ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಯಾರೋ ಇಬ್ಬರು ಕಣಿವೆಯ ದಾರಿಯಲ್ಲಿ ಹೋಗುತಿದ್ದರು. ಅವರಲ್ಲೊಬ್ಬಾತ ಬೆಟ್ಟದ ತುದಿಯತ್ತ ಬೆರಳು ತೋರುತ್ತಾ ಹೇಳಿದ:
‘ಅಲ್ಲೊಂದು ಅಶ್ರಮ ಕಾಣತ್ತಲ್ಲಾ…ಅಲ್ಲೊಬ್ಬ ಸಂತ ಇದಾನೆ. ಲೋಕದಿಂದ ದೂರವಾಗಿ ಬದುಕಿದಾನೆ. ದೇವರನ್ನು ಕಾಣುವುದು ಬಿಟ್ಟರೆ ಬೇರೇನೂ ಬೇಕಾಗಿಲ್ಲ ಅವನಿಗೆ,’ ಅಂದ.
ಇನ್ನೊಬ್ಬ ಹೇಳಿದ: ‘ದೇವರು ಸಿಗಲ್ಲ ಅವನಿಗೆ. ಆಶ್ರಮ ಬಿಟ್ಟು ಬರಬೇಕು, ಒಂಟಿಯಾಗಿರಬಾರದು, ಲೋಕದ ಜನರ ಜೊತೆ ಬೆರೆಯಬೇಕು. ನಮ್ಮ ಸುಖ ದುಃಖ ಹಂಚಿಕೊಳ್ಳಬೇಕು. ಮದುವೆಯ ಮನೆಯಲ್ಲಿ ಸಂಗೀತ ಕೇಳುತ್ತ ಕುಣಿಯಬೇಕು, ಹೆಣದ ಮುಂದೆ ಅಳುವವರ ಜೊತೆ ಅಳಬೇಕು. ಹಾಗಾದರೆ ದೇವರು ಕಂಡಾನು.’
ಇನ್ನೊಬ್ಬನ ಮನಸಿಗೆ ಆ ಮಾತು ನಿಜ ಅನಿಸಿತು. ಆದರೂ, ಹೀಗಂದ-
‘ನೀನು ಹೇಳೋದು ಒಪ್ಪುತೇನೆ. ಆದರೂ ಸಂತ ಒಳ್ಳೆಯ ಮನುಷ್ಯ. ಕಣ್ಣಿಗೆ ಒಳ್ಳೆಯವರಾಗಿ ಕಾಣುವ ನೂರು ಜನಕ್ಕಿಂತ ಕಣ್ಣಿಗೆ ಕಾಣದ ಒಬ್ಬ ಮನುಷ್ಯ ಲೋಕಕ್ಕೆ ಹೆಚ್ಚು ಉಪಯೋಗ, ಅಲ್ಲವಾ?’

