ಬದುಕನ್ನು ಉತ್ತಮಗೊಳಿಸುವ ಮೂರು ಅಮೂಲ್ಯ ಸಂಗತಿಗಳು ಇಲ್ಲಿವೆ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
- ವಿಶ್ವಾಸ
ವಿಶ್ವಾಸ ನಮ್ಮ ಅತ್ಯಮೂಲ್ಯ ಸಂಬಂಧಗಳನ್ನು ಒಟ್ಟುಗೂಡಿಸಿ ಹಿಡಿದಿಟ್ಟುಕೊಂಡಿರುವ ಸಂಗತಿ. ನಮ್ಮ ಹಿಂದೆ ಒಬ್ಬರು ಇದ್ದಾರೆ ಎನ್ನುವ ವಿಶ್ವಾಸ ನಮ್ಮ ರಾತ್ರಿಯ ನಿದ್ರೆಯನ್ನು ಸಾಧ್ಯಮಾಡುತ್ತದೆ ಅಷ್ಟೇ ಅಲ್ಲ ನಮ್ಮ ಹೃದಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಧೈರ್ಯ ನೀಡುತ್ತದೆ. ರಾತೋರಾತ್ರಿ ವಿಶ್ವಾಸವನ್ನು ಗಳಿಸುವುದು ಸಾಧ್ಯವಿಲ್ಲ, ಇದು ಪ್ರಾಮಾಣಿಕತೆ, ಸಮಯ ಮತ್ತು ಹಂಚಿಕೊಂಡ ಅನುಭವಗಳ ಒಟ್ಟು ಮೊತ್ತ. ಆದರೆ ಒಮ್ಮೆ ವಿಶ್ವಾಸಕ್ಕೆ ಭಂಗ ಬಂದಿತೆಂದರೆ ನಂತರ ಇದನ್ನು ಸರಿಪಡಿಸುವುದು ಒಡೆದ ಗ್ಲಾಸ್ ನ್ನ ರಿಪೇರಿ ಮಾಡಲು ಪ್ರಯತ್ನಿಸಿದಂತೆ. ನಮಗೆಲ್ಲ ಗೊತ್ತು ವಿಶ್ವಾಸ ಎಷ್ಟು ನಾಜೂಕಿನ ಸಂಗತಿ ಎನ್ನುವುದು. ಆದ್ದರಿಂದಲೇ ಇದಕ್ಕೆ ಬೆಲೆ ಕಟ್ಟುವುದು ಅಸಾಧ್ಯ.
- ನಿಷ್ಠೆ
ನಿಷ್ಠೆ, ಬದುಕಿನಲ್ಲಿ ಎಂತಹ ಬಿರುಗಾಳಿಯೇ ಬರಲಿ ನಾನು ನಿನ್ನ ಜೊತೆ ಇರುತ್ತೇನೆ ಎಂದು ನಾವು ಇನ್ನೊಬ್ಬರಿಗೆ ಮೌನವಾಗಿ ಮಾಡಿದ ಪ್ರಮಾಣ. ಇದು ಒಳ್ಳೆಯ ಸಮಯದಲ್ಲಿ ಮಾತ್ರ ಅಲ್ಲ, ಬದುಕಿನ ಅಲ್ಲೊಲಕಲ್ಲೋಲದ ಸಮಯದಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುವ ಧೀರ ಪ್ರತಿಜ್ಞೆ. ನಿಷ್ಠೆ ಎನ್ನುವುದು ಒಂದು ಅಭಯ ಹಸ್ತ, ಜೊತೆ ಇರುವಿಕೆಯ ಪುನರ್ ಪ್ರಮಾಣ, ಮತ್ತು ನೈಜ ಬದ್ಧತೆಯ ಪ್ರತಿಫಲನ. ನಮ್ಮೆಲ್ಲರಿಗೂ ನಮ್ಮ ಜೊತೆ ಸದಾ ನಿಂತುಕೊಳ್ಳುವ ಮತ್ತು ಕಷ್ಟದ ಸಮಯದಲ್ಲಿ ನಮ್ಮನ್ನು ಬಿಟ್ಟುಹೋಗದಂಥ ಜನರ ಬಗ್ಗೆ ತುಡಿತ ಇರುತ್ತದೆ. ಇಂಥ ನಿಷ್ಠೆ ಅಪರೂಪವಾದರೂ ಇದು ಇರುವಾಗ ನಮಗೆ ಮನೆಯ ಅನುಭವ ತಂದುಕೊಡುವಂಥದು.
- ಗೌರವ.
ಗೌರವ, ಪ್ರತಿಯೊಬ್ಬರೂ ಬದುಕಿನಲ್ಲಿ ತಮ್ಮದೇ ಆದ ಮಹತ್ವ ಹೊಂದಿದ್ದಾರೆ ಎನ್ನುವ ತಿಳುವಳಿಕೆ. ನಮ್ಮ ನಡುವಿನ ವ್ಯತ್ಯಾಸಗಳ ಹೊರತಾಗಿಯೂ ಇನ್ನೊಬ್ಬರೊಂದಿಗೆ ಆಳವಾದ ಸಂಬಂಧವನ್ನು ಸಾಧ್ಯ ಮಾಡುವಂಥದು. ಗೌರವ ಎನ್ನುವುದು ಇನ್ನೊಬ್ಬರನ್ನು ಸುಮ್ಮನೇ ಒಪ್ಪಿಕೊಳ್ಳುವುದಲ್ಲ, ಇದು ಇನ್ನೊಬ್ಬರನ್ನು ಆಲಿಸುವುದು, ತಿಳಿದುಕೊಳ್ಳುವುದು ಮತ್ತು ಅವರ ಜೊತೆ ಅಂತಃಕರಣದೊಂದಿಗೆ ವ್ಯವಹರಿಸುವುದು. ಯಾವಾಗ ನಾವು ಪರಸ್ಪರರನ್ನ ಗೌರವಿಸುತ್ತೇವೆಯೋ ಆಗ ನಾವು, ನಮ್ಮ ನಡುವೆ ಪ್ರೀತಿ, ನಿಷ್ಠೆ, ವಿಶ್ವಾಸಗಳು ಫ್ಲರಿಶ್ ಆಗುವಂಥ ಜಾಗವೊಂದನ್ನು ಸೃಷ್ಟಿಮಾಡಿಕೊಳ್ಳುತ್ತೇವೆ. ನಮ್ಮ ಸಂಬಂಧಗಳು ಅವು ಯಾವುದೇ ಇರಲಿ, ಅದು ಕೌಟುಂಬಿಕವಾಗಿರಬಹುದು, ಗೆಳೆತನದ್ದಾಗಿರಬಹುದು ಅಥವಾ ಅಪರಿಚಿರೊಡನೆಯ ಸಂಬಂಧವೇ ಆಗಿರಬಹುದು, ಗೌರವ ನಮ್ಮನ್ನು ನೆಲಕ್ಕಂಟಿಕೊಂಡಿರುವಂತೆ ಮಾಡುವ ಅಡಿಪಾಯ.
ಈ ಮೂರು ಗುಣಲಕ್ಷಣಗಳು – ವಿಶ್ವಾಸ, ನಿಷ್ಠೆ ಮತ್ತು ಗೌರವ, ಕೇವಲ ನಾವು ಇನ್ನೊಬ್ಬರಿಂದ ನಿರೀಕ್ಷಿಸುವ ಸಂಗತಿಗಳು ಮಾತ್ರ ಅಲ್ಲ. ಇವು ನಾವು ಕಾಳಜಿ ಮಾಡುವ ಯಾರಿಗೇ ಆದರೂ ನಾವು ಕೊಡಬಹುದಾದಂಥ ಅಮೂಲ್ಯ ಉಡುಗೊರೆಗಳು. ಇವು ನಮಗೆ ಹತ್ತಿರವಾಗಿದ್ದಾಗ ನಮ್ಮ ಸಂಬಂಧಗಳು ಹೆಚ್ಚು ಸುಂದರವಾಗಿ ನಳನಳಿಸುತ್ತವೆ.

