ದರ್ವೇಶಿ ಕುತೂಹಲದಿಂದ ಒಂದು ಪುಸ್ತಕ ತೆಗೆದುಕೊಂಡ. ಅದರ ಮೇಲೆ ‘ತತ್ವಜ್ಞಾನಿಯ ಕಲ್ಲು’ ಅನ್ನುವ ಶೀರ್ಷಿಕೆ ಇತ್ತು. ಸೂಫಿಗಳು ಈ ಕಲ್ಲನ್ನು ಅಮೂಲ್ಯ ಹರಳೆಂದು ಪರಿಗಣಿಸುತ್ತಿದ್ದರು. ಆದ್ದರಿಂದ ದರ್ವೇಶಿ ಅಬ್ದುಲ್ಲ ಆ ಪುಸ್ತಕವನ್ನು ತನ್ನೊಡನೆ ಒಯ್ಯಲು ನಿರ್ಧರಿಸಿದ. ಆದರೆ… । ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ
ಒಮ್ಮೆ ಅಬ್ದುಲ್ಲನೆಂಬ ದರ್ವೇಶಿ ಎಲ್ಲೋ ಒಂದು ಹತ್ತಿರದ ಜಾಗಕ್ಕೆ ನಡೆದು ಹೋಗುತ್ತಿದ್ದ. ಅದೇನಾಯಿತೋ, ತನ್ನ ಗುರಿ ತಲುಪುವ ದಾರಿಯ ಬದಲು ಬೇರೊಂದೇ ದಾರಿ ಹಿಡಿದುಬಿಟ್ಟ. ಅದರ ಅರಿವಾಗುತ್ತಲೇ ವಾಪಸು ಹೋಗೋಣ ಅಂದುಕೊಂಡವನು, ಮತ್ತೊಮ್ಮೆ ಯೋಚಿಸಿ “ಇರಲಿ, ಈ ದಾರಿ ಎಲ್ಲಿಗೆ ಒಯ್ಯುತ್ತದೋ ನೋಡೇಬಿಡೋಣ” ಅಂತ ಮುಂದುವರೆದ.
ದರ್ವೇಶಿ ಹಿಡಿದ ದಾರಿ ಅವನನ್ನು ಅವನ ಹಳ್ಳಿಯ ಅಷ್ಟೇನೂ ಪರಿಚಿತವಲ್ಲದ ಜಾಗಕ್ಕೆ ಕರೆದೊಯ್ದಿತು. ಅಲ್ಲಿದ್ದ ಮನೆಗಳ ಮುಂದೆ ಕೈಯಳತೆಯ ಎತ್ತರದಲ್ಲಿ ಪುಸ್ತಕಗಳನ್ನು ಇಡಲಾಗಿತ್ತು, ಅವನ್ನು ಯಾರು ಬೇಕಾದರೂ ಕೊಂಡೊಯ್ಯಬಹುದಾಗಿತ್ತು.
ದರ್ವೇಶಿ ಕುತೂಹಲದಿಂದ ಒಂದು ಪುಸ್ತಕ ತೆಗೆದುಕೊಂಡ. ಅದರ ಮೇಲೆ ‘ತತ್ವಜ್ಞಾನಿಯ ಕಲ್ಲು’ ಅನ್ನುವ ಶೀರ್ಷಿಕೆ ಇತ್ತು. ಸೂಫಿಗಳು ಈ ಕಲ್ಲನ್ನು ಅಮೂಲ್ಯ ಹರಳೆಂದು ಪರಿಗಣಿಸುತ್ತಿದ್ದರು. ಆದ್ದರಿಂದ ದರ್ವೇಶಿ ಅಬ್ದುಲ್ಲ ಆ ಪುಸ್ತಕವನ್ನು ತನ್ನೊಡನೆ ಒಯ್ಯಲು ನಿರ್ಧರಿಸಿದ. ಆದರೆ ಈಗಿಂದಲೇ ಹೊತ್ತು ತಿರುಗುವ ಬದಲು ವಾಪಸು ಹೋಗುವ ಒಯ್ದರಾಯಿತೆಂದು ಅದು ಇದ್ದ ಜಾಗದಲ್ಲೇ ಮರಳಿ ಇಟ್ಟುಬಿಟ್ಟ.
ಮುಂದೆ ಹೊರಟ ದರ್ವೇಶಿ ಆ ಭಾಗದಲ್ಲೆಲ್ಲ ಅಡ್ಡಾಡಿದ. ನಡೆಯುತ್ತ ನಡೆಯುತ್ತ ತಾನು ಬೇರೆ ದಾರಿ ಹಿಡಿದಿದ್ದು ಅರಿವಾದ ಜಾಗಕ್ಕೆ ಬಂದು ನಿಂತ. ಅಚ್ಚರಿಯಿಂದ ತಾನು ಹಿಂದೆ ಎಲ್ಲೆಲ್ಲಿ ಹೆಜ್ಜೆಯೂರಿ ಸಾಗಿದ್ದನೋ ಅದೇ ದಿಕ್ಕಿನಲ್ಲಿ ನಡೆದ. ಹಳ್ಳಿಯ ಮತ್ತದೇ ಅಪರಿಚಿತ ಭಾಗ ಕಂಡಿತು. ಮನೆಗಳೂ ಹಿಂದಿನಂತೆಯೇ ಇದ್ದವು.
ಆದರೆ ಅಲ್ಲೆಲ್ಲೂ ಪುಸ್ತಕಗಳನ್ನು ಇಟ್ಟಿದ್ದ ಕಟ್ಟೆಗಳಾಗಲೀ, ಪುಸ್ತಕಗಳಾಗಲೇ ಕಾಣಲೇ ಇಲ್ಲ!
ಅವೆಲ್ಲವೂ, ಆ ‘ತತ್ವಜ್ಞಾನಿಯ ಕಲ್ಲು’ ಶಿರೋನಾಮೆ ಹೊತ್ತ ಪುಸ್ತಕವೂ ಯಾವತ್ತೂ ಅಲ್ಲಿರಲೇ ಇಲ್ಲವೇನೋ ಅನ್ನುವಂತೆ ಮಾಯವಾಗಿದ್ದವು.

