ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಬೆಟ್ಟಗಳ ನಾಡಿನಲ್ಲಿ ಒಬ್ಬ ಹೆಂಗಸಿದ್ದಳು. ಅವಳಿಗೆ ಒಬ್ಬನೇ ಮಗ. ಜ್ವರ ಬಂದು ಸತ್ತು ಹೋದ. ಅವನು ಸತ್ತಾಗ ವೈದ್ಯ ಅಲ್ಲೇ ಇದ್ದ.
ದುಃಖದಿಂದ ತಲೆ ಕೆಟ್ಟ ಹೆಂಗಸು ವೈದ್ಯನನ್ನು ಬೇಡಿದಳು.
‘ಹೇಳಿ, ವೈದ್ಯರೇ ಹೇಳಿ. ನನ್ನ ಮಗನ ಬದುಕು ಹೀಗೆ ಮುಗಿದದ್ದು ಯಾಕೆ, ಹೇಳಿ.’
‘ನಿನ್ನ ಮಗನಿಗೆ ಜ್ವರ ಬಂದಿತು, ತಾಯೀ,’ ಅಂದ ವೈದ್ಯ.
‘ಜ್ವರ ಅಂದರೇನು?’
‘ವಿವರಿಸಲಾರೆ, ತಾಯೀ. ಜ್ವರ ಅತೀ ಸೂಕ್ಷ್ಮ. ಮನುಷ್ಯರ ಕಣ್ಣಿಗೆ ಕಾಣುವುದಲ್ಲ ಅದು,’ ಅಂತ ಹೇಳಿ ಹೊರಟು ಹೋದ.
‘ಅತೀ ಸೂಕ್ಷ್ಮ ಮನುಷ್ಯರ ಕಣ್ಣಿಗೆ ಕಾಣುವುದಿಲ್ಲ,’ ಅಂತ ಹೆಂಗಸು ಮತ್ತೆ ಮತ್ತೆ ಹೇಳಿಕೊಳ್ಳುತಲೇ ಇದ್ದಳು.
ಅವತ್ತು ಸಾಯಂಕಾಲ ಪಾದ್ರಿ ಬಂದ, ಸಮಾಧಾನ ಹೇಳಿದ.
ಹೆಂಗಸು ಭೋರಾಡಿ ಅತ್ತಳು. ‘ನನ್ನ ಒಬ್ಬನೇ ಮಗ ಯಾಕೆ ಸತ್ತ? ನನ್ನವನು ಅಂತ ಇದ್ದವನು ಅವನೊಬ್ಬನೇ,’ ಅನ್ನುತ್ತ ಗೋಳಾಡಿದಳು.
‘ತಾಯೀ! ಅದು ದೇವರ ಇಚ್ಛೆ.’ ಅಂದ ಪಾದ್ರಿ.
‘ದೇವರು ಅಂದರೇನು? ಎಲ್ಲಿದ್ದಾನೆ ದೇವರು? ದೇವರು ಕಂಡರೆ ನನ್ನ ಎದೆ ಬಗೆದು ರಕ್ತದಲ್ಲಿ ಅವನ ಕಾಲು ತೊಳೆದು ಕೇಳತೇನೆ. ಎಲ್ಲಿದಾನೆ ದೇವರು, ಹೇಳಿ…’ ಅಂದಳು ತಾಯಿ.
‘ದೇವರ ಗಾತ್ರ ಅಗಾಧ. ಮನುಷ್ಯರ ಕಣ್ಣು ದೇವರನ್ನು ಕಾಣಲಾರದು,’ ಅಂದ ಪಾದ್ರಿ.
‘ಕಣ್ಣು ಕಾಣಲಾಗದಷ್ಟು ಅಗಾಧವಾದವನ ಇಚ್ಛೆಯಿಂದ ಕಣ್ಣಿಗೆ ಕಾಣಲಾಗದಷ್ಟು ಸೂಕ್ಷ್ಮವಾದದ್ದು ನನ್ನ ಮಗನನ್ನು ಸಾಯಿಸಿದೆ! ಹಾಗಾದರೆ ನಾವು ಯಾರು? ನಾವು ಯಾರು?’ ಅಂತ ಕೇಳಿದಳು ತಾಯಿ.
ಆ ಹೆಂಗಸಿನ ತಾಯಿ ಬಂದಳು. ಸತ್ತ ಮಗುವಿಗೆ ಹೊದಿಸಲು ಹೊಸ ಬಟ್ಟೆ ತಂದಿದ್ದಳು. ಪಾದ್ರಿ ಹೇಳಿದ ಮಾತು ಅವಳೂ ಕೇಳಿದ್ದಳು. ಮಗಳ ದುಃಖವನ್ನೂ ಕಂಡಿದ್ದಳು. ಹೆಣದ ಬಟ್ಟೆಯನ್ನು ಮಗುವಿನ ಮೇಲೆ ಹೊದಿಸಿದಳು.
ಮಗಳ ಕೈ ಹಿಡಿದು ಹೇಳಿದಳು-‘ಮಗಳೇ, ಮಗಳೇ ನಾವು ಅತೀ ಸೂಕ್ಷ್ಮವೂ ಹೌದು, ಅತೀ ಅಗಾಧವೂ ಹೌದು. ಸೂಕ್ಷ್ಮ-ಅಗಾಧಗಳ ನಡುವೆ ಇರುವ ದಾರಿ ನಾವು.’

