ಕನ್ನಡದ ಪ್ರಸಿದ್ಧ ಕಾದಂಬರಿಕಾರ ವಸಂತ ದಿವಾಣಜಿ (ಕುಸುಮಾಕರ ದೇವರಗಣ್ಣೂರು) ಬೇಂದ್ರೆ ಕುರಿತಾಗಿ ತಮಗೆ ಹೇಳಿದ ಸಂಗತಿಯೊಂದನ್ನು ಜಯಂತ್ ಕಾಯ್ಕಿಣಿ ಹೀಗೆ ನೆನಪು ಮಾಡಿಕೊಳ್ಳುತ್ತಾರೆ… ~ ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ
ಒಮ್ಮೆ ಬೇಂದ್ರೆ ಸಾಹಿತ್ಯದ ಸಮಾರಂಭಕ್ಕೆಂದು ಸೊಲ್ಲಾಪುರಕ್ಕೆ ಹೋಗಿರುತ್ತಾರೆ. ಕಾರ್ಯಕ್ರಮದ ನಂತರ ಸ್ಥಳೀಯ ಮರಾಠಿ ಸಾಹಿತಿಗಳು ಬೇಂದ್ರೆಯವರನ್ನು ತಮಾಶಾ ನೋಡಲಿಕ್ಕೆ ಕರೆದುಕೊಂಡು ಹೋಗಿರುತ್ತಾರೆ. ತಮಾಶಾ ಕಾರ್ಯಕ್ರಮ ಮುಗಿದ ನಂತರ ಒಬ್ಬ ಮರಾಠಿ ಸಾಹಿತಿ, ತಮಾಶಾ ದ ನಟಿಗೆ ಹೇಳುತ್ತಾರೆ “ ಕಾಯ್ ಬಾಯಿ ಆಜ ತುಮ್ಹಿ ಅಸ್ಸಲ್ ತಮಾಶಾ ದಾಖವಲ ನಹೀ” ಅಂತ. ಹಾಗೆಂದರೆ ನೀವು ನಮಗೆ ಅಸಲೀ ತಮಾಶಾ ತೋರಿಸಲಿಲ್ಲ ಇವತ್ತು ಅಂತ. ತಮಾಶಾ ಪ್ರಸಿದ್ಧ ಜಾನಪದ ಕಲೆಯಾದರೂ ಆಗ ಅದು ವ್ಯಾಪಾರಿಕರಣಗೊಂಡು ಅಶ್ಲೀಲತೆಯ ಸೊಂಕು ತಗುಲಿಸಿಕೊಂಡು ಬಿಟ್ಟಿತ್ತು. ಆ ಮರಾಠಿ ಸಾಹಿತಿ ಹೇಳಿದ್ದು ಏನೆಂದರೆ ನಿಮ್ಮ ಇವತ್ತಿನ ತಮಾಶಾದಲ್ಲಿ ಆ ಅಶ್ಲೀಲತೆಯ ಮಜಾ ಇರಲಿಲ್ಲ ಅಂತ.
ಇದಕ್ಕೆ ಉತ್ತರಿಸುತ್ತ ಆ ತಮಾಶಾ ನಟಿ ಹೇಳುತ್ತಾಳೆ, “ಇವತ್ತು ನೀವೆಲ್ಲ ಗೌರವಸ್ಥರೆಲ್ಲ ಸಂಸಾರ ಸಮೇತ ಬಂದಿದ್ದೀರಿ. ನಿಮ್ಮ ಮಾನ ಕಾಪಾಡವುದು ನಮ್ಮ ಕರ್ತವ್ಯ”.
ಅವಳ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಅಲ್ಲಿಯೇ ಇದ್ದ ಬೇಂದ್ರೆ, “ತಾಯಿ ನಮ್ಮ ಇಡಿ ಸಮಾಜದ ಮಾನ ಮರ್ಯಾದೆ ಎಲ್ಲ ನಿಮ್ಮ ಉಡಿಯಲ್ಲಿದೆ” ಎನ್ನುತ್ತ ಅವಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಡುತ್ತಾರೆ.

