ಪೂಜಿಸುವುದು, ನಾಶ ಮಾಡುವುದು… ಎರಡೂ ಒಂದೇ! : ಓಶೋ ವ್ಯಾಖ್ಯಾನ

ಪೂಜಿಸುವ ಮೂಲಕ ಗುಂಪು ಏನು ಹೇಳುತ್ತಿದೆಯೆಂದರೆ ನಾವು ಬೇರೆ, ನೀನು ಬೇರೆ. ನಿನ್ನ ಹಿಂಬಾಲಿಸುವುದು ನಮಗೆ ಸಾಧ್ಯವಿಲ್ಲ. ನಾವು ನಿನ್ನ ಜೊತೆ ಬರಲಾರೆವು. ನೀನು ಒಳ್ಳೆಯವ ತುಂಬ ಒಳ್ಳೆಯವ, ಎಷ್ಟು ಒಳ್ಳೆಯವನೆಂದರೆ ನಂಬುವುದು ಕಷ್ಟವಾಗಿಬಿಡುತ್ತದೆ ಎಂದು! । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಬ್ಬ ವ್ಯಕ್ತಿ ಗುಂಪಿನ ವಿರುದ್ಧ ಹೋದನೆಂದರೆ, ಗುಂಪಿಗೆ ಅದು ಇಷ್ಟ ಆಗೋದಿಲ್ಲ. ಗುಂಪು ಅವನನ್ನು ನಾಶ ಮಾಡಿಬಿಡುತ್ತದೆ ಅಥವಾ ಆ ಗುಂಪು ಏನಾದರೂ ಸುಸಂಸ್ಕೃತವಾಗಿದ್ದರೆ ಅವನನ್ನು ಪೂಜಿಸಲು ಶುರು ಮಾಡುತ್ತದೆ. ಈ ಎರಡೂ ರೀತಿಗಳು ಒಂದೇ ತರಹದವು. ಗುಂಪು ಉದ್ರಿಕ್ತವಾಗಿದ್ದರೆ, ಸುಸಂಸ್ಕೃತವಲ್ಲದಿದ್ದರೆ ಜೀಸಸ್ ನಂತೆ ಅವನನ್ನು ಶಿಲುಬೆಗೇರಿಸಲಾಗುತ್ತದೆ. ಗುಂಪು ಶತಮಾನಗಳಿಂದ ಒಂದು ಸಂಸ್ಕೃತಿಯಲ್ಲಿ ಬೆಳೆದುಕೊಂಡು ಬಂದಿದ್ದರೆ, ಅಧ್ಯಾತ್ಮ, ಪ್ರೀತಿ, ಅಹಿಂಸೆಗಳಲ್ಲಿ ವಿಶ್ವಾಸವಿಟ್ಟಿದ್ದರೆ ಅಂಥ ಗುಂಪು ಬುದ್ಧನಂತೆ ಅವನನ್ನು ಪೂಜಿಸುತ್ತದೆ.

ಆದರೆ ಪೂಜಿಸುವ ಮೂಲಕ ಗುಂಪು ಏನು ಹೇಳುತ್ತಿದೆಯೆಂದರೆ ನಾವು ಬೇರೆ, ನೀನು ಬೇರೆ. ನಿನ್ನ ಹಿಂಬಾಲಿಸುವುದು ನಮಗೆ ಸಾಧ್ಯವಿಲ್ಲ. ನಾವು ನಿನ್ನ ಜೊತೆ ಬರಲಾರೆವು. ನೀನು ಒಳ್ಳೆಯವ ತುಂಬ ಒಳ್ಳೆಯವ, ಎಷ್ಟು ಒಳ್ಳೆಯವನೆಂದರೆ ನಂಬುವುದು ಕಷ್ಟವಾಗಿಬಿಡುತ್ತದೆ. ನೀನು ನಮಗೆ ಸೇರಿದವನಲ್ಲ, ನೀನು ಒಳ್ಳೆಯವನು – ನಾವು ನಿನ್ನನ್ನು ಪೂಜಿಸುತ್ತೇವೆ. ನಮಗೆ ತೊಂದರೆ ಕೊಡಬೇಡ, ನಮ್ಮ ಮನಸ್ಸು ಕೆಡಿಸುವ, ನಮ್ಮ ಸುಖ ನಿದ್ರೆಯನ್ನು ಹಾಳು ಮಾಡುವ ಯಾವ ಮಾತನ್ನೂ ಆಡಬೇಡ.

ಜೀಸಸ್ ನ ಕೊಲ್ಲುವುದು ಬುದ್ಧನನ್ನು ಪೂಜಿಸುವುದು ಎರಡೂ ಒಂದೇ. ಇಂಥ ಒಬ್ಬ ಮನುಷ್ಯ ಇದ್ದ ಎನ್ನುವದನ್ನ ಮರೆಸಲು ಜೀಸಸ್ ನ ಕೊಲ್ಲಲಾಯಿತು, ಏಕೆಂದರೆ ಆ ಮನುಷ್ಯ ನಿಜದ ಮನುಷ್ಯನಾಗಿದ್ದರೆ…… ಆ ಮನುಷ್ಯ ನಿಜದ ಮನುಷ್ಯನಾಗಿದ್ದ. ಅವನು ನಿಜದ ಮನುಷ್ಯ ಎಂದು ಸಾರಿ ಹೇಳುವುದಕ್ಕೆ ಅವನ ಇಡೀ ಇರುವಿಕೆ ಆನಂದ ಮತ್ತು ಆಶೀರ್ವಾದಗಳಿಂದ ತುಂಬಿಕೊಂಡಿತ್ತು. ಏಕೆಂದರೆ ಸತ್ಯವನ್ನು ನೋಡಲಾಗುವುದಿಲ್ಲ, ನಿಜದ ಮನುಷ್ಯನಿಂದ ಹೊರಬರುತ್ತಿರುವ ಪರಿಮಳವನ್ನು ಅನುಭವಿಸಬಹುದು.

ಇಂಥ ಮನುಷ್ಯನ ಸನ್ನಿಧಿಯಲ್ಲಿ ಜನ ಆನಂದವನ್ನು ಅನುಭವಿಸುತ್ತಿದ್ದಾರೆ ಎನ್ನುವುದು ಅವನು ನಿಜದ ಮನುಷ್ಯ ಎನ್ನುವುದಕ್ಕೆ ಸಾಕ್ಷಿ. ಇವನು ನಿಜದ ಮನುಷ್ಯ ಆದರೆ, ಆ ಗುಂಪು ನಿಜ ಅಲ್ಲ ಹಾಗಾದರೆ. ಆಗ ಇಡೀ ಗುಂಪಿಗೆ ಇಂಥ ಮನುಷ್ಯನನ್ನು ಸಹಿಸುವುದು ಅಸಾಧ್ಯವಾಗುತ್ತದೆ ; ಅವನು ಮುಳ್ಳು, ಅವನು ತ್ರಾಸದಾಯಕ. ಈಗ ಅವರ ಮುಂದೆ ಇರುವುದು ಎರಡೇ ಹಾದಿಗಳು, ಒಂದು ಆ ಮನುಷ್ಯನನ್ನು ನಾಶ ಮಾಡಿಬಿಡುವುದು, ಇನ್ನೊಂದು ಆ ಮನುಷ್ಯನನ್ನು ಪೂಜೆ ಮಾಡಲು ಶುರು ಮಾಡುವುದು, ಮತ್ತು ಹೇಳುವುದು ; ನೀನು ಇನ್ನೊಂದು ಜಗತ್ತಿನಿಂದ ಬಂದಿರುವವನು, ನೀನು ನಮ್ಮವನಲ್ಲ. ನೀನು ವಿಲಕ್ಷಣ, ನೀನು ಸಾಮಾನ್ಯ ನಿಯಮಗಳಿಗೆ ಸೇರುವವನಲ್ಲ. ನೀನು – ನೀನು. ನಾವು – ನಾವು. ನೀನು ಬಂದದ್ದು ಒಳ್ಳೆಯದಾಯ್ತು. ನಾವು ನಿನ್ನನ್ನ ಗೌರವಿಸುತ್ತೇವೆ ಆದರೆ ನಮ್ಮ ಶಾಂತಿಯನ್ನು ಹಾಳು ಮಾಡಬೇಡ.

ನಾವು ಬುದ್ಧನಿಗಾಗಿ ದೇವಾಲಯ ಕಟ್ಟಿಬಿಡುತ್ತೇವೆ. ಅವನು ಮಾರುಕಟ್ಟೆಗೆ ಬರುವುದು ನಮಗೆ ಇಷ್ಟವಿಲ್ಲ. ಅವನೇನಾದರು ಮಾರುಕಟ್ಟೆಗೆ ಬಂದನೆಂದರೆ ಅಲ್ಲೋಲಕಲ್ಲೋಲವಾಗಿಬಿಡುತ್ತದೆ.


Source: Osho / The Search, Chapter:: 4

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.