ಉದಾರ ಚರಿತರ ಸಂಖ್ಯೆಯೇ ಹೆಚ್ಚು…

ಹೆಚ್ಚು ಧನಾತ್ಮಕ ವ್ಯಕ್ತಿಯಾಗುವುದೆಂದರೆ, ನಮ್ಮ ಸುತ್ತಲಿನ ಬದುಕಿನಲ್ಲಿ ಖುಶಿಯ ಮತ್ತು ಒಳ್ಳೆಯ ಸಂಗತಿಗಳನ್ನು ಗುರುತಿಸುವುದು, ಜನರಲ್ಲಿನ ಒಳ್ಳೆಯತನವನ್ನು ಗುರುತಿಸುವುದು… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ

ಈ ಜಗತ್ತಿನಲ್ಲಿ ನಮ್ಮ ಸುತ್ತ ಒಳ್ಳೆಯ ಜನರಿದ್ದಾರೆ ಎನ್ನುವುದನ್ನ ಮರೆತುಬಿಡುವುದು ಬಹಳ ಸುಲಭ, ಅದೂ ಕೂಡ ವಿಶೇಷವಾಗಿ ನಮ್ಮ ಸುತ್ತ ಕೆಟ್ಟ ಜನರಿಗೆ ಮಾನ್ಯತೆ ಹೆಚ್ಚು ಸಿಗುತ್ತಿರುವಾಗ. ಕೆಲವೊಮ್ಮೆ ಅನಿಸುತ್ತದೆ ಎಲ್ಲಿ ಹೋದರು ಈ ಒಳ್ಳೆಯ ಜನರೆಲ್ಲ ಎಂದು ಆದರೆ, ಆಮೇಲೆ ಗೊತ್ತಾಗುತ್ತದೆ ಅವರೆಲ್ಲ ನಮ್ಮ ಸುತ್ತ ಮುತ್ತಲೇ ಇರುವುದು.

ಪತ್ರಿಕೆ, ಟಿವಿ, ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ನಮ್ಮ ಜಗತ್ತು ಕೋಪೋದ್ರಿಕ್ತ, ಆಕ್ರಮಣಕಾರಿ, ಸ್ವಾರ್ಥಿ ಜನಗಳಿಂದ ತುಂಬಿಹೋಗಿದೆಯೆಂದು ಅನಿಸಬಹುದು. ಎಲ್ಲಿ ನೋಡಿದಲ್ಲಿ ಭ್ರಷ್ಟ ರಾಜಕಾರಣಿಗಳಿಂದ ಹಿಡಿದು ಕೀ ಬೋರ್ಡ ಕುಟ್ಟವ ಟ್ರೊಲ್ ಗಳ ವರೆಗೆ ಕೆಟ್ಟ ಜನ ತುಂಬಿಕೊಂಡಿದ್ದಾರೆಂದು, ಜಗತ್ತಿನಿಂದ ಒಳ್ಳೆಯತನ ಮಾಯವಾಗಿದೆಯೆಂದು ಅನಿಸಬಹುದು. ಆದರೆ ಹೀಗೆ ಯೋಚಿಸುವುದು ತಪ್ಪಾಗುತ್ತದೆ. ಏಕೆಂದರೆ ವಾಸ್ತವದಲ್ಲಿ ನಮ್ಮ ಸುತ್ತ ತುಂಬ ಒಳ್ಳೆಯ, ಔದಾರ್ಯದ ಜನ ಇದ್ದಾರೆ ಮತ್ತು ನಿಜದಲ್ಲಿ ಇವರ ಸಂಖ್ಯೆ ಕೆಟ್ಟ ಜನರಿಗಿಂತಲೂ ಹೆಚ್ಚಾಗಿದೆ.

ನೆನಪಿರಲಿ ನಿಮಗೆ, ಈ ಜಗತ್ತಿನಲ್ಲಿ ಅದ್ಭುತ ಕೆಲಸಗಳನ್ನು ಮಾಡುತ್ತ ಪ್ರೀತಿ ಅಂತಃಕರಣಗಳನ್ನು ಪ್ರತಿದಿನ ಸುತ್ತಲೂ ಹಬ್ಬಿಸುವ ಒಳ್ಳೆಯ ಹೃದಯ ಅಸಂಖ್ಯಾತ ಜನರಿದ್ದಾರೆ. ಅವರು ಸುದ್ದಿಯಲ್ಲಿರುವುದಿಲ್ಲ, ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸುವುದಿಲ್ಲ. ಅವರು ಸುಮ್ಮನೇ ಮಾಡುವ ಪರಹಿತದ ಕೆಲಸಗಳು ಮತ್ತು ಶಾಂತಿ ಸಮಾಧಾನ ತುಂಬಿದ ಅವರ ವರ್ತನೆ ನಮ್ಮ ಸಮಾಜವನ್ನು ಎತ್ತರಕ್ಕೇರಿಸುತ್ತಿರುತ್ತದೆ. ಅಂಥ ಜನ ನೀವಾಗಿದ್ದರೆ ನಮ್ಮ ಧನ್ಯವಾದಗಳು ನಿಮಗೆ. ಈ ಜಗತ್ತಿನಲ್ಲಿ ಸಣ್ಣದಾಗಿಯಾದರೂ ಬೆಳಕಿಗೆ ಕಾರಣರಾಗಿರುವ ನಿಮಗೆ ನಮ್ಮ ಪ್ರೀತಿ ಮತ್ತು ಗೌರವಗಳು.

ಹೆಚ್ಚು ಧನಾತ್ಮಕ ವ್ಯಕ್ತಿಯಾಗುವುದೆಂದರೆ, ನಮ್ಮ ಸುತ್ತಲಿನ ಬದುಕಿನಲ್ಲಿ ಖುಶಿಯ ಮತ್ತು ಒಳ್ಳೆಯ ಸಂಗತಿಗಳನ್ನು ಗುರುತಿಸುವುದು, ಜನರಲ್ಲಿನ ಒಳ್ಳೆಯತನವನ್ನು ಗುರುತಿಸುವುದು. ಕೆಲ ಜನರ ಮಾತುಗಳು ಮತ್ತು ಕ್ರಿಯೆಗಳು ನಮ್ಮ ಅಸಮಾಧಾನಕ್ಕೆ ಕಾರಣವಾಗಿರುವಾಗ ಈ ಜಗತ್ತು ಕೆಟ್ಟು ಹೋಗಿದೆ ಎಂದು ನಮಗೆ ಅನಿಸಬಹುದು ಆದರೆ ಬಹಳಷ್ಟು ಸಂಖ್ಯೆಯಲ್ಲಿ ನಮ್ಮ ಸುತ್ತ ಒಳ್ಳೆಯ ಜನರಿದ್ದಾರೆ, ಅವರು ಸುದ್ದಿಯಲ್ಲಿ ಇಲ್ಲದಿರಬಹುದು ಆದರೆ ಅವರ ಕೆಲಸ, ವರ್ತನೆ, ಮಾತು ಈ ಜಗತ್ತನ್ನು ಸಹನಿಯಗೊಳಿಸುತ್ತಿವೆ.

ಯಾವತ್ತೂ ಬೇಸರದಲ್ಲಿ ಧನಾತ್ಮಕತೆಯನ್ನ ಹೊಂದುವುದನ್ನ, ಖುಶಿಯಾಗಿರುವುದನ್ನ, ಒಳ್ಳೆಯ ಕೆಲಸ ಮಾಡುವುದನ್ನ, ಸುತ್ತಲಿನ ಜನರಲ್ಲಿ ಒಳ್ಳೆಯತನ ಗುರುತಿಸುವುದನ್ನ ನಿಲ್ಲಿಸಬೇಡಿ. ದಯವಿಟ್ಟು ನಂಬಿ ನಿಮ್ಮ ಸುತ್ತ ಒಳ್ಳೆಯ ಜನರಿದ್ದಾರೆ. ನಿಮ್ಮ ಸುತ್ತ ಯಾವಾಗಲೂ ಒಳ್ಳೆಯದನ್ನ ಯೋಚಿಸುವ, ಒಳ್ಳೆಯ ಕೆಲಸ ಮಾಡುವ ಖುಶಿಯ ಜನ ತುಂಬಿಕೊಂಡಿರಲಿ. ನಿಮ್ಮನ್ನು ಹಿಂದೆ ತಳ್ಳುವ ನೆಗೆಟಿವ್ ಜನರಿಂದ ದೂರವಿರಿ. ನೀವು ಖುಶಿಯಾಗಿದ್ದಾರೆ ಮಾತ್ರ ನೀವು ಇನ್ನೊಬ್ಬರನ್ನು ಖುಶಿಯಾಗಿಡುವುದು ಸಾಧ್ಯ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.