ದೋಣಿ ತೊಯ್ದಾಡುತ್ತಿದ್ದರೂ ಗಂಡ ಹೆದರದೆ ಕುಳಿತಿದ್ದು ಯಾಕೆ ಗೊತ್ತಾ? ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಹೊಸದಾಗಿ ಮದುವೆಯಾಗಿದ್ದ ಗಂಡ ಹೆಂಡತಿ ಒಂದು ನಾವೆಯಲ್ಲಿ ನದಿ ದಾಟಿಕೊಂಡು ಪ್ರಯಾಣ ಮಾಡುತ್ತಿದ್ದರು. ಆಗಲೇ ಭಯಂಕರ ಬಿರುಗಾಳಿ ಬೀಸತೊಡಗಿತು.
ಹೆಂಡತಿ ಬಿರುಗಾಳಿಗೆ ಹೆದರಿ ಗಾಬರಿಗೊಂಡಳು. ಬಿರುಗಾಳಿ ಎಷ್ಟು ಜೋರಾಗಿತ್ತೆಂದರೆ ಅದು ಆ ಪುಟ್ಟ ನಾವೆಯನ್ನು ಆಟದ ಸಾಮಾನಿನಂತೆ ಅಲ್ಲಾಡಿಸತೊಡಗಿತು. ನಾವೆ ನದಿಯಲ್ಲಿ ಅತ್ತಿಂದಿತ್ತ ಹೊಯ್ದಾಡತೊಡಗಿತ್ತು. ಯಾವುದೇ ಕ್ಷಣದಲ್ಲಿ ನಾವೆ ನದಿಯಲ್ಲಿ ಮುಳುಗಿ ಹೋಗುವಂತಿತ್ತು.
ಗಾಬರಿಯಲ್ಲಿ ಆಕೆ ತನ್ನ ಗಂಡನತ್ತ ನೋಡಿದಳು. ಅವನು ಆರಾಮಾಗಿ ಏನೂ ನಡದೇ ಇಲ್ಲವೆನೋ ಎಂಬಂತೆ ಸಮಾಧಾನದಲ್ಲಿ ಕುಳಿತಿರುವುದನ್ನು ಕಂಡು ಅವಳಿಗೆ ಆಶ್ಚರ್ಯವಾಯಿತು. ಆಕೆ ಗಂಡನತ್ತ ನೋಡಿ ಸಿಟ್ಟಿನಲ್ಲಿ ಮಾತನಾಡಿದಳು, “ ಇದು ಬಹುಶಃ ನಮ್ಮ ಬದುಕಿನ ಕೊನೆಯ ಕ್ಷಣ. ನಿನಗೆ ಹೆದರಿಕೆ ಆಗುತ್ತಿಲ್ಲವೆ? ನಿನ್ನ ಭಾವನೆಗಳು ಬತ್ತಿ ಹೋಗಿವೆಯಾ? ನಿನಗೇನಾದರೂ ಹುಚ್ಚು ಹಿಡಿದಿದೆಯಾ?”
ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಗಂಡ ತನ್ನ ಸೊಂಟದಲ್ಲಿ ಚೂರಿಯನ್ನು ಹೊರಗೆಳೆದು ಅವಳ ಕತ್ತನ್ನು ಕತ್ತರಿಸುವಂತೆ ಅವಳ ಕೊರಳಿಗೆ ಚೂರಿ ಮುಟ್ಟಿಸಿದ.
“ನಿನಗೆ ಭಯ ಆಗುತ್ತಿದೆಯಾ” ಅವಳನ್ನು ಪ್ರಶ್ನೆ ಮಾಡಿದ.
ಅವಳು ತಲೆ ಅಲ್ಲಾಡಿಸುತ್ತ, “ ಖಂಡಿತ ಇಲ್ಲ, ನೀನು ನನ್ನ ಪ್ರೀತಿಸುತ್ತಿಯಾ ಆದ್ದರಿಂದ ನಾನು ಹೆದರುವ ಕಾರಣವಿಲ್ಲ”.
ಗಂಡ ಚೂರಿಯನ್ನು ತನ್ನ ಒರೆಗೆ ಸೇರಿಸುತ್ತ ಮಾತನಾಡಿದ, “ ಇದೇ ಕಾರಣಕ್ಕೆ ನನಗೂ ಈ ಬಿರುಗಾಳಿಯನ್ನು ನೋಡಿ ಹೆದರಿಕೆ ಆಗಲಿಲ್ಲ. ನನಗೆ ಗೊತ್ತು, ದೇವರು ನನ್ನ ಪ್ರೀತಿಸುತ್ತಾನೆ ಮತ್ತು ಈ ಬಿರುಗಾಳಿ ಎನ್ನುವುದು ಅವನ ಕೈಯಲ್ಲಿರುವ ಚೂರಿ. ಏನೇ ಆದರೂ ಅದು ನನ್ನ ಒಳ್ಳೆಯದಕ್ಕೇ ಆಗುತ್ತದೆ. ನಮ್ಮ ಬದುಕು ಸಾವು ಎಲ್ಲ ಅವನ ಕೈಯಲ್ಲಿದೆ ಮತ್ತು ಅವನು ನನ್ನ ಪ್ರೀತಿಸುತ್ತಾನಾದ್ದರಿಂದ ಅವನಿಂದ ನನಗೆ ಯಾವ ತೊಂದರೆಯೂ ಆಗುವುದಿಲ್ಲ ಎನ್ನುವುದು ನನ್ನ ನಂಬಿಕೆ”.

