ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಕದಿಶಾ ಕಣಿವೆಯಲ್ಲಿ ಮಹಾ ನದಿ ಹರಿಯುವಲ್ಲಿ
ಎರಡು ತೊರೆಗಳು ಭೇಟಿಯಾದವು
‘ಇಲ್ಲೀವರೆಗೂ ನಿನ್ನ ದಾರಿ ಹೇಗಿತ್ತು?’
‘ಅಯ್ಯೋ, ಕಡು ಕಷ್ಟ
ನನ್ನ ನೀರೆತ್ತಿ ಗದ್ದೆಗೆ ಹಾಯಿಸುತಿದ್ದ ಏತ ಮುರಿದಿದ್ದವು
ಏತದಿಂದ ನೀರೆತ್ತುತಿದ್ದ ರೈತ ಸತ್ತಿದ್ದ
ಊರಿನ ಕೊಳೆ ಕೊಚ್ಚೆಯೆಲ್ಲ ಹೊತ್ತು
ಸುಡು ಬಿಸಿಲಲ್ಲಿ ಮಂಕಾಗಿ ತೆವಳಿ ಬಂದೆ
ನಿನ್ನ ಹಾದಿ ಹೇಗಿತ್ತು?’
‘ನನ್ನ ದಾರಿ ಬೇರೆ
ಬೆಟ್ಟ ಇಳಿದು ಬಂದೆ
ಹೂಗಳ ಪರಿಮಳವಿತ್ತು
ಮರಗಳ ದಟ್ಟ ನೆರಳಿನ ಹಾದಿ
ಗಂಡಸರು ಹೆಂಗಸರು ಮಕ್ಕಳು
ನನ್ನ ನೀರು ಕುಡಿದು ತಣಿದರು
ಮಕ್ಕಳು ನನ್ನೊಡನೆ ಆಡಿ ಕೇಕೆ ಹಾಕಿ ನಕ್ಕರು
ಪಾಪ, ನಿನ್ನ ದಾರಿ ಇಷ್ಟು ಚೆನ್ನಾಗಿರಲಿಲ್ಲವಲ್ಲಾ…’
ಆ ಕ್ಷಣದಲ್ಲಿ ಮಹಾ ನದಿಯ ಗಂಭೀರ ನಿನಾದ ಕೇಳಿಸಿತು
‘ಬನ್ನಿ ಬನ್ನಿ
ಕಡಲಿಗೆ ಸಾಗುತಿದೇವೆ ಬನ್ನಿ
ಮಾತು ಸಾಕು ಬನ್ನಿ
ಮಾತಾಡಬೇಡಿ ಇನ್ನು
ಸುಮ್ಮನೆ ಬನ್ನಿ
ನನ್ನೊಡನೆ ಸೇರಿ ನೀವೂ
ಕಡಲಿಗೆ ಹೋಗುತೇವೆ ನಾವು
ಬನ್ನಿ ಬನ್ನಿ ನನ್ನೊಡನೆ ಸೇರಿ
ಮರೆಯುತವೆ ನಿಮ್ಮೆಲ್ಲ ಅಲೆದಾಟ ತೊಳಲಾಟ
ಸುಖದ ದಾರಿ ದುಃಖದ ದಾರಿ ಇನ್ನಿಲ್ಲ
ಬನ್ನಿ ನೀವೂ ನಾನೂ ಎಲ್ಲರೂ
ಅಮ್ಮ ಕಡಲನ್ನು ಸೇರಿದ ಕ್ಷಣವೇ
ನಾವು ಸಾಗಿ ಬಂದ ದಾರಿ ಮರೆಯುತೇವೆ
[ಕದಿಶಾ: ಅರ್ಮೇನಿಯನ್ ಭಾಷೆಯಲ್ಲಿ ಪವಿತ್ರ ಕಣಿವೆ ಎಂಬ ಅರ್ಥದ ಪದ]

