ನಿಜವಾದ ಮ್ಯಾಜಿಕ್ ಸಂಭವಿಸೋದು ನಾವು ಚಿಟ್ಟೆಯ ಹಿಂದೆ ಓಡಾಡೋದನ್ನ ಬಿಟ್ಟು , ಒಂದು ಸುಂದರ, ಚೇತೋಹಾರಿ ಗಾರ್ಡನ್ ನ ನಿರ್ಮಾಣದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ! ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಹರೆಯದ ಹುಡುಗನೊಬ್ಬ ತನ್ನ ಅಜ್ಜನನ್ನು ಕೇಳಿದ, “ಅಜ್ಜಾ, ನಾನು ಸ್ಟಾರ್ ಆಗಬೇಕು, ದೊಡ್ಡ ದೊಡ್ಡ ಸಿನೇಮಾಗಳಲ್ಲಿ ನಟಿಸಬೇಕು. ದೊಡ್ಡವನಾದ ಮೇಲೆ ನಾನು ಇಡೀ ಜಗತ್ತನ್ನು ನೋಡಬೇಕು, ಐಷಾರಾಮಿ ಕಾರ್ ಗಳನ್ನ ಡ್ರೈವ್ ಮಾಡಬೇಕು, ದೊಡ್ಡ ಬಂಗಲೆ ಕೊಳ್ಳಬೇಕು. ಹೌದು, ನಾನೊಬ್ಬ ಪ್ರಸಿದ್ದ, ಯಶಸ್ವಿ ವ್ಯಕ್ತಿಯಾಗಬೇಕು. ನಾನು ನನ್ನ ಗುರಿಯನ್ನ ಹೇಗೆ ಫಾಲೋ ಮಾಡಬೇಕು ಹೇಳು. ನನ್ನ ಗುರಿ ಆದಷ್ಟು ಬೇಗ ನನಗೆ ಸಿಗಬೇಕಾದರೆ ನಾನು ಏನು ಮಾಡಬೇಕು ಹೇಳು”.
ಮ್ಮೊಮ್ಮಗನ ಮಾತು ಮುಗಿದ ಮೇಲೆ ಅಜ್ಜ ಅತ್ತಿತ್ತ ನೋಡಿದ. ಅಲ್ಲಿಯೇ ಸುಂದರ ಹೂವಿನ ಮೇಲೆ ಕುಳಿತಿದ್ದ ಚಿಟ್ಟೆಯನ್ನು ಗಮನಿಸಿ ಮೊಮ್ಮಗನಿಗೆ ಹೇಳಿದ, “ನೋಡಿಲ್ಲಿ ಎಂಥ ಸುಂದರ ಚಿಟ್ಟೆ, ಬೇಗ ಹೋಗು ಆ ಚಿಟ್ಟೆಯನ್ನ ಹಿಂಬಾಲಿಸು, ಅದು ಹಾರಿ ಹೋಗುವ ಮೊದಲು ಅದನ್ನ ಹಿಡಿದುಕೋ. ಬೇಗ ಬೇಗ, ಅದು ಹಾರಿ ಹೋಗಲು ಅವಕಾಶ ಮಾಡಿಕೊಡಬೇಡ”.
ಮೊಮ್ಮಗ ಅವಸರದಿಂದ ಓಡಿ ಚಿಟ್ಟೆಯನ್ನು ಹಿಡಿಯಲು ಹೋದ. ಅವನು ಚಿಟ್ಟೆಯನ್ನು ಮುಟ್ಟುತ್ತಿದ್ದಂತೆಯೇ ಅದು ಹಾರಿ ಹೋಗಿ ಇನ್ನೊಂದು ಹೂವಿನ ಮೇಲೆ ಕುಳಿತುಕೊಂಡಿತು. ಹುಡುಗ ಓಡಿ ಮತ್ತೆ ಚಿಟ್ಟೆಯ ಹತ್ತಿರ ಹೋದ, ಚಿಟ್ಟೆ ಮತ್ತೆ ಹಾರಿ ಹೋಯಿತು. ಹುಡುಗ ಚಿಟ್ಟೆ ಹಿಡಿಯಲು ಇಡೀ ಗಾರ್ಡನ್ ಓಡಾಡಿದ, ಆದರೆ ಆ ಚಿಟ್ಟೆ ಅವನ ಕೈಗೆ ಸಿಗಲೇ ಇಲ್ಲ. ಕೊನೆಗೊಮ್ಮೆ ಚಿಟ್ಟೆ ಕಣ್ಣಿಗೆ ಕಾಣಿಸದಂತೆ ಮಾಯವಾಯಿತು. ದಣಿದ ಹುಡುಗ ಏದುಸಿರು ಬಿಡುತ್ತ ಅಜ್ಜನ ಹತ್ತಿರ ಬಂದ, “ ಅದು ಹಾರಿ ಹೋಯಿತು ಅಜ್ಜ” ಮುಖ ಕೆಳಗೆ ಹಾಕಿಕೊಂಡು ನಿಂತ.
ಅಜ್ಜ, ಮ್ಮೊಮ್ಮಗನನ್ನು ಕರೆದುಕೊಂಡು ಗಾರ್ಡನ್ ನ ಒಂದು ಮೂಲೆಗೆ ಹೋದ, ಮೊಮ್ಮಗ ಪೂರ್ತಿ ಸುಧಾರಿಸಿಕೊಳ್ಳುವವರೆಗೆ ತಡೆದು ನಂತರ ಅವನಿಗೆ ಹೇಳಿದ…….
“ಕೇಳು ಮಗನೇ ನಿನಗೊಂದು ಪಾಠ ಹೇಳಬೇಕು ನಾನು. ಇದು ಬಹಳ ಅಮೂಲ್ಯವಾದ ಪಾಠ. ನೀನು ಚಿಟ್ಟೆಗಳ ಹಿಂದೆ ಓಡಾಡುತ್ತ ಹೋದರೆ ಅವು ಹಾರಿ ಹೋಗುತ್ತದೆ, ಸಮಯ ವ್ಯರ್ಥವಾಗುತ್ತದೆ. ಆದರೆ ನೀನು ನಿನ್ನ ಸಮಯ ಸದುಪಯೋಗ ಮಾಡಿಕೊಂಡು ಒಂದು ಸುಂದರ ಗಾರ್ಡನ್ ಕಟ್ಟಿದೆಯಾದರೆ, ಚಿಟ್ಟೆಗಳು ನಿನ್ನ ಹುಡುಕಿಕೊಂಡು ಬರುತ್ತವೆ. ನೋಡು, ಚಿಟ್ಟೆ ಎನ್ನುವುದು ಬದುಕಿನಲ್ಲಿ ನಿನ್ನ ಗುರಿ ಇದ್ದ ಹಾಗೆ. ಯಶಸ್ಸಿನ ಹುಡುಕಾಟದಲ್ಲಿ ನಾವು ತಕ್ಷಣದ ಗುರಿಗಳನ್ನು ಹಿಂಬಾಲಿಸುತ್ತ ಅವುಗಳ ಹಿಂದೆ ಓಡಾಡುತ್ತೇವೆ, ಆದರೆ ಅವು ಚಿಟ್ಟೆಯಂತೆ ನಮ್ಮಿಂದ ದೂರ ದೂರ ಹೋಗುತ್ತವೆ. ಆದರೆ ನಿಜವಾದ ಮ್ಯಾಜಿಕ್ ಸಂಭವಿಸೋದು ನಾವು ಚಿಟ್ಟೆಯ ಹಿಂದೆ ಓಡಾಡೋದನ್ನ ಬಿಟ್ಟು , ಒಂದು ಸುಂದರ, ಚೇತೋಹಾರಿ ಗಾರ್ಡನ್ ನ ನಿರ್ಮಾಣದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ. ಓಡಾಟದಲ್ಲಿ ಸಮಯ, ಶಕ್ತಿ ಪೋಲು ಮಾಡುವ ಬದಲು, ಅದೇ ಸಮಯವನ್ನ, ಶಕ್ತಿಯನ್ನ ನಿನ್ನ ಗುರಿಗೆ ಪೋಷಕವಾಗಬಲ್ಲ ಯಾವುದಾದರೂ ಸ್ಕಿಲ್ ಬೆಳೆಸಿಕೊಳ್ಳುವಲ್ಲಿ ತೊಡಗಿಸಿಕೊಂಡರೆ, ಹೊಸ ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳುವಲ್ಲಿ ಇನ್ವೆಸ್ಟ್ ಮಾಡಿದರೆ, ನೀನು ಇನ್ನೂ ಸುಂದರವಾಗಿ ಬೆಳೆಯುತ್ತೀಯ. ಈ ಚೆಲುವು ಹೊಸ ಹೊಸ ಅವಕಾಶಗಳನ್ನ, ಅನುಭವಗಳನ್ನ ತಾನೇ ತಾನಾಗಿ ಆಕರ್ಷಿಸುತ್ತದೆ, ಆಗ ಯಶಸ್ಸು ನಿನ್ನ ಹುಡುಕಿಕೊಂಡು ಬರುತ್ತದೆ. ಆದ್ದರಿಂದ ಪ್ರೇಮವನ್ನ, ಹಣವನ್ನ, ಯಶಸ್ಸನ್ನ ಚೇಸ್ ಮಾಡಲು ಹೋಗಬೇಡ, ನೀನು ನಿನ್ನ ಅತ್ಯಂತ ಉತ್ತಮ ವರ್ಷನ್ ಆಗುವ ಎಲ್ಲ ಪ್ರಯತ್ನ ಮಾಡು. ಆಗ ಯಶಸ್ಸು ನಿನ್ನ ಹುಡುಕಿಕೊಂಡು ಬರುತ್ತದೆ”.

