ಎಂ ಎಂ ಕಲ್ಬುರ್ಗಿಯವರು ಹೇಳಿದ ‘ಹರಕಂಗಿ ಫಕೀರ’ನ ಕತೆ… । ಚಿದಂಬರ ನರೇಂದ್ರ
ಡಿ.ಸಿ. ಪಾವಟೆಯವರು ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ ಕರ್ನಾಟಕ ವಚನ ಪಿತಾಮಹ ಅಂತ ಹೆಸರಾಗಿದ್ದ ಫ.ಗು.ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ಕೊಡಲಾಗಿತ್ತು. ಅದೇ ದಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ಕೂಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದರು. ಘಟಿಕೋತ್ಸವದ ಸಮಾರಂಭ ಮುಗಿದ ಮೇಲೆ ಅತಿಥಿಗಳು ಮತ್ತು ಪ್ರಶಸ್ತಿ ವಿಜೇತರಿಗಾಗಿ ಭೋಜನಕೂಟ ಏರ್ಪಡಿಸಲಾಗಿತ್ತು. ಮಾಸ್ತಿ ಮೊದಲಾದ ಅತಿಥಿಗಳು ತಮ್ಮ ಘಟಿಕೋತ್ಸವದ ಕೋಟು ತೆಗೆದಿಟ್ಟು ಊಟಕ್ಕೆ ಬಂದರು. ಆದರೆ ಹಳಕಟ್ಟಿಯವರು ಮಾತ್ರ ಕೋಟು, ತಲೆಗೆ ಸುತ್ತಿದ ರುಮಾಲು ಹಾಕಿಕೊಂಡೇ ಊಟಕ್ಕೆ ಕುಳಿತರು. ಯುನಿವರ್ಸಿಟಿಯ ರಿಜಿಸ್ಟಾರ್ ಆಗಿದ್ದ ಒಡೆಯರ್ ಅವರು “ಸಾಹೇಬ್ರ ಕೋಟ ತಗೀರಿ ಸೆಕಿ ಆಗ್ತದ” ಅಂತ ಹಳಕಟ್ಟಿಯವರಿಗೆ ಮನವಿ ಮಾಡಿಕೊಂಡಾಗ, “ ಬ್ಯಾಡ್ರಿ, ಕೋಟ ಇರ್ಲಿ, ಒಳಗ ಅಂಗಿ ಹರ್ದದ” ಅಂತ ಹಳಕಟ್ಟಿಯವರು ಭಾವುಕರಾದರಂತೆ.
ಕನ್ನಡಿಗರಿಗೆ ವಚನಗಳನ್ನು ದೊರಕಿಸಿಕೊಟ್ಟ ಇಷ್ಟು ದೊಡ್ಡ ವಿದ್ವಾಂಸರಿಗೆ ಒದಗಿ ಬಂದಿದ್ದ ಪರಿಸ್ಥಿತಿಯನ್ನು ಹೇಳುತ್ತ ಎಂ ಎಂ ಕಲ್ಬುರ್ಗಿಯವರು ಕಣ್ಣೀರು ಹಾಕಿದ ಪ್ರಸಂಗ ಹೇಳುತ್ತ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ತಾವೂ ಕಣ್ಣೀರಾದರು.

