“ಗೆಳೆತನದ ವಿಷಯಕ್ಕೆ ಬಂದಾಗ ಸಂಖ್ಯೆಗಿಂತ ಕ್ವಾಲಿಟಿ ಹೆಚ್ಚು ಮುಖ್ಯವಾಗುತ್ತ ಹೋಗುತ್ತದೆ. ಎಲ್ಲ ಪರಿಚಯಸ್ಥರೂ ನಿನ್ನ ಗೆಳೆಯರು ಎನ್ನುವ ಭ್ರಮೆಯಲ್ಲಿ ಇರಬೇಡ” ಅಂತ ಸಲಹೆ ನೀಡಿದಳು ತಾಯಿ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಒಬ್ಬಳು ಹರೆಯದ ಹುಡುಗಿ ತನ್ನ ತಾಯಿಯನ್ನು ಕೇಳಿದಳು.
“ಬದುಕಿನಲ್ಲಿ ನನಗೆ ನಿಜವಾಗಿಯೂ ಫ್ರೆಂಡ್ಸ್ ಬೇಕಾ?”
ತಾಯಿ ಉತ್ತರಿಸಿದಳು.
“ಹೌದು, ಬದುಕು ಬಹಳ ಕಷ್ಟಕರವಾದದ್ದು. ನಿನ್ನ ಜೊತೆ ಯಾರಾದರೂ ಇರಲೇಬೇಕು. ಅವರ ಜೊತೆ ನೀನು ಗಂಟೆಗಟ್ಟಲೆ ಮಾತನಾಡಿದರೂ ನಿನ್ನ ಜಡ್ಜ್ ಮಾಡದಂತವರು, ಅವರ ಹೆಗಲ ಮೇಲೆ ನೀನು ತಲೆಯಿಟ್ಟು ಅಳುವುದು ಸಾಧ್ಯವಾಗುವಂತವರು, ನಿನಗೆ ಭಾವನಾತ್ಮಕ ಸಪೋರ್ಟ ನೀಡುವಂತವರು, ನಿನ್ನ ಜೊತೆ ಬೇರೆ ಯಾರೂ ಇಲ್ಲದಿರುವಾಗ ನಿನ್ನ ಪಕ್ಕ ಧೃಡವಾಗಿ ನಿಲ್ಲುವಂತವರು, ಕಷ್ಟಕಾಲದಲ್ಲಿ ನಿನಗೆ ಸಹಾಯ ಮಾಡುವಂತವರು, ಕಠಿಣ ಪರಿಸ್ಥಿತಿಗಳಿಂದ ನಿನ್ನನ್ನು ಹೊರಗೆ ಕರೆದುಕೊಂಡು ಬರುವಂತವರು”.
ಹುಡುಗಿ ಮತ್ತೆ ತಾಯಿಯನ್ನು ಕೇಳಿದಳು,
“ಫೇಕ್ ಫ್ರೆಂಡ್ಸ್, ವೈರಿಗಳಿಗಿಂತಲೂ ಹೆಚ್ಚು ಅಪಾಯಕಾರಿಯಂತೆ ಹೌದಾ?”
ತಾಯಿ ವಿವರಿಸಿದಳು….
“ಹೌದು, ಏಕೆಂದರೆ ನಿನಗೆ ನಿನ್ನ ವೈರಿಗಳ ಬಗ್ಗೆ ಗೊತ್ತು, ಅವರನ್ನು ನೀನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಆದರೆ ಫೇಕ್ ಫ್ರೆಂಡ್ಸ್ ನಿನ್ನ ವಿಶ್ವಾಸ ಗಳಿಸುವ ತನಕ ಗೆಳೆಯರ ಹಾಗೆ ನಾಟಕ ಮಾಡುತ್ತಿರುತ್ತಾರೆ. ಅವರು ನಿನ್ನ ದೌರ್ಬಲ್ಯಗಳನ್ನ, ನಿನ್ನ ಕನಸುಗಳನ್ನ, ನಿನ್ನ ಸಿಕ್ರೆಟ್ ಗಳನ್ನ ಗೊತ್ತುಮಾಡಿಕೊಳ್ಳುತ್ತಾರೆ. ನಿನ್ನನ್ನು ನೋಯಿಸಲು ಯಾವ ಬಟನ್ ಒತ್ತಬೇಕು ಎನ್ನುವುದನ್ನ ತಿಳಿದುಕೊಂಡಿರುತ್ತಾರೆ. ತಮ್ಮ ಸ್ವಾರ್ಥಗಳಿಗೆ ನಿನ್ನ ಬಳಸಿಕೊಳ್ಳುವುದು ಸಾಧ್ಯವಾಗದೇ ಹೋದಾಗ ಅವರು ಬ್ಯಾಕ್ ಸ್ಟ್ಯಾಬ್ ಮಾಡುತ್ತಾರೆ”.
“ಹಾಗಾದರೆ ಫೇಕ್ ಫ್ರೆಂಡ್ಸ್ ನ ದೂರ ಇರಿಸೋದು ಹೇಗೆ?” ಹುಡುಗಿ ತಾಯಿಯನ್ನು ಪ್ರಶ್ನೆ ಮಾಡಿದಳು.
ತಾಯಿ ಒಂದು ಕ್ಷಣ ಯೋಚಿಸಿ ಕೇಳಿದಳು.
“ಒಂದು ಪುಟ್ಟ ಗಾರ್ಡನ್ ಅಥವಾ ಒಂದು ವಿಶಾಲವಾದ ಕಾಡು, ಎಲ್ಲಿ ಹೆಚ್ಚು ವಿಷಕಾರಿ ಹಾವು ಮತ್ತು ಚೇಳು ಇರುತ್ತವೆ?”
“ಖಂಡಿತ ಕಾಡಿನಲ್ಲಿ” ಮಗಳು ಉತ್ತರಿಸಿದಳು.
ತಾಯಿ ಮುಗಳ್ನಗುತ್ತ ತನ್ನ ಮಾತು ಮುಂದುವರೆಸಿದಳು.
“ಗುಡ್, ನಿನ್ನ ಫ್ರೆಂಡ್ ಸರ್ಕಲ್ ಒಂದು ಗಾರ್ಡನ್ ನಷ್ಟು ಪುಟ್ಟದಾಗಿದ್ದಾಗ ನೀನು ಹಾವು, ಚೇಳು, ಇಲಿಗಳ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಎಷ್ಟು ಕಡಿಮೆ ಜನರ ಜೊತೆ ವ್ಯವಹರಿಸುತ್ತೀಯೋ ಅಷ್ಟು ಕಡಿಮೆ ಸಮಸ್ಯೆಗಳನ್ನು ನೀನು ಎದುರು ನೋಡಬಹುದು. ನಾನು ಚಿಕ್ಕವಳಾಗಿದ್ದಾಗ ನನಗೆ ಬಹಳ ಜನ ಫ್ರೆಂಡ್ಸ್ ಇದ್ದರು, ಆದರೆ ನನಗೆ ವಯಸ್ಸಾಗುತ್ತ ಹೋದಂತೆ ನನಗಾದ ಅನುಭವಗಳು ನನ್ನ ಗೆಳೆಯರ ಸರ್ಕಲ್ ಚಿಕ್ಕದಾಗುತ್ತ ಹೋಗುವಂತೆ ಮಾಡಿದವು. ಗೆಳೆತನದ ವಿಷಯಕ್ಕೆ ಬಂದಾಗ ಸಂಖ್ಯೆಗಿಂತ ಕ್ವಾಲಿಟಿ ಹೆಚ್ಚು ಮುಖ್ಯವಾಗುತ್ತ ಹೋಗುತ್ತದೆ. ಎಲ್ಲ ಪರಿಚಯಸ್ಥರೂ ನಿನ್ನ ಗೆಳೆಯರು ಎನ್ನುವ ಭ್ರಮೆಯಲ್ಲಿ ಇರಬೇಡ. ನಿನಗೆ ಹಲವಾರು ಜನರ ಪರಿಚಯ ಇರಬಹುದು ಆದರೆ ನಿಜವಾದ ಗೆಳೆಯರು ಕೆಲವರು ಮಾತ್ರ, ನೀನು ಪ್ರೀತಿಸುವವರು, ನೀನು ನಂಬುವವರು. ಫೇಕ್ ಫ್ರೆಂಡ್ಸ್ ಗಳಿಂದ ದೂರ ಇರಲು ನೀನು ನಿನ್ನ ಫ್ರೆಂಡ್ಸ ಸರ್ಕಲ್ ನ ಸಂಖ್ಯೆಯ ಬಗ್ಗೆ ಮೈಂಡ್ ಫುಲ್ ಆಗಿ ಯೋಚನೆ ಮಾಡುವುದು ಒಳ್ಳೆಯದು”.

