ಫಸ್ಟ್ ಲವ್ (ಭಾಗ 1) : ಪ್ರೇಮದ ವ್ಯಾಖ್ಯಾನ #2

ನಿಮ್ಮ ಮೊದಲ ಪ್ರೀತಿ / ಫಸ್ಟ್ ಲವ್ ನಿಜಕ್ಕೂ ಯಾರು? ಇದರ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀರಾ? ~ ಚೇತನಾ ತೀರ್ಥಹಳ್ಳಿ

ನಿಮ್ಮ ಫಸ್ಟ್ ಲವ್ ಯಾರು?

________________________________________

ನಿಮಗೆ ಪ್ರೀತಿಯ ಅನುಭವ ಆಗಿದ್ದು ಯಾವಾಗ?

________________________________________

ನಿಮ್ಮ ಮೊದಲ ಪ್ರೀತಿಗೆ ನಿಮ್ಮ ಪ್ರತಿಕ್ರಿಯೆ ಏನು?

________________________________________

ಮೊದಲು ಈ ಪ್ರಶ್ನೆಗಳಿಗೆ ಉತ್ತರ ತುಂಬಿ, ಆಮೇಲೆ ಮುಂದೆ ಓದಿ.


ನಮ್ಮಲ್ಲಿ 99% ಜನ ಫಸ್ಟ್ ಲವ್ ಅಂದಕೂಡಲೆ ಆಕರ್ಷಣೆಯಿಂದ ಹುಟ್ಟಿಕೊಳ್ಳುವ ಮೊದಲ ಪ್ರೀತಿಯ ಬಗ್ಗೆಯೇ ಯೋಚಿಸೋದು! ನೀವೂ ಅದನ್ನೇ ಯೋಚಿಸಿದ್ದಿರಿ ತಾನೆ!?
ನಿಜಕ್ಕೂ ಸೆಳೆತದಿಂದ ಹುಟ್ಟಿಕೊಂಡ ಪ್ರೀತಿಯೇ ನಮ್ಮ ಮೊದಲ ಪ್ರೀತಿಯೇ?
ಅಲ್ಲ!

ಕೌಟುಂಬಿಕ ವ್ಯವಸ್ಥೆಯಲ್ಲಿರುವ ಯಾವುದೇ ವ್ಯಕ್ತಿಯ ಮೊದಲ ಪ್ರೀತಿ ಮನೆಯೊಳಗೆ, ಕರುಳು ಬಳ್ಳಿಯ ಹೊಕ್ಕುಳಲ್ಲೇ ಮೊಳೆತಿರುತ್ತದೆ. ನಮ್ಮನ್ನು ಹೆತ್ತ ತಾಯಿ ನಮ್ಮ ಮೊದಲ ಪ್ರೀತಿಯಾದರೆ, ನಮ್ಮ ಹುಟ್ಟಿಗೆ ಕಾರಣನಾದ ತಂದೆ ನಮ್ಮ ಎರಡನೇ ಪ್ರೀತಿ. ಉಳಿದಂತೆ ನಮ್ಮನ್ನು ಲಾಲಿಸಿ, ಪಾಲಿಸಿ, ಅಕ್ಕರೆ ತೋರುವ ಮನೆಮಂದಿ, ಸಹಾಯಕರು, ಸಹಪಾಠಿಗಳು, ಮೊದಲ ಅಕ್ಷರ ತಿದ್ದಿ ಬರೆಸಿದ ಶಿಕ್ಷಕರು ಇವರೆಲ್ಲರೂ ನಮ್ಮ ಪ್ರೀತಿಯ ವ್ಯಾಪ್ತಿಗೆ ಬರುವವರೇ.

ನನಗೆ ನನ್ನ ಅಮ್ಮ / ಅಪ್ಪ / ಗೆಳೆಯರೆಂದರೆ ತುಂಬಾ ಪ್ರೀತಿ ಅನ್ನುತ್ತೇವಲ್ಲವೆ? ಹಾಗಾದರೆ ನಿಮ್ಮ ಮೊದಲ ಪ್ರೀತಿ ಯಾರು ಅಂದರೆ ನೀವು ಸೆಳೆತದ ಪ್ರೀತಿಯತ್ತಲೇ ಬೆಟ್ಟು ಮಾಡುವುದು ಯಾಕೆ?

ನಮ್ಮಲ್ಲಿ ಮೊದಲ ಬಾರಿಗೆ ಪ್ರೀತಿಯ ಭಾವನೆ ಬಿತ್ತುವುದು ನಮ್ಮ ತಾಯಂದಿರು. ಪ್ರೀತಿಯ ಎಲ್ಲ ಲಕ್ಷಣ ಪರಿಚಯಿಸುವುದೂ ತಾಯಂದಿರೇ.

ತಾಯಿಗೆ ತನ್ನ ಮಕ್ಕಳನ್ನು ಪ್ರೀತಿಸಲು ಈ ಜೀವ ನನ್ನ ಭಾಗ, ನನ್ನ ದಾಂಪತ್ಯದ ಕುರುಹು, ನನ್ನ ಮನೆತನದ ನಿರಂತರತೆ ಕಾಯ್ದಿಡುವ ಕೊಂಡಿ ಎಂದೆಲ್ಲ ಕಾರಣವಿರುತ್ತದೆ. ಅವಳು ತನ್ನ ಮಕ್ಕಳಿಗಾಗಿ ಉಪವಾಸ ಇರುತ್ತಾಳೆ. ಮಕ್ಕಳಿಗೆ ಉಣಿಸಲು ಹಾಲು ಹೆಚ್ಚಲೆಂದು ಪಥ್ಯ ಮಾಡುತ್ತಾಳೆ. ನಿದ್ದೆ ಬಿಡುತ್ತಾಳೆ. ಎಷ್ಟೋ ಕುಟುಂಬಗಳಲ್ಲಿ ತಾಯಿ ತನ್ನ ಪಾಲಿನ ಸುಖ ಸಂತೋಷದ ಬಹುಪಾಲು ತನ್ನ ಮಕ್ಕಳಿಗೆ ನೀಡಿ ತಾನು ಬರಿದಾಗುತ್ತಾಳೆ. ಅವಳು ಈ ಎಲ್ಲವನ್ನೂ ಮಾಡುವುದು ತನ್ನ ಮಕ್ಕಳ ಮೇಲಿನ ಪ್ರೀತಿಯಿಂದಲೇ ಅಲ್ಲವೆ? ಮಕ್ಕಳು ಒಂದು ಕ್ಷಣ ಕಣ್ಮರೆಯಾದರೂ ಅವಳ ಜೀವ ಹಾರುವುದು ಈ ಪ್ರೀತಿಯಿಂದಾಗೇ ತಾನೆ?

ನೀವು ಹೇಳಬಹುದು. ಇದು ಪ್ರೀತಿಯಲ್ಲ, ಮಮಕಾರ. ಅಥವಾ ವಾತ್ಸಲ್ಯ ಎಂದು.
ಇವೆಲ್ಲ ಕೇವಲ ಶಬ್ದ ಚಮತ್ಕಾರವಷ್ಟೇ.

ಮಮಕಾರ ಅಂದರೆ, ‘ಮಮ’ – ನನ್ನದು ಅನ್ನುವ ಭಾವನೆ. ನನ್ನದಾಗಿರುವ ಕಾರಣಕ್ಕೆ ಹುಟ್ಟಿಕೊಳ್ಳುವ ಪ್ರೀತಿ. ವಾತ್ಸಲ್ಯ ಅಂದರೆ, ‘ವತ್ಸ’ ಮಗ (ಅಥವಾ ಮಗಳು) – ಅವನ / ಳ ಮೇಲಿನ ಪ್ರೀತಿಯೇ ವಾತ್ಸಲ್ಯ. ತಂದೆ ತಾಯಂದಿರು ಮಕ್ಕಳನ್ನು ಪ್ರೀತಿಸುವುದು ಅವರು ತಮಗೆ ಸೇರಿದವರು ಅನ್ನುವ ಕಾರಣದಿಂದ. ಈ ಪ್ರೀತಿಯನ್ನು ಯಾವ ಪದದಿಂದ ಕರೆದರೂ ಅದು ಪ್ರೀತಿಯೇ.

ನಮ್ಮ ಕುಟುಂಬದವರಾದರೂ ಅಷ್ಟೇ. ನಮ್ಮ ರಕ್ತಕ್ಕೆ, ನಮ್ಮ ವಂಶಕ್ಕೆ ಸೇರಿದವರು ಅನ್ನುವ ಭಾವನೆಯಿಂದ ನಮ್ಮ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ. ಆ ಪ್ರೀತಿಯನ್ನು ಕಾಳಜಿಯ ಮೂಲಕ ತೋರಿಸಿಕೊಳ್ಳುತ್ತಾರೆ.

ನಮ್ಮವರೆನ್ನುವ ಕಾರಣ ಇರುವುದರಿಂದಲೇ ಹುಟ್ಟಿಕೊಳ್ಳುವ ಈ ಪ್ರೀತಿಗೆ ಹೆಚ್ಚು ಮಹತ್ವ ಇರುವುದಿಲ್ಲ. ಆದ್ದರಿಂದಲೇ ಪ್ರೀತಿ, ಮೊದಲ ಪ್ರೀತಿ ಇತ್ಯಾದಿ ಪ್ರಸ್ತಾಪ ಬಂದಾಗ ನಮಗೆ ಲೋಕರೂಢಿಯ ಅರ್ಥದ ಪ್ರೀತಿ ನೆನಪಾಗುವುದು ಸರಿಯಾಗಿದೆ – ಅನ್ನುವ ವಾದ ಮುಂದಿಡಬಹುದು. ಆದರೆ ಗಂಡು – ಹೆಣ್ಣಿನ ನಡುವೆ ಉಂಟಾಗುವ ಈ ಲೋಕರೂಢಿಯ ‘ಪ್ರೀತಿ’ ಮೂಡುವುದೂ ಕಾರಣದ ಕೈಹಿಡಿದುಕೊಂಡೇ! ಅದನ್ನು ಈಗಾಗಳೇ ನಾವು ಸೆಳೆತದ ಪ್ರೀತಿ ಎಂದು ಕರೆದಿದ್ದೇವೆ. ಗಂಡು – ಹೆಣ್ಣಿನ ನಡುವಿನ ಪ್ರೀತಿಗೆ ಆಕರ್ಷಣೆಯ ಕಾರಣ ಇರುತ್ತದೆ. ಮತ್ತು ಈ ಕಾರಣ ನಮ್ಮ ನೋಟ, ಅಭಿರುಚಿ, ಉದ್ದೇಶ ಮತ್ತು ಬಯಕೆಯಲ್ಲಿ ಅಡಗಿರುತ್ತದೆ.


(ಮುಂದುವರಿಯುವುದು…)

ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/11/19/cheprema/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ