ಇವತ್ತಿನ ಪ್ರತಿ ದಿನದ ಬೆಂಕಿ – ಬಾಣಲೆ ಬದುಕಿಗೆ ಮೈತ್ರಿಯೊಂದೇ ತಂಪೆರೆವ ಸಾಧನ… । ಚೇತನಾ ತೀರ್ಥಹಳ್ಳಿ
ಪ್ರೀತಿ ಯಾವಾಗ ಬೇಕಾದರೂ ಘಟಿಸಬಹುದು;
ನಿರಾಕರಣೆ ಕೂಡಾ.
ಒಮ್ಮೆ ಘಟಿಸಿದ ಪ್ರೀತಿ ಜೀವಮಾನ ಪೂರ್ತಿ ಇರುತ್ತದೆ ಎಂದೇನಲ್ಲ. ಪ್ರೀತಿ ಉಕ್ಕಿಸುವ ಹಾರ್ಮೋನ್ ಹರಿವು ನಿಂತರೆ, ತಹತಹ ತೀರಿದಂತೆ. ಅದಕ್ಕೇ, ಪ್ರೀತಿಯ ಜೊತೆ… ಪ್ರೀತಿ ಮಾತ್ರ ಅಲ್ಲ, ಯಾವುದೇ ಸಂಬಂಧದ ಜೊತೆ ಗೆಳೆತನವನ್ನೂ ಬೆಳೆಸಿಕೊಳ್ಳಬೇಕು ಅನ್ನೋದು.
ಗೆಳೆತನ ಒಂದಿದ್ದರೆ, ಬಾಂಧವ್ಯದ ಯಾವ ಭಾವ ತೀರಿದರೂ ನಡುವೆ ದ್ವೇಷ ಬೆಳೆಯದು.
ಮದುವೆ ಮಂತ್ರದಲ್ಲಿ ಏಳು ಹೆಜ್ಜೆ ತುಳಿಸಿ “ನಿಮ್ಮಿಬ್ಬರ ನಡುವೆ ಸಖ್ಯ ಚಿರವಾಗಿರಲಿ” ಅಂತ ಹೇಳಲಾಗುತ್ತೆ.
ಗಂಡ ಹೆಂಡತಿ ನಡುವೆ ಈ ಸಖ್ಯ ಒಂದಿದ್ದರೆ, ನಾಳೆ ಡೈವೋರ್ಸ್ ಆದರೂ ಅವರು ಗೆಳೆಯರೇ.
ಪ್ರೇಮಿಗಳ ನಡುವೆ ಇದ್ದರೆ, ಬ್ರೇಕ್ ಅಪ್ ನಂತರವೂ ಅವರು ಗೆಳೆಯರು.
ಒಬ್ಬನಿಗೆ/ ಒಬ್ಬಳಿಗೆ ಮತ್ತೊಬ್ಬರು ಇಷ್ಟವಾದರೆ ಅವರನ್ನು own ಮಾಡಬೇಕಿಲ್ಲ. ಅವರ ಜೊತೆ ಇದ್ದರೆ ಸಾಕು. ಹೆಗಲಾದರೆ, ಜೊತೆಗಿಡುವ ಹೆಜ್ಜೆಯಾದರೆ ಸಾಕು.
ಸಾಕು ಏನು, ಹಾಗೆ ಇರುವುದೇ ಮುಖ್ಯ!
ಅದರ ಜೊತೆಗೆ, ಪ್ರೀತಿಯ ಲೌಕಿಕ ಅಂತ್ಯವಾದ ದೇಹಗಳ ಮಿಲನ ಸಾಧ್ಯವಾದರೆ ಅದು ಬೋನಸ್.
ಅದರ ನಂತರ ನಿರಾಕರಣೆ ಹುಟ್ಟಿಕೊಂಡರೆ, ಮತ್ತೆ ಸ್ನೇಹಕ್ಕೆ ಮರಳುವುದು.
ಅರ್ಥ ಮಾಡಿಕೊಂಡರೆ ಇದು ಬಹಳ ಸುಲಭ.
ಬುದ್ಧ ಮೈತ್ರಿಯ ಬಗ್ಗೆ ಹೇಳುತ್ತಾನೆ.
ಬೋಧಿಸತ್ವನ ಮುಂದಿನ ಜನ್ಮ ಮೈತ್ರೇಯ ಬುದ್ಧ ಎಂದು ಬೌದ್ಧರ ಒಂದು ಬಣದ ನಂಬಿಕೆ.
ಮೈತ್ರಿ ಅಂದರೆ ಗೆಳೆತನ.
ಇವತ್ತಿನ ಪ್ರತಿ ದಿನದ ಬೆಂಕಿ – ಬಾಣಲೆ ಬದುಕಿಗೆ ಮೈತ್ರಿಯೊಂದೇ ತಂಪೆರೆವ ಸಾಧನ. ಅದನ್ನು ಸಾರಲೆಂದೇ ಮೈತ್ರೇಯ ಬುದ್ಧ ಬರುವನು.
ಅಥವಾ, ಬುದ್ಧ ಅದಾಗಲೇ ಮೈತ್ರಿ ಭಾವದ ರೂಪದಲ್ಲಿ ಎಲ್ಲೆಡೆ ಹರಡಿಕೊಂಡಿರುವನು.
ನಾವು ಆವಾಹಿಸಿಕೊಳ್ಳಬೇಕಷ್ಟೇ.

