ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಸಾದಿಕ್ ರಾಜ್ಯದ ಜನತೆ ದಂಗೆ ಎದ್ದರು, ರಾಜನಿದ್ದ ಗೋಪುರಕ್ಕೆ ಮುತ್ತಿಗೆ ಹಾಕಿದರು. ರಾಜನ ವಿರುದ್ಧ ಘೋಷಣೆ ಕೂಗುತಿದ್ದರು. ರಾಜ ಒಂದು ಕೈಯಲ್ಲಿ ಕಿರೀಟ, ಇನ್ನೊಂದು ಕೈಯಲ್ಲಿ ರಾಜದಂಡ ಹಿಡಿದು ಮೆಟ್ಟಿಲಿಳಿದು ಬಂದ. ರಾಜ ಬಂದ ತಕ್ಷಣ ಜನ ನಿಶ್ಶಬ್ದವಾದರು. ಜನರೆದುರು ನಿಂತು ರಾಜ ಹೇಳಿದ:
“ಗೆಳೆಯರೇ, ನೀವಿನ್ನು ನನ್ನ ಪ್ರಜೆಗಳಲ್ಲ. ಇಗೋ ನನ್ನ ಕಿರೀಟ, ರಾಜದಂಡ ನಿಮಗೆ ಒಪ್ಪಿಸುತಿದ್ದೇನೆ. ಇನ್ನು ಮುಂದೆ ನಾನು ನಿಮ್ಮಲ್ಲಿ ಒಬ್ಬನಾಗಿರುತ್ತೇನೆ. ನಾನು ಒಬ್ಬನೇ ಆಗಿದ್ದರೂ ನಿಮ್ಮ ಜೊತೆಯಲ್ಲಿ ದುಡಿಯುತೇನೆ, ನಿಮ್ಮ ಬದುಕು ಹಸನಾಗು ಹಾಗೆ ಮಾಡತೇನೆ. ರಾಜ ಅಂತ ಒಬ್ಬನು ಇರಬೇಕಾಗೇ ಇಲ್ಲ. ಇನ್ನು ಮೇಲೆ ನಾವೆಲ್ಲ ಹೊಲ, ಗದ್ದೆ, ತೋಟಗಳಲ್ಲಿ ಒಟ್ಟಿಗೆ ದುಡಿಯೋಣ. ಇಷ್ಟೇ, ನಾನು ಯಾವ ತೋಟದಲ್ಲಿ ಕೆಲಸ ಮಾಡಲಿ ಹೇಳಿ. ಇನ್ನು ಮೇಲೆ ನೀವೆಲ್ಲರೂ ರಾಜರೇ,ʼ ಅಂದ.
ಜನಕ್ಕೆ ಬೆರಗಾಯಿತು. ಮಾತಿಲ್ಲದೆ ನಿಂತರು. ಇದುವರೆಗೆ ತಮ್ಮ ಬದುಕಿನ ಕಷ್ಟಕ್ಕೆ ರಾಜನೇ ಹೊಣೆ ಎಂದು ಬೈಯುತ್ತಿದ್ದರು. ಈಗ ಅವನು ಕಿರೀಟ, ಸಿಂಹಾಸನ ಬಿಟ್ಟು ಅವರ ಥರ ಮಾಮೂಲಿ ಆಗಿದಾನೆ. ಏನು ಮಾಡಬೇಕು ತಿಳಿಯದೆ ಅವರವರ ದಾರಿ ಹಿಡಿದು ಹೋಗಿಬಿಟ್ಟರು. ರಾಜ ಯಾರೋ ಒಬ್ಬನ ಜೊತೆ ಹೊಲಕ್ಕೆ ಹೋದ.
ಸಾದಿಕ್ ರಾಜ್ಯದಲ್ಲಿ ರಾಜ ಇಲ್ಲ ಅಂತಾದರೂ ಜನರ ಸ್ಥಿತಿ ಸುದಾರಿಸಲಿಲ್ಲ. ಜನರ ಅತೃಪ್ತಿ, ಬೇಗುದಿ ಹಾಗೇ ಇದ್ದವು. ಊರೂರಿನ ಪೇಟೆ ಚೌಕಗಳಲ್ಲಿ ನಿಂತು ನಮಗೆ ಒಬ್ಬ ರಾಜ ಬೇಕೇ ಬೇಕು, ಆಳುವವನೊಬ್ಬ ಇರಬೇಕು ಅಂತ ಜೋರಾಗಿ ಮಾತಾಡಿದರು. ಹಿರಿಯರು, ಯುವಕರು ಎಲ್ಲ ಸೇರಿ ʻನಮಗೆ ರಾಜ ಬೇಕೇ ಬೇಕುʼ ಅಂತ ತೀರ್ಮಾನ ಮಾಡಿದರು.
ರಾಜನನ್ನು ಹುಡುಕಿದರು. ಅವನು ಯಾವುದೋ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಅವನನ್ನ ಕರೆದುಕೊಂಡು ಬಂದು, ಸಿಂಹಾಸನದ ಮೇಲೆ ಕೂಡಿಸಿ, ಅವನ ಕೈಗೆ ರಾಜದಂಡ ಕೊಟ್ಟರು. ʻನ್ಯಾಯವಾಗಿ, ಬಲಿಷ್ಠನಾಗಿ ನಮ್ಮನ್ನು ಆಳು ದೊರೆ!ʼ ಅಂದರು.
ʻಬಲಿಷ್ಠನಾಗಿ ಆಳುತೇನೆ, ದೇವರು ನಮ್ಮನ್ನ ಕಾಪಾಡಲಿ, ನಾನು ನ್ಯಾಯವಾಗಿ ಬದುಕುವ ಹಾಗೆ ಹರಸಲಿʼ ಅಂತ ರಾಜ ಕೋರಿದ. ಒಂದಷ್ಟು ಜನ ಗಂಡಸರು, ಹೆಂಗಸರು ಗುಂಪಾಗಿ ಬಂದು ಜಮೀನ್ದಾರ ನಮ್ಮನ್ನೆಲ್ಲ ಕೆಟ್ಟದಾಗಿ ನಡೆಸಿಕೊಳ್ಳುತ್ತಾನೆ, ನಾವೆಲ್ಲ ಅವನ ಜೀತದವರು ಅಂತ ದೂರು ಹೇಳಿದರು. ರಾಜ ತಕ್ಷಣವೇ ಜಮೀನ್ದಾರನನ್ನು ಕರೆಸಿ, ʻನೋಡು, ದೇವರ ದೃಷ್ಟಿಯಲ್ಲಿ ಎಲ್ಲಾ ಮನುಷ್ಯರ ಜೀವಕ್ಕೂ ಒಂದೇ ಬೆಲೆ. ನಿನ್ನ ಹತ್ತಿರ ಕೆಲಸ ಮಾಡುವವರಿಗೆ ಹೇಗೆ ಬೆಲೆಕೊಡಬೇಕು ಅಂತ ನಿನಗೆ ಗೊತ್ತಿಲ್ಲ. ನಿನ್ನನ್ನು ನನ್ನ ರಾಜ್ಯದಿಂದ ಶಾಶ್ವತವಾಗಿ ಗಡೀಪಾರು ಮಾಡಿದೇನೆ,ʼ ಅಂದ.
ಮಾರನೆಯ ದಿನ ಇನ್ನೊಂದು ಗುಂಪು ಬಂದು, ʻಬೆಟ್ಟದಾಚೆ ಇರುವ ಶ್ರೀಮಂತ ಹೆಂಗಸು ಬಹಳ ಕ್ರೂರಿ, ನಮನ್ನೆಲ್ಲ ಗೋಳುಗುಟ್ಟಿಸುತ್ತಾಳೆʼ ಅಂದರು. ರಾಜ ತಕ್ಷಣವೇ ಅವಳನ್ನು ಕರೆಸಿದ. ʻನಮ್ಮ ಹೊಲದಲ್ಲಿ ಕೆಲಸ ಮಾಡುವವರು, ಗಾಣ ಆಡಿಸಿ ಎಣ್ಣೆ ತೆಗೆಯೋರು, ದ್ರಾಕ್ಷಾರಸ ತಯಾರು ಮಾಡುವವರು ಉಣ್ಣುವ, ಕುಡಿಯು, ತಿನ್ನುವ ನಮಗಿಂತ ಉತ್ತಮರು. ನಿನಗೆ ಇದ್ದು ಗೊತ್ತಿಲ್ಲ. ಆದ್ದರಿಂದ ನೀನು ನನ್ನ ರಾಜ್ಯ ಬಿಟ್ಟು ಹೋಗಬೇಕು,ʼ ಅಂದ.
ಆಮೇಲೆ ಒಂದು ದಿನ ಜನರ ಗುಂಪು ಬಿಷಪ್‌ನನ್ನು ಕರೆದುಕೊಂಡು ಬಂದಿತು. ʻನಮ್ಮ ಕೈಯಲ್ಲಿ ಕಲ್ಲು ಹೊರಿಸಿಕೊಂಡು ಬರುತ್ತಾನೆ, ಕಲ್ಲು ಒಡೆಸುತ್ತಾನೆ, ಚರ್ಚು ಕಟ್ಟಿಸುತ್ತಾನೆ. ಚರ್ಚ್‌ನ ಖಜಾನೆಯ ತುಂಬ ಚಿನ್ನ ಬೆಳ್ಳಿ ಇದೆ, ನಮಗೇನೂ ಕೊಡುವುದೇ ಇಲ್ಲ, ಬರಿಯ ಹೊಟ್ಟೆಯಲ್ಲೇ ಮನೆಗೆ ಕಳಿಸುತ್ತಾನೆ,ʼ ಎಂದು ಗುಂಪು ದೂರಿತು.
ರಾಜ ಬಿಷಪ್‌ನನ್ನು ಕರೆಸಿದ.ʻನಿನ್ನ ದಿರುಸಿನಲ್ಲಿ ಎದೆಯ ಮೇಲೆ ಇರುವ ಶಿಲುಬೆಯಿದೆಯಲ್ಲ ಅದು ಬದುಕಿಗೆ ಬದುಕು ಕೊಡುವ ಅರ್ಥದ ಗುರುತು. ನೀನು ದುಡಿಯವ ಜನರಿಗೆ ಬದುಕು ಕೊಟ್ಟಿಲ್ಲ, ಅವರ ಬದುಕು ಕೆಡುವ ಹಾಗೆ ಮಾಡಿದ್ದೀಯ. ನನ್ನ ರಾಜ್ಯ ಬಿಟ್ಟು ಹೋಗು, ಮತ್ತೆಂದೂ ಬರಬೇಡ,ʼ ಅಂದ.
ಹೀಗೆ ಒಂದು ತಿಂಗಳ ಕಾಲ ಜನ ಬಂದು ಬಂದು ತಮ್ಮ ಬದುಕು ಕಷ್ಟವಾಗುವ ಹಾಗೆ ಮಾಡಿರುವವರ ಬಗ್ಗೆ ದೂರು ಹೇಳಿದರು. ಒಂದು ತಿಂಗಳ ಕಾಲ ಪ್ರತಿದಿನವೂ ಅಂಥವರನ್ನು ರಾಜ ತನ್ನ ರಾಜ್ಯದಿಂದ ಹೊರಗಟ್ಟುತ್ತಿದ್ದ.
ಸಾದಿಕ್ ರಾಜ್ಯದ ಜನಕ್ಕೆ ಆಶ್ಚರ್ಯವಾಯಿತು. ಎಲ್ಲರ ಮನಸಿನಲ್ಲೂ ಸಂತೋಷ ತುಂಬಿತ್ತು. ಒಂದು ದಿನ ಊರಿನ ಹಿರಿಯರು, ತರುಣರು ಎಲ್ಲರೂ ರಾಜಗೋಪುರದ ಹತ್ತಿರ ಬಂದು ಸೇರಿದರು. ರಾಜ ಗೋಪುರದಿಂದ ಇಳಿದು ಬಂದ. ಅವನ ಒಂದು ಕೈಯಲ್ಲಿ ಕಿರೀಟವಿತ್ತು, ಇನ್ನೊಂದು ಕೈಯಲ್ಲಿ ರಾಜದಂಡವಿತ್ತು.
ʻನಾನೀಗ ಏನು ಮಾಡಬೇಕು, ಹೇಳಿ. ಇಗೋ ನೀವು ನನಗೆ ಒಪ್ಪಿಸಿದ ಕಿರೀಟ, ರಾಜದಂಡ ಇಲ್ಲಿವೆ,ʼ ಅಂದ.
ಆಗ ಜನರೆಲ್ಲರೂ, ʻಬೇಡ, ಬೇಡ. ನಿನೇ ರಾಜ. ನಮ್ಮ ರಾಜ್ಯದಲ್ಲಿದ್ದ ರಕ್ತ ಹೀರುವ ಪಿಶಾಚಿಗಳನ್ನೆಲ್ಲ ಓಡಿಸಿ ದೇಶವನ್ನು ಸ್ವಚ್ಛ ಮಾಡಿದ್ದೀಯ. ತೋಳಗಳೆಲ್ಲ ಬಾಯಿ ಮುಚ್ಚಿಕೊಳ್ಳುವ ಹಾಗೆ ಮಾಡಿದ್ದೀಯ. ನಿನಗೆ ಕೃತಜ್ಞತೆ ಹೇಳಲು ಬಂದೆವು. ಸಿಂಹಾಸನ, ಕಿರೀಟ, ರಾಜದಂಡ ಎಲ್ಲಕ್ಕೂ ನೀನೇ ಹಕ್ಕುದಾರ. ಎಲ್ಲ ವೈಭವ ನಿನ್ನದೇ, ನಮ್ಮ ಸುಖಕ್ಕೆ ನೀನೇ ಕಾರಣ,ʼ ಅಂದರು ಜನ.
ಆಗ ರಾಜ, ʻನಿಮ್ಮ ಸುಖಕ್ಕೆ ನಾನು ಕಾರಣ ಅಲ್ಲ, ನಾನು ರಾಜನೂ ಅಲ್ಲ. ನೀವೇ ರಾಜರು. ನಾನು ದುರ್ಬಲ, ನಾನು ಸರಿಯಾಗಿ ಆಳುತ್ತಿಲ್ಲ ಅಂದಾಗ ನೀವೇ ದುರ್ಬಲರಾಗಿದ್ದಿರಿ, ನೀವೇ ತಪ್ಪು ತಪ್ಪಾಗಿ ಆಳುತ್ತಿದ್ದಿರಿ. ಈಗ ರಾಜ್ಯ ಚೆನ್ನಾಗಿದೆ ಅಂದರೆ ಅದಕ್ಕೆ ನಿಮ್ಮ ಇಚ್ಛೆಯೇ ಕಾರಣ. ನಿಮ್ಮೆಲ್ಲರ ಮನಸಿನಲ್ಲರುವ ಆಲೋಚನೆಯ ರೂಪ ನಾನು, ಅಷ್ಟೇ. ನೀವು ಮಾಡುವ ಕಾರ್ಯಗಳಲ್ಲಷ್ಟೇ ನಾನು ಇರುತ್ತೇನೆ. ಆಳುವವನು ಅಂತ ಒಬ್ಬ ಯಾವತ್ತೂ ಇರಲ್ಲ. ನಾವು ಆಳಿಸಿಕೊಳ್ಳುವವರು ಮಾತ್ರ ಇರುತ್ತಾರೆ. ಅವರೇ ಆಳಿಕೊಳ್ಳಬೇಕು.ʼ
ರಾಜ ತನ್ನ ಕಿರೀಟ, ರಾಜದಂಡ ಹಿಡಿದು ಮತ್ತೆ ಒಳಕ್ಕೆ ಹೋದ. ಹಿರೀಕರು, ಹುಡುಗರು ಎಲ್ಲಾ ತೃಪ್ತಿಯಿಂದ ಮರಳಿದರು. ಅವರು ಒಬ್ಬೊಬ್ಬರೂ ತಮ್ಮ ಕೈಯ ಮೇಲೆ ಕಿರೀಟವಿದೆ, ಕೈಯಲ್ಲಿ ರಾಜದಂಡವಿದೆ ಅನ್ನುವ ಭಾವನೆಯಲ್ಲಿ ಜವಾಬ್ದಾರಿಯಿಂದ ಬದುಕಿದ್ದರು.

