ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಬಾನಾಡಿ, ಹದ್ದು ಎರಡೂ ಒಂದು ಸಲ ದೊಡ್ಡ ಬೆಟ್ಟದ ತುದಿಯ ಬಂಡೆಯ ಮೇಲೆ ಭೇಟಿಯಾದವು. ʻಗುಡ್ ಮಾರ್ನಿಂಗ್ ಸಾರ್,ʼ ಅಂದಿತು ಬಾನಾಡಿ. ಹದ್ದು ಕಣ್ಣಂಚಿನಲ್ಲಿ ಬಾನಾಡಿಯನ್ನು ನಿರುಕಿಸಿ ಸಣ್ಣ ದನಿಯಲ್ಲಿ, ʻಹ್ಞೂಂ, ಗುಡ್ ಮಾರ್ನಿಂಗುʼ ಅಂದಿತು.
ʻಎಲ್ಲಾ ಕ್ಷೇಮ ತಾನೇ ಸಾರ್,ʼ ಬಾನಾಡಿ ಕೇಳಿತು.
ʻಹ್ಞೂಂ. ಎಲ್ಲಾ ಕ್ಷೇಮ. ನಿನಗೆ ಗೊತ್ತಿಲ್ಲವಾ, ನಾವು ಹಕ್ಕಿಗಳ ರಾಜರು. ಪ್ರಭುಗಳು ಮಾತಾಡಿಸುವ ಮುನ್ನ ಗುಲಾಮರು ಮಾತಾಡಬಾರದು ಅಂತ ತಿಳಿದಿಲ್ಲವಾ?ʼ ಹದ್ದು ರೇಗಿತು.
ʻನಾವೆಲ್ಲ ಒಂದೇ ಬಳಗದವರು ಅಂದುಕೊಂಡಿದ್ದೇನೆ,ʼ ಅಂದಿತು ಬಾನಾಡಿ.
ಹದ್ದು ದನಿಯಲ್ಲಿ ತಿರಸ್ಕಾರ, ಅಸಹ್ಯ ತುಂಬಿಸಿಕೊಂಡು, ʻನಾವೂ ನೀನೂ ಒಂದೇ ಬಳಗ ಅಂತ ಯಾರು ಹೇಳಿದ್ದು?ʼ ಎಂದು ದಬಾಯಿಸಿತು.
ʻನಾನೂ ನಿನ್ನಷ್ಟೇ ಎತ್ತರ ಹಾರಬಲ್ಲೆ. ನಾನು ಹಾಡಿದರೆ ಲೋಕದ ಜೀವಕ್ಕೆಲ್ಲ ಸಂತೋಷ ಆಗತ್ತೆ. ನಿನ್ನನ್ನು ನೋಡಿದರೆ ಯಾರಿಗೂ ಸಂತೋಷ ಕೂಡ ಆಗಲ್ಲ,ʼ ಅಂದಿತು ಬಾನಾಡಿ.
ಹದ್ದು ಕೆರಳಿತು. ʻಹಾಡಂತೆ, ಸಂತೋಷವಂತೆ. ಎಂಥಾ ಉದ್ಧಟತನ ನಿನ್ನದು! ಒಂದು ಸಾರಿ ನನ್ನ ಕೊಕ್ಕಲ್ಲಿ ಕುಕ್ಕಿದರೆ ನಿನ್ನ ಕಥೆ ಖತಂ. ನೀನು ನನ್ನ ಪಾದದ ಗಾತ್ರ ಕೂಡ ಇಲ್ಲ,ʼ ಅಂತ ಸಿಟ್ಟಿನಲ್ಲಿ ಹೇಳಿತು.
ಆಗ ಪುಟ್ಟ ಬಾನಾಡಿ ಹದ್ದಿನ ಬೆನ್ನೇರಿ ಅದರ ರೆಕ್ಕೆಯ ಗರಿಗಳನ್ನೆಲ್ಲ ಒಂದೊಂದಾಗಿ ಕೊಕ್ಕಿನಲ್ಲಿ ಕೀಳುವುದಕ್ಕೆ ಶುರು ಮಾಡಿತು. ಹದ್ದಿಗೆ ಭಯವಾಯಿತು. ಬಾನಾಡಿಯಿಂದ ತಪ್ಪಿಸಿಕೊಳ್ಳಲು ಇನ್ನೂ ಮೇಲೆ ಹಾರಿತು. ಏನು ಮಾಡಿದರೂ ಬಾನಾಡಿ ಹದ್ದಿನ ಬೆನ್ನಿನ ಮೇಲೇ ಇತ್ತು. ಹದ್ದಿಗೆ ಸುಸ್ತಾಗಿ, ಜೊತೆಗೇ ಕೋಪ ಹೆಚ್ಚಾಗಿ ಕೊನೆಗೆ ಅದೇ ಬೆಟ್ಟದ ಅದೇ ಬಂಡಯ ಮೇಲೆ ಇಳಿಯಿತು.
ಆ ಹೊತ್ತಿಗೆ ಪುಟ್ಟದೊಂದು ಆಮೆ ಅಲ್ಲಿ ಹೋಗುತ್ತಿತ್ತು. ಅದು ಹದ್ದನ್ನು ನೋಡಿ ನಗುವುದಕ್ಕೆ ಶುರು ಮಾಡಿತು. ಎಷ್ಟು ನಗು ಅಂದರೆ ಅದರ ಮೈ ಕುಲುಕಿ ಅಂಗಾತ ಬೀಳುವಷ್ಟು ನಗು ಬಂದಿತ್ತು ಅದಕ್ಕೆ.
ʻಏಯ್, ನೆಲದ ಮೇಲೆ ತೆವಳೋ ಪ್ರಾಣೀ, ಇಡೀ ದಿನ ನಡೆದರೂ ಹತ್ತಡಿ ಮುಂದಕ್ಕೆ ಹೋಗಕ್ಕಾಗಲ್ಲ, ಯಾಕೆ ಹೀಗೆ ನಗುತ್ತೀ?ʼ ಅಂತ ದಬಾಯಿಸಿತು ಹದ್ದು.
ಆಗ ಆಮೆ, ʻಯಾಕೆ ಗೊತ್ತಾ! ನೀನು ಕುದುರೆ, ನಿನ್ನ ಬೆನ್ನ ಮೇಲೆ ಸವಾರಿ ಕೂತಿರೋ ಬಾನಾಡಿ ಯಜಮಾನ. ಪುಟ್ಟ ಹಕ್ಕೀನೇ ಗ್ರೇಟ್ ಅಲ್ಲವಾ!ʼ ಅಂದಿತು.ಆಗ ಹದ್ದು, ʻಲೇಯ್ ಆಮೆ, ನಿನಗೂ ಇದಕ್ಕೂ ಸಂಬಂಧ ಇಲ್ಲ. ನಾವು ಹಕ್ಕಿ ಬಳಗದವರು. ಈ ಬಾನಾಡಿ, ನಾನೂ ಎರಡೂ ಒಂದೆ. ನಮ್ಮ ಜಗಳ ನಾವು ನೋಡಿಕೊಳ್ಳತೇವೆ, ತೊಲಗು ಇಲ್ಲಿಂದʼ ಅಂದಿತು.

