ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಜಾದ್ ಊರಿನ ದಾರಿಯಲ್ಲಿ ಸಾಗುತಿದ್ದ ಪ್ರಯಾಣಿಕನೊಬ್ಬನಿಗೆ ಜಾದ್ ಹತ್ತಿರದ ಹಳ್ಳಿಯವನೊಬ್ಬ ಎದುರಾದ. ಪ್ರಯಾಣಿಕ ಅವನನ್ನು ಮಾತಾಡಿಸುತ್ತಾ, ಅಲ್ಲೇ ಇದ್ದ ವಿಶಾಲವಾದ ಬಯಲನ್ನು ತೋರುತ್ತಾ-ರಾಜ ಅಹ್ಲಾಮ್ ಶತ್ರುಗಳನ್ನು ಸೋಲಿಸಿದ ಯುದ್ಧ ನಡೆದದ್ದು ಈ ಬಯಲಲ್ಲೇ ತಾನೇ-ಅಂತ ಕೇಳಿದ.
ಇಲ್ಲಿ ಯಾವ ಯುದ್ಧಾನೂ ನಡೀಲಿಲ್ಲ. ಇಲ್ಲಿ ಜಾದ್ ಮಹಾ ನಗರ ಇತ್ತು. ಬೆಂಕಿ ಬಿದ್ದು ಸುಟ್ಟು ಹೋಯಿತು. ಈಗ ಬರೀ ಬಯಲು, ಅಲ್ಲವಾ-ಅಂದ ಹಳ್ಳಿಯವನು.
ಪ್ರಯಾಣಿಕ ಮುಂದೆ ಸಾಗಿದ. ಸ್ವಲ್ಪ ಹೊತ್ತಿಗೆ ಇನ್ನೊಬ್ಬ ಸಿಕ್ಕ. ಪ್ರಯಾಣಿಕ ವಿಶಾಲವಾದ ಬಯಲು ತೋರುತ್ತಾ-ಮಹಾ ನಗರ ಜಾದ್ ಇಲ್ಲೇ ಅಲ್ಲವಾ ಇದ್ದದ್ದು-ಅಂತ ಕೇಳಿದ.
ಇಲ್ಲಿ ಯಾವ ನಗರಾನೂ ಇರಲಿಲ್ಲ. ಒಂದು ಕಾಲದಲ್ಲಿ ಇಲ್ಲೊಂದು ದೊಡ್ಡ ಮಠ ಇತ್ತು. ದಕ್ಷಿಣ ದೇಶದವರು ಬಂದು ಹಾಳು ಮಾಡಿದರು- ಅಂದ.
ಸ್ವಲ್ಪ ಹೊತ್ತು ಕಳೆಯಿತು. ಅದೇ ರಸ್ತೆಯಲ್ಲಿ ಸಾಗುತಿದ್ದ ಪ್ರಯಾಣಿಕನಿಗೆ ಮತ್ತೊಬ್ಬ ಎದುರಾದ-ಈ ಬಯಲಲ್ಲಿ ದೊಡ್ಡ ಮಠ ಇತ್ತಂತೆ, ಹೌದಾ-ಪ್ರಯಾಣಿಕ ಕೇಳಿದ.
ಈ ಸುತ್ತಮುತ್ತಾ ಎಲ್ಲೂ ಮಠಾ ಗಿಠಾ ಏನೂ ಇರಲಿಲ್ಲ. ನಮ್ಮಪ್ಪ, ನಮ್ಮ ತಾತ, ಮುತ್ತಾತ ಎಲ್ಲರೂ ಹೇಳತಾ ಇದ್ದರು. ಇಲ್ಲಿ, ಈ ಬಯಲಲ್ಲಿ ದೊಡ್ಡದೊಂದು ಉಲ್ಕೆ ಆಕಾಶದಿಂದ ಬಿತ್ತಂತೆ-ಅಂದ.
ಪ್ರಯಾಣಿಕ ಮುಂದೆ ಸಾಗಿದ. ಮನಸಿನ ತುಂಬ ಬೆರಗು ತುಂಬಿತ್ತು. ತುಂಬ ಮುದುಕನಾದವನೊಬ್ಬ ದಾರಿಯ ಪಕ್ಕ ಕೂತಿದ್ದ. ಪ್ರಯಾಣಿಕ ಆ ಮುದುಕನಿಗೆ ನಮಸ್ಕಾರ ಮಾಡಿ ಮಾತಾಡಿಸಿದ-ಅಜ್ಜಾ, ಇಲ್ಲೇ ಸುತ್ತಾ ಮುತ್ತಾ ವಾಸ ಮಾಡೋ ಮೂರು ಜನ ಸಿಕ್ಕಿದ್ದರು. ಈ ಬಯಲಿನ ಬಗ್ಗೆ ವಿಚಾರಿಸಿದೆ. ಒಬ್ಬರು ಹೇಳಿದ್ದನ್ನು ಅಲ್ಲ ಅಂತ ಇನ್ನೊಬ್ಬರು ಹೇಳುತಿದ್ದರು. ಈ ಬಯಲಿನ ಬಗ್ಗೆ ಒಬ್ಬೊಬ್ಬರೂ ಹೊಸ ಹೊಸ ಕಥೆ ಹೇಳಿದರು, ನಿಜ ಏನು ಅಂತ ನಿಮಗೆ ಗೊತ್ತಾ-ಅಂತ ಕೇಳಿದ.
ಮುದುಕ ತಲೆ ಎತ್ತಿ ನೋಡಿದ-ಮಗೂ, ಮೂರೂ ಜನ ನಡೆದ ವಾಸ್ತವಾನೇ ಹೇಳಿದರು. ಆದರೆ ನೋಡಪ್ಪಾ ನಮಗೆ ಯಾರಿಗೂ ಹಲವು ಹತ್ತು ವಾಸ್ತವಗಳನ್ನು ಸೇರಿಸಿ ನಿಜ ಏನು ಅಂತ ಕಾಣಕ್ಕೆ ಆಗಲ್ಲ, ಅದಕ್ಕೇ ಹೀಗೆ-ಅಂದ.
[ಜಾದ್-ಅರಾಬಿಕ್ ಭಾಷೆಯಲ್ಲಿ ಗೆಲುವು ಎಂದರ್ಥ]

