ಫಸ್ಟ್ ಲವ್ (ಭಾಗ 2) : ಪ್ರೇಮದ ವ್ಯಾಖ್ಯಾನ #3

ಅಮ್ಮ ನಮಗೆ ನಮ್ಮ ಫಸ್ಟ್ ಲವ್, ಆದರೆ ಅವಳಿಗೆ ನಾವು ಫಸ್ಟ್ ಲವ್ ಅಲ್ಲ. ಅವಳಿಗೆ ನಾವು ಪ್ರಯಾರಿಟಿ ಆಗಬಹುದು… ಅಮ್ಮನಿಗೆ ನಾವು ಮೊದಲ ಆದ್ಯತೆ ಆಗಬಹುದೇ ಹೊರತು ಮೊದಲ ಪ್ರೀತಿಯಲ್ಲ… । ಚೇತನಾ ತೀರ್ಥಹಳ್ಳಿ

ಗಾಳಿ ನಮಗೆ ಏನಾಗಿರುತ್ತೋ
ಗಾಳಿಗೆ ನಾವು ಅದಲ್ಲ.
ನೀರು ನಮಗೆ ಏನಾಗಿರುತ್ತೋ
ನೀರಿಗೆ ನಾವು ಅದಲ್ಲ.

ಸಂಬಂಧಗಳೂ ಹಾಗೇನೇ;
ನಮಗೆ ಯಾರು ಏನಾಗಿರುತ್ತಾರೋ
ಅವರಿಗೆ ನಾವು ಅದಲ್ಲ!

ತಂದೆ – ತಾಯಿಯ, ಕುಟುಂಬದ ಪ್ರೀತಿ ನಮಗೆ ವಿಶೇಷವಾಗಿ ತೋರದೆ ಇರುವುದು ಅದು ನಾವು ಬೇಕೆಂದರೂ ಬೇಡವೆಂದರೂ ಸಿಕ್ಕೇಸಿಗುವ ಕಾರಣಕ್ಕೆ (ಕೆಲವು ಅಪವಾದಗಳ ಹೊರತಾಗಿ). ಅದು ನಿಯತಿ ನಮಗೆ ಕೊಡಮಾಡಿರುವ ಕ್ರಾಸ್ಡ್ ಚೆಕ್. ಆದರೆ ಈ ಅನುಭೋಗಕ್ಕೆ ನಾವು ಸೂಕ್ತ ಟ್ಯಾಕ್ಸ್ ಕೂಡ ತೆರಬೇಕಾಗುತ್ತದೆ. ನಮ್ಮ ರಗಳೆ ಶುರುವಾಗೋದು ಇಲ್ಲಿ. ಕುಟುಂಬದ ಪ್ರೀತಿ ನಮಗೆ ಪ್ರೀತಿಯಾಗಿ ಕಾಣದೆ ಹೋಗುವುದು, ಅದೊಂದು ಹೊರೆಯಂತೆ, ಅದೊಂಡು ಜವಾಬ್ದಾರಿಯಂತೆ, ಹೆತ್ತವರ ಕರ್ತವ್ಯದಂತೆಲ್ಲ ಅನಿಸತೊಡಗುವುದು ಈ ‘ಋಣ ತೀರಿಸುವ’ ಹೊಣೆಯ ಕಾರಣಕ್ಕೇ.

ಈ ಕಾರಣಕ್ಕೇ ನಮ್ಮ ಪಾಲಿಗೆ ನಮ್ಮ ಮೊದಲ ಪ್ರೀತಿ, ಮೊದಲ ಪ್ರೀತಿಯಾಗಿ ಉಳಿಯೋದಿಲ್ಲ. ನಮ್ಮ ಕುಟುಂಬದ ಬಗ್ಗೆ ಎಷ್ಟೇ ಅಟ್ಯಾಚ್ಮೆಂಟ್ ಇದ್ದರೂ, ಕುಟುಂಬದ ಜನರೊಟ್ಟಿಗೆ ಎಷ್ಟೇ ಹೊಂದಿಕೊಂಡಿದ್ದರೂ, ಕಷ್ಟಸುಖಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದರೂ ಇವೆಲ್ಲ ‘ಋಣದ ಭಾಗ’ವೆಂಬ ಬಲವಾದ ನಂಬಿಕೆ ಅದನ್ನು ಪ್ರೀತಿಯೆಂದು ಕರೆಯಲು ನಿರಾಕರಿಸತೊಡಗುತ್ತದೆ.

ಹಾಗಾದರೆ ತಂದೆ ತಾಯಿ ಮತ್ತು ಕುಟುಂಬದ ಪ್ರೀತಿಯನ್ನು ಕೊನೆವರೆಗೂ ಪ್ರೀತಿಯಾಗೇ ಕಾಯ್ದಿಟ್ಟುಕೊಳ್ಳಲು ದಾರಿಯೇ ಇಲ್ಲವೆ?
ಖಂಡಿತಾ ಇದೆ.
ಆದರೆ ಇದು ಎರಡೂ ಕಡೆಯಿಂದ ಆಗಬೇಕಾದ ಪ್ರಯತ್ನ.

ನಮ್ಮ ಪಾಲಿಗೆ ನಮ್ಮ ಅಮ್ಮ ಮೊದಲ ಪ್ರೀತಿ ಆಗಿರಬಹುದು, ಆದರೆ ಅಮ್ಮನಿಗೆ ಅವಳ ಅಮ್ಮ ಮೊದಲ ಪ್ರೀತಿ ಆಗಿರುತ್ತಾಳೆ. ಮತ್ತು ಗಂಡ ಜೀವಮಾನದ ಪ್ರೀತಿ ಆಗಿರುತ್ತಾನೆ. ನಾವು ಹುಟ್ಟಿದ ಮೇಲೆ ಅವಳು ನಮ್ಮ ಮೇಲೂ ಪ್ರೀತಿ ಬೆಳೆಸಿಕೊಂಡಿರುತ್ತಾಳೆ.

ಅಮ್ಮ ನಮಗೆ ನಮ್ಮ ಫಸ್ಟ್ ಲವ್, ಆದರೆ ಅವಳಿಗೆ ನಾವು ಫಸ್ಟ್ ಲವ್ ಅಲ್ಲ. ಅವಳಿಗೆ ನಾವು ಪ್ರಯಾರಿಟಿ ಆಗಬಹುದು… ಅಮ್ಮನಿಗೆ ನಾವು ಮೊದಲ ಆದ್ಯತೆ ಆಗಬಹುದೇ ಹೊರತು ಮೊದಲ ಪ್ರೀತಿಯಲ್ಲ.  

ಅಮ್ಮ ನಮ್ಮನ್ನು ಬೆಳೆಸುವಾಗ ನಮ್ಮ ಜೊತೆಗೇ ತನ್ನ ಕನಸುಗಳಿಗೂ ನೀರುಣಿಸುತ್ತ ಇರುತ್ತಾಳೆ. ನಮ್ಮ ಪಾಲನೆಯಲ್ಲಿ ಅಮ್ಮನಿಗೆ ಜೊತೆಯಾಗುವ ಅಪ್ಪ ತನ್ನಿಂದ ಮಾಡಲಾಗದ್ದನ್ನೆಲ್ಲ ನಮ್ಮಿಂದ ಮಾಡಿಸುವ ಯೋಜನೆ ಹಾಕುತ್ತಿರುತ್ತಾನೆ. ಅಥವಾ ಸಮಾಜದಲ್ಲಿ ತನ್ನ ಸ್ಥಾನ ಮಾನ ಹೆಚ್ಚಿಸುವ, ನೆಂಟರಿಷ್ಟರ ನಡುವೆ ‘ತಲೆ ಎತ್ತುವಂತೆ’ ಮಾಡುವ ಜವಾಬ್ದಾರಿಯನ್ನೆಲ್ಲ ನಮ್ಮ ಮೇಲೆ ಹೊರಿಸುತ್ತಾ ಇರುತ್ತಾನೆ.

ಅಪ್ಪ ಅಮ್ಮನ ಈ ನಿರೀಕ್ಷೆಗಳಿಗೆ ‘ಮಮಕಾರ’ವೇ ಕಾರಣ. ಇದು ನನ್ನದು, ನನಗೆ ಸೇರಿದ ಜೀವ, ಆದ್ದರಿಂದ ನನಗೆ ಬೇಕಿರುವುದನ್ನು ಇದು ಮಾಡಬೇಕಾಗಿದೆ, ನಾನು ನನ್ನಲ್ಲ ಪ್ರೀತಿಯನ್ನೂ ಕಾಳಜಿಯನ್ನೂ ಈ ಜೀವಕ್ಕೆ ಎರೆಯುತ್ತೇನೆ, ಈ ಜೀವ ನನ್ನ ಕನಸು ಈಡೇರಿಸಲಿ – ಎಂದವರು ಯೋಚಿಸುತ್ತಾರೆ.

ಅದರ ಬದಲು, ತಂದೆ ತಾಯಿಯರು “ನನ್ನಿಂದ ರೂಪ ತಳೆದ ಈ ಜೀವ ತನ್ನ ಬದುಕು ಕಟ್ಟಿಕೊಳ್ಳಲಿ, ತನ್ನ ಬಯಕೆಯಂತೆ ಬಾಳಲಿ, ತನಗಿಷ್ಟ ಬಂದ ದಾರಿ ನಡೆಯಲಿ” ಎಂದು ಯೋಚಿಸಿದರೆ, ಅದಕ್ಕೆ ತಕ್ಕಂತೆ ನಡೆದುಕೊಂಡರೆ ಅವರ ಪ್ರೀತಿ ಮಮಕಾರದ ಸ್ವಾರ್ಥ ಕಳಚಿಕೊಂಡು ಅಪ್ಪಟ ಪ್ರೀತಿಯಾಗಿಯೇ ಉಳಿಯುತ್ತದೆ. ಮತ್ತು ಈ ಪ್ರೀತಿ, ಸೆಳೆತದ ಪ್ರೀತಿಯ ಜೊತೆ ಸ್ಪರ್ಧೆಗಿಳಿಯುವ ಗೋಜಿಗೆ ಹೋಗುವುದಿಲ್ಲ. ಮಕ್ಕಳ ಬದುಕಿನ ಮೇಲೆ ಋಣಭಾರ ಹೊರಿಸುವುದೂ ಇಲ್ಲ. ಇಂಥವರ ಮಕ್ಕಳು ಸಹಜವಾಗೇ ತಮ್ಮ  ತಾಯ್ತಂದೆಯರನ್ನು ಪ್ರೀತಿಸುತ್ತಾರೆ ಮತ್ತು ಆ ಪ್ರೀತಿಗೆ ಬೇರೇನೂ ಹೆಸರು ಹಚ್ಚಲು ಹೋಗುವುದಿಲ್ಲ.


ಮುಂದುವರಿಯುವುದು….
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/11/20/prema-11/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ