ಧರ್ಮ ಮತ್ತು ಧಾರ್ಮಿಕತೆ: ಓಶೋ ವ್ಯಾಖ್ಯಾನ

ಇರುವ ಯಾವ ಧರ್ಮವೂ ನಿಮ್ಮನ್ನು ತೃಪ್ತಿಪಡಿಸುತ್ತಿಲ್ಲವಾದರೆ ಅದು ಬಹಳ ಒಳ್ಳೆಯದು. ಹಾಗೆಂದರೆ ನಿಮ್ಮೊಳಗೆ ಹೊಸದೊಂದು ಧರ್ಮ ಹುಟ್ಟಿಕೊಂಡಿದೆ. ಜಗತ್ತು ಇನ್ನೂ ಕೊಂಚ ಶ್ರೀಮಂತವಾಗಿದೆ. ಇನ್ನೂ ಒಂದು ಧರ್ಮ ಎಂದರೆ ಇನ್ನೂ ಒಂದು ಹೂವು, ಇನ್ನೂ ಒಂದು ಮರ, ಇನ್ನೂ ಒಂದು ವಿದ್ಯಮಾನ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಜಗತ್ತು ಧಾರ್ಮಿಕ ಅಲ್ಲ ಏಕೆಂದರೆ ಧರ್ಮವನ್ನ ನಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗಿದೆ. ತಂದೆ ತಾಯಿ, ಧಾರ್ಮಿಕ ಸಂಸ್ಥೆ, ಸ್ಟೇಟ್ ಎಲ್ಲರಿಗೂ ಮಗುವಿನ ಮೇಲೆ ಧರ್ಮವನ್ನು ಹೇರುವ ಆತುರ. ಎಂಥ ಮೂರ್ಖತನ ಇದು, ಧರ್ಮವನ್ನು ಅರ್ಥಮಾಡಿಕೊಳ್ಳಲು , ಅದನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಪ್ರಬುದ್ಧತೆ ಬೇಕು, ಅಪಾರ ತಿಳುವಳಿಕೆ ಬೇಕು.

ಯಾರೂ ಹುಟ್ಟುತ್ತಲೇ ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್ ಅಲ್ಲ. ಪ್ರತಿಯೊಬ್ಬರು ಹುಟ್ಟುವಾಗ ಮುಗ್ಧರು, ಕ್ಲೀನ್ ಸ್ಲೇಟಿನೊಂದಿಗೆ ಹುಟ್ಟಿದವರು ಆಮೇಲೆ ತಮಗೆ ಬೇಕಾದುದನ್ನ ಹುಡುಕಲು ಪ್ರಯತ್ನ ಮಾಡುವವರು. ಇದು ಬದುಕಿನ ಸೌಂದರ್ಯ. ಬದುಕು ಒಂದು ಪರಿಶೀಲನೆ ಮತ್ತು ಬೇಗ ಬೇಗ ಅದನ್ನು ಒಪ್ಪಿಕೊಳ್ಳುವ ಯಾವ ಅವಶ್ಯಕತೆಯೂ ಇಲ್ಲ.

ಇರುವ ಯಾವ ಧರ್ಮವೂ ನಿಮ್ಮನ್ನು ತೃಪ್ತಿಪಡಿಸುತ್ತಿಲ್ಲವಾದರೆ ಅದು ಬಹಳ ಒಳ್ಳೆಯದು. ಹಾಗೆಂದರೆ ನಿಮ್ಮೊಳಗೆ ಹೊಸದೊಂದು ಧರ್ಮ ಹುಟ್ಟಿಕೊಂಡಿದೆ. ಜಗತ್ತು ಇನ್ನೂ ಕೊಂಚ ಶ್ರೀಮಂತವಾಗಿದೆ. ಇನ್ನೂ ಒಂದು ಧರ್ಮ ಎಂದರೆ ಇನ್ನೂ ಒಂದು ಹೂವು, ಇನ್ನೂ ಒಂದು ಮರ, ಇನ್ನೂ ಒಂದು ವಿದ್ಯಮಾನ.

ಬುದ್ಧ ಹೊಸದೊಂದು ಧರ್ಮವನ್ನ ಈ ಜಗತ್ತಿಗೆ ಪರಿಚಯಿಸಿದ. ಬುದ್ಧನಿಗಿಂತ ಮೊದಲು ಜಗತ್ತು ಬಡವಾಗಿತ್ತು ಏಕೆಂದರೆ ಅದು ಬುದ್ಧಿಸಂ ನ ಮಿಸ್ ಮಾಡಿಕೊಳ್ಳುತ್ತಿತ್ತು. ಬುದ್ಧ ತನ್ನ ತಂದೆ ತಾಯಿಯ ಧರ್ಮವನ್ನ ಫಾಲೋ ಮಾಡಬಹುದಿತ್ತು ಆದರೆ ಆಗ ಜಗತ್ತು ಇನ್ನೂ ಬಡವಾಗಿಯೇ ಉಳಿಯುತ್ತಿತ್ತು. ಬುದ್ಧ ಹೊಸ ಬಾಗಿಲನ್ನು ತೆರೆದ, ಹೊಸ ದರ್ಶನವನ್ನ, ಹೊಸ ತಿಳುವಳಿಕೆಯನ್ನ ಪರಿಚಯಿಸಿದ. ಅವನು ತನ್ನ ಮೇಲೆ ಹೇರಲಾಗಿದ್ದ ಧರ್ಮದ ವಿರುದ್ಧ ಬಂಡೆದ್ದ. ಎಲ್ಲ ಧಾರ್ಮಿಕ ಜನರು ಬಂಡುಖೋರರು.

ಬುದ್ಧ ತನ್ನ ವೈಯಕ್ತಿಕ ಹುಡುಕಾಟದಲ್ಲಿ ತೊಡಗಿಕೊಂಡ. ಎಲ್ಲ ಧಾರ್ಮಿಕರು ಅನ್ವೇಷಕರು, ಎಲ್ಲ ಧಾರ್ಮಿಕರು ಸಾಹಸಿಗಳು. ಹಿಂದಿನ ಧರ್ಮಗಳನ್ನು ಒಪ್ಪಿಕೊಂಡುಬಿಡುವುದು ಬಹಳ ಸುಲಭ, ಆಗ ಪರಿಶೀಲನೆಯ ತೊಂದರೆ ಇಲ್ಲ, ಸತ್ಯವನ್ನು ಹುಡುಕಾಡುವ ತೊಂದರೆ ಇಲ್ಲ. ಹಿಂದೆ ಯಾರೋ ಕಂಡುಕೊಂಡಿದ್ದನ್ನ ಬಾಡಿಗೆ ತೆದುಕೊಂಡರಾಯಿತು. ಆದರೆ ಬಾಡಿಗೆ ಸತ್ಯ ಯಾವತ್ತೂ ಪರಮ ಸತ್ಯವಲ್ಲ. ಬದಲಾಗಿ ಅದೊಂದು ಮಹಾ ಸುಳ್ಳು.

ಬುದ್ಧ ಹುಡುಕಾಟಕ್ಕೆ ಸಿದ್ಧನಾದ. ಬಹಳ ಕಠಿಣತಮವಾಗಿತ್ತು ಅವನ ಪರಿಶೀಲನೆಯ ಪ್ರಕ್ರಿಯೆ. ಅವನು ಎಲ್ಲ ಅಪಾಯಗಳಿಗೂ ತೆರೆದುಕೊಂಡ. ಯಾವಾಗ ನೀವು ಎಲ್ಲ ರಿಸ್ಕ್ ಗಳಿಗೂ ತೆರೆದುಕೊಳ್ಳುತ್ತಿರೋ ಆಗ ಬದುಕು ನಿಮ್ಮ ಮೇಲೆ ಸಂಪತ್ತಿನ ಮಳೆಗರೆಯುತ್ತದೆ. ಆಗ ಹೊಸ ಧರ್ಮ, ಹೊಸ ದರ್ಶನ, ಹೊಸ ತಿಳುವಳಿಕೆ ಹುಟ್ಟಿಕೊಳ್ಳುತ್ತದೆ.

ಮೊಹಮ್ಮದ ತನ್ನ ತಂದೆ ತಾಯಿಯ ಧರ್ಮವನ್ನ ಫಾಲೋ ಮಡಬಹುದಿತ್ತು. ಜೀಸಸ್ ಜುಡಾಯಿಸಂ ನ ಅನುಯಾಯಿ ಆಗಿಯೇ ಇರಬಹುದಿತ್ತು. ಬುದ್ಧ ಆಗಿ, ಜೀಸಸ್ ಆಗಿ, ಮೊಹಮ್ಮದ್ ಆಗಿ ಆದರೆ ಬುದ್ಧಿಸ್ಟ್ ಆಗಬೇಡಿ, ಕ್ರಿಶ್ಚಿಯನ್ ಆಗಬೇಡಿ, ಮುಸ್ಲೀಂ ಆಗಬೇಡಿ. ಅನ್ನೇಷಣೆ ಮಾಡಿ, ಇಮಿಟೇಟ್ ಮಾಡುತ್ತ ಬದುಕನ್ನ ಹಾಳು ಮಾಡಿಕೊಳ್ಳಬೇಡಿ. ಏಕೆಂದರೆ ಆಗ ನೀವು ಸುಳ್ಳುಗಾರ ( pseudo ) ಆಗಿಯೇ ಉಳಿಯುತ್ತೀರ. ಮತ್ತು ಸುಳ್ಳಿನ ಮನುಷ್ಯ ಧಾರ್ಮಿಕನಾಗುವುದು ಸಾಧ್ಯವಿಲ್ಲ. ಬಹುದೊಡ್ಡ ಸಾಚಾತನ, ಪ್ರಾಮಾಣಿಕತೆ ಬೇಕು ಧಾರ್ಮಿಕ ಮನುಷ್ಯನಾಗಲು.


Source: Osho / The Dhammapada: The Way of the Buddha / Vol 1, Ch 4

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.