ಹೊಸ ಶಿಷ್ಯನ ಕೃತ್ಯವನ್ನು ಗಮನಿಸಿದ ಗುರುವಿನ ಹಳೆ ಶಿಷ್ಯರು, ಹೊಸ ಶಿಷ್ಯನನ್ನು ಶಿಷ್ಯತ್ವದಿಂದ ತೆಗೆದುಹಾಕುವಂತೆ ಮತ್ತು ಅವನನ್ನು ಆಶ್ರಮದಿಂದ ಹೊರಗೆ ಹಾಕುವಂತೆ ಗುರುವನ್ನು ಕೇಳಿಕೊಂಡರು. ಆದರೆ…. (ಮುಂದೆ ಓದಿ….) । ಚಿದಂಬರ ನರೇಂದ್ರ
ಒಬ್ಬ ಭಕ್ತ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಗುರುವನ್ನು ಕೇಳಿಕೊಂಡ. ಸರಿ ಎಂದು ಗುರು ಒಂದು ಪವಿತ್ರ ಮಂತ್ರವನ್ನು ಭಕ್ತನ ಕಿವಿಯಲ್ಲಿ ಬೋಧಿಸಿ, ಈ ಮಂತ್ರವನ್ನು ಬೇರೆ ಯಾರಿಗೂ ಹೇಳಕೂಡದು ಎಂದು ಎಚ್ಚರಿಕೆ ಕೊಟ್ಟ.
“ಈ ಮಂತ್ರವನ್ನ ಬೇರೆ ಯಾರಿಗಾದರೂ ಹೇಳಿದರೆ ಏನಾಗುತ್ತದೆ?” ಭಕ್ತ ಪ್ರಶ್ನೆ ಮಾಡಿದ.
“ನೀನು ಯಾರಿಗೆ ಈ ಮಂತ್ರವನ್ನು ಹೇಳುತ್ತೀಯೋ ಅವರು ತಮ್ಮ ಅಜ್ಞಾನ, ಸಂಕಟಗಳ ಬಂಧನದಿಂದ ಮುಕ್ತರಾಗುತ್ತಾರೆ ಆದರೆ ನಂತರ ನಿನಗೆ ಈ ಮಂತ್ರ ಮರೆತು ಹೋಗುತ್ತದೆ ಮತ್ತು ನಾನು ನಿನ್ನನ್ನು ಶಿಷ್ಯತ್ವದಿಂದ ತೆಗೆದುಹಾಕುತ್ತೇನೆ ”. ಗುರು ಎಚ್ಚರಿಸಿದರು.
ಗುರುವಿನ ಮಾತು ಕೇಳಿದ ಕೂಡಲೇ ಶಿಷ್ಯ, ಲಗುಬಗೆಯಿಂದ ಮಾರುಕಟ್ಟೆಯ ಜಾಗಕ್ಕೆ ಬಂದು, ಅಲ್ಲಿದ್ದ ಎಲ್ಲ ಜನರನ್ನು ಸೇರಿಸಿ, ಅವರೆದುರು ಮಂತ್ರವನ್ನು ಹೇಳಿದ.
ಹೊಸ ಶಿಷ್ಯನ ಕೃತ್ಯವನ್ನು ಗಮನಿಸಿದ ಗುರುವಿನ ಹಳೆ ಶಿಷ್ಯರು, ಹೊಸ ಶಿಷ್ಯನನ್ನು ಶಿಷ್ಯತ್ವದಿಂದ ತೆಗೆದುಹಾಕುವಂತೆ ಮತ್ತು ಅವನನ್ನು ಆಶ್ರಮದಿಂದ ಹೊರಗೆ ಹಾಕುವಂತೆ ಗುರುವನ್ನು ಕೇಳಿಕೊಂಡರು.
ಗುರುಗಳು ನಗುನಗುತ್ತ ಶಿಷ್ಯರಿಗೆ ಉತ್ತರಿಸಿದರು, “ಅವನಿಗೆ ನಾನು ಕಲಿಸುವುದು ಈಗ ಏನೂ ಬಾಕಿ ಉಳಿದಿಲ್ಲ. ತನ್ನ ಕೃತ್ಯದಿಂದಾಗಿ ಅವನು ತನ್ನದೇ ಆದ ರೀತಿಯಲ್ಲಿ ಗುರುವಾಗಿದ್ದಾನೆ.”
ಮುಂದೆ ಆ ಶಿಷ್ಯ ರಾಮಾನುಜಾಚಾರ್ಯ ಹೆಸರಿನಿಂದ ಮಹಾಗುರುವೇ ಆಗಿಹೋದ!

