು ಅನಿಸಿತು. ಅದರಂತೆ ಹೊಳೆ ದಾಟಿ ಆಚೆ ದಡದ ಹಳ್ಳಿ ಸೇರಿಕೊಳ್ಳಲು ನಿರ್ಧರಿಸಿದ. ದೋಣಿಯಲ್ಲಿ ಕುಳಿತಿದ್ದ ಓಚು ಕಣ್ಣಿಗೆ ಸೀಜೋ ಕಂಡಂತಾಯಿತು. ಭ್ರಮೆ ಅಂದುಕೊಂಡು ಕಣ್ಣುಜ್ಜಿ ನೋಡಿದ. ಅವಳು ಸೀಜೋನೇ! ಅವನಿಗೆ ಕುಣಿದುಬಿಡುವಷ್ಟು ಖುಷಿಯಾಯಿತು. ಅವಳು ಕೂಡ ತಂದೆಯ ನಿರ್ಧಾರದಿಂದ ದುಃಖಿತಳಾಗಿ ಮನೆ ತೊರೆದಿದ್ದಳು.

ಅವರಿಬ್ಬರು ಮದುವೆಯಾಗಿ ಬೇರೊಂದು ನಗರದಲ್ಲಿ ಬಾಳತೊಡಗಿದರು. ಅವರಿಗೆ ಎರಡು ಮಕ್ಕಳೂ ಆದವು. ಒಂದು ದಿನ ಸೀಜೋಗೆ ತನ್ನ ತಂದೆಯನ್ನು ಭೇಟಿ ಮಾಡಬೇಕು ಎಂಬ ಆಸೆಯಾಯಿತು. ಓಚು ಕೂಡಾ ಅವಳ ಆಸೆಗೆ ಸಹಮತ ವ್ಯಕ್ತಪಡಿಸಿದ. ಅವರಿಬ್ಬರೂ ತಂದೆಯಲ್ಲಿ ಕ್ಷಮಾಪಣೆ ಕೇಳುವುದಕ್ಕೆ ಸಿದ್ಧವಾದರು.

ಮೊದಲಿಗೆ ಓಚು, ಸೀಜೋಳನ್ನು ದೋಣಿಯಲ್ಲೇ ಬಿಟ್ಟು ಮಾವನನ್ನುನೋಡಿ ಬರಲು ಹೋದ. “ನಿನಗೆ ತಿಳಿಸದೆ ನಿನ್ನ ಮಗಳ ಜೊತೆ ಓಡಿಹೋಗಿ ಮದುವೆಯಾಗಿದ್ದಕ್ಕೆ ಕ್ಷಮಿಸಿಬಿಡು” ಅಂತ ಮಂಡಿಯೂರಿ ಕೇಳಿಕೊಂಡ.
ಅವನಿಗೆ ಶಾಕ್ ಆಗುವಂತೆ ಚೋಕನ್‌, “ನನ್ನ ಮಗಳು ನೀನು ಹೋದ ಮೇಲೆ ತುಂಬಾ ಬೇಸರಪಟ್ಟು ಹಾಸಿಗೆ ಹಿಡಿದಳು. ಈಗಲೂ ಹಾಸಿಗೆಯಲ್ಲಿಯೇ ಇದ್ದಾಳೆ” ಅಂದ!
ಆದರೆ ಓಚು, “ಇಲ್ಲ ಸೀಜೋ ನನ್ನ ಜೊತೆ ಇದ್ದಾಳೆ” ಎಂದು ದೋಣಿಯಲ್ಲಿ ಕಾಯುತ್ತಿದ್ದ ಸೀಜೋಳನ್ನು ಕರೆತಂದ.
ಆಗ ಹಾಸಿಗೆಯಲ್ಲಿ ಮಲಗಿದ್ದ ಸೀಜೋ ಮತ್ತು ನಿಜವಾದ ಸೀಜೋ ಇಬ್ಬರೂ ಮುಖಾಮುಖಿಯಾದರು!

ಈ ಕಥೆಯನ್ನು ತನ್ನಅನುಯಾಯಿಗಳಿಗೆ ಹೇಳಿದ ಝೆನ್ ಗುರು ಗೋಸೋ ಕೇಳಿದ, “ಸೀಜೋ ಎರಡು ಆತ್ಮ ಹೊಂದಿದ್ದಾಳೆ. ಒಂದು ಆತ್ಮ ಅಪ್ಪನ ಮನೆಯಲ್ಲಿ ಕೃಶವಾಗಿ ಬಿದ್ದಿದೆ. ಇನ್ನೊಂದು ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದೆ. ಈ ಎರಡರಲ್ಲಿ ಯಾವ ಆತ್ಮ ನಿಜವಾದದ್ದು!?”

ಈ ಬಗೆಹರಿಯದ ಕೊಆನ್‌ ಅನ್ನು ಇಂದಿಗೂ ಝೆನ್‌ ಶಿಷ್ಯಪರಂಪರೆ ಬಿಡಿಸುತ್ತಲೇ ಇದೆ. ಉತ್ತರ ದೊರಕಿದವರು ಜ್ಞಾನೋದಯ ಹೊಂದಿ, ಆ ಬಗ್ಗೆ ಏನೂ ಹೇಳದೆ ಹೋಗಿಬಿಟ್ಟಿದ್ದಾರೆ!


(ಕೊಆನ್‌: ಝೆನ್ ಪರಂಪರೆಯ ಒಗಟಿನಂಥ ಪ್ರಶ್ನೆಗಳು. ಕೊಆನ್ ಬಿಡಿಸುವಂತೆ ಹೇಳುವುದು ಕೂಡಾ ಒಂದು ಬೋಧನಾಕ್ರಮ.)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.