ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಗ್ರೀಸ್ ದೇಶದ ಆಂಟಿಯೋಕ್ ನಗರದಲ್ಲಿ ಆಸ್ಸಿ ನದಿ ಕಡಲಿಗೆ ಸೇರುವ ಎಡೆಯಲ್ಲಿ ಸೇತುವೆಯೊಂದು ನಿರ್ಮಾಣವಾಯಿತು. ಆ ಸೇತುವೆ ನಗರದ ಎರಡು ಭಾಗಗಳಿಗೆ ಸಂಪರ್ಕ ಕಲ್ಪಿಸಿತು. ಸೇತುವೆ ಕಟ್ಟಲು ಬೇಕಾದ ಕಲ್ಲುಗಳನ್ನು ಆಂಟಿಯೋಕ್‍ನ ಹತ್ತಿರವಿದ್ದ ಬೆಟ್ಟದಿಂದ ಹೇಸರಗತ್ತೆಗಳ ಬೆನ್ನ ಮೇಲೆ ಹೇರಿಕೊಂಡು ಬಂದರು.
ಸೇತುವೆ ಪೂರ್ಣವಾದಾಗ ಅಲ್ಲಿದ್ದ ಕಂಬದ ಮೇಲೆ ಗ್ರೀಕ್ ಭಾಷೆಯಲ್ಲಿ, ಅರಾಮಿಕ್ ಭಾಷೆಯಲ್ಲಿ ಹೀಗೆ ಬರೆದಿತ್ತು: ಇಮ್ಮಡಿ ರಾಜಾ ಆಂಟಿಯೋಕಸ್ ಈ ಸೇತುವೆಯನ್ನು ನಿರ್ಮಿಸಿದ.
ಈ ಒಳ್ಳೆಯ ಕೆಲಸದ ಕಾರಣದಿಂದ ಜನ ಆಸ್ಸೀ ನದಿಯನ್ನು ಸಲೀಸಾಗಿ ದಾಟುವುದು ಸುಲಭವಾಯಿತು. ಸೇತುವೆಯ ಮೇಲೆ ಸಂತೋಷವಾಗಿ ಹೋಗಿ ಬರುತಿದ್ದರು.
ಒಂದು ದಿನ ಸಂಜೆ ಹೊತ್ತಿನಲ್ಲಿ ಯುವಕನೊಬ್ಬ ಸೇತುವೆಯ ಮೇಲೆ ಹೋಗುತಿದ್ದ. ಅವನಿಗೆ ಸ್ವಲ್ಪ ಹುಚ್ಚು ಅನ್ನುತಿದ್ದರು ಜನ. ಸೇತುವೆಯ ಮುಂದೆ ಶಾಸನ ಬರೆಸಿದ್ದ ಕಂಬವನ್ನು ಹತ್ತಿದ. ಶಾಸನಕ್ಕೆ ಮಸಿ ಮೆತ್ತಿದ. ಆಮೇಲೆ-ಈ ಸೇತುವೆಗೆ ಬಳಸಿರುವ ಕಲ್ಲುಗಳನ್ನು ಹೇಸರಗತ್ತೆಗಳ ಮೇಲೆ ಹೇರಿಕೊಂಡು ಬೆಟ್ಟದಿಂದ ಇಲ್ಲಿಗೆ ತರಲಾಯಿತು. ಈ ಸೇತುವೆಯ ಮೇಲೆ ನಡೆದಾಡುವವರು ಆಂಟಿಯೋಕ್ ಕಟ್ಟಿಸಿದ ಸೇತುವೆಯನ್ನು ನಿರ್ಮಿಸಿದ ಹೇಸರಗತ್ತೆಗಳ ಬೆನ್ನಿನ ಮೇಲೆ ನಡೆಯುತಿದ್ದಾರೆ-ಎಂದು ಅಲ್ಲಿ ಬರೆದ.
ಯುವಕ ಬರೆದದ್ದನ್ನು ಓದಿದ ಕೆಲವರು ನಕ್ಕರು. ಕೆಲವರು ಬೆರಗುಪಟ್ಟರು-ಈ ಕೆಲಸ ಮಾಡಿದ್ದು ಯಾರು ಅನ್ನೋದು ನಮಗೆ ಗೊತ್ತು. ಅವನು ಹುಚ್ಚ ಅಲ್ಲವಾ-ಅಂದರು ಇನ್ನೂ ಕೆಲವರು.
ನಿನಗೆ ನೆನಪಿದೆಯಾ! ಈ ಸೇತುವೆ ಕಲ್ಲನ್ನೆಲ್ಲ ನಾವೇ ಹೊತ್ತು ತಂದೆವು. ಆದರೂ ಈ ಸೇತುವೆಯನ್ನು ಇಮ್ಮಡಿ ಆಂಟಿಯೋಕಸ್ ನಿರ್ಮಿಸಿದ ಅಂದುಕೊಂಡಿದ್ದೆವು- ಅಂತ ಒಂದು ಹೇಸರಗತ್ತೆ ಇನ್ನೊಂದು ಹೇಸರಗತ್ತೆಗೆ ಹೇಳಿತು.

