ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಅವತ್ತು ಸಾಯಂಕಾಲ ಕವಿಯೂ ರೈತನೂ ಭೇಟಿಯಾದರು
ಕವಿಯ ನೋಟ ಎತ್ತಲೋ ಇತ್ತು
ರೈತ ನಾಚುತ್ತಾ ಮಾತಾಡಿದ
ಕವಿಗಳೇ ಇತ್ತೀಚೆಗ ವಿಚಿತ್ರ ಕಥೆ ಕೇಳಿದೆ
ಇಲಿ ಬೋನಿಗೆ ಸಿಕ್ಕಿಬಿದ್ದಿತ್ತಂತೆ
ಬೋನಿನಲ್ಲಿದ್ದ ವಡೆಯ ಚೂರು ಖುಷಿಯಾಗಿ ತಿನ್ನುತ್ತಾ ಇತ್ತಂತೆ
ಅಲ್ಲೇ ಒಂದು ಬೆಕ್ಕು ಇಲಿಯನ್ನ ನೋಡತಾ ಇತ್ತಂತೆ
ಇಲಿಗೆ ಭಯವಾಯಿತು
ಆಮೇಲೆ ಧೈರ್ಯ ಬಂತು
ಬೋನಿನೊಳಗಿದೇನೆ ಬೆಕ್ಕು ಏನೂ ಮಾಡಕ್ಕಾಗಲ್ಲ ಅಂದುಕೊಂಡಿತಂತೆ
ಎಲವೋ ಇಲೀ
ಇದು ನಿನ್ನ ಕೊನೆಯ ಊಟಾ
ಗೋತ್ತೋ
ಅಂದಿತಂತೆ ಬೆಕ್ಕು
ಹೌದಯ್ಯಾ
ನನಗಿರೋದು ಒಂದೇ ಬದುಕು
ಒಂದೇ ಸಾವು
ನಿನಗೆ ಒಂಬತ್ತು ಜೀವವಂತೆ
ಒಂಬತ್ತು ಸಲ ಸಾಯಬೇಕು ನೀನು ಅಲ್ಲವಾ
ಅಂದಿತಂತೆ ಇಲಿ
ವಿಚಿತ್ರವಾದ ಕತೆ ಅಲ್ಲವಾ ಕವಿಗಳೇ ಅಂದ ರೈತ
ಕವಿ ಉತ್ತರ ಹೇಳದೆ ಸುಮ್ಮನೆ ಹೋಗಿಬಿಟ್ಟ
ಒಂಬತ್ತು ಜೀವ ಇದ್ದರೆ ಒಂಬತ್ತು ಸಲ ಸಾಯಬೇಕು
ಒಂದೇ ಬದುಕು ಒಂದೇ ಸಾವು ವಾಸಿ
ಒಂದೇ ಬದುಕು ಇದ್ದು ಬೋನಲ್ಲಿದ್ದರೂ ವಾಸಿ
ಬೋನಿನಲ್ಲಿ ಕೊನೆಯ ಊಟಕ್ಕೆ ವಡೆಯೋ ಮತ್ತೇನೋ ಇರತ್ತೆ
ಆದರೂ
ನಾವು ಕಾಡಿನ ಸಿಂಹದ ನಂಟರು ಅಲ್ಲವಾ
ಬೋನೊಳಗೆ ಇರಬೇಕಾ ನಾವು
ಅಂದುಕೊಂಡ ಕವಿ

