ಪ್ರೀತಿಗೆ ಕೇವಲ ಒಂದು ವ್ಯಾಖ್ಯಾನ ಕೊದಲು ಸಾಧ್ಯವೇ ಇಲ್ಲ. ಅದೊಂದು ನಿಸ್ವಾರ್ಥ ಅನುಭೂತಿ ಅಂದುಬಿಡುವುದು ಸುಲಭ. ಆದರೆ ಪ್ರೀತಿಯನ್ನು ವಿವರಣೆಯ ಹೊರಗಿಡುವುದು, ಅದನ್ನು ನಿಭಾಯಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಒಂದು ಕಾರಣವಾಗುತ್ತದೆ ಅಷ್ಟೇ. ದಿನ ನಿತ್ಯದ ಬದುಕಲ್ಲಿ ಪ್ರೀತಿ ಪ್ರತಿಯೊಬ್ಬರ ಬದುಕಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಹೊಕ್ಕುಹೋಗುತ್ತಲೇ ಇರುವ ವಿದ್ಯಮಾನ. ಆದ್ದರಿಂದ ಪ್ರೀತಿ – ಪ್ರೇಮಕ್ಕೆ ವ್ಯಾಖ್ಯಾನ ಕೊಡಲೇಬೇಕಾಗುತ್ತದೆ… । ಚೇತನಾ ತೀರ್ಥಹಳ್ಳಿ
ಪ್ರೀತಿ ಅಥವಾ ಪ್ರೇಮ ಅಂದ್ರೆ ನಿಜವಾಗ್ಲೂ ಏನು? ಅದನ್ನ ದೈವಿಕ ಅಂತಾರೆ. ಮನುಷ್ಯರಾದ ನಾವ್ಯಾಕೆ ದೇವರ ಥರ ಪ್ರೀತಿ ಮಾಡ್ಬೇಕು? ಪ್ರೇಮಿಗಳು ಕಾಮಕ್ಕಿಳಿದರೆ ತಪ್ಪೇನು? ಪ್ರೇಮ ಯಾಕೆ ಆಧ್ಯಾತ್ಮಿಕ ಸಂಗತಿ ಆಗ್ಬೇಕು? ಕಾಮ ಯಾಕೆ ನಿಷೇಧಕ್ಕೋ ನಿರ್ಬಂಧಕ್ಕೋ ಒಳಪಡ್ಬೇಕು?
ನೋಡ್ದೇ ಇದ್ರೂ ಪರವಾಗಿಲ್ಲ, ಮಾತಾಡ್ದೇ ಇದ್ರೂ ಪರವಾಗಿಲ್ಲ, ಒಬ್ರನ್ನೊಬ್ರು ಗಾಢವಾಗಿ ಪ್ರೀತಿಸಿದ್ರೆ ಸಾಕು ಅಂತಾರಲ್ಲ; ನೋಡದೆ ಮಾಡದೆ ಪ್ರೀತಿಸೋಕೆ ಒಂದು ನಿರ್ದಿಷ್ಟ ವ್ಯಕ್ತೀನೇ ಯಾಕೆ ಬೇಕು! ಯಾರನ್ನ ಬೇಕಾದ್ರೂ ಪ್ರೀತಿಸಬಹುದು, ಎಷ್ಟು ಜನರನ್ನ ಬೇಕಾದ್ರೂ ಪ್ರೀತಿಸಬಹುದಲ್ಲ?
ಗಂಡು – ಹೆಣ್ಣಿನ ಪ್ರೀತಿ, ಇಬ್ಬರು ವ್ಯಕ್ತಿಗಳ ಮಧ್ಯದ ಪ್ರೀತಿ, ಕುಟುಂಬದೊಳಗಿನ ಪ್ರೀತಿ, ಸಮುದಾಯದ ಮೇಲಿನ ಪ್ರೀತಿ ಹೀಗೆ ಎಷ್ಟೊಂದು ಬಗೆಯ ಪ್ರೀತಿ ಇದೆ. ಈ ಎಲ್ಲ ಬಗೆಯ ಪ್ರೀತಿಗೂ ಒಂದೇ ನಿಯಮ ಅಪ್ಲೇ ಆಗುತ್ತಾ?
ಪ್ರೀತಿ ಯಾವಾಗ, ಯಾರ ಮೇಲೆ ಬೇಕಾದ್ರೂ ಆಗಬಹುದು. ಎಷ್ಟು ಸಲ, ಎಷ್ಟು ಜನರ ಮೇಲೆ ಬೇಕಾದ್ರೂ ಆಗಬಹುದು ಅಲ್ವಾ?
ಪ್ರೀತ್ಸೋದು ತಪ್ಪಾ? ಒಬ್ರನ್ನ ಪ್ರೀತಿಸಿದ್ಮೇಲೆ ಮತ್ತೊಬ್ರನ್ನ ಪ್ರೀತ್ಸೋದು ಅಪರಾಧಾನಾ?
ಒಬ್ಬೊಬ್ರನ್ನ ಒಂದೊಂದು ಡೈಮೆನ್ಶನ್ನಲ್ಲಿ ಪ್ರೀತಿಸೋದು ತಪ್ಪಾ?
ಪ್ರೀತಿಗೂ ನೀತಿಗೂ ಏನು ಸಂಬಂಧ?
ಎಷ್ಟೊಂದು ಅನುಮಾನ, ಎಷ್ಟೊಂದು ಗೊಂದಲ!
ಪ್ರೀತಿಗೆ ಕೇವಲ ಒಂದು ವ್ಯಾಖ್ಯಾನ ಕೊದಲು ಸಾಧ್ಯವೇ ಇಲ್ಲ. ಅದೊಂದು ನಿಸ್ವಾರ್ಥ ಅನುಭೂತಿ ಅಂದುಬಿಡುವುದು ಸುಲಭ. ಆದರೆ ಪ್ರೀತಿಯನ್ನು ವಿವರಣೆಯ ಹೊರಗಿಡುವುದು, ಅದನ್ನು ನಿಭಾಯಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಒಂದು ಕಾರಣವಾಗುತ್ತದೆ ಅಷ್ಟೇ. ದಿನ ನಿತ್ಯದ ಬದುಕಲ್ಲಿ ಪ್ರೀತಿ ಪ್ರತಿಯೊಬ್ಬರ ಬದುಕಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಹೊಕ್ಕುಹೋಗುತ್ತಲೇ ಇರುವ ವಿದ್ಯಮಾನ. ಆದ್ದರಿಂದ ಪ್ರೀತಿ – ಪ್ರೇಮಕ್ಕೆ ವ್ಯಾಖ್ಯಾನ ಕೊಡಲೇಬೇಕಾಗುತ್ತದೆ.
ದಿನನಿತ್ಯದ ಬದುಕಲ್ಲಿ ಸತ್ಯ ಹೇಗೆ ಸಾಪೇಕ್ಷವೋ ಹಾಗೇ ಪ್ರೀತಿಯೂ ಸಾಪೇಕ್ಷ. ನೀರನ್ನು ಜೀವ ರಕ್ಷಕವೆಂದು ಪಾಪಾಸ್ ಕಳ್ಳಿಗೆ ಸುರಿದರೆ ಅದು ಕೊಳೆತುಹೋಗುತ್ತದೆಯಲ್ಲವೆ? ಇಂಥಾ ಹಲವಾರು ನಿದರ್ಶನಗಳು ನೀರು ಎಲ್ಲರ ಪಾಲಿಗೂ ಜೀವರಕ್ಷಕ ಅಲ್ಲವೆನ್ನಲು ಸಾಕು.
ಈಜು ಬರದ ಯಾವುದೇ ಜೀವಿ ನೀರಿಗೆ ಬಿದ್ದರೆ ಸಾಯುತ್ತದೆ, ನೀರಿನಲ್ಲೇ ಇರುವ ಮೀನು ಹೊರಗೆ ಬಿದ್ದರೆ ಸಾಯುತ್ತದೆ. ಹಾಗೇ ಪ್ರೀತಿ ಒಂದು ಸಂಬಂಧದಲ್ಲಿ ಬೆಳವಣಿಗೆಯ ಮೆಟ್ಟಿಲಾದರೆ, ಇನ್ನೊಂದು ಸಂಬಂಧದಲ್ಲಿ ಅಡ್ಡಗಾಲು. ಒಂದು ಸಂಬಂಧದಲ್ಲಿ ಪ್ರೀತಿ ಏನನ್ನು ಬಯಸುತ್ತದೋ ಮತ್ತೊಂದು ಸಂಬಂಧದಲ್ಲಿ ಅದನ್ನು ನಿರಾಕರಿಸುವುದು.
ಇನ್ನೂ ಮಜದ ವಿಷಯವೆಂದರೆ, ಒಂದು ಥರದದ ಪ್ರೀತಿಯನ್ನು ಎಲ್ಲರ ಮುಂದೆ ತೋರಿಸಿಕೊಳ್ಳಬಹುದು, ಮತ್ತೊಂದು ಥರದ ಪ್ರೀತಿಯನ್ನು ಎಲ್ಲೂ ತೋರಿಸಿಕೊಳ್ಳಲಾಗದು, ತೋರಿಸಿಕೊಳ್ಳಬಾರದು! ಎಷ್ಟೊಂದು ಗೊಂದಲ!! ಯಾಕೆ ಹೀಗೆ?
ಕರುಳ ಸಂಬಂಧದ ಪ್ರೀತಿ, ಸಮುದಾಯ ಜೀವಿಯಾಗಿ ಪ್ರೀತಿ ಮತ್ತು ಸಾಂಗತ್ಯದ ಪ್ರೀತಿ – ಈ ಮೂರು ಎಳೆಗಳನ್ನು ಬೇರೆಬೇರೆ ಮಾಡಿಕೊಂಡು ಸಮಾಜದ ನಂಬಿಕೆಗಳು ಹಾಗೂ ವೈಯಕ್ತಿಕ ವಿವೇಚನೆಯ ಹಣೆಗೆಯಿಂದ ಸಿಕ್ಕು ಬಿಡಿಸದೆ ಹೋದರೆ, ಮೇಲಿನ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗೋದಿಲ್ಲ.
(ಮುಂದುವರಿಯುವುದು…)


[…] ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/11/19/cheprema/ […]
LikeLike