ಪ್ರತಿ ಕ್ಷಣ ನಮ್ಮ ಸುತ್ತ ನಡೆಸುತ್ತಿರುವ ಸಂಗತಿಗಳಲ್ಲಿನ ಅಶಾಶ್ವತತೆಯ ಸ್ವಭಾವವನ್ನು ಗಮನಿಸಬೇಕು. ಹಾಗೆ ಮಾಡುವ ಮೂಲಕ, ಅಶಾಶ್ವತತೆಯ ಕುರಿತಾದ ಸಂಪೂರ್ಣ ಅರಿವು ನಮ್ಮೊಳಗೆ ಅಚ್ಚೊತ್ತಿದಂತೆ ಸ್ಥಿರವಾಗುತ್ತದೆ. ಅಶಾಶ್ವತತೆ ಯನ್ನು ಅಪ್ಪಿಕೊಳ್ಳುವುದೆಂದರೆ ಸಂಕಟಗಳಿಂದ ಬಿಡುಗಡೆಯನ್ನು ಪಡೆದಂತೆ ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಕಂಠ ಮಟ್ಟ ಕುಡಿದಿದ್ದನ್ನ
ಕಾರಲೇಬೇಕಾಗುತ್ತದೆ.
ಆಗ ನೀನು ಕುಡಿದದ್ದೂ ವ್ಯರ್ಥ.
ನಾಲಿಗೆ ಹರಿತವಾಗಿಸಿಕೊಂಡರೆ
ಬೇಗ ಮೊಂಡಾಗುತ್ತದೆ.
ಆಗ ನೀನೇ ಮೂಕ.
ಐಶ್ವರ್ಯ ತುಂಬಿ ತುಳುಕೋ ಮನೆಗೆ
ಕನ್ನ ಬಿದ್ದೇ ಬೀಳುತ್ತದೆ.
ಆಗ ನೀನೇ ದರಿದ್ರ.
ಸಂಪತ್ತು, ಅಂತಸ್ತು, ಸೊಕ್ಕು ಎಲ್ಲವೂ
ತಮಗೆ ತಾವೇ ಶತ್ರುಗಳು.
ಎಲ್ಲವನ್ನೂ ಚಿವುಟಿ ಹಾಕುತ್ತವೆ.
ಮಾಡೊದನ್ನೆಲ್ಲ, ಹಿಂದೆ ನಿಂತು ಮಾಡು
ಆಗ ನೀನು
ದಾವ್ ನ ಹಾರೈಕೆಗೆ ಪಾತ್ರನಾಗುತ್ತೀಯ.
~ ಲಾವೋತ್ಸೇ
ಋಷಿಗಳು, ಮಾಸ್ಟರ್ ಗಳು ಒಂದು ಸತ್ಯದ ಮಾತು ಹೇಳಿದ್ದಾರೆಂದರೆ ಆ ಮಾತಿನಲ್ಲಿ “ಅಶಾಶ್ವತತೆ” ಪ್ರಸ್ತಾಪ ಇರಲೇಬೇಕು. ಯಾವ ಮಾತಿನಲ್ಲಿ ಅಶಾಶ್ವತತೆ ಯ ಬಗ್ಗೆ ಯಾವುದೋ ಒಂದು ರೀತಿಯಲ್ಲಿ ಹೇಳಲಾಗಿಲ್ಲವೋ ಆ ಮಾತನ್ನು ಮಹತ್ವದ್ದು ಪರಿಗಣಿಸುವುದು ಸಾಧ್ಯವಾಗುವುದಿಲ್ಲ.
ಬುದ್ಧಿಸಂ ನಲ್ಲಿ ಮುಖ್ಯವಾಗಿ ಅಶಾಶ್ವತತೆ ಯನ್ನು ನಾಲ್ಕು ರೀತಿಗಳಲ್ಲಿ ವಿವರಿಸಲಾಗಿದೆ. ಇವನ್ನು ಅಶಾಶ್ವತತೆ ಯ ನಾಲ್ಕು ಅಂಚುಗಳು ಎಂದು ಗುರುತಿಸಲಾಗುತ್ತದೆ.
ಯಾವುದನ್ನು ಸಂಗ್ರಹಿಸುತ್ತೀರೋ ಅದು ಖರ್ಚಾಗಲೇ ಬೇಕು.
ಯಾವುದು ಮೇಲೆ ಏರುತ್ತದೆಯೋ ಅದು ಕೆಳಗೆ ಬೀಳಲೇ ಬೇಕು.
ಯಾವವು ಕೂಡಿ ಇರುತ್ತವೆಯೋ ಅವು ಬೇರೆಯಾಗಲೇ ಬೇಕು.
ಯಾವುದು ಹುಟ್ಟುತ್ತದೆಯೋ ಅದು ಅಶಾಶ್ವತ, ಸಾಯಲೇ ಬೇಕು.
ಈ ವಾಕ್ಯಗಳನ್ನು ಪಠಣ ಮಾಡಬಹುದು ಆದರೆ ಧ್ಯಾನ ಮಾಡಬಹುದೆ? ಧ್ಯಾನ ಸಾಧ್ಯವಿಲ್ಲವಾದರೆ ಇವು ಅರ್ಥ ಕೂಡ ಆಗುವುದಿಲ್ಲ.
ಪ್ರತಿ ಕ್ಷಣ ನಮ್ಮ ಸುತ್ತ ನಡೆಸುತ್ತಿರುವ ಸಂಗತಿಗಳಲ್ಲಿನ ಅಶಾಶ್ವತತೆಯ ಸ್ವಭಾವವನ್ನು ಗಮನಿಸಬೇಕು. ಹಾಗೆ ಮಾಡುವ ಮೂಲಕ, ಅಶಾಶ್ವತತೆಯ ಕುರಿತಾದ ಸಂಪೂರ್ಣ ಅರಿವು ನಮ್ಮೊಳಗೆ ಅಚ್ಚೊತ್ತಿದಂತೆ ಸ್ಥಿರವಾಗುತ್ತದೆ. ಅಶಾಶ್ವತತೆ ಯನ್ನು ಅಪ್ಪಿಕೊಳ್ಳುವುದೆಂದರೆ ಸಂಕಟಗಳಿಂದ ಬಿಡುಗಡೆಯನ್ನು ಪಡೆದಂತೆ.
ಬುದ್ಧಿಸಂ ನಮಗೆ ಬಯಕೆ ಮತ್ತು ಅಂಟಿಕೊಳ್ಳುವಿಕೆಯ ಗುಲಾಮರಾಗುವುದರ ಪರಿಣಾಮಗಳನ್ನು ತಿಳಿಸಿ ಹೇಳುತ್ತದೆ, ಬೆಂಕಿಯ ಜೊತೆ ಆಡುವುದು ಹೇಗೆ ಅಪಾಯಕಾರಿ ಎಂದು ತಾಯಿ ಮಗುವಿಗೆ ತಿಳಿಸಿ ಹೇಳುವ ಹಾಗೆ. ಯಾವುದಕ್ಕೂ “ಅಂಟಿಕೊಳ್ಳದ” ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಮೂಲಕ ಮತ್ತು ಅನಿವಾರ್ಯತೆ ಹಾಗು ಅಶಾಶ್ವತತೆಯ ಸತ್ಯವನ್ನು ಸ್ವೀಕಾರ ಮಾಡುವ ಮೂಲಕ ನಾವು ನಮ್ಮ ಸುತ್ತಲಿನ ಆಗು ಹೋಗುಗಳ ಜೊತೆ ಸೌಹಾರ್ದತೆಯನ್ನು ಸಾಧಿಸಬಹುದು.
ಬುದ್ಧಿಸಂ ನ ಪಾಲಿ ಭಾಷೆಯ ಒಂದು ಮಂತ್ರದ ಅನುವಾದ ಹೀಗಿದೆ :- “ ಎಲ್ಲ conditioned ಸಂಗತಿಗಳೂ ಅಶಾಶ್ವತ. ಈ ಸತ್ಯ ಅರ್ಥವಾದಾಗ ಅದು ನಮಗೆ ಖುಶಿಯನ್ನು ಸಾಧ್ಯಮಾಡುತ್ತದೆ. ಅಶಾಶ್ವತತೆಯ ಕುರಿತಾದ ಈ ಸತ್ಯ ನಮಗೆ ಮನವರಿಕೆ ಆದಾಗ ನಾವು ಚಡಪಡಿಕೆ ಮತ್ತು ಆತಂಕಗಳಿಂದ ಹೊರತಾಗುತ್ತೇವೆ. ಏಕೆಂದರೆ ಆಗ ನಮಗೆ ಸೂಕ್ಷ್ಮದ ಸೂಕ್ಷ್ಮತೆಯ ಬಗ್ಗೆ ಅರಿವಾಗುತ್ತದೆ”.
ಝೆನ್ ಶಾಸ್ತ್ರದಲ್ಲಿ, ಕಲಿಕೆಯಲ್ಲಿ ಪಾರಂಗತನಾದ ಸನ್ಯಾಸಿಯೊಬ್ಬನಿದ್ದ. ತಾನು ಕಲಿತದ್ದನ್ನು ಆತ ಯಾರೊಂದಿಗೂ ಹಂಚಿಕೊಂಡಿರಲಿಲ್ಲ.
ಒಂದು ರಾತ್ರಿ ದಾರಿಯಲ್ಲಿ ಹೋಗುವಾಗ ಆತನ ಹೆಜ್ಜೆ, ಯಾವುದೋ ಒಂದು ವಸ್ತುವಿನ ಮೇಲೆ ಬಿತ್ತು. ಆತ ಅದನ್ನು ತುಳಿಯುತ್ತಿದ್ದಂತೆಯೇ ಪಿಚಕ್ ಎಂದು ಸದ್ದಾಯಿತು. ಮೊಟ್ಟೆ ಧರಿಸಿದ ಕಪ್ಪೆ ಅದು ಎಂದು ಆತ ಭಾವಿಸಿದ.
ಅವನಿಗೆ ತೀವ್ರ ಆತಂಕವಾಗತೊಡಗಿತು. ಬೌದ್ಧರ ಪ್ರಕಾರ ಜೀವಹತ್ಯೆ ಮಹಾಪಾಪ. ರಾತ್ರಿ ಅವ ನಿದ್ದೆಗಿಳಿಯುತ್ತಿದ್ದಂತೆಯೇ ನೂರಾರು ಕಪ್ಪೆಗಳು ಕನಸಲ್ಲಿ ಬಂದು ಅವನ ಜೀವ ಕೇಳತೊಡಗಿದವು.
ಸನ್ಯಾಸಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಆತ ರಾತ್ರಿ ಘಟನೆ ನಡೆದ ಜಾಗಕ್ಕೆ ಹೋಗಿ ನೋಡಿದ. ರಾತ್ರಿ ಅವ ತುಳಿದದ್ದು ಕಪ್ಪೆಯಾಗಿರದೇ, ಕಳೆತ ಬದನೆಕಾಯಿಯಾಗಿತ್ತು.
ಆ ಕ್ಷಣದಲ್ಲಿ ಅವನ ಅನಿಶ್ಚಿತತೆ ಕೊನೆಯಾಯಿತು ಮೊದಲ ಬಾರಿಗೆ ಅವನಿಗೆ “ ವಾಸ್ತವದ ಜಗತ್ತು ಇಲ್ಲ “ ಎಂಬ ಮಾತಿನ ಅರ್ಥ ಗೊತ್ತಾಯಿತು, ಝೆನ್ ಆಚರಿಸುವುದು ಹೇಗೆ ಎನ್ನುವುದು ಸ್ಪಷ್ಟವಾಯಿತು.

