ಸಂತನ ಮಾತು ಕೇಳಿ ನಾಚಿಕೆಯಲ್ಲಿ ಅಲ್ಲಿಂದ ಎದ್ದು ಹೋದ ಬನಿಯಾ , ಹಲವಾರು ವರ್ಷ ದಾನ ಧರ್ಮ, ದಯೆ ಆಚರಿಸುತ್ತ ತನ್ನನ್ನು ತಾನು ಸ್ವಚ್ಛ ಮಾಡಿಕೊಂಡ. ಸಂತ ನಿಂದ ದೀಕ್ಷೆ ಪಡೆಯಬೇಕು ಎನ್ನುವ ವಿಚಾರವನ್ನೇ ಮರೆತು ಬಿಟ್ಟ! ~ ಸ್ವಾಮಿ ಶಿವಾನಂದ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬ ಬನಿಯಾ ತನಗೆ ದೀಕ್ಷೆ ನೀಡುವಂತೆ ಸಂತನೊಬ್ಬನನ್ನು ಕೇಳಿಕೊಂಡ. “ಮುಂದಿನ ಬಾರಿ ಭೇಟಿಯಾದಾಗ ನಿನಗೆ ದೀಕ್ಷೆ ಕೊಡುತ್ತೇನೆ” ಸಂತ ಬನಿಯಾ ನನ್ನು ಬೀಳ್ಕೊಟ್ಟ.
ಪ್ರತಿಬಾರಿ ಭೇಟಿಯಾದಾಗ ಬನಿಯಾ ದೀಕ್ಷೆ ನೀಡುವಂತೆ ಸಂತನನ್ನು ಕೇಳುತ್ತಿದ್ದ ಮತ್ತು ಪ್ರತಿಸಲ ಸಂತ ಏನೋ ಒಂದು ಹೇಳಿ, ಬನಿಯಾನಿಂದ ತಪ್ಪಿಸಿಕೊಳ್ಳುತ್ತಿದ್ದ.
ನಾಲ್ಕೈದು ವರ್ಷಗಳ ನಂತರ ಊರಿಗೆ ಮರಳಿದ ಸಂತ, ತನ್ನನ್ನು ಬಂದು ಭೇಟಿಯಾಗುವಂತೆ ಬನಿಯಾಗೆ ಹೇಳಿಕಳಿಸಿದ. ಸಂತನನ್ನು ನೋಡಲು ಬಂದ ಬನಿಯಾ ತನ್ನ ಜೊತೆ ಸಂತನಿಗಾಗಿ ಮೃಷ್ಠಾನ್ನ ಭೋಜನ ತಂದಿದ್ದ. ಭೋಜನ ಸ್ವೀಕರಿಸುವಂತೆ ಬನಿಯಾ ಸಂತನಿಗೆ ಮನವಿ ಮಾಡಿದ.
“ಸರಿ, ಈ ತಟ್ಟೆಯಲ್ಲಿ ನೀನು ತಂದ ಭೋಜನ ಹಾಕು” ಸಂತ ತನ್ನ ತಟ್ಟೆಯನ್ನು ಬನಿಯಾನ ಮುಂದೆ ಇಟ್ಟ. ಆ ತಟ್ಟೆಯಲ್ಲಿ ಕಸ ಕಡ್ಡಿ, ಗಾಜಿನ ತುಂಡು, ಕೊಳೆತ ಪದಾರ್ಥ ಇತ್ತು. ತಟ್ಟೆ ನೋಡಿ ಬನಿಯಾ ಗೆ ಗಾಬರಿ ಆಯ್ತು.
“ ಸ್ವಾಮಿ ಇಂಥ ಕೊಳಕು ತಟ್ಟೆಯಲ್ಲಿ ನಾನು ತಂದ ಮೃಷ್ಠಾನ್ನ ಭೋಜನ ಹಾಕೋದು ಹೇಗೆ? ದಯಮಾಡಿ ತಟ್ಟೆ ಸ್ವಚ್ಛ ಮಾಡಿ ಕೊಡಿ“ ಬನಿಯಾ, ಸಂತನನ್ನು ಕೇಳಿಕೊಂಡ.
“ ಈ ಕೊಳಕು ತಟ್ಟೆಯ ಬಗ್ಗೆ ನೀನು ಹೀಗೆ ಹೇಳುತ್ತಿದ್ದೀಯಲ್ಲ , ಕಾಮ, ಕ್ರೋಧ, ಮದ, ಮತ್ಸರ ತುಂಬಿಕೊಂಡಂಥ ನಿನ್ನ ಹೃದಯದಲ್ಲಿ ನನ್ನ ಶುದ್ಧ ದೇವರನ್ನು ನಾನು ಹೇಗೆ ಪ್ರತಿಷ್ಠಾಪಿಸಲಿ? ನಾನು ನಿನಗೆ ಹೇಗೆ ದಿಕ್ಷೆ ನೀಡಲಿ, ನಿನ್ನ ಮನಸ್ಸು ಈ ತಟ್ಟೆಯಂತೆ ಕೊಳಕಾಗಿರುವಾಗ?” ಸಂತ, ಬನಿಯಾ ನ ಪ್ರಶ್ನೆ ಮಾಡಿದ.
ಸಂತನ ಮಾತು ಕೇಳಿ ನಾಚಿಕೆಯಲ್ಲಿ ಅಲ್ಲಿಂದ ಎದ್ದು ಹೋದ ಬನಿಯಾ , ಹಲವಾರು ವರ್ಷ ದಾನ ಧರ್ಮ, ದಯೆ ಆಚರಿಸುತ್ತ ತನ್ನನ್ನು ತಾನು ಸ್ವಚ್ಛ ಮಾಡಿಕೊಂಡ. ಸಂತ ನಿಂದ ದೀಕ್ಷೆ ಪಡೆಯಬೇಕು ಎನ್ನುವ ವಿಚಾರವನ್ನೇ ಮರೆತು ಬಿಟ್ಟ.
ಮನಸ್ಸು ಸ್ವಚ್ಛವಾಗಿರುವ ಜಾಗದಲ್ಲಿ ದೈವಿಕತೆ ತಾನೇ ತಾನಾಗಿ ಅವತರಿಸುತ್ತದೆ, ಯಾವ ದೀಕ್ಷೆಯ ಅವಶ್ಯಕತೆಯಿಲ್ಲ.

